ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂಗು

ವಿಕಿಸೋರ್ಸ್ದಿಂದ
Jump to navigation Jump to search

ಮೂಗು ಉಸಿರಾಟಕ್ಕೂ ಇದಕ್ಕಿಂತ ಮುಖ್ಯವಾಗಿ, ವಾಸನೆ ಗ್ರಹಣಕ್ಕೂ ಶಬ್ದೋಚ್ಚಾರಣೆಗೂ ಮೀಸಲಾದ ಅಂಗ (ನೋಸ್). ಸ್ತನಿಗಳಲ್ಲಿ ಮಾತ್ರ ಮೂಗು ಬಾಯಿಗಳನ್ನು ಅಂಗಳು ಬೇರ್ಪಡಿಸಿದೆ. ಹೀಗಾಗಿ ಇವು ಉಸಿರಾಡುವಾಗಲೂ ಆಹಾರ ಜಗಿಯುವುದು ಸಾಧ್ಯವಾಗುತ್ತದೆ. ಉಚ್ಛ್ವಸಿತ ಶ್ವಾಸದ ಉಷ್ಣತೆಯನ್ನು ಮೂಗು ಮತ್ತು ಅದರ ಪಕ್ಕದ ಗಾಳಿ ಗೂಡುಗಳು ದೇಹೋಷ್ಣತೆಯ ಮಟ್ಟಕ್ಕೆ ಏರಿಸುತ್ತದೆ. ಮಾನವನಲ್ಲಿ ದವಡೆಗಳು ಚಿಕ್ಕವಾಗಿದ್ದು ಮೂಗು ಮುಖಮಧ್ಯೆ ಮುಂಚಾಚಿ ಎದ್ದು ಕಾಣುವಂತಿದೆ. ಇದರಲ್ಲಿ ಹೊರ ಮತ್ತು ಒಳ ಮೂಗುಗಳಿವೆ.

ಹೊರ ಮೂಗು: ಪಿರಮಿಡ್ಡಿನಂತಿದೆ. ಇದರ ಬುಡ ಹಣೆಗೆ ಸೇರಿ ಕಣ್ಗೂಡುಗಳ ನಡುವೆ ನೆಲಸಿದೆ. ಕೆಳ ಮುಂದಿನ ಕೋಣೆ ಮೂಗಿನ ತುದಿ. ತುದಿಯ ಹಿಂದೆ ದೀರ್ಘವೃತ್ತಾಕಾರದ ಹೊಳ್ಳೆಗಳಿವೆ. ಪಕ್ಕಮೈಗಳು ಮೂಗಿನ ಬೆನ್ನು. ಇದರ ಆಕಾರದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವೈವಿಧ್ಯ ಕಂಡುಬರುತ್ತದೆ. ಮೂಗಿನ ಮೇಲ್ಭಾಗದಲ್ಲಿ ನಾಸಿಕಾಸ್ಥಿಗಳೂ ಪಕ್ಕದಲ್ಲಿ ಮೇಲ್ದವಡೆ ಮೂಳೆಗಳ ಮೇಲ್ಚಾಚುಗಳೂ ಇವೆ. ಕೆಳಭಾಗದಲ್ಲಿ ಮೃದ್ವಸ್ಥಿಗಳಿವೆ. ಹೊಳ್ಳೆಗಳ ಪಕ್ಕಗಳು ಪೇಶಿಗಳ ಕ್ರಿಯೆಯಿಂದ ಆಡಬಲ್ಲವಾದ್ದರಿಂದ ಹೆಚ್ಚು ಉಸಿರಾಡುವಾಗ ಹೊಳ್ಳೆಗಳು ದೊಡ್ಡವಾಗುತ್ತವೆ. ಮೂರುಜೊತೆ ಪೇಶಿಗಳಿವೆ. ಪ್ರೋಸೀರಸ್ ಎಂಬವು ತಾತ್ಸಾರಭಾವ ಸೂಚಕವಾಗಿ ಚರ್ಮದ ಅಡ್ಡ ಸುಕ್ಕುಗಳನ್ನು ಉಂಟುಮಾಡುತ್ತವೆ (ಇವು ಆನೆಯ ಸೊಂಡಿಲಿನಲ್ಲಿ ಬಲು ದೊಡ್ಡದಾಗಿದೆ). ಚಿಕ್ಕ ಪೇಶಿಗಳು ಹೊಳ್ಳೆಗಳನ್ನು ದೊಡ್ಡವು ಚಿಕ್ಕವು ಆಗಿ ಮಾಡುತ್ತವೆ. ಮೂಗಿನ ಪೇಶಿಗಳನ್ನು ಮುಖ ನರಗಳ (7ನೆಯ ತಲೆ) ಶಾಖೆಗಳು ಚೋದಿಸುತ್ತವೆ. ಸ್ಪರ್ಶನ ಇತ್ಯಾದಿ ಸಂವೇದನ ತಂತುಗಳು 5ನೆಯ ತಲೆ ನರಗಳಿಂದ ಮೂಗಿನ ಚರ್ಮಕ್ಕೆ ಹೋಗುತ್ತವೆ. ಮುಖದ ಮತ್ತು ಕಣ್ಗೂಡಿನ ಅಪಧಮನಿಗಳ ಶಾಖೆಗಳು ಕೆಂಪುರಕ್ತವನ್ನು ಮೂಗಿಗೆ ಹಂಚುತ್ತದೆ. ಮುಖ ಮತ್ತು ಕಣ್ಗೂಡುಗಳೆ ಅಭಿಧಮನಿಗಳು (ಸಿರಗಳು) ಮಲಿನ ರಕ್ತವನ್ನು ಮೂಗಿನಿಂದ ಒಯ್ಯುತ್ತವೆ. ಮೂಗಿನ ಬೆನ್ನು ಮತ್ತು ಪಕ್ಕಗಳ ಚರ್ಮ ಸಡಿಲವಾಗಿ ತೆಳುವಾಗಿದೆ. ತುದಿ ಮತ್ತು ಹೊಳ್ಳೆಗಳಲ್ಲಿ ದಪ್ಪಗಿದ್ದು ಅಳ್ಳಾಡದಂತೆ ಅಡಿ ಭಾಗಗಳ ಗಂಟಿದೆ.

ಒಳ ಮೂಗು ಕುಹರ : ಒಳ ಮೂಗು ಮಧ್ಯ ತಡಿಕೆಯಿಂದ ಬಲ ಎಡಕುಹರಗಳಾಗಿವೆ. ಪ್ರತಿಯೊಂದು ಕುಹರದ ಉದ್ದ 5.7 ಸೆಂಮೀ, ಎತ್ತರ 5 ಸೆಂಮೀ. ನೆಲಗಟ್ಟಿನ ಅಗಲ 1.5 ಸೆಂಮಿ : ಅಗಲ 1-2 ಮಿಮೀ.

ಬಲ/ಎಡ ನಾಸಿಕ ಕುಹರ : 1 ಮೇಲ್ಭಾಗ ಅಥವಾ ವಾಸನೆ ಭಾಗ : ಮೇಲಿನ ನಾಸಿಕ ಸುರುಳಿಯವರೆಗೂ ಮತ್ತು ಮಧ್ಯ ತಡಿಕೆಯ ಮೇಲ್ಬಾಗದವರೆಗೂ ವ್ಯಾಪಿಸಿದೆ. ಇದರ ಕಣಪೊರೆಯಲ್ಲಿ ಬಲ/ಎಡ ತಲೆ ನರತಂತುಗಳ ಕೊನೆಗಳಿವೆ. ವಾಸನೆ ಸರಿಯಾಗಿ ತಿಳಿಯಬೇಕಾದರೆ ಉಸಿರಿನ ವಾಯು ಮೇಲಕ್ಕೆ ಹೋಗುವಂತೆ ಮೂಸಿನೋಡಬೇಕು.

2 ಕೆಳಭಾಗ ಅಥವಾ ಶ್ವಾಸಭಾಗ : ಮೇಲಿನ ಸುರುಳಿಯ ಕೆಳಗೆ ಮೇಲಿನ ನಾಸಿಕ ಕುರುಚಾಗಿ ಓರೆಯಾಗಿದೆ. ಮಧ್ಯಸುರುಳಿ ಮೇಲಿನದಕ್ಕಿಂತ ಹೆಚ್ಚು ಉದ್ದವಾಗಿದೆ. ಅದರ ಕೆಳಗಿನ ಮಧ್ಯನಾಸಿಕ ಮಾರ್ಗವೂ ಹೆಚ್ಚು ಉದ್ದವಿದೆ. ಇದರ ಮುಂದೆ ಇರುವ ಭಾಗ ಮಧ್ಯಾಂಗಣ. ಕೆಳಸುರುಳಿ ಹೆಚ್ಚು ಉದ್ದವಿದ್ದು ಇದರ ಕೆಳಗಿನ ಕೆಳನಾಸಿಕಮಾರ್ಗವೂ ಅಷ್ಟೇ ಉದ್ದವಿದೆ. ಸುರುಳಿಗಳಲ್ಲಿ ರಕ್ತನಾಳಗಳು ಹೇರಳವಿದ್ದು ಒಳಉಸಿರಿನ ಉಷ್ಣತಾಮಟ್ಟವನ್ನು ದೇಹೋಷ್ಣತೆಯ ಮಟ್ಟಕ್ಕೆ ವಿರಿಸುತ್ತವೆ. ಕ್ರಿಮಿಗಳಿಂದ ಕೆಂದೂತ (ನೆಗಡಿ) ಆದರೆ ಸುರಳಿಗಳ ಲೋಳೆಪೊರೆ ಊದಿಕೊಂಡು ಮೂಗು ಕಟ್ಟಿಕೊಳ್ಳುತ್ತದೆ. ಹಲವರಲ್ಲಿ ಮಧ್ಯ ತಡಿಕೆ ವಕ್ರವಾಗಿದ್ದು ಎಡಕುಹರ ಇಕ್ಕಟ್ಟಾಗಿರುವುದರಿಂದ ಎಡಗಡೆ ಮೂಗು ಹೆಚ್ಚು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆ ಆಗಬಹುದು. ಕೆಳನಾಸಿಕ ಸುರುಳಿಯ ಮುಂಕೊನೆ ಕೆಳಗೆ ನಾಸಿಕಾಶ್ರುನಾಳ ಕಣ್ಣಿನಿಂದ ಇಳಿದು ತೆರೆಯುವುದರಿಂದ ಕಣ್ಣೀರು ಮೂಗಿನಲ್ಲಿ ಸುರಿಯುತ್ತದೆ. ಪಕ್ಕದ ಗಾಳಿಗೂಡುಗಳು ಮೂಗಿನೊಳಕ್ಕೆ ತೆರೆಯಯುವುದರಿಂದ ಒಳಉಸಿರಿನ ವಾಯು ಅವುಗಳಿಗೆ ಸುಳಿಯಾಗಿ ತಿರುಗಿ ಅದು ಬೆಚ್ಚಗಾಗುತ್ತದೆ. ಗಂಟಲಧ್ವನಿಯೂ ಅವುಗಳಲ್ಲಿ ಅನುರಣನಗೊಂಡು ಗಟ್ಟಿಯಾಗುತ್ತದೆ. ಹೆಂಗಸರಲ್ಲಿ ಗಾಳಿಗೂಡುಗಳು ಚಿಕ್ಕವಿರುವುದರಿಂದ ಅನುರಣನ ಕಮ್ಮಿ. ಇವು ಎಲ್ಲರಲ್ಲೂ ಒಂದೇ ರೀತಿ ಇಲ್ಲದಿರುವುದರಿಂದ ಅನುರಣನವೂ ಒಂದೇ ರೀತಿಯಲ್ಲದೆ ಶಬ್ದ ಗುಣ ವಿಶಿಷ್ಟ ವೈಯಕ್ತಿಕವಾಗಿರುತ್ತದೆ. ಮೇಲಿನ ಸುರುಳಿಯ ಮೇಲೆ ಜತೂಕಾಸ್ಥಿಯ ಗಾಳಿಗೂಡು ತೆರೆಯುತ್ತದೆ. ಲಲಾಟಾಸ್ಥಿ ಜಾಲರಾಸ್ಥಿಗಳ ಗೂಡುಗಳು ಮಧ್ಯ ನಾಸಿಕ ಮಾರ್ಗದಲ್ಲಿ ತೆರೆಯುತ್ತವೆ. ಗಾಳಿಗೂಡುಗಳಲ್ಲಿ ಅತಿದೊಡ್ಡದಾದ ಮೇಲ್ದವಡೆ ಮೂಳೆಯದೂ ಮಧ್ಯ ಸುರುಳಿಯ ಕೆಳಗೆ ತೆರೆಯುತ್ತದೆ. ಅದರ ರಂಧ್ರ ಅದರ ತಳಕ್ಕಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ಅದರಲ್ಲಿ ಕೀವು ತುಂಬಿಕೊಂಡರೆ ಸುಲಭವಾಗಿ ಆಚೆ ಬರಲಾರದು. ಇದನ್ನು ಪರಿಹರಿಸಲು ಮೂಗಿನ ವೈದ್ಯರು ಕೆಳಮಟ್ಟದಲ್ಲಿ ಕೃತಕ ರಂಧ್ರವನ್ನು ಕೊರೆಯುತ್ತಾರೆ. ಹಣೆ ಮೂಳೆಯ ಗೂಡಿನಲ್ಲಿ ಕೀವು ಸೇರಿಕೊಂಡರೆ ಅಪಾಯಹೆಚ್ಚು. ಅದು ಮಿದುಳು ಬುರುಡೆಯೊಳಕ್ಕೆ ಸೇರಬಹುದು. ಪಿಟ್ಯುಯಿಟರಿಗ್ರಂಥಿ ಜತೂಕಾಸ್ಥಿಯ ಗುಳಿಯಲ್ಲಿದೆ. ಅದರ ಅರ್ಬುದ ಮೂಗಿನೊಳಕ್ಕೆ ನುಗ್ಗಬಹುದು. ಆಗ ಅದನ್ನು ಮೂಗಿನ ಮೂಲಕ ತೆಗೆಯಬೇಕು.

ಬಲ/ಎಡ ಕುಹರದ ಒಳಭಿತ್ತಿ: ಮಧ್ಯ ತಡಿಕೆಯಿಂದಾಗಿದೆ. ಸಾಮಾನ್ಯವಾಗಿ ಇದು ವಕ್ರವಾಗಿ ಎಡಕುಹರವನ್ನು ಚಿಕ್ಕದು ಮಾಡಿರುತ್ತದೆ. ವಕ್ರತಡಿಕೆಯಿಂದ ಏಣು ಅಥವಾ ಮುಳ್ಳುಗಳು ಬಲ/ಎಡ ಕುಹರದೊಳಕ್ಕೆ ಕೆಲವು ಸಲ ಬೆಳೆಯುತ್ತವೆ. ಬಾಚಿಹಲ್ಲು ಹಿಂದಿನ ಅಸ್ಥಿನಾಳದ ಮೇಲೆ ತಲೆಯ ಮೃದ್ವಸ್ಥಿಯ ಕೆಳ ಅಂಚಿನಲ್ಲಿ ಮೂಗು-ಅಂಗುಳು ಗೂಡು ಇದೆ. ಇದು ತಡಿಕೆಯ ಕುರುಡು ಕಿಸೆಯೊಳಕ್ಕೆ ತೆರೆಯುತ್ತದೆ. ಕಿಸೆಯಲ್ಲಿ ಚಾಕೋಬ್ಸನ್ನನ ಸೀರಿತಾನಾಸಿಕಾಂಗ ಸೀರಿತಾನಾಸಿಕ ಮೃದ್ವಸ್ಥಿಯ ಮೇಲಿದೆ. ಹಲವು ಕೆಳದರ್ಜೆ ಪ್ರಾಣಿಗಳಲ್ಲಿ ಈ ಅಂಗ ದೊಡ್ಡದಾಗಿ ಬೆಳೆದು ವಾಸನೆ ಅಂಗವಾಗಿರುತ್ತದೆ. ಇದರಿಂದ ತಂತುಗಳು 1ನೆಯ ತಲೆನರದಲ್ಲಿ ಮಿದುಳಿಗೆ ಹೋಗುತ್ತವೆ.

ಹಿಂಭಾಗದಲ್ಲಿ ಕುಹರದ ಚಾವಣಿ ಅಗಲವಿದ್ದು ಮುಂಭಾಗದಲ್ಲಿ ಅಡ್ಡಡ್ಡವಾಗಿ ಇಕ್ಕಟ್ಟಾಗಿದೆ. ಕುಹರದ ನೆಲೆಗಟ್ಟು ಹಿಂದು ಮುಂದಕ್ಕೆ ಚರಂಡಿಯಂತಿದೆ. ಅದರ ಮುಂದಿನ ಮುಕ್ಕಾಲು ಭಾಗ ಮೇಲ್ದವಡೆ ಮೂಳೆಯ ಅಂಗುಳು ಫಲಕದಿಂದಾಗಿದೆ. ಹಿಂದಿನ ಕಾಲುಭಾಗ ಅಂಗುಳು ಮೂಳೆಯ ಸಮಕಟ್ಟು ಭಾಗದಿಂದಾಗಿದೆ.

ಮೂಗಿನ ಲೋಳೆಪೊರೆ ಕುಹರ ಭಿತ್ತಿಗಳ ಮೇಲೆ ಹರಡಿ, ಮೂಳೆಮೃದ್ವಸ್ಥಿ ಪರಿವೇಷ್ಟನಗಳಿಗೆ ಅಂಟಿದೆ. ಹೊರ ಹೊಳ್ಳೆಗಳ ಮೂಲಕ ಅದು ಮುಖದ ಚರ್ಮದೊಡನೆಯೂ ಒಳಹೊಳ್ಳೆಗಳ ಮೂಲಕ ಗಂಟಲಿನ ಲೋಳೆಪೊರೆಯೊಡನೆಯೂ ನಾಸಿಕಾಶ್ರುನಾಳದ ಮೂಲಕ ಕಣ್ಣು ಲೋಳೆಪೊರೆಯೊಡನೆಯೂ ನಿರಂತರವಾಗಿದೆ. ನಾಸಿಕ ಮಾರ್ಗಗಳಲ್ಲಿರುವ ರಂಧ್ರಗಳ ಮೂಲಕ ಹಣೆ, ಜಾಲರ, ಜತೂಕ ಮತ್ತು ಮೇಲ್ದವಡೆ ಮೂಳೆಗಳ ಗಾಳಿಗೂಡುಗಳ ಲೋಳೆಪೊರೆಯೊಡನೆ ಅವಿರತವಾಗಿದೆ. ಮೂಗುಗಂಟಲಿನ ಲೋಳೆಪೊರೆ ಮೂಲಕ ನಡುಗಿವಿಯ ಲೋಳೆಪೊರೆಯೊಡನೆ ನಿರಂತರತೆ ಇದೆ. ಮಧ್ಯತಡಿಕೆ ಮೇಲೆ ಲೋಳೆಪೊರೆ ದಪ್ಪವಾಗಿದೆ. ನಾಸಿಕ ಮಾರ್ಗಗಳಲ್ಲಿ ಮತ್ತು ಗಾಳಿಗೂಡುಗಳ ಲೋಳೆಪೊರೆ ತೆಳುವಾಗಿದೆ. ಮೂಗಿನ ಲೋಳೆಪೊರೆಯ ಹೆಚ್ಚು ಭಾಗ ದಪ್ಪವಾಗಿರುವುದರಿಂದ ಅಸ್ಥಿಪಂಜರದಲ್ಲಿರುವುದಕ್ಕಿಂತ ನಾಸಿಕ ಕುಹರಗಳು ಇಕ್ಕಟ್ಟಾಗಿವೆ ಮತ್ತು ಗಾಳಿಗೂಡುಗಳ ರಂಧ್ರಗಳು ಚಿಕ್ಕವಾಗಿವೆ.

ಮೂಗಿನ ರಕ್ತಪೂರೈಕೆ ಕಣ್ಗೂಡು ಧಮನಿಯ ಶಾಖೆಗಳಿಂದಾಗುತ್ತದೆ. ಮಲಿನರಕ್ತ ಮುಖದ ಮತ್ತು ಕಣ್ಗೂಡಿನ ಅಭಿಧಮನಿಗಳಿಗೆ ಹೋಗುತ್ತದೆ. 1ನೆಯ ತಲೆನರಗಳು ಮೂಗಿನ ಇಕ್ಕಟ್ಟು ಚಾವಣಿ ಮತ್ತು ಪಕ್ಕಗಳು ವಾಸನೆ ಲೋಳೆಪೊರೆಯಿಂದ ವಾಸನೆ ಮಿದುಳಿಗೆ ಹೋಗುತ್ತವೆ. ಸಾಮಾನ್ಯ ಸಂವೇದನಾ ನರಗಳು 5ನೆಯ ತಲೆನರಗಳ ಶಾಖೆಗಳು. ಇವುಗಳಿಂದ ಮೂಗಿನಲ್ಲಿ ಉರಿ ನೋವುಗಳೇ ಅಲ್ಲದೆ ಪರವಸ್ತುವಿರುವುದು ಕೂಡ ತಿಳಿಯುತ್ತದೆ ಮತ್ತು ಸೀನಿನ ಪ್ರತಿಕ್ರಿಯೆಗೆ ಚೋದನೆಯಾಗುತ್ತದೆ. (ಎಂ.ಡಿ.)