ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂಪಟೋರಿಯಮ್

ವಿಕಿಸೋರ್ಸ್ದಿಂದ

ಯೂಪಟೋರಿಯಮ್

ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವ್ಯಾಪಕವಾಗಿ ಬೆಳೆಯುವ ಸಸ್ಯಜಾತಿ. ಆಸ್ಟರೇಸೀ ಕುಟುಂಬಕ್ಕೆ (ಸೂರ್ಯಕಾಂತಿ ಕುಟುಂಬ) ಸೇರಿದೆ. ಇದರ ಕೆಲವು ಪ್ರಬೇಧಗಳು ಯುರೋಪ್, ಆಫ್ರಿಕ ಮತ್ತು ಏಷ್ಯ ಖಂಡಗಳಲ್ಲೂ ಕಾಣದೊರೆಯುವುವು. ಇದರಲ್ಲಿ ಸುಮಾರು 600 ಬಗೆಗಳಿವೆ ಎನ್ನಲಾಗಿದ್ದು ಏಳು ಪ್ರಭೇದಗಳು ಭಾರತದಲ್ಲಿ ಬೆಳೆಯುವುವು. ಬಹುಪಾಲು ಬಗೆಯ ಕಾಡುಗಿಡಗಳಾದರೂ ಕೆಲವನ್ನು ಅಲಂಕಾರಕ್ಕಾಗಿ, ಮತ್ತಿತರ ಉಪಯೋಗಗಳಿಗಾಗಿ ಬೆಳೆಸುವುದೂ ಉಂಟು.

ಭಾರತದಲ್ಲಿ ಕಾಣದೊರೆಯುವ ಯೂಪಟೋರಿಯಮ್ ಜಾತಿಯಲ್ಲಿ ಕ್ಯಾನಬಿನಮ್, ಟ್ರಿಪ್ಲಿನರ್ಮ್ ಮತ್ತು ಓಡರೇಟಮ್ ಎಂಬ ಪ್ರಭೇದಗಳು ಮುಖ್ಯವೆನಿಸಿವೆ. ಕೊನೆಯಲ್ಲಿ ಹೆಸರಿಸಿದ ಪ್ರಭೇದಕ್ಕೆ ಕ್ರೋಮೊಲೀನ್ ಎಂಬ ಹೆಸರೂ ಇದೆ. ಮೂರು ಪ್ರಭೇದಗಳೂ ಸುಮಾರು 1-2 ಮೀ ಎತ್ತರ ಬೆಳೆಯುವ ಪೊದೆರೂಪದ ಸಸ್ಯಗಳು. ಎಲ್ಲವೂ ಕೊಂಚ ಸುವಾಸನಾಯುಕ್ತ. ಹೂಗಳು ಕಾರಿಂಬ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿರುವುವು. ಹೂಗಳ ಬಣ್ಣ ಬಿಳಿ ಇಲ್ಲವೇ ತಿಳಿನೀಲಿ. ಈ ಬಗೆಗಳನ್ನು ಅಲಂಕಾರಕ್ಕಾಗಿ ವೃದ್ಧಿಸಲಾಯಿತಾದರೂ ಇವು ಪ್ರಸಕ್ತದಲ್ಲಿ ಕಾಡುಗಿಡಗಳಾಗಿ ಹಬ್ಬಿ ಅಸ್ಸಾಮ್, ಪಶ್ವಿಮಘಟ್ಟ ಮುಂತಾದೆಡೆಗಳಲ್ಲಿ ಅನಪೇಕ್ಷಿತ ಕಳೆಗಳಂತೆ ವ್ಯಾಪಿಸಿವೆ.

ಆದರೆ ಇವುಗಳಿಂದ ಉಪಯೋಗವಿಲ್ಲದೆ ಇಲ್ಲ. ಉದಾಹರಣೆಗೆ ಕ್ಯಾನಬಿನಮ್ ಪ್ರಭೇದ ಮೂತ್ರೋತ್ತೇಜಕ, ಕಫಹರ, ವಾಂತಿಕಾರಕ ಮತ್ತು ವ್ರಣನಿವಾರಕ ಎಂದು ಹೆಸರಾಗಿದೆ. ಹಾಗೆಯೇ ಟ್ರಿಪ್ಲಿನರ್ವ್ ಬಗೆ ಕೂಡ ಉತ್ತೇಜಕ, ಶಕ್ತಿ ವರ್ಧಕ ಮತ್ತು ವೃಣನಿವಾರಕ ಎನಿಸಿದೆ. ಇವುಗಳ ಎಲೆ ಮತ್ತು ಕಾಂಡಗಳನ್ನು ರಸ, ಕಷಾಯ, ಲೇಪ ಮುಂತಾದ ರೂಪಗಳಲ್ಲಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. (ಡಿ.ಜಿ.ಎಸ್.)