ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಡ್ರಿಡ್

ವಿಕಿಸೋರ್ಸ್ದಿಂದ

ಮ್ಯಾಡ್ರಿಡ್ ಸ್ಪೇನಿನ ರಾಜಧಾನಿ. ಸಮುದ್ರಮಟ್ಟಕ್ಕಿಂತ 655 ಮೀ ಎತ್ತರದಲ್ಲಿರುವ ದೊಡ್ಡನಗರ. ಯುರೋಪಿನ ಅತ್ಯಂತ ಎತ್ತರದ ರಾಜಧಾನಿಗಳ ಪೈಕಿ ಇದೂ ಒಂದು. ನಗರ ವಿಸ್ತೀರ್ಣ ಸುಮಾರು 606 ಚಕಿಮೀ ಜನಸಂಖ್ಯೆ 3.209.734 (1995).

ಈ ನಗರದ ಕೇಂದ್ರ ಪ್ರದೇಶವೆಂದರೆ ದೊಡ್ಡ ಬಾಲಚಂದ್ರಾಕಾರದ ಚೌಕ. ಇದನ್ನು ಪ್ಯೂರ್ಟ್ ವೆಲ್ ಸೊಲ್ (ಸೂರ್ಯನ ಹೆಬ್ಬಾಗಿಲು) ಎನ್ನುತ್ತಾರೆ. ಪ್ಯೂರ್ಟ ದೆಲ್ ಸೊಲ್‍ನ ನೈಋತ್ಯಭಾಗದಲ್ಲಿ ಹಳೇ ನಗರವಿದೆ. ಇಲ್ಲಿಯ ವಿಸ್ತಾರವಾದ ರಸ್ತೆಗಳಲ್ಲಿ 1500 ಮತ್ತು 1600 ರ ಅವಧಿಯಲ್ಲಿ ನಿರ್ಮಿಸಿರುವ ಹಲವಾರು ಪ್ರಮುಖ ಕಟ್ಟಡಗಳು ಇವೆ. ನಗರದ ಉತ್ತರಭಾಗ ಆಧುನಿಕ ವ್ಯಾಪಾರ ವಾಣಿಜ್ಯ ಕೇಂದ್ರ. ನಗರದ ಆಗ್ನೇಯದಲ್ಲಿ ರೆಟಿರೋ ಎಂಬ ದೊಡ್ಡ ಉದ್ಯಾನ 142 ಹೆಕ್ಟೇರ್ ಪ್ರದೇಶವನ್ನು ಆಕ್ರಮಿಸಿದೆ. ನಗರದ ಮಧ್ಯಬಾಗದಲ್ಲಿ ಪ್ರಾಚೀನ ಕಟ್ಟಡಗಳೂ ಸ್ಮಾರಕಗಳೂ ಇವೆ. ಹಳೆ ವಿಭಾಗದ ಪಶ್ಚಿಮದೆಡೆಗೆ 1700 ರಲ್ಲಿ ನಿರ್ಮಿಸಿರುವ ಅರಮನೆಯಿದೆ. ಇದರಲ್ಲಿ 1931 ರ ತನಕ ದೊರೆ ಹದಿಮೂರನೆಯ ಆಲ್ಫೊನ್ಸೊನ ರಾಜಪರಿವಾರ ವಾಸಿಸುತ್ತಿತ್ತು. ಅರಮನೆ ಸುತ್ತ ವಿಶಾಲವಾದ ಸುಂದರ ಉದ್ಯಾನಗಳಿವೆ. ಅರಮನೆಗೆ ಈಗ ವಸ್ತು ಸಂಗ್ರಹಾಲಯವಾಗಿ ಪರಿವರ್ತಿತವಾಗಿವೆ. ನಗರದಲ್ಲಿ ಹಲವಾರು ಪ್ರಾಚೀನ ಚರ್ಚ್ ಕಟ್ಟಡಗಳೂ ಆಕರ್ಷಕ ಚಿಲುಮೆಗಳಿಂದ ಕೂಡಿರುವ ಸಾರ್ವಜನಿಕ ಚೌಕಗಳೂ ವೃತ್ತಗಳೂ ಪ್ರಸಿದ್ಧ ಪುರುಷರ ದೊಡ್ಡ ಪ್ರತಿಮೆಗಳೂ ಇವೆ. ಈ ನಗರದ ಜನರನ್ನು ಮ್ಯಾಡ್ರಿಲೆನೊ ಎಂದು ಕರೆಯುತ್ತಾರೆ. ಇವರ ಭಾಷೆ ಕ್ಯಾಸ್ಟಿಲಿಯನ್ ಸ್ಪ್ಯಾನಿಷ್. ಇದು ದೇಶದ ಅಧಿಕೃತ ಭಾಷೆ.

ಇಲ್ಲಿಯ ಪ್ಲಾಜ ತೊರೋ ಎಂಬಲ್ಲಿ ನಡೆಯುವ ಗೂಳಿಕಾಳಗ ಪ್ರಪಂಚ ಖ್ಯಾತಿ ಗಳಿಸಿದೆ. ಜನರ ಅಚ್ಚುಮೆಚ್ಚಿನ ಕ್ರೀಡೆ ಸಾಕರ್. ಇಲ್ಲಿಯ ಕ್ರೀಡಾಂಗಣ ಪ್ರಪಂಚದಲ್ಲಿಯೇ ಬಲು ದೊಡ್ಡ ಕ್ರೀಡಾಂಗಣಗಳ ಪೈಕಿ ಒಂದು. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕ್ರೀಡೆಯನ್ನು ವೀಕ್ಷಿಸಲು ಅವಕಾಶವುಂಟು. ಈ ನಗರದಲ್ಲಿಯ ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮ್ಯಾಡ್ರಿಡನ್ನು ಸ್ಪೇನಿನ ಪ್ರಮುಖ ಸಾಂಸ್ಕøತಿಕ ಕೇಂದ್ರವನ್ನಾಗಿ ರೂಪಿಸಿವೆ. ನಗರದ ಒಂದು ಭಾಗವನ್ನೇ ಪೂರ್ಣವಾಗಿ ಆಕ್ರಮಿಸಿರುವ ಮ್ಯಾಡ್ರಿಡ್ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯ ನಗರವೆಂದೇ ಹೆಸರಾಗಿದೆ. ನಗರದಲ್ಲಿ ಹಲವಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿದ್ದು, ವಿದ್ಯಾರ್ಥಿಗಳಿಗೆ ಸಮರ್ಥ ಶಿಕ್ಷಣವನ್ನೊದಗಿಸುತ್ತಿವೆ.

ಪ್ರಾಡೊ ನಗರದ ಪ್ರಸಿದ್ಧ ವಸ್ತುಸಂಗ್ರಹಾಲಯ. ಇದನ್ನು ಚಿತ್ರ ಮತ್ತು ಶಿಲ್ಪಕಲೆಗಳ ರಾಷ್ಟ್ರೀಯ ವಸ್ತುಸಂಗ್ರಹಾಲಯವೆಂತಲೂ ಕರೆಯುವರು. ಇದರಲ್ಲಿ ಪ್ಯಾನಿಷ್ ಕಲಾವಿದರ ಅಲ್ಲದೆ ವಿದೇಶೀ ಕಲಾವಿದರೂ ರಚಿಸಿರುವ ಎರಡು ಸಾವಿರಕ್ಕಿಂತಲೂ ಹೆಚ್ಚು ಕಲಾಕೃತಿಗಳಿವೆ. ಈ ಪೈಕಿ ಏಲ್ ಗ್ರೆಕೊನ ಮೂವತ್ತಕ್ಕೂ ಹೆಚ್ಚು ಚಿತ್ರಗಳು ಹಾಗೂ ಫ್ರಾನ್ಸಿಸ್ಕೊಗೊಯ ಎಂಬಾತನ ಸುಮಾರು ಒಂದು ನೂರು ಚಿತ್ರಗಳು ಇವೆ. ಅಲ್ಲದೆ ಡಿಯಾಗೊ ಪೆಲಾಜ್ ಕ್ವೆಜ್‍ನ `ದಿ ಮೆಯ್ಡ್ಸ್ ಆಫ್ ಆನರ್` ಎಂಬ ಪ್ರಸಿದ್ಧ ಚಿತ್ರಗಳನ್ನೂ ಒಳಗೊಂಡರೆ ಸುಮಾರು ಐವತ್ತು ಚಿತ್ರಗಳಿವೆ. ಪ್ರಾಕೃತಿಕ, ಇತಿಹಾಸ ವಿe್ಞÁನವಿಷಯಗಳನ್ನು ಪರಿಚಯಿಸುವ ಚಿಕ್ಕ ಚಿಕ್ಕ ವಸ್ತುಸಂಗ್ರಹಾಲಯಗಳೂ ಉಂಟು. ನಗರದಲ್ಲಿಯ ರಾಷ್ಟ್ರೀಯ ಗ್ರಂಥಾಲಯ ಮತ್ತು ರಾಷ್ಟ್ರೀಯ ಐತಿಹಾಸಿಕ ಪತ್ರಾಗಾರ ಸಂಶೋಧಕರ ತವರು ಎನಿಸಿದೆ.

ಈ ನಗರದ ಬಿರು ಬಿಸಿಲೂ ಕೊರೆವ ಚಳಿಯೂ ಜನರನ್ನು ವರ್ಷದ ಕೆಲಕಾಲ ಕಂಗೆಡಿಸುವುದುಂಟು. ವಾರ್ಷಿಕ ಮಳೆ ಪ್ರಮಾಣ 43 ಸೆಂಮೀ. ಉಷ್ಣತೆ ಜನವರಿಯಲ್ಲಿ 40 ಅ ಬಿಸಿಲತಾಪ ಆಗಸ್ಟ್ ತಿಂಗಳಲ್ಲಿ ಹೆಚ್ಚು. ಆಗ ಸರ್ಕಾರದ ಎಲ್ಲ ಕಾರ್ಯಕಲಾಪಗಳನ್ನು ಉತ್ತರ ಕರಾವಳಿ ಪ್ರದೇಶದ ತಂಪು ಪ್ರದೇಶವಾದ ಸ್ಯಾನ್ ಸೆಬಾಸ್ಟಿಯನ್‍ಗೆ ವರ್ಗಾಯಿಸಲಾಗುವುದು. ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದ ಮೇಲೆ ಸರ್ಕಾರದ ನೆರವಿನಿಂದಾಗಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಕೈಗಾರಿಕೆಗಳು ಸ್ಥಾಪಿತವಾದುವು. ಆರ್ಥಿಕ ವ್ಯವಸ್ಥೆ ಉತ್ತಮಗೊಂಡಿತು. ನಗರದಲ್ಲಿ ಸ್ವಯಂಚಾಲಿತ ಯಂತ್ರಗಳು, ರಾಸಾಯನಿಕಗಳು, ಬಟ್ಟೆ, ತೊಗಲಿನ ಸಾಮಾನುಗಳು, ಸಾರಿಗೆ ಟ್ರಕ್ಕುಗಳನ್ನು ತಯಾರು ಮಾಡುವ ಕಾರ್ಖಾನೆಗಳಿವೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲು ಮಾರ್ಗಗಳು. ನಗರದಿಂದ ದೇಶದ ವಿವಿದೆಡೆಗಳಿಗೆ ಸಂಪರ್ಕ ಕಲ್ಪಿಸಿವೆ. ನಗರದ ಈಶಾನ್ಯಕ್ಕೆ ಸುಮಾರು 11 ಕಿಮೀ ದೂರದಲ್ಲಿ ಬರಜಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ಮೂರ್ ಎಂಬ ಮುಸ್ಲಿಮರು 900 ರಲ್ಲೆ. ಈಗ ನಗರ ಇರುವ ತಾಣದಲ್ಲಿ ಮ್ಯಾಗೆರಿಟ್ ಎಂಬ ಕೋಟೆ ನಿರ್ಮಿಸಿದರು. 1083 ರಲ್ಲಿ ಲಿಯೊನ್ ಮತ್ತು ಕ್ಯಾಸೈಲ್‍ನ ದೊರೆ ಆರನೆಯ ಅಲ್ಫೊನ್ಸೊ ಎಂಬಾತನ ನೇತೃತ್ವದಲ್ಲಿ ಕ್ರೈಸ್ತರು ಈ ಕೋಟೆ ಪ್ರದೇಶವನ್ನು ವಶಪಡಿಸಿಕೊಂಡರು. ದೊರೆ ಎರಡನೆಯ ಪಿಲಿಪ್ ಇದನ್ನು 1561 ರಲ್ಲಿ ಸ್ಪೇನಿನ ರಾಜಧಾನಿಯನ್ನಾಗಿ ಮಾಡಿದ. 1600 ರ ಪೂರ್ವಾರ್ಧದಿಂದ ಮ್ಯಾಡ್ರಿಡ್ ಕ್ರಮೇಣ ಅಭಿವೃದ್ಧಿ ಪಡೆಯತೊಡಗಿತು. ಒಂದನೆಯ ನೆಪೊಲಿಯನ್ ನೇತೃತ್ವದಲ್ಲಿ ಫ್ರೆಂಚ್ ಪಡೆ ಮ್ಯಾಡ್ರಿಡನ್ನು ವಶಪಡಿಸಿಕೊಂಡಿತು (1808). 1803 ಮೇ 2 ರಂದು ಮ್ಯಾಡ್ರಿನೊಗಳೆಲ್ಲ ಒಟ್ಟಾಗಿ ಫ್ರೆಂಚರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಈ ಹೋರಾಟ ನಿರಂತರ ನಡೆದು (1808 - 13) ಫ್ರೆಂಚರನ್ನು ನಾಡಿನಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

1936 ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಿಂದಾಗಿ ಮ್ಯಾಡ್ರಿಡ್ ಪ್ರಪಂಚದ ಗಮನ ಸೆಳೆಯಿತು. ಸರ್ಕಾರದ ಪರ ಬೆಂಬಲ ಸೂಚಿಸುವ ಕರ್ತವ್ಯ ನಿಷ್ಠರಿಗೂ ಜನರಲ್ ಫ್ರೌನ್ಸಿಸ್ಕೊ ಫ್ರಾಂಕೋನ ನೇತೃತ್ವದ ಕ್ರಾಂತಿದಳಕ್ಕೂ ಹೋರಾಟ ತೀವ್ರವಾಗಿ ನಡೆಯಿತು. ಇದರಿಂದ ರಾಜಧಾನಿಯನ್ನು 1936 ರಲ್ಲಿ ವ್ಯಾಲೆನ್ಸಿಯಾಕ್ಕೂ 1937 ರಲ್ಲಿ ಬಾರ್ಸಿಲೋನಕ್ಕೂ ಬದಲಾಯಿಸಬೇಕಾಗಿ ಬಂತು. 1939 ರಲ್ಲಿ ಹೋರಾಟ ಕೊನೆಗೊಂಡು ಫ್ರಾಂಕೋ ಅಧಿಕಾರಕ್ಕೆ ಬಂದ ಮ್ಯಾಡ್ರಿಡನ್ನೇ ರಾಜಧಾನಿಯನ್ನಾಗಿ ಪುನರ್ ಸ್ಥಾಪಿಸಿದ. (ಆರ್.ಎಂ.ಕೆ)