ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾನಿಕೀಯಿಸಮ್

ವಿಕಿಸೋರ್ಸ್ದಿಂದ

ಮ್ಯಾನಿಕೀಯಿಸಮ್ ಕ್ರಿ. ಶ. ನಾಲ್ಕನೆಯ ಶತಮಾನದಲ್ಲಿ ಪರ್ಷಿಯದಲ್ಲಿ ಪ್ರಸಿದ್ಧಿಗೆ ಬಂದ ದ್ವೈತಮತಸಿದ್ಧಾಂತ ಪ್ರತಿಪಾದಕ ಧರ್ಮ. ಇದರ ಪ್ರತಿಷ್ಠಾಪಕ ಮ್ಯಾನಿ (ಕ್ರಿ. ಶ. 216?-76?). ಈತ ಹುಟ್ಟಿದ್ದು ಬಾಗದಾದಿನ ಹತ್ತಿರದಲ್ಲಿ. ತನಗೆ ದಿವ್ಯವಾಣಿಯೊಂದು ಕೇಳಿಸಿತೆಂದು ಹೇಳಿಕೊಂಡು ಪ್ರವಾದಿ ಎತ್ತರಕ್ಕೆ ಏರಿದ (242). ಕೆಲವು ವರ್ಷ ಪರ್ಷಿಯಾದಲ್ಲಿ ತನ್ನ ಮತಧರ್ಮದ ತತ್ತ್ವಗಳನ್ನು ಬೋಧಿಸಿದ. ಷಾಪೂರ್ ಚಕ್ರವರ್ತಿಯ ಕೃಪಾಪೋಷಿತನಾಗಿದ್ದ ಈತ ಜರತುಷ್ಟ್ರ ಪ್ರಚಾರಕರಿಂದ ಪ್ರೋತ್ಸಾಹ ಪಡೆದು ಕೆಲಕಾಲದಲ್ಲಿಯೇ ಗಡಿಪಾರಾದ. ಅನಂತರ 20 ವರ್ಷಗಳ ಕಾಲ ದೇಶದ ಹೊರಗಿದ್ದು ಅನೇಕ ದೇಶಗಳನ್ನು ಸುತ್ತಿದ. ಆ ಸಮಯದಲ್ಲಿ ಉತ್ತರ ಭಾರತ, ಚೀನ, ತುರ್ಕಿ ಮುಂತಾದ ದೇಶಗಳಲ್ಲಿ ಅಡ್ಡಾಡಿದ. ಮೊದಲನೆಯ ಹಾರ್ಮಿಡ್ಸ್ ದೊರೆಯ ಮೇಲೆ ಅತಿಶಯ ಪ್ರಭಾವ ಬೀರಿದ. ಆದರೆ ಮೊದಲನೆಯ ಬಹ್ರಾಮ್ ಈತನನ್ನು ಶೂಲಕ್ಕೆ ಏರಿಸಿದ. ಈತ ಹಲವಾರು ಗ್ರಂಥಗಳನ್ನು ಬರೆದಿರುವನೆಂದು ಹೇಳಲಾಗಿದೆ. ಅವುಗಳಲ್ಲಿ ರಹಸ್ಯಗಳು: ಶ್ರಾವಕರಿಗೆ ಉಪದೇಶದ ಮಾತುಗಳು; ಜೀವದಾನ ಎಂಬುದು ಮುಖ್ಯವಾದವು. ಪರ್ಷಿಯಾದಲ್ಲಿ ಪ್ರಚಲಿತವಾಗಿದ್ದ ನೀತ್ಯಾತ್ಮಕ ದ್ವೈತ ತತ್ತ್ವ ಈತನಿಗೆ ಸ್ಫೂರ್ತಿ ಕೊಟ್ಟಿತೆಂದು ತೋರುತ್ತದೆ. ಆದರೆ ಸೂಕ್ಷ್ಮವಾಗಿದ್ದ ಈ ತತ್ತ್ವವನ್ನು ಸ್ಥೂಲರೂಪ ತಾಳುವಂತೆ ಮಾಡಿದ. ಅಪ್ರಾಕೃತವಾದುದಕ್ಕೆ ಪ್ರಾಕೃತ ರೂಪವನ್ನು ನೀಡಿದ. ಪರಂಜ್ಯೋತಿಯಿಂದ ಸಿಡಿದು ಜೀವಜ್ಯೋತಿಗಳಾಗಿ ಜಗಜ್ಯೋತಿಗಳಾಗಿ ಅನೇಕ ಪ್ರವಾದಿಗಳು ಅವತರಿಸಿದರೆಂದು ಮನಗಂಡ. ಹೀಗೆ ಅವತರಿಸಿದವರಲ್ಲಿ ನೋವಾ, ಏಬ್ರಹಾಮ್, ಜರತುಷ್ಟ್ರ, ಯೇಸುಕ್ರಿಸ್ತರ ಹೆಸರುಗಳನ್ನು ಉಲ್ಲೇಖಿಸುತ್ತಾನೆ. ಇವರೆಲ್ಲರೂ ಪಡೆದ e್ಞÁನದಾಹ ಪ್ರಾಕೃತವಾಗಿರಲಿಲ್ಲ. ಅವು ಅಪ್ರಾಕೃತವಾಗಿದ್ದವು ಎನ್ನುತ್ತಾರೆ. ಈ ಪ್ರವಾದಿಗಳ ಪಂಕ್ತಿಯಲ್ಲಿ ತಾನು ಕಡೆಯ ಪ್ರವಾದಿ ಎಂದು ಹೇಳಿಕೊಳ್ಳುತ್ತಾನೆ. ಯೇಸು ಮತ್ತು ಪಾಲರು ಅರಂಭಿಸಿದ ಕಾರ್ಯವನ್ನು ಮುಂದುವರಿಸುವುದು ತನ್ನ ಕೆಲಸವೆಂದು ಹೇಳಿ ಆ ಕೆಲಸ ಯಾವುದು ಎಂದು ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸುವುದು ಎನ್ನುತ್ತಾನೆ. ಬ್ಯಾಬಿಲಾನ್ ಮತ್ತು ಸಮರ್‍ಖಂಡ್‍ಗಳಲ್ಲಿ ಈ ಧರ್ಮ ತುಂಬ ಪ್ರಭಾವಯುತವಾದ ಪ್ರಗತಿ ಸಾಧಿಸಿತು. ಡಯಾಕ್ಲಿಷಿಯನನ ಕಾಲಕ್ಕೆ ಪಾಶ್ಚಾತ್ಯ ಪ್ರಪಂಚದ ಗಮನ ಸೆಳೆಯಿತು. ಇತರ ಮತಸ್ಥರು ಮ್ಯಾನಿಕೀರಯರನ್ನು ಪೀಡಿಸಿದ ಸಂದರ್ಭಗಳೂ ಇವೆ. ಆದರೂ ಈ ಮತ ಬಲು ಬೇಗ ಹರಡಿತು. ಯುರೋಪಿನ ಮಧ್ಯಯುಗದಲ್ಲಿ ಪ್ರಭಾವಯುತವಾಗಿ ಬೆಳಗಿತು. (ಎಂ.ವೈ.)