ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೇದೋಜೀರಕಾಂಗ

ವಿಕಿಸೋರ್ಸ್ದಿಂದ
Jump to navigation Jump to search

ಮೇದೋಜೀರಕಾಂಗ ಆಹಾರ ಪಚನಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಜೀರ್ಣರಸವನ್ನು ಸ್ರವಿಸುವ ಅಂಗ (ಪ್ಯಾನ್‍ಕ್ರಿಯಾಸ್). ಆದರೆ ಇದರ ಗಾತ್ರ ತೀರ ಚಿಕ್ಕದು. ತೂಕ ಕೇವಲ 85 ಗ್ರಾಮ್. ಇದು ಸ್ರವಿಸುವ ರಸದಲ್ಲಿ ಪ್ರೋಟೀನ್ ಪಿಷ್ಟ ಮತ್ತು ಮೆದಸ್ಸುಗಳನ್ನು ಪೂರ್ತಿ ಜೀರ್ಣಿಸುವ ಮೂರು ಶಕ್ತಿಯುತ ಕಿಣ್ವಗಳಿವೆ. ದಿನಕ್ಕೆ 1 - 1 1/2 ಲೀಟರಿನಷ್ಟು ಜೀರ್ಣರಸವನ್ನು ಸ್ರವಿಸುವುದಿದೆ. ಇದು ಬರೀ ಮೇದೋಜೀರಕರಸವಲ್ಲ, ಸರ್ವಜೀರಕರಸ. ಆದರೆ ಮೇದಸ್ಸಿನ ಪಚನ ಈ ರಸದಿಂದ ಮಾತ್ರ ಸಾಧ್ಯವಾಗುವುದರಿಂದ ಅಂಗಕ್ಕೆ ಆ ಹೆಸರು ಕೊಟ್ಟಿದೆ. ಇದರ ನಾಳಭಾಗದ ಸ್ರಾವವೇ ಜೀರ್ಣರಸ. ನಾಳಭಾಗದ ಜೊತೆಗೆ ನಿರ್ನಾಳಭಾಗವೂ ಇದೆ. ಈ ಭಾಗ ಮಧುಮೇಹಹಾರಿಯಾದ ಇನ್ಸುಲಿನನ್ನು ಸ್ರವಿಸುತ್ತದೆ. ಇದು ನೇರ ರಕ್ತದೊಳಕ್ಕೆ ಸೇರುತ್ತದೆ. ಇನ್ಸುಲಿನ್ ಇಲ್ಲದಿದ್ದರೆ ದೇಹದಲ್ಲಿ ಗ್ಲೂಕೋಸ್ ಸಕ್ಕರೆಯ ಅಂತರ್ದಹನವಾಗದೆ ಮೂತ್ರದಲ್ಲಿ ವಿಸರ್ಜಿತವಾಗುತ್ತದೆ. ಇದರಿಂದ ದೇಹ ಕೃಶವಾಗಿ ಮೃತ್ಯುವೀಡಾಗುತ್ತದೆ. ಹೀಗೆ ಮೇದೋಜೀರಕಾಂಗದ ಬಹಿಸ್ಸ್ರಾವ ಪಿಷ್ಟವನ್ನು ಸಕ್ಕರೆಗೆ ಜೀರ್ಣಿಸಿದರೆ ಅಂತಸ್ಸ್ರಾವ ಸಕ್ಕರೆಯನ್ನು ದಹಿಸಿ ಶಕ್ತಿಯನ್ನು ಬಿಡುಗಡೆಮಾಡುತ್ತದೆ. ಈ ರೀತಿ ಮೇದೋಜೀರಕಾಂಗ ನಾಲ್ಕು ಗ್ರಂಥಿಗಳ ಕೆಲಸಗಳನ್ನು ಮಾಡುತ್ತದೆ. ಇದರ 85 ಗ್ರಾಂ ತೂಕದಲ್ಲಿ ಕೇವಲ 1.3 ಗ್ರಾಮಿನಷ್ಟು ನಿರ್ನಾಳಭಾಗವಿದೆ.

ಮೇದೋಜೀರಕಾಂಗದ ಲ್ಯಾಟಿನ್ ಹೆಸರಿನ (ಪ್ಯಾನ್‍ಕ್ರಿಯಾಸ್) ಅರ್ಥ ಸರ್ವಮಾಂಸ ಎಂದು. ಏಕೆಂದರೆ ಇದರ ರಚನೆಯಲ್ಲಿ ಕವಚ ಒಳತಡಿಕೆಗಳು ಇತ್ಯಾದಿ ನಾರಿನ ಅಂಶ ಬಲು ಕಡಿಮೆ. ಹೀಗಾಗಿ ಈ ಅಂಗ ಬಲು ಮೃದು. ಎಂದೇ ಇದನ್ನು ಇಂಗ್ಲಿಷ್‍ನಲ್ಲಿ ಕಸಾಯಿ ಅಂಗಡಿಯಲ್ಲಿ ಸಿಹಿ ಬ್ರೆಡ್ ಎನ್ನುತ್ತಾರೆ. ಇದರ ಉದ್ದ 12 - 15 ಸೆಂ ಮೀ. ದೊಡ್ಡನಾಯಿಯ ನಾಲಿಗೆ, ಗೊದ್ದ (ಬಾಲದ ಕಪ್ಪೆಮರಿ) ಬಟ್ಟಿ ಇಳಿಸುವ ಗಾಜಿನ ರಿಟಾರ್ಟ್ ಇತ್ಯಾದಿಗಳಿಗೆ ಇದೆ ಆಕಾರವನ್ನು ಹೋಲಿಸುವುದುಂಟು. ಇದನ್ನು ತಲೆ, ಕತ್ತು, ಮುಂಡ ಬಾಲಗಳೆಂಬ ಭಾಗಗಳಾಗಿ ವಿಂಗಡಿಸಿ ವರ್ಣಿಸಲಾಗಿದೆ. ಈ ಅಂಗ ಉದರದಲ್ಲಿ ಬೆನ್ನು ಮೂಳೆಯ ನಡುವಿಗೆ ಚಿಕ್ಕ ಕರುಳಿನ ಮೊದಲ ಭಾಗವಾದ ಬಿಲ್ಗರುಳಿನ (ದ್ವಾದಶಂತ್ರ, ಡಿಯೋಡಿನಮ್) ಬಾಗಿನಲ್ಲಿ ಹೊಂದಿಕೊಂಡಿದೆ. ತಲೆಗಿಂತ ಬಾಲ ತುಸು ಮೇಲ್ಮಟ್ಟದಲ್ಲಿ ಪ್ಲೀಹದ ನಾಭಿಗೆ ಅಂಟಿಕೊಂಡಿದೆ.

ಜಠರದಿಂದ ಭಾಗಶ: ಜೀರ್ಣವಾದ ಆಹಾರ ಬರುತ್ತಲೇ ಬಿಲ್ಗರುಳ ಸಿಕ್ರೀಟಿನ್ ಎಂಬ ಮೇದೋಜೀರಕ ಸ್ರಾವ ಚೋದಕವನ್ನು ರಕ್ತಕ್ಕೆ ಸುರಿಸುತ್ತದೆ. ಇದರಿಂದ ಮೇದೋಜೀರಕ ಚುರುಕುಗೊಂಡು ತನ್ನ ರಸವನ್ನು ಅಗಾಧವಾಗಿ ಸ್ರವಿಸಿ ನಾಳದ ಮೂಲಕ ಬಿಲ್ಗರುಳಿನೊಳಕ್ಕೆ ಕಳುಹಿಸುತ್ತದೆ. ಹೀಗೆ ಇದು ತಾನೇ ಭಾಗಶ: ಒಂದು ಒಳರಸವನ್ನು ಸುರಿಸುವ ಗ್ರಂಥಿಯಾದರೂ ತನ್ನನ್ನೇ ಚೋದಿಸುವ ಇನ್ನೊಂದು ಹಾರ್ಮೋನಿನಿಂದ ಪ್ರಭಾವಿತವಾಗುತ್ತದೆ.

ಭ್ರೂಣದಲ್ಲಿ ಮೇದೋಜೀರಕಾಂಗ ರೂಪಣೆ : ಭ್ರೂಣದ ಆದ್ಯಂತದ ಮೊದಲ ಭಾಗದಿಂದ ಮೊದಲ ಮತ್ತು ಮಧ್ಯದ ಭಾಗಗಳ ಸಂಧಿಯ ಹತ್ತಿರ, ಚಿಗುರಿದ ಪಿತ್ತಜನಕಾಂಗದ ಮೊಗ್ಗಿನ ತೊಟ್ಟಿನ ಭಾಗದಿಂದ ಮೇದೋಜೀರಕದ ಮೊಗ್ಗು ಹೊರಟು ಅದರಿಂದ ಮೆದೋಜೀರಕಾಂಗದ ತಲೆಯ ಕೆಳಭಾಗ ಮತ್ತು ಮೇದೋಜೀರಕಾಂಗ ನಾಳದ ಅಂತ್ಯಭಾಗ ಬೆಳೆಯುತ್ತದೆ. ಇದಕ್ಕೆ ಸ್ವಲ್ಪ ಮೇಲೆ ಅಂದರೆ ತಲೆಯ ಕಡೆ, ಮತ್ತೊಂದು ಮೊಗ್ಗು ಬೆನ್ನುಕಡೆ ಚಿಗುರಿ ಹೊಟ್ಟೆ ಕಡೆ ತಿರುಗಿ ಮೊದಲ ಮೊಗ್ಗಿನೊಡನೆ ಕಲೆತು ಮೇದೋಜೀರಕಾಂಗದ ತಲೆಯ ಮೇಲ್ಭಾಗ, ಕತ್ತು, ಕಾಯ, ಬಾಲಗಳಾಗಿ ಬೆಳೆಯುತ್ತದೆ. ಶೇಕಡಾ 40 ಜನರಲ್ಲಿ ಪಿತ್ತನಾಳ ಮತ್ತು ಮೇದೋಜೀರಕಾಂಗ ನಾಳಗಳು ಬೇರೆ ಬೇರೆ ತೆರೆಯುತ್ತವೆ. ಆಗಾಗ ಒಂದು ಅನುಷಂಗಿಕ ಮೇದೋಜೀರಕಾಂಗನಾಳ ಪಿತ್ರನಾಳಕ್ಕೆ 2.5 ಸೆಂ.ಮೀ ಮೇಲೆ ತೆರೆಯುತ್ತದೆ. ಶೇಕಡಾ 60 ಜನರಲ್ಲಿ ಪಿತ್ತನಾಳ ಮೇದೋಜೀರಕಾಂಗ ನಾಳಗಳು ಒಂದೇ ರಂಧ್ರದ ಮೂಲಕ ತಮ್ಮ ರಸಗಳನ್ನು ಸ್ರವಿಸುತ್ತವೆ. ಕೆಲವು ಸಲ ಈ ಸಾಮಾನ್ಯ ರಂಧ್ರದಲ್ಲಿ ಪಿತ್ತಕಲ್ಲು (ಕ್ಯಾಲ್ಕುಲಸ್ - ಅಶ್ಮರಿ) ಸಿಕ್ಕಿಕೊಂಡರೆ ಅಡಚಣೆಯಾಗಿ ಪಿತ್ತ ಮೇದೋಜೀರಕ ನಾಳದೊಳಕ್ಕೆ ನುಗ್ಗಿ ಮೇದೋಜೀರಕ ರಸದ ಕಿಣ್ವಗಳನ್ನು ಚುರುಕುಗೊಳಿಸುವುದರಿಂದ ಮೇದೋಜೀರಕಾಂಗದ ಮತ್ತು ಸುತ್ತಲಿನ ಅಂಗ ಅಂಗಾಂಶಗಳು ಜೀರ್ಣವಾಗಿ ಪ್ರಾಣಕ್ಕೆ ಅಪಾಯ ಉಂಟುಮಾಡುತ್ತದೆ.

ಸೂಕ್ಷ್ಮ ದರ್ಶನ : ಮೇದೋಜೀರಕಾಂಗ ಒಂದು ಸಂಯುಕ್ತ ಗ್ರಂಥಿ. ಮುಖ್ಯನಾಳ ಸೂಕ್ಷ್ಮ ನಾಳಗಳಾಗುವವರೆಗೆ ಅನೇಕ ಬಾರಿ ಕವಲೊಡೆದು ಪ್ರತಿ ಸೂಕ್ಷ್ಮ ಶಾಖೆಗಳ ಕೊನೆಯಲ್ಲಿ ಒಂದೊಂದು ಗುಂಡಾದ ಅಥವಾ ಗದೆಯಾಕಾರದ ತೊಳೆ ಇರುತ್ತದೆ. ಇವು ನೂರಾರು ಕಿರುಹಾಲೆಗಳಾಗಿ ಹಲವು ದೊಡ್ಡ ಹಾಲೆಗಳಾಗಿ ನಾರೆಳೆಗಳಿಂದ ವಿಂಗಡಿಸಲ್ಪಟ್ಟು ಒಟ್ಟು ಅಂಗ ಕವಚಾವೃತವಾಗಿದೆ. ಮೇದೋಜೀರಕಾಂಗದಲ್ಲಿ ಲಕ್ಷಗಟ್ಟಲೆ ತೊಳೆಗಳಿವೆ. ಪ್ರತಿಯೊಂದು ತೊಳೆಯ ಕೇಂದ್ರಕುಹರದ ಸುತ್ತ ಪಿರಮಿಡ್ ಆಕಾರದ ಕಣಗಳಿವೆ. ಇವುಗಳ ಅಡಿಭಾಗಗಳಲ್ಲಿ ಕ್ಷಾರೀಯ ಬಣ್ಣ ತೆಗೆದುಕೊಳ್ಳುವ ನಡುಬೀಜ ಮತ್ತು ರೈಬೊನ್ಯೂಕ್ಲಿಯಕ್ ಆಮ್ಲ ಲೇಶಗಳಿವೆ. ಕಿಣ್ವಗಳ ಲೇಶಗಳೂ ಇವೆ. ಇವು ಜಡಸ್ಥಿತಿಯ ಕಿಣ್ವಗಳು. ಕರುಳು ಬರಿದಾಗಿರುವಾಗ ಮೇದೋಜೀರಕ ರಸ ಹೋದರೆ ಕೆಡುಕು. ಅದು ಕರುಳನ್ನೇ ಜೀರ್ಣಿಸಿಬಿಡಬಹುದು. ಕರುಳಿಗೆ ಜಠರದಿಂದ ಆಮ್ಲಯುತ ಆಹಾರ ಬಂದರೆ ಕರುಳಿನ ಅಂತ:ಸ್ರಾವವಾದ ಸಿಕ್ರೀಟಿನ್ ರಕ್ತಕ್ಕೆ ಸೇರಿ ಮೇದೋಜೀರಕಾಂಗ ಸ್ರವಿಸಲು ಚೋದಿಸುತ್ತದೆ. ಮೇದೋಜೀರಕ ರಸ ಕರುಳಿಗೆ ಬಂದಾಗ ಕರುಳು ರಸ ಮಿಶ್ರಣದಿಂದಾಗಿ ಕಿಣ್ವಗಳು ಚುರುಕುಗೊಳ್ಳುತ್ತವೆ. ರಸ ಕ್ಷಾರೀಯವಾಗಿರುವುದರಿಂದ ಭಾಗಶ: ಜೀರ್ಣವಾದ ಆಹಾರದೊಡನೆ ಇರುವ ಜಠರಾಮ್ಲವನ್ನು (ಹೈಡ್ರೊಕ್ಲೋರಿಕ್ ಆಮ್ಲ) ಸಪ್ಪೆ ಮಾಡುತ್ತದೆ.

ಮೇದೋಜೀರಕಾಂಗದ ಅಂತಃಸ್ರಾವಭಾಗ ಲ್ಯಾಂಗರ್‍ಹ್ಯಾನ್ಸ್‍ನ ಕಿರುದ್ವೀಪಗಳಿಂದಾಗಿದೆ. (ಐಲೆಟ್ಸ್ ಆಫ್ ಲ್ಯಾಂಗರ್‍ಹ್ಯಾನ್ಸ್) ಇಂಥವುಗಳ ಸಂಖ್ಯೆ ಸರಾಸರಿ ಒಂದು ದಶಲಕ್ಷ. ಇವು ತೊಳೆಗಳ ನಡುವೆ ಅಲ್ಲಲ್ಲಿವೆ. ಬಾಲದಲ್ಲಿ ಹೆಚ್ಚು ದ್ವೀಪಗಳು ಚಿಕ್ಕವಾಗಿದ್ದು ಕೆಲವು ಕಣಗಳ ಗೊಂಚಲುಗಳಾಗಿರಬಹುದು. ದೊಡ್ಡವು 3 ಮಿ. ಮೀ. ಗಾತ್ರ ಇರಬಹುದು. ದ್ವೀಪಗಳಲ್ಲಿ ಕೊಂಕುಲೋಮರಕ್ತ ನಾಳಗಳಿವೆ. ದ್ವೀಪಗಳ ಕಣಗಳು ಕಡಿಮೆ ಬಣ್ಣ ತೆಗೆದುಕೊಳ್ಳುತ್ತವೆ. ಆಲ್ಪ, ಬೀಟ, ಡೆಲ್ಟ ಎಂದು ಮೂರು ವಿಧ ಕಣಗಳಿವೆ. ಬೀಟ ಕಣಗಳೇ ಹೆಚ್ಚು ಮತ್ತು ಇವೇ ಇನ್ಸುಲಿನ್ನನ್ನು ಸ್ರವಿಸುವ ಕಣಗಳು. ಬಂಧನಾಂಗಾಂಶದ ಒಳಕಟ್ಟು ನವುರಾಗಿದೆ. ಗ್ರಂಥಿಯ ಮೇಲ್ಕವಚವೂ ಗಟ್ಟಿಯಾದುದಲ್ಲ.

ರಕ್ತನಾಳಗಳು : ಮೇದೋಜೀರಕಾಂಗದ ರಕ್ತಪೂರೈಕೆ ಹೆಚ್ಚಾಗಿ ಸುಮಾರು 20 ಇರುವ ಪ್ಲೀಹ ಧಮನಿಯ ಶಾಖೆಗಳಿಂದಾಗುತ್ತದೆ. ಮೇಲಿನ ರಕ್ತವೂ ಪ್ಲೀಹ ಸಿರೆಯ ಮೂಲಕ ದ್ವಾರ (ಯಕೃತ್) ಸಿರೆಗೆ ಹೋಗುತ್ತದೆ. ಗ್ರಂಥಿ ದುಗ್ಧನಾಳಗಳೂ ಸಿರೆಗಳ ಜೊತೆ ಹೋಗುತ್ತವೆ.

ನರಗಳು : ಸ್ವಯಂಚಾಲಕ ನರಗಳೂ ತಂತುಗಳೂ ಮೇದೋಜೀರಕಾಂಗಕ್ಕೆ ಹೋಗುತ್ತವೆ. ಪಕ್ಕ ಅನುಕಂಪ ತಂತುಗಳು ಅಲೆಮಾರಿ (ತಲೆ ಘಿ) ನರಗಳವು. ಇವುಗಳ ಚೋದನೆಯಿಂದ ಸ್ವಲ್ಪ ಸ್ರಾವವುಂಟಾಗುತ್ತದೆ. ಅನುಕಂಪನರಗಳು ರಕ್ತನಾಳಗಳಿಗೆ ಹೋಗುತ್ತವೆ. ಇವುಗಳ ಚೋದನೆಯಿಂದ ನಾಳಗಳು ಸಂಕೋಚಿಸಿ ಕಿರಿದಾಗಿ ರಕ್ತಪೂರೈಕೆ ಕಡಿಮೆ ಆಗುತ್ತದೆ. ಸಂವೇದನೆ ನರತಂತುಗಳು ಒಳಾಂಗ ನರಗಳನ್ನು ಸೇರುತ್ತವೆ. ಗ್ರಂಥಿಕಾರ್ಯಗಳು ಪ್ರಜ್ಞೆಗೆ ತಿಳಿಯುವುದಿಲ್ಲ. ಪ್ರಜ್ಞೆಯ ಅಧೀನದಲ್ಲೂ ಇಲ್ಲ. (ಎಂ.ಡಿ.)