ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿರ್ಜಿ ಅಣ್ಣಾರಾಯ

ವಿಕಿಸೋರ್ಸ್ದಿಂದ

ಮಿರ್ಜಿ ಅಣ್ಣಾರಾಯ

	1918-75. ಪ್ರಸಿದ್ಧ ಸಾಹಿತಿ ಹಾಗೂ ಸಮಾಜಸೇವಕರು. ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ 25-8-1918ರಂದು ಜನಿಸಿದರು. ತಂದೆ ಅಪ್ಪಣ್ಣ, ತಾಯಿ ಚಂದ್ರವ್ವ. ಇವರದು ವ್ಯವಸಾಯ ಮನೆತನ. ಶಾಲೆಗೆ ಹೋಗಿ ಕಲಿತದ್ದು ಪ್ರಾಥಮಿಕ ಶಾಲೆಯವರೆಗೆ ಮಾತ್ರ. ಅನಂತರ ಖಾಸಗಿಯಾಗಿ ಕಲಿತು ಕನ್ನಡ ಸಾಹಿತ್ಯ ಪರಿಷತ್ತಿನ ಜಾಣ ಪರೀಕ್ಷೆಯಲ್ಲಿ 1938ರಲ್ಲಿ ಉತ್ತೀರ್ಣರಾದರು. ಮರುವರ್ಷ ಪ್ರಾಥಮಿಕ ಶಾಲಾಶಿಕ್ಷಕರಾಗಿ ನೇಮಕಗೊಂಡ ಇವರು ಸಮೀಪದ ಉಗಾರದಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. ಅನಂತರ ಶೇಡಬಾಳ ಇವರ ಕಾರ್ಯಸ್ಥಾನವಾಯಿತು. ಕೆಲಸದಲ್ಲಿದ್ದುಕೊಂಡೇ ಇವರು 1953ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಧಾರವಾಡದ ಶಿಕ್ಷಕರ ಟ್ರೈನಿಂಗ್ ಕಾಲೇಜಿನಿಂದ ಶಿಕ್ಷಕ ತರಬೇತಿಯನ್ನೂ ಪಡೆದುಕೊಂಡರು (1948). ಕನ್ನಡದ ಜೊತೆಗೆ ವ್ಯವಹಾರಕ್ಕೆ ಬೇಕಾದ ಮರಾಠಿ, ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳ ಪರಿಚಯ ಮಾಡಿಕೊಂಡರು. ಉಪಾಧ್ಯಾಯವರ ಮಾರ್ಗದರ್ಶನದಲ್ಲಿ ಸಂಸ್ಕøತ ಹಾಗೂ ಪ್ರಾಕೃತದಲ್ಲಿ ಪರಿಶ್ರಮ ಗಳಿಸಿಕೊಂಡರು.

ಹಳ್ಳಿಯ ಸಹಜ ಬದುಕಿನಲ್ಲಿ ಬೆಳೆದ ಅಣ್ಣಾರಾಯರು ಚಿಕ್ಕಂದಿನಲ್ಲಿಯೇ ಸಾಹಿತ್ಯಕ್ಕೆ ಆಕರ್ಷಿತರಾದರು. ಹಳಗನ್ನಡ ಕೃತಿಗಳ ಜೊತೆಗೆ ಸಮಕಾಲೀನ ಸಾಹಿತ್ಯವನ್ನೂ ಅಭ್ಯಾಸಮಾಡಿಕೊಂಡರು. ಜೊತೆಗೆ ಬರೆವಣಿಗೆಯ ಕಲೆಯನ್ನೂ ರೂಢಿಸಿಕೊಂಡರು. ಇವರು ಮೊದಲು ಪ್ರಕಟಿಸಿದ ಕಾದಂಬರಿ ನಿಸರ್ಗ (1945). ವಸ್ತುವಿನ ಸಹಜತೆ, ಭಾಷೆಯ ಹೊಸತನ, ಸರಳ ನಿರೂಪಣೆ, ಬದುಕಿನ ಜೀವಂತ ಚಿತ್ರಣ ಇವುಗಳಿಂದ ಈ ಕಾದಂಬರಿ ಬಲುಬೇಗ ಜನಪ್ರಿಯವಾಗಿ ಕನ್ನಡದಲ್ಲಿ ಹೊಸ ದಾಖಲೆ ಸ್ಥಾಪಿಸಿತು.

ಅಣ್ಣಾರಾಯರ ಸಾಹಿತ್ಯ ರಚನೆ ವಿಸ್ತಾರವಾದುದು. ಸನ್ಮತಿ, ವಿವೇಕಾಭ್ಯುದಯ, ಗುರುದೇವ, ಪ್ರಬುದ್ಧ ಕರ್ನಾಟಕ, ಜೀವನ ಮುಂತಾದ ಹತ್ತಾರು ನಿಯತಕಾಲಿಕಗಳಲ್ಲೂ ಸ್ಮರಣ ಸಂಪುಟ ವಿಶೇಷಾಂಕಗಳಲ್ಲೂ ನಾನಾ ವಿಷಯಗಳ ಮೇಲೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರವಹಿಸಿದ ಇವರು ರಾಷ್ಟ್ರಪುರುಷ. ರಾಮಣ್ಣ ಮಾಸ್ತರ ಎಂಬ ಎರಡು ಕಾದಂಬರಿಗಳನ್ನು ಬರೆದರು. ಮುಂದೆ ಶ್ರೇಯಾಂಸ, ಪ್ರತಿ ಸರಕಾರ, ಅಶೋಕಚಕ್ರ, ಎರಡು ಹೆಜ್ಜೆ, ಹದಗೆಟ್ಟ ಹಳ್ಳಿ ಮುಂತಾದ ಸಾಮಾಜಿಕ ಕಾದಂಬರಿಗಳನ್ನೂ ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ ಎಂಬ ಚಾರಿತ್ರಿಕ ಕಾದಂಬರಿಗಳನ್ನೂ ಋಷಭದೇವ ಎಂಬ ಪೌರಾಣಿಕ ಕಾದಂಬರಿಯನ್ನೂ ಪ್ರಕಟಿಸಿದರು. ಪ್ರಣಯ ಸಮಾಧಿ, ಅಮರ ಕಥೆಗಳು, ವಿಜಯಶ್ರೀ ಇವು ಇವರ ಕಥಾಸಂಕಲನಗಳು. ಮೂಲ ಶಿಕ್ಷಣದ ಮೌಲ್ಯಮಾಪನ, ಭಾಷಾಶಿಕ್ಷಣ, ಲೇಖನಕಲೆ ಮುಂತಾದ ಶೈಕ್ಷಣಿಕ ಗ್ರಂಥಗಳನ್ನೂ ದತ್ತವಾಣಿ, ವಿಮರ್ಶೆಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು ಮೊದಲಾದ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಕಲ್ಯಾಣ ಕೀರ್ತಿಯ ಚಿನ್ಮಯ ಚಿಂತಾಮಣಿ ಹಾಗೂ ಭರತೇಶವೈಭವದ ಶೋಭನ ಸಂಧಿಗಳು ಇವು ಸಂಪಾದಿತ ಕೃತಿಗಳಾದರೆ ಪ್ರಿಯದರ್ಶಿ, ಭಾರತದ ಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ಧನಕಥೆ, ಮಹಮದ್ ಪೈಗಂಬರ, ಶ್ರೀಶಾಂತಿ ಸಾಗರರು, ತೀರ್ಥಂಕರ ಮಹಾವೀರ, ಮಹಾಪುರುಷ ಇವು ಜೀವನ ಚರಿತ್ರೆಗಳು.

ಜೈನಧರ್ಮ ಅಣ್ಣಾರಾಯರ ಮೇರುಕೃತಿ. ಜೈನಧರ್ಮ ಹಾಗೂ ಇತರ ಧರ್ಮಗಳೊಡನೆ ಅದರ ತುಲನಾತ್ಮಕ ಅಧ್ಯಯನವನ್ನು ಈ ಉದ್‍ಗ್ರಂಥದಲ್ಲಿ ನೋಡಬಹುದು. ರವಿಷೇಣನ ರಾಮಾಯಣ ಕೃತಿಯ ಸಾರವನ್ನು ಜನತಾ ರಾಮಾಯಣ ಎಂಬ ಹೆಸರಿನಲ್ಲಿ ಸುಲಭಶೈಲಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಇದಕ್ಕೆ ಇವರು ಬರೆದಿರುವ 150 ಪುಟಗಳ ವಿಸ್ತಾರವಾದ ವಿದ್ವತ್‍ಪೂರ್ಣ ಪ್ರಸ್ತಾವನೆ ತಲಸ್ಪರ್ಶಿಯಾದ ತೌಲನಿಕ ಸಂಶೋಧನೆಯಿಂದ ಕೂಡಿದ್ದು ಭಾರತೀಯ ಭಾಷೆಗಳಲ್ಲಿರುವ ರಾಮಾಯಣಗಳ ಪರಂಪರೆಯನ್ನು ವಿವೇಚಿಸಿದೆ. ರತ್ನಕರಂಡಕ ಶ್ರಾವಕಾಚಾರ ಎಂಬುದು ಇವರ ಇನ್ನೊಂದು ವಿದ್ವತ್ ಕೃತಿ. ಭಾರತೀಯ ಸಂಸ್ಕøತಿಗೆ ಜೈನಧರ್ಮದ ಕೊಡುಗೆ ಎಂಬ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ತಂದಿದ್ದಾರೆ.

ಅಣ್ಣಾರಾಯರ ಸಾರ್ವಜನಿಕ ಸೇವೆ ಗಣ್ಯವಾದುದು. ಶೇಡಬಾಳದಲ್ಲಿ ಸ್ವಾತಂತ್ರ್ಯೋತ್ಸವದ ಸವಿನೆನಪಿಗೆ 1947 ಆಗಸ್ಟ್ 15ರಂದು ಶಾಂತಿ ಸೇವಾಸದನವನ್ನು ತೆರೆದರು. ಅದರ ವತಿಯಿಂದ ಅನೇಕ ಹೊಸ ಬರೆಹಗಾರರಿಗೆ ತರಬೇತಿ ಕೊಟ್ಟು 45 ಪುಸ್ತಕಗಳನ್ನು ಪ್ರಕಟಿಸಿದರು. ಗ್ರಾಮಾಂತರ ಜನತೆಯಲ್ಲಿ ವಾಚಾನಾಭಿರುಚಿ ಹುಟ್ಟಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಶೇಡಬಾಳದಲ್ಲಿ 1970 ಮೇ 30ರಂದು ಜ್ಞಾನವಿಕಾಸ ಮಂದಿರವೆಂಬ ಇನ್ನೊಂದು ಸಾಂಸ್ಕøತಿಕ ಸಂಸ್ಥೆಯನ್ನು ಆರಂಭಿಸಿದರು. ಇದರ ಹೆಸರಿನಿಂದ ಗ್ರಂಥಭಂಡಾರವೂ ನಡೆದಿದೆ. ಸಾರ್ವಜನಿಕ ಸೌಕರ್ಯಕ್ಕಾಗಿ ಗ್ರಂಥಾಲಯವು ವಿದ್ವಾಂಸರು ಬಂದಿಳಿದುಕೊಳ್ಳಲು ತಂಗುಮನೆ. ಸ್ಥಳದಲ್ಲಿಯೇ ವಾಸವಾಗಿದ್ದು ಬರೆವಣಿಗೆ ಅನ್ವೇಷಣೆ ಆಲೋಚನೆಗಳಿಗೆ ಅವಕಾಶ ಕಲ್ಪನೆ ಮುಂತಾದ ಉದ್ದೇಶಗಳಿಗಾಗಿ 1971ರಿಂದ ಚಂದ್ರಗಂಗಾ ಜ್ಞಾನಪೀಠ ಟ್ರಸ್ಟನ್ನು ಸ್ಥಾಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟವಾದ ಸಂಪರ್ಕಹೊಂದಿದ್ದ ಅಣ್ಣಾರಾಯರು 1970-74 ಅವಧಿಯಲ್ಲಿ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರೂ ಕೆಲವು ವರ್ಷಗಳ ಕಾಲ ಬೆಳಗಾಂವಿ ಜಿಲ್ಲಾ ಸಾಹಿತ್ಯ ಸಮಿತಿಯ ಅಧ್ಯಕ್ಷರೂ ಆಗಿದ್ದರು. ರಾಜ್ಯ ಸರ್ಕಾರದ ಹಲವು ಪಠ್ಯಪುಸ್ತಕ ಸಮಿತಿಗಳ ಸದಸ್ಯರೂ ಅಧ್ಯಕ್ಷರೂ ಆಗಿದ್ದ ಇವರು ಸೊಲ್ಲಾಪುರದ ಜೀವರಾಜ ಗ್ರಂಥಮಾಲೆ, ಕೊಲ್ಲಾಪುರದ ಬಳಿಯ ಬಾಹುಬಲಿ ವಿದ್ಯಾಸಂಸ್ಥೆ, ಗುಡಿಬಂಡೆಯ ವಿವೇಕೋದಯ ಗ್ರಂಥ ಮಾಲೆ ಮುಂತಾದ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜನವಿಜಯ ಮತ್ತು ಸನ್ಮತಿ ಪತ್ರಿಕೆಗಳಿಗೆ ಇವರು ಕೆಲವು ವರ್ಷಗಳ ಕಾಲ ಸಂಪಾದಕರಾಗಿದ್ದರು.

ಮಿರ್ಜಿ ಅಣ್ಣಾರಾಯರಿಗೆ ಹಲವು ಬಗೆಯ ಗೌರವಗಳು. ಪ್ರಶಸ್ತಿಗಳು ಬಂದಿವೆ. ಇವರ ನಿಸರ್ಗ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೇವರಾಜ ಬಹದ್ದೂರ್ ದತ್ತಿ ಬಹುಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪಡೆದ (1967) ಇವರನ್ನು ರಾಜ್ಯ ಸಾಹಿತ್ಯ ಅಕಾಡೆಮಿ 1970ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಇವರಿಗೆ ಮಿರ್ಜಿ ಅಣ್ಣಾರಾಯ ಎಂಬ ಸಂಭಾವನ ಗ್ರಂಥ ಅರ್ಪಿಸಲಾಗಿದೆ.