ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಸ್ತಿ ವೆಂಕಟೇಶ ಅಯ್ಯಂಗಾರ್

ವಿಕಿಸೋರ್ಸ್ದಿಂದ

ಮಾಸ್ತಿ ವೆಂಕಟೇಶ ಅಯ್ಯಂಗಾರ್ :- 1891-1986. ಜ್ಞಾನಪೀಠ ಪ್ರಶಸ್ತಿ ವಿಜೇತರು (1984). ಕನ್ನಡದಲ್ಲಿ ಸಣ್ಣಕಥೆ ಎಂಬ ಸಾಹಿತ್ಯ ಪ್ರಕಾರಕ್ಕೆ ಭದ್ರ ಬುನಾದಿ ಹಾಕಿ ಸಣ್ಣಕಥೆಗಳ ಜನಕ ಎಂಬ ಹೆಸರಿಗೆ ಪಾತ್ರರಾದ ಪ್ರಸಿದ್ಧ ಸಾಹಿತಿಗಳು. ಶ್ರೀನಿವಾಸ ಇವರ ಕಾವ್ಯನಾಮ. 6-6-1891ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಶಿವಾರಪಟ್ಟಣ. ಮಳವಳ್ಳಿ, ಕೃಷ್ಣರಾಜಪೇಟೆಗಳಲ್ಲೂ ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅನಂತರ ಮಹಾರಾಜ ಕಾಲೇಜು ಸೇರಿ ಎಫ್.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಆಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ 1912ರಲ್ಲಿ ಬಿ.ಎ. ಪದವಿ ಗಳಿಸಿದರು. 1913ರಲ್ಲಿ ಎಂ.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ಅಭ್ಯಾಸ ಮಾಡಿ ಎಂ.ಎ.ಪದವಿ ಪಡೆದರು. ಕೆಲಕಾಲ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. 1914ರಲ್ಲಿ ಮೈಸೂರು ಸರ್ಕಾರದಲ್ಲಿ ಕೆಲಸಕ್ಕೆ ಸೇರಿದರು. ಅಸಿಸ್ಟೆಂಟ್ ಕಮಿಷನರ್, ಸಬ್ ಡಿವಿಜನ್ ಆಫೀಸರ್, ಮ್ಯಾಜಿಸ್ಟ್ರೇಟ್, ಸೀನಿಯರ್ ಅಸಿಸ್ಟೆಂಟ್ ಕಮಿಷನರ್, ಸೆನ್ಸಸ್ ಕಮಿಷನರ್, ಡೆಪ್ಯುಟಿ ಕಮಿಷನರ್, ಕಂಟ್ರೋಲರ್, ಎಕ್ಸೈಜ್ ಕಮಿಷನರ್ ಇಂಥ ಅನೇಕ ಉನ್ನತ ಹುದ್ದೆಗಳಲ್ಲಿ ತೃಪ್ತಿಕರವಾಗಿ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದರು. 16-4-1944ರಲ್ಲಿ ಸ್ವಇಚ್ಛೆಯಿಂದ ನಿವೃತ್ತಿ ಪಡೆದರು. ಮಾಸ್ತಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಉನ್ನತ ವ್ಯಾಸಂಗ ಪಡೆದರೂ ಕನ್ನಡಭಾಷಾ ಸಾಹಿತ್ಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಭಾರತೀಯ ಹಾಗೂ ಆಂಗ್ಲಸಾಹಿತ್ಯದ ಸವಿಗೆ ಸೋತ ಇವರು ಅವುಗಳ ಸಾರಸರ್ವಸ್ವವನ್ನು ತಮ್ಮ ಕಾವ್ಯರಚನಾಸೃಷ್ಟಿಶಕ್ತಿಗೆ ಬಳಸಿಕೊಂಡಿದ್ದಾರೆ. ಇವರ ಸಂಸ್ಕಾರದ ಮೇಲೆ ಪಾಶ್ಚಾತ್ಯ ಪ್ರಭಾವ ಬಿದ್ದಿಲ್ಲವೆಂದಲ್ಲ. ಆ ಸಂಸ್ಕøತಿಯಿಂದ ಲಾಭ ಪಡೆದಿದ್ದಾರೆ; ಅಂದರೆ ಅದಕ್ಕೆ ಶರಣಾಗಿಲ್ಲ. ತನ್ನ ಸಾಹಿತ್ಯವು ನೂರಕ್ಕೆ ನೂರರಷ್ಟು ಭಾರತೀಯ-ಕರ್ನಾಟಕ ಜಾಯಮಾನಕ್ಕೆ ಒಪ್ಪುವಂತೆ ನಿರ್ಮಿಸಿದ್ದಾರೆ. ಇದು ಇವರ ಸಾಹಿತ್ಯದ ಹಿರಿಮೆ.

1912-13ರಿಂದ ಕನ್ನಡದಲ್ಲಿ ಬರೆಯಲಾರಂಭಿಸಿದ ಮಾಸ್ತಿಯವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ನಡೆಸಿ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನವೋದಯ ಕವಿಗಳ ಸಾಲಿನಲ್ಲಿ ಮಾಸ್ತಿಯವರದು ಒಂದು ಮುಖ್ಯ ಹೆಸರು. ಇವರ ಕವಿತಾ ಸೃಷ್ಟಿ ಬಿನ್ನಹ, ಅರುಣ, ತಾವರೆ, ಚೆಲುವು, ಮಲಾರ, ಮನವಿ ಎಂಬ ಆರು ಸಂಕಲನಗಳಲ್ಲಿ ಹರಡಿಕೊಂಡಿದೆ. ಸರಳತೆ, ಮಾರ್ದವತೆ ಮಾಸ್ತಿಯವರ ಭಾವಗೀತೆಗಳ ಮೂಲಗುಣ. ಭಾವಗೀತೆಗಳೊಡನೆ ಕಥನ ಕವನಗಳ ಸೃಷ್ಟಿಯೂ ಅಪಾರವಿದೆ. ಗೌಡರಮಲ್ಲಿ, ರಾಮನವಮಿ, ನವರಾತ್ರಿ ಮೊದಲಾದ ಕಥನಕವನಗಳು ಉತ್ಕøಷ್ಟ ರಚನೆಗಳೆಂದು ಹೆಸರುಗಳಿಸಿವೆ. ಶ್ರೀರಾಮಪಟ್ಟಾಭಿಷೇಕ ರಾಮನ ಪಟ್ಟಾಭಿಷೇಕ ಕುರಿತ ದೀರ್ಘಕಾವ್ಯ. ಇದರಲ್ಲಿ ರಾಮಾಯಣದ ಕಥೆ ಸಿಂಹಾವಲೋಕನ ಕ್ರಮದಲ್ಲಿ ನಿರೂಪಿತವಾಗಿದೆ. ಸರಳ ರಗಳೆಯಲ್ಲಿ ರಚಿತವಾಗಿರುವ ಈ ಕಾವ್ಯದ ನಿರೂಪಣೆಯಲ್ಲಿ ವೈವಿಧ್ಯವೂ ಹಳೆಯ ಕಥೆಗೆ ಹೊಸ ಹೊಳಪೂ ಲಭ್ಯವಾಗಿವೆ.

ಮಾಸ್ತಿಯವರ ಹೆಸರು ಇಂದು ಕನ್ನಡಿಗರಿಗೆ ಚಿರಪರಿಚಿತವಾಗಿರುವುದು ಇವರ ಸಣ್ಣ ಕಥೆಗಳ ಮೂಲಕ. ಇವರು ಸುಮಾರು ಒಂದು ನೂರು ಕಥೆಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಕಾಲ್ಪನಿಕ ಕಥೆಗಳು ಇವೆ. ಸರಳತೆ, ನೇರನಿರೂಪಣೆ ಈ ಕಥೆಗಳ ಮೂಲ ದ್ರವ್ಯ. ಭಾರತೀಯ ಸಂಸ್ಕøತಿಯ ಉತ್ತಮಾಂಶಗಳನ್ನು ಒಪ್ಪ ಓರಣವಾಗಿ ಕನ್ನಡಿಗರಿಗೆ ಪರಿಚಯ ಮಾಡಿಕೊಡಬೇಕೆಂಬ ಆಕಾಂಕ್ಷೆ ಈ ಎಲ್ಲ ಕಥೆಗಳ ಸೃಷ್ಟಿಗೆ ಮೂಲ ಪ್ರೇರಣೆ. ರಂಗಪ್ಪನ ಮದುವೆ, ರಂಗಸ್ವಾಮಿಯ ಅವಿವೇಕ, ನಮ್ಮ ಮೇಷ್ಟರು, ಮೊಸರಿನ ಮಂಗಮ್ಮ, ಮಸುಮತ್ತಿ, ಕಾಮನಹಬ್ಬದ ಒಂದು ಕತೆ. ಡೂಬಾಯಿ ಪಾದ್ರಿಯ ಒಂದು ಪತ್ರ, ಚಂದ್ರವದನಾ, ವೆಂಕಟಿಗನ ಹೆಂಡತಿ, ನಿಜಗಲ್ಲಿನ ರಾಣಿ, ಪೆನುಗೊಂಡೆಯ ಕೃಷ್ಣಮೂರ್ತಿ, ಒಂದು ಹಳೆಯ ಕಥೆ, ವೆಂಕಟಸ್ವಾಮಿಯ ಪ್ರಣಯ-ಈ ಮೊದಲಾದ ಕಥೆಗಳು ಮಾಸ್ತಿಯವರಿಗೆ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಸಣ್ಣಕಥೆ ಹಾಗೂ ಕಾದಂಬರಿಯ ನಡುವಣ ಹರವನ್ನು ಪಡೆದುಕೊಂಡು ಮಾಸ್ತಿಯವರ ಪ್ರತಿಭಾ ಮೂಸೆಯಿಂದ ಮೂಡಿಬಂದ ಸುಬ್ಬಣ್ಣ, ಕನ್ನಡದ ಮಹತ್ತ್ವದ ನೀಳ್ಗತೆಗಳಲ್ಲೊಂದು. ಇದರಲ್ಲಿ ಸುಬ್ಬಣ್ಣ ಎಂಬ ಸಂಗೀತಗಾರನೊಬ್ಬನ ಬದುಕಿನ ಏಳುಬೀಳು ಅಪೂರ್ವವಾಗಿ ಚಿತ್ರಿತಗೊಂಡಿದೆ.

ಚೆನ್ನಬಸವನಾಯಕ, ಚಿಕ್ಕವೀರರಾಜೇಂದ್ರ ಇವು ಇವರ ಐತಿಹಾಸಿಕ ಕಾದಂಬರಿಗಳು. ಈ ಎರಡೂ ಕಾದಂಬರಿಗಳ ವಸ್ತು ಇತಿಹಾಸ. ಮೊದಲನೆಯದರಲ್ಲಿ ಬಿದನೂರು ನಾಯಕನ ಮನೆತನದ ಏಳುಬೀಳಿನ ಚಿತ್ರಣವಿದ್ದರೆ ಇನ್ನೊಂದರಲ್ಲಿ ಕೊಡಗಿನ ರಾಜಕೀಯ ಇತಿಹಾಸದ ದುರವಸ್ಥೆ ಚಿತ್ರಣಗೊಂಡಿದೆ. ಒಂದರಲ್ಲಿ ಸಂಯಮವಿಲ್ಲದ ಬಾಳು ದುರಂತಕ್ಕೆ ನಾಂದಿಯಾದರೆ ಇನ್ನೊಂದರಲ್ಲಿ ಕಾಮಕ್ರೋಧಗಳಿಗೆ ತುತ್ತಾದ ಬಾಳು ದುರಂತಕ್ಕೆ ದಾರಿಮಾಡಿಕೊಡುತ್ತದೆ. ಕಾದಂಬರಿಕಾರರು ಈ ಎರಡೂ ಕೃತಿಗಳಲ್ಲಿ ಅಂದಿನ ಕಾಲದ ಜನಜೀವನವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಶೇಷಮ್ಮ ಇವರ ಸಾಮಾಜಿಕ ಕಾದಂಬರಿ (1976).

ಕನ್ನಡದಲ್ಲಿ ಹೆಚ್ಚಾಗಿ ನಾಟಕಗಳಿಲ್ಲದ್ದನ್ನು ಮನಗಂಡಿದ್ದ ಮಾಸ್ತಿಯವರು ಶಾಂತಾ, ಸಾವಿತ್ರಿ, ಉಷಾ, ತಾಳಿಕೋಟೆ, ಶಿವಛತ್ರಪತಿ, ಯಶೋಧರಾ, ತಿರುಪಾಣಿ, ಕಾಕನಕೋಟೆ, ಮಾಸತಿ, ಅನಾರ್ಕಳಿ, ಪುರಂದರದಾಸ, ಕನಕಣ್ಣ-ಎಂಬ ಹತ್ತಾರು ನಾಟಕಗಳನ್ನು ರಚಿಸಿದ್ದಾರೆ. ಮಂಜುಳಾ ಎಂಬ ಒಂದು ನಾಟಕವನ್ನುಳಿದು ಇತರ ನಾಟಕಗಳ ವಸ್ತು ಐತಿಹಾಸಿಕ, ಇಲ್ಲವೆ ಪೌರಾಣಿಕ. ತಾಳಿಕೋಟೆ, ಶಿವಛತ್ರಪತಿ, ಕಾಕನಕೋಟೆ, ಯಶೋಧರಾ, ಪುರಂದರದಾಸ, ಕನಕಣ್ಣ, ಮಂಜುಳಾ ಇವು ದೊಡ್ಡ ನಾಟಕಗಳು, ಉಳಿದವು ಏಕಾಂಕಗಳು. ಇವರ ನಾಟಕಗಳಲ್ಲೆಲ್ಲ ಕಾಕನಕೋಟೆ ಒಂದು ವಿಶಿಷ್ಟ ಕೃತಿ. ರಣಧೀರ ಕಂಠೀರವ ನರಸರಾಜ ಒಡೆಯರ ಕಾಲದಲ್ಲಿ ನಡೆಯಿತೆನ್ನಲಾದ ಘಟನೆಯೊಂದು ಈ ನಾಟಕದ ವಸ್ತು. ಕಾಡುಕುರುಬರ ಜೀವನ, ಕಡೆಗೆ ಅವರಿಗೆ ಬಂದೊದಗಿದ ವಿಪತ್ತು, ಕಾಚ ಎಂಬ ವ್ಯಕ್ತಿಯ ಆಸರೆಯಿಂದ ಅವರು ಅದರಿಂದ ಪಾರಾದ ಬಗೆ-ಈ ವಿವರಗಳಿಂದ ತುಂಬಿರುವ ಈ ಕೃತಿ ಕಾಡು ಕುರುಬರು ನಾಗರಿಕತೆಯ ಸೆಳೆತಕ್ಕೆ ತಮಗರಿವಿಲ್ಲದೆಯೇ ಒಳಗಾಗಿ ಸಂಕ್ರಮಣ ಘಟ್ಟಕ್ಕೆ ಬಂದು ನಿಲ್ಲುವುದು ಧ್ವನಿಪೂರ್ಣವಾಗಿ ನಾಟಕದ ಮೈಯಲ್ಲಿ ಅಂತರ್ಗತಗೊಂಡಿದೆ. ಈ ನಾಟಕ ರಂಗಭೂಮಿಯ ಮೇಲೂ ಪ್ರಚಂಡ ಯಶಸ್ಸು ಗಳಿಸಿ ಕರ್ನಾಟಕ ರಂಗಭೂಮಿಯ ಪುನರುಜ್ಜೀವನದಲ್ಲಿ ಮಹತ್ತ್ವದ ಪಾತ್ರ ವಹಿಸಿತು. ಈ ನಾಟಕ ಚಲನಚಿತ್ರವಾಗಿ ತೆರೆಯ ಮೇಲೆ ಕಾಣಿಸಿಕೊಂಡು (1977) ಚಿತ್ರರಸಿಕರ ಮನಸ್ಸನ್ನೂ ಸೂರೆಗೊಂಡಿದೆ.

ಮಾಸ್ತಿಯವರು ಕಥೆಗಾರರಾಗಿ ಹೇಗೆ ನಾಡಿನ ಗಮನ ಸೆಳೆದರೋ ಹಾಗೆಯೇ ಕನ್ನಡದಲ್ಲಿ ಮೊದಲಿಗೆ ವಿಮರ್ಶೆಯ ವಿಚಾರವಾಗಿ ಬರೆದು ಆ ಪ್ರಕಾರದಲ್ಲಿಯೂ ಗಮನಾರ್ಹ ಕೆಲಸಮಾಡಿದ್ದಾರೆ. 1915ರ ಸುಮಾರಿಗೆ ಶ್ರೀಕೃಷ್ಣಸೂಕ್ತಿ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ಸತೀಹಿತೈಷಿಣೀ ಗ್ರಂಥಮಾಲೆ ಎಂಬ ಲೇಖನ (ಸತೀಹಿತೈಷಣೀ ಎಂಬ ಗ್ರಂಥಮಾಲೆಯಲ್ಲಿ ಪ್ರಕಟಗೊಂಡ ಏಳು ಕಾದಂಬರಿಗಳ ವಿಮರ್ಶೆ) ಮಾಸ್ತಿಯವರ ಮೊತ್ತಮೊದಲ ವಿಮರ್ಶಾ ಲೇಖನ. ಅನಂತರ ಮಾಸ್ತಿಯವರು ವಿಮರ್ಶೆಗೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನೂ ಗ್ರಂಥಗಳನ್ನೂ ರಚಿಸಿದರು. ಇವರ ವಿಮರ್ಶಾ ಲೇಖನಗಳು ವಿಮರ್ಶೆ ಎಂಬ ಹೆಸರಿನಲ್ಲಿ ಸಂಕಲನಗಳಾಗಿ ಪ್ರಕಟಗೊಂಡಿದೆ. ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ ಎಂಬ ಲೇಖನ ವಿಮರ್ಶೆಯ ತಾತ್ತ್ವಿಕ ವಿಚಾರಗಳಿಗೆ ಸಂಬಂಧಿಸಿದ ಮೊತ್ತಮೊದಲ ಲೇಖನ. ಇದರಲ್ಲಿ ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ಪ್ರಯೋಜನ, ಕವಿಗೂ ವಿಮರ್ಶಕನಿಗೂ ಇರುವ ಭೇದ, ವಿಮರ್ಶಕನ ಅರ್ಹತೆಗಳು ಮೊದಲಾದ ವಿಷಯಗಳನ್ನು ಸಮಗ್ರವಾಗಿ ಸುಂದರವಾಗಿ ವಿವೇಚಿಸಿದ್ದಾರೆ. ಮಾಸ್ತಿಯವರ ವಿಮರ್ಶಾ ವಿಧಾನ ವರ್ಣನಾತ್ಮಕ ರೀತಿಯದು. ಇಲ್ಲಿ ವಿಶ್ಲೇಷಣೆಗಿಂತ ಕೃತಿಯೊಂದನ್ನು ಸಹೃದಯತೆಯಿಂದ ಆಸ್ವಾದಿಸಿ ಆತ್ಮೀಯತೆಯಿಂದ ಪರಿಚಯಮಾಡಿಕೊಡುವ ಪರಿ ಹೆಚ್ಚಾಗಿ ಕಂಡುಬರುತ್ತದೆ. ವಿಮರ್ಶೆಯಲ್ಲಿ ದೋಷಗಳಿಗಿಂತ ಹೆಚ್ಚಾಗಿ ಗುಣವನ್ನು ಎತ್ತಿ ಹೇಳಬೇಕೆಂಬುದು ಮಾಸ್ತಿಯವರ ನಿಲವು. ಹಾಗಾಗಿ ಇವರ ವಿಮರ್ಶೆಗಳಲ್ಲಿ ಕೃತಿಯ ಆಳಕ್ಕಿಳಿದು ಅದರ ಎಲ್ಲ ಮಗ್ಗುಲುಗಳನ್ನು ಪರಿಚಯಿಸುವ ವಸ್ತುನಿಷ್ಠ ವಿಮರ್ಶೆಯ ಅಂಶ ಅಷ್ಟಾಗಿ ಕಂಡುಬರುವುದಿಲ್ಲ ಎಂಬ ವಾದವೂ ಇದೆ. ಆದಿಕವಿ ವಾಲ್ಮೀಕಿ, ಭಾರತತೀರ್ಥ ಇವು ರಾಮಾಯಣ, ಮಹಾಭಾರತ ಈ ಮಹಾಕಾವ್ಯಗಳನ್ನು ಕುರಿತ ವಿಮರ್ಶಾ ಗ್ರಂಥಗಳು. ಆದಿಕವಿ ವಾಲ್ಮೀಕಿ ಉತ್ತಮ ವಿಮರ್ಶಾಗ್ರಂಥವೆಂಬ ಖ್ಯಾತಿಗೆ ಪಾತ್ರವಾಗಿರುವುದರ ಜೊತೆಗೆ ರಸಕೃತಿ ಎಂಬ ಹೊಗಳಿಕೆಗೂ ಪಾತ್ರವಾಗಿದೆ.

ಮಾಸ್ತಿಯವರು ಸ್ವತಂತ್ರ ಕೃತಿಗಳನ್ನು ರಚಿಸಿರುವಂತೆ ಭಾಷಾಂತರಕಾರರಾಗಿಯೂ ಅನೇಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವರು ಷೇಕ್ಸ್‍ಪಿಯರ್‍ನ ನಾಟಕಗಳನ್ನು ಕನ್ನಡ ಭಾಷೆಗೆ ತರುವಲ್ಲಿ ನಡೆಸಿದ ಪ್ರಯತ್ನ ಮೆಚ್ಚುವಂಥದ್ದು. ಕಿಂಗ್ ಲಿಯರ್ (ಲಿಯರ್ ಮಹಾರಾಜ), ದಿ ಟೆಂಪೆಸ್ಟ್ (ಚಂಡಮಾರುತ). ಟ್ವೆಲ್‍ಫ್ತ್ ನೈಟ್ (ದ್ವಾದಶ ರಾತ್ರಿ), ಹ್ಯಾಮ್ಲೆಟ್-ಇವು ಇವರಿಂದ ಅನುವಾದಗೊಂಡಿರುವ ನಾಟಕಗಳು. ಇಷ್ಟೇ ಅಲ್ಲದೆ ಷೇಕ್ಸ್‍ಪಿಯರನ ಅನೇಕ ನಾಟಕಗಳ ಬಿಡಿ ದೃಶ್ಯಗಳನ್ನು ಕೂಡ ಅನುವಾದಿಸಿದ್ದು ಅವು ಷೇಕ್‍ಸ್ಪಿಯರ್ ದೃಶ್ಯಗಳು-1, 2, 3 ಎಂಬ ಹೆಸರಿನಲ್ಲಿ ಪ್ರಕಟಗೊಂಡಿವೆ. ಚಿತ್ರಾಂಗದಾ ಅದೇ ಹೆಸರಿನ ರವೀಂದ್ರನಾಥ ಠಾಕೂರ್ ಅವರ ಬಂಗಾಳೀ ಕೃತಿಯ ಅನುವಾದ. ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯ ವಿವೇಚನೆಯನ್ನೊಳಗೊಂಡಂತೆ ರಚಿತವಾದ ಕೃತಿ 'ನಮ್ಮ ನುಡಿ'. ಇದು ಕನ್ನಡ ಭಾಷಾಶಾಸ್ತ್ರವನ್ನು ಕುರಿತಂತೆ ರಚಿತವಾದ ಆರಂಭದ ಮುಖ್ಯ ಗ್ರಂಥಗಳಲ್ಲೊಂದು. ಈ ಗ್ರಂಥದಲ್ಲಿ ಮಾಸ್ತಿಯವರು ಕನ್ನಡ ಭಾಷೆಯ ಅಭಿವೃದ್ಧಿಯ ಬಗ್ಗೆ ತೋರಿರುವ ಆದರ, ಅಭಿಮಾನ ಮೆಚ್ಚುವಂಥದ್ದು. ಕನ್ನಡದಲ್ಲಿ ಮಾತ್ರವಲ್ಲದೆ ಮಾಸ್ತಿಯವರು ಇಂಗ್ಲಿಷಿನಲ್ಲಿಯೂ ಗ್ರಂಥರಚನೆ ಕೈಗೊಂಡಿರುವುದುಂಟು. ಜೊತೆಗೆ ತಮ್ಮ ಅನೇಕ ಕೃತಿಗಳನ್ನು ಇವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಪಾಪ್ಯುಲರ್ ಕಲ್ಚರ್ ಇನ್ ಕರ್ನಾಟಕ, ದಿ ಪೊಯೆಟ್ರಿ ಆಫ್ ವಾಲ್ಮೀಕಿ, ಸುಬ್ಬಣ್ಣ, ದಿ ಮಹಾಭಾರತ-ಎ ಸ್ಟಡಿ, ಸೇಯಿಂಗ್ಸ್ ಆಫ್ ಬಸವಣ್ಣ, ರವೀಂದ್ರನಾಥ್ ಠಾಕೂರ್, ಷಾರ್ಟ್ ಸ್ಟೋರೀಸ್ 1,2,3,4,5 ಇವು ಇಂಗ್ಲಿಷ್ ಭಾಷೆಯಲ್ಲಿವೆ.

ಸಾಹಿತ್ಯರಂಗದ ನಾನಾಕ್ಷೇತ್ರಗಳಲ್ಲಿ ದುಡಿದು ಉತ್ತಮ ಸಾಹಿತಿ ಎಂಬ ಹೆಸರು ಗಳಿಸಿದಂತೆ ಮಾಸ್ತಿಯವರು ಪತ್ರಿಕೋದ್ಯಮದಲ್ಲಿಯೂ ಕೈಹಾಕಿ ಒಳ್ಳೆಯ ಸಂಪಾದಕರೆಂಬ ಹೆಸರು ಗಳಿಸಿದ್ದಾರೆ. ಧಾರವಾಡದಲ್ಲಿ ಆರಂಭವಾದ ಜೀವನ ಪತ್ರಿಕೆ ಅನಂತರ ಬೆಂಗಳೂರಿಗೆ ಬಂದಾಗ (1944) ಮಾಸ್ತಿಯವರು ಅದರ ಸಂಪಾದಕರಾದರು. ಎರಡು ದಶಕಗಳ ಕಾಲ ಸಂಪಾದಕರಾಗಿದ್ದುಕೊಂಡು ಆ ಪತ್ರಿಕೆಯನ್ನು ಅನೇಕ ರೀತಿಯಲ್ಲಿ ಅಭಿವೃದ್ಧಿಪಡಿಸಿದರು. ಆಗ ಇವರು ಬರೆಯುತ್ತಿದ್ದ ಸಂಪಾದಕೀಯ ಲೇಖನಗಳು ವಿಚಾರ ಪರಿಪ್ಲುತವಾಗಿದ್ದು ಅಪಾರ ಮನ್ನಣೆ ಗಳಿಸಿದ್ದುವು; ಈ ಲೇಖನಗಳೇ ಈಗ ಸಂಪಾದಕೀಯ ಎಂಬ ಹೆಸರಿನಲ್ಲಿ ಐದು ಭಾಗಗಳಲ್ಲಿ ಪ್ರಕಟವಾಗಿವೆ. ಗ್ರಂಥ ಸಂಪಾದನೆಯಲ್ಲಿಯೂ ಮಾಸ್ತಿಯವರು ಕೈಹಾಕಿರುವುದುಂಟು. ಧರಣಿಪಂಡಿತನ ಬಿಜ್ಜಳರಾಯಚರಿತೆ ಎಂಬ ಗ್ರಂಥವನ್ನು ಸ್ವತಂತ್ರವಾಗಿ ಸಂಪಾದಿಸಿಕೊಟ್ಟ ಇವರು ಕುವೆಂಪು ಅವರೊಡನೆ ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿ ಎಂಬ ಮಹಾಕಾವ್ಯವನ್ನು ಉತ್ತಮವಾಗಿ ಸಂಪಾದಿಸಿಕೊಟ್ಟಿದ್ದಾರೆ.

ತಮ್ಮ ಆತ್ಮಕಥೆಯನ್ನು ಭಾವ (3 ಭಾಗಗಳಲ್ಲಿ) ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ (1968-69). ಈ ಗ್ರಂಥ ಮಾಸ್ತಿಯವರ ಮನೋಧರ್ಮವನ್ನು ಅರಿಯುವಲ್ಲಿ, ಅವರ ಸಾಹಿತ್ಯವನ್ನು ಕುರಿತು ಹೆಚ್ಚಿನ ಅಭ್ಯಾಸ ಮಾಡುವಲ್ಲಿ, ಸಹಕಾರಿಯಾಗಿದೆ.

ಕರ್ನಾಟಕ ಏಕೀಕರಣದ ಕಾರ್ಯದಲ್ಲಿಯೂ ಮಾಸ್ತಿಯವರು ಅಪಾರವಾಗಿ ದುಡಿದಿದ್ದಾರೆ. ಇವರು ಅನೇಕ ಸಾಹಿತ್ಯಿಕ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1943-48) ಅನಂತರ ಅಧ್ಯಕ್ಷರಾಗಿ (1953-54) ಕೆಲಸ ನಿರ್ವಹಿಸಿದ ಇವರು ಆ ಸಂಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದಾರೆ.

ಮಾಸ್ತಿಯವರಿಗೆ ಅನೇಕ ಸನ್ಮಾನಗಳು ಪ್ರಶಸ್ತಿಗಳು ಲಭಿಸಿವೆ. ಆಳಿದ ಮೈಸೂರು ಮಹಾರಾಜರಿಂದ ರಾಜಸೇವಾಸಕ್ತ ಎಂಬ ಪ್ರಶಸ್ತಿ ಲಭಿಸಿದೆ. 1929 ಬೆಳಗಾಂವಿಯಲ್ಲಿ ನಡೆದ 15ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. 1942ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ 11ನೆಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. 1946ರಲ್ಲಿ ಮದರಾಸಿನಲ್ಲಿ ನಡೆದ ದಕ್ಷಿಣ ಭಾರತೀಯ ಭಾಷೆಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1961ರಲ್ಲಿ ಅಖಿಲ ಭಾರತ ಬರೆಹಗಾರರ ಸಮ್ಮೇಳನ ಮುಂಬಯಿಯಲ್ಲಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. 1964ರಲ್ಲಿ ಇಂಡಿಯನ್ ಪಿಇಎನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. 1976ರಲ್ಲಿ ಅದರ ಅಧ್ಯಕ್ಷರಾಗಿ ಗೌರವಕ್ಕೆ ಭಾಜನರಾದರು. 1968ರಲ್ಲಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. 1980ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ 1983ರಲ್ಲಿ ಕಾಳಿದಾಸ ಮತ್ತು ವರ್ಧಮಾನ ಪ್ರಶಸ್ತಿಗಳೂ ದೊರೆತವು. 1984ರಲ್ಲಿ ಚಿಕ್ಕವೀರರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತು ಅಖಿಲ ಭಾರತಮಟ್ಟದ ಗೌರವಕ್ಕೆ ಭಾಜನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಇವರಿಗೆ 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, 1977ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿಲಿಟ್ ಪ್ರಶಸ್ತಿ ನೀಡಿವೆ.

ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಾಹಿತ್ಯವನ್ನು ಕುರಿತಂತೆ ಕನ್ನಡದಲ್ಲಿ ಅನೇಕ ವಿಮರ್ಶಾ ಕೃತಿಗಳು, ಲೇಖನಗಳು ಪ್ರಕಟವಾಗಿವೆ. ಅವುಗಳಲ್ಲಿ ಇವರಿಗೆ ಅರ್ಪಿಸಿದ ಶ್ರೀನಿವಾಸ (1972) ಎಂಬ ಸಂಭಾವನ ಗ್ರಂಥ ಮುಖ್ಯವಾದುದು. ಶ್ರೀನಿವಾಸ ಸಾಹಿತ್ಯ ಮಾಸ್ತಿ ಸಾಹಿತ್ಯ ಸಮೀಕ್ಷೆ ಎಂಬುದು ಇಂಥದೇ ಇನ್ನೊಂದು ಕೃತಿ. ಇವರನ್ನು ಕುರಿತಂತೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಇಂಗ್ಲಿಷಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬ ಕೃತಿಯೊಂದನ್ನು ಪ್ರಕಟಿಸಿದೆ.

ಮಾಸ್ತಿಯವರ ಸಾಹಿತ್ಯದ ಹಿಂದಿನ ಶಕ್ತಿ ನೈತಿಕ ಶ್ರದ್ಧೆ, ಅದರ ಬೇರುಗಳಿರುವುದು ಸಂಸ್ಕøತಿಯಲ್ಲಿ ಮುಖ್ಯವಾಗಿ, ಭಾರತೀಯ ಸಂಸ್ಕøತಿಯಲ್ಲಿ. ಬದುಕಿಗೆ ಅರ್ಥವನ್ನು ಮೌಲ್ಯವನ್ನು ತರುವುದು ನೈತಿಕತೆ ಎಂಬುದು ಅವರ ದೃಢ ನಂಬಿಕೆ. ಅವರದು ಧಾರ್ಮಿಕ ಮನಸ್ಸು; ಆದರೆ ಅವರ ಮನಸ್ಸನ್ನು ತುಂಬಿರುವುದು ವಿಶಾಲವಾದ ಅರ್ಥದಲ್ಲಿ ದರ್ಮ. ದರ್ಮದ ಮೂಲ ತಾನು ಎನ್ನುವುದನ್ನು ಮರೆತು ತಾನು ಇರುವುದು ಲೋಕಕ್ಕಾಗಿ ಎಂಬ ಅರಿವಿನಲ್ಲಿ. ಈ ಅರಿವಿಗೆ ಕಾಂತಿ ಕೊಡುವುದು ಅನುಕಂಪ. ಈಶಾವಾಸ್ಯವನ್ನು ಜಗತ್ತಿಗೆ ಕೊಟ್ಟ ಮಹರ್ಷಿ ವಾಮದೇವ ದ್ವೈಪಾಯನರಾಗಲಿ. ಭಗವಾನ್ ಬುದ್ಧನಾಗಲಿ. ಅಕ್ಷರ ಜ್ಞಾನವಿಲ್ಲದ ಕಟ್ಟಿಗೆ ಮಾರುವ ವೆಂಕಟಿಗನಾಗಲಿ ಮಾಸ್ತಿಯವರು ಚಿತ್ರಿಸುವ ಎಲ್ಲ ಹಿರಿಯ ಚೇತನಗಳಲ್ಲಿ ಕಾಣುವುದು, ನೈತಿಕ ಶ್ರದ್ಧೆ, ಅನುಕಂಪ, ಕಾರುಣ್ಯ.

ಮಾಸ್ತಿಯವರು ಬದುಕಿನ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವುದು, ಭಾರತೀಯ ಸಂಸ್ಕøತಿಯಲ್ಲಿ ಎಂದು ವಿಮರ್ಶಕರು ಹೇಳಿರುವುದುಂಟು. ಈ ಮಾತು ಬಹುಮಟ್ಟಿಗೆ ಸರಿ. ಅವರ ಕಥೆಗಳಲ್ಲಿ ಬದುಕಿನ ಸಮಸ್ಯೆಗಳನ್ನು ಬಹು ಪಾತ್ರಗಳು ಬಳಸಿಕೊಳ್ಳುವುದು ಭಾರತೀಯ ಸಂಸ್ಕøತಿಯ ಮಾರ್ಗದರ್ಶನದಲ್ಲಿ. ಆದರೆ ಈ ಮಾತನ್ನು ಹೇಳುವಾಗಲೇ ಇನ್ನೊಂದು ಮಾತನ್ನು ಗಮನಿಸಬೇಕು. ಹಲವು ಕಥೆಗಳಲ್ಲಿ ಪರಿಹಾರ ಭಾರತೀಯ ಸಂಸ್ಕøತಿಯಿಂದಲೇ ಮೂಡಿಬಂದದ್ದು ಎಂದು ಹೇಳುವಂತಿಲ್ಲ. ಗೌತಮಿ ಹೇಳಿದ ಕಥೆ ಎನ್ನುವ ಪ್ರಸಿದ್ಧ ಕಥೆಯೇ ಒಂದು ನಿದರ್ಶನ. ಹಾಗೆಯೇ ಇತರ ನಾಡುಗಳ ಅಥವಾ ಧರ್ಮಗಳ ಮಾರ್ಗದರ್ಶನವನ್ನು ಗುರುತಿಸುವ ಕಥೆಗಳನ್ನು ಮಾಸ್ತಿಯವರು ಬರೆದಿದ್ದಾರೆ. ಚಟ್ಟೆಕಾರತಾಯಿ ಒಂದು ನಿದರ್ಶನ. ವಿವೇಕ ಸ್ವಾರ್ಥದ ಜೊತೆ ಮನಸ್ಸಿನ ನೋಟವನ್ನು ಮುದಗೊಳಿಸುವಂತೆ ಎಚ್ಚರ ವಹಿಸುವುದು, ಕರುಣೆ ಇವು ಮನಸ್ಸುಗಳ ಪರಿಹಾರದಲ್ಲಿ ಬೆಳಕುಗಳು.

ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಒಂದು ವೈಶಿಷ್ಟ್ಯವನ್ನು ಗಮನಿಸಬೇಕು. ನವೋದಯ ಯುಗದಲ್ಲಿ ಗಣನೀಯ ಸಂಖ್ಯೆಯಲ್ಲಿ ಚಾರಿತ್ರಿಕ ಕಾದಂಬರಿಗಳು ರಚಿತವಾದವು. ದೇಶವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಆ ಕಾಲದಲ್ಲಿ ಇವು ಓದುಗರಿಗೆ ತಮ್ಮ ನಾಡಿನ ವೈಭವವನ್ನು ನೆನಪಿಸಲು ಉದ್ದೇಶಿಸಿದ್ದು ಸಹಜವಾಗಿತ್ತು. ಆದರೆ ಮಾಸ್ತಿಯವರು ತಮ್ಮ ಎರಡು ಚಾರಿತ್ರಿಕ ಕಾದಂಬರಿಗಳಲ್ಲಿಯೂ ಒಂದು ಸಮುದಾಯ ಕ್ಷೀಣವಾಗಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸ್ಥಿತಿಗೆ ಬರುವುದು ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರು. ಇದರ ಸರ್ವಕಾಲಿಕ ಪ್ರಸ್ತುತತೆ ಸ್ಪಷ್ಟ. 1991 ರಲ್ಲಿ ಮಾಸ್ತಿಯವರ ಜನ್ಮ ಶತಮಾನೋತ್ಸವವನ್ನು ಕರ್ನಾಟಕದಲ್ಲಿಯೂ ಭಾರತದ ಹಲವು ನಗರಗಳಲ್ಲಿಯೂ ಅಮೆರಿಕ, ಜರ್ಮನಿ, ಆಸ್ಟ್ರೇಲಿಯ, ಇಂಗ್ಲೆಂಡು ಮುಂತಾಗಿ ಕನ್ನಡಿಗರಿರುವ ವಿದೇಶಗಳಲ್ಲಿಯೂ ಪ್ರೀತಿ ಸಂಭ್ರಮಗಳಿಂದ ಆಚರಿಸಲಾಯಿತು. 1992 ರಿಂದ ಬೆಂಗಳೂರಿನ ಮಾಸ್ತಿ ಪ್ರಶಸ್ತಿ ಸಮಿತಿಯು ಮಾಸ್ತಿಯವರ ಹೆಸರಿನಲ್ಲಿ ನಾಡಿನ ಹಿರಿಯರೊಬ್ಬರಿಗೆ ಪ್ರಶಸ್ತಿಯನ್ನು ನೀಡುತ್ತಿದೆ. ಮಾಸ್ತಿಯವರು 6-6-1986ರಂದು ಬೆಂಗಳೂರಿನಲ್ಲಿ ನಿಧನರಾದರು. ಅಂದೇ ಅವರ ಹುಟ್ಟು ದಿನ. ಪರಿಷ್ಕರಣೆ ಎಲ್. ಎಸ್. ಶೇಷಗಿರಿರಾವ್