ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೆಮನ್ (ಸಾನ)

ವಿಕಿಸೋರ್ಸ್ದಿಂದ

ಯೆಮನ್ (ಸಾನ) - ಅರೆಬಿಯ ಪರ್ಯಾಯದ್ವೀಪದ ನೈಋತ್ಯದ ತುದಿಯಲ್ಲಿರುವ ಒಂದು ಗಣರಾಜ್ಯ. ಇದರ ಪಶ್ಚಿಮಕ್ಕೆ ಕೆಂಪು ಸಮುದ್ರ. ದಕ್ಷಿಣ ಮತ್ತು ಆಗ್ನೇಯದಲ್ಲಿ ಯೆಮನ್ (ಏಡನ್) ಗಣರಾಜ್ಯ. ಉತ್ತರ ಮತ್ತು ಈಶಾನ್ಯದಲ್ಲಿ ಸೌದಿ ಅರೆಬಿಯ ಸುತ್ತುವರೆದಿದೆ. ಉ. ಅ. 120-170. ಪೂ. ರೇ. 430-460 ವರೆಗೆ ಹರಡಿರುವ ಇದು ಸಮುದ್ರಮಟ್ಟಕ್ಕೆ 3760 ಮೀ ಎತ್ತರದಲ್ಲಿದೆ. ವಿಸ್ತೀರ್ಣ 195.000 ಚ ಕಿಮೀ. 451 ಕಿಮೀ ದೂರದ ಸಮುದ್ರತೀರವಿದೆ. ಯೆಮನ್ (ಸಾನ) ಮತ್ತು ಯೆಮನ್ (ಏಡನ್) ಇವುಗಳ ಒಟ್ಟು ಜನಸಂಖ್ಯೆ 14,361,000 (1997). ರಾಜಧಾನಿ ಸಾನ.

ಮೇಲ್ಮೈಲಕ್ಷಣ : ಈ ರಾಜ್ಯದ ಭೂಭಾಗವನ್ನು ತೀರದ ಮೈದಾನ ಪ್ರದೇಶ ಕಡಿದಾದ ಬೆಟ್ಟಪ್ರದೇಶ ಮತ್ತು ಮಧ್ಯದಲ್ಲಿರುವ ಎತ್ತರ ಪ್ರದೇಶವೆಂದು ಮೂರು ಭಾಗವಾಗಿ ವಿಂಗಡಿಸಬಹುದು. ಟಿಹಾಮ ಪರ್ವತ ಕೆಂಪು ಸಮುದ್ರಕ್ಕೆ ಸಮಾನಾಂತರವಾಗಿ ಹಬ್ಬಿದೆ. ಈ ಪರ್ವತಕ್ಕೆ ಏಡನ್ ಪ್ರೊಟೆಕ್ಟಾರೇಟ್ ರಾಜ್ಯಕ್ಕೆ ಸಮಾನಾಂತರವಾಗಿ ಹಬ್ಬಿರುವ ಮತ್ತೊಂದು ಪರ್ವತ ರಾಜ್ಯದ ದಕ್ಷಿಣ ದಿಕ್ಕಿನಲ್ಲಿ ಕೂಡಿಕೊಂಡಿದೆ. ಪರ್ವತದ ಈ ಭಾಗ ಸಮುದ್ರಮಟ್ಟಕ್ಕೆ ಸು. 685 ಮೀ ಮಧ್ಯೆ ಕಿರಿದಾದ ಇಳಿಜಾರು ಪ್ರದೇಶ ಇದೆ. ಈ ಪರ್ವತದಿಂದ ಈಶಾನ್ಯದ ಕಡೆಗೆ ಭೂಮಿ ಇಳಿಜಾರಾಗಿದೆ. ಪರ್ವತದ ಪೂರ್ವಕ್ಕೆ ಇರುವ ಯೆಮನ್‍ನ ಎತ್ತರ ಪ್ರದೇಶ ಸಮುದ್ರಮಟ್ಟಕ್ಕೆ ಸು. 1800 ಮೀ ಎತ್ತರವಿದೆ.

ವಾಯುಗುಣ : ಈ ಪ್ರದೇಶದ ಸರಾಸರಿ ಉಷ್ಣಾಂಶ 200-540 ಅ . ಟಿಹಾಮ ಪರ್ವತ ಬೇಸಗೆ ಕಾಲದಲ್ಲಿ ಕೆಂಪು ಸಮುದ್ರದ ಮೇಲಿಂದ ಬರುವ ವಾಯುವ್ಯ ವಾಣಿಜ್ಯ ಪ್ರತಿಮಾರುತಗಳನ್ನು ತಡೆಯುವುದರಿಂದಲೂ ಅಲ್ಲದೆ ಈ ಎತ್ತರವಾದ ಪ್ರದೇಶದ ತೇವಾಂಶವನ್ನು ಹಿಂದೂ ಮಹಾಸಾಗರದಿಂದ ಹೀರಿಕೊಂಡು ಬರುವ ಮಾರುತಗಳನ್ನು ತಡೆಯುವುದರಿಂದಲೂ ಪರ್ವತದ ಹೊರಭಾಗಕ್ಕೆ ಸು. 76 ಸೆಂಮೀ ಮಳೆಯಾಗುತ್ತದೆ. ಜಲಾಂಶ ಮಾರುತಗಳು ಕರಾವಳಿಯನ್ನು ತಲುಪುತ್ತವೆ. ಆದ್ದರಿಂದ ಮಧ್ಯದ ತಂಪು ಹವೆಯ ತಪ್ಪಲಿಗೆ ಹಾಗೂ ಒಳಭಾಗದ ಬೆಟ್ಟಗಳಿಗೆ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತದೆ. ಈ ಪ್ರದೇಶವನ್ನು ಬಿಟ್ಟರೆ ಅರೆಬಿಯದ ಉಳಿದೆಲ್ಲ ಭಾಗ ರೂಕ್ಷ ಮರುಭೂಮಿಯಾಗಿದೆ. ಎತ್ತರದ ಯೆಮನ್‍ನ ಮಧ್ಯ ಪ್ರದೇಶದಲ್ಲಿ 25-38 ಸೆಂಮೀ ಮಳೆ ಬೀಳುತ್ತದೆ. ಒಟ್ಟಿನಲ್ಲಿ ಈ ಭಾಗವನ್ನು ಅರೆಬಿಯದ ಭಾಗ್ಯಶಾಲಿ ಪ್ರದೇಶವೆಂದು ಪರಿಗಣಿಸಲಾಗಿದೆ.

ಸ್ವಾಭಾವಿಕ ಸಸ್ಯವರ್ಗ : ಇಲ್ಲಿನ ಬೆಟ್ಟಗಳಲ್ಲಿ ಕುರುಚಲು ಗಿಡಗಳ ಕಾಡು ಮತ್ತು ಕೆಲವೆಡೆ ಅಗಲವಾದ ಎಲೆಯುಳ್ಳ ಚಳಿಗಾಲದಲ್ಲಿ ಎಲೆಯುದುರುವ ಕಾಡುಗಳು ಕಂಡುಬರುತ್ತವೆ. ಉಳಿದೆಡೆಯಲ್ಲಿ ಹುಲ್ಲುಗಾವಲು ಇದೆ.

ವ್ಯವಸಾಯ : ಇಲ್ಲಿಯ ಬೆಟ್ಟದ ಇಳಿಜಾರಿನಲ್ಲಿ ಪ್ರಪಂಚದ ಪ್ರಸಿದ್ಧಿಯಾದ ಉತ್ತಮ ದರ್ಜೆಯ ಕಾಫಿ ಬೆಳೆಯುವುದು. ಇಲ್ಲಿಯ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಆಗಾಗ್ಗೆ ಇಲ್ಲಿ ಕ್ಷಾಮದ ಭೀತಿ ಇದೆ. ಸಮುದ್ರತೀರದಲ್ಲಿ ಬಾವಿಗಳನ್ನು, ಕೆರೆ ಕಟ್ಟೆಗಳನ್ನು ಕಟ್ಟಿ ಅಲ್ಲಿ ಶೇಖರಿಸಿದ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಂಡು ಗೋವಿನ ಜೋಳ, ಖರ್ಜೂರ, ಹೊಗೆಸೊಪ್ಪು, ಬಾರ್ಲಿ, ಮತ್ತು ಓಟ್ಸ್‍ಗಳನ್ನು ಬೆಳೆಯುತ್ತಾರೆ. ಜೊತೆಗೆ ಬಾಳೆ, ದ್ರಾಕ್ಷಿ, ಪರಂಗಿಹಣ್ಣು, ಮುಂತಾದ ವಿವಿಧ ಫಲಗಳನ್ನೂ ಹುರುಳಿಕಾಯಿ, ಟೊಮೆಟೊ, ಈರುಳ್ಳಿ, ಮುಂತಾದ ತರಕಾರಿಗಳನ್ನು ತೋಟಗಳಲ್ಲಿ ಬೆಳೆಯುತ್ತಾರೆ. ಟಿಹಾಮ ಪ್ರದೇಶದಲ್ಲಿ ಖರ್ಜೂರ ಮತ್ತು ಹತ್ತಿಯ ಬೆಳೆಯುಂಟು. ಕಾಫಿಯ ಜೊತೆಗೆ ಹೆಚ್ಚು ಅರಬ್ ಜನರು ಮೆಲ್ಲುವ ಒಂದು ಬಗೆಯ `ಕತ್ ಎಂಬ ಎಲೆ ಬಹು ಜನಪ್ರಿಯ ಹಾಗೂ ಇದು ಇಲ್ಲಿಯ ಆರ್ಥಿಕ ಬೆಳೆಯಾಗಿದೆ.

   ಜನಜೀವನ :  ಇಲ್ಲಿನ ಜನರಲ್ಲಿ ಅನೇಕರು ಅಲೆಮಾರಿಗಳು.  ತಮ್ಮ ಒಂಟೆ, ಕುದುರೆ, ಕುರಿಗಳ ಹಿಂಡು ಕಟ್ಟಿಕೊಂಡು ಹುಲ್ಲುಗಾವಲುಗಳಲ್ಲಿ ಅಲೆದಾಡುವರು.  ಕೆಲವರು ಸರಕುಗಳನ್ನು, ಪ್ರವಾಸಿಗಳನ್ನು ಸಾಗಿಸುವ ಕೆಲಸವನ್ನು ಮಾಡುವರು.  ಇವರ ಜೀವನ ಕಷ್ಟಕರವಾದುದು.  ಯೆಮನ್‍ನಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳು ಇಲ್ಲ.  ನೇಯ್ಗೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಹಗ್ಗ ಹೊಸೆಯುವುದು, ಗಾಜಿನ ವಸ್ತುಗಳನ್ನು ತಯಾರಿಸುವುದು, ಕುದುರೆ ತಡಿಗಳ ತಯಾರಿಕೆ ಮತ್ತು ಮಣ್ಣಿನ ಮಡಕೆ ಕುಡಿಕೆಗಳ ತಯಾರಿಕೆ ಇತ್ಯಾದಿ ಕರಕುಶಲ ವಸ್ತುಗಳ ತಯಾರಿಕೆಯೇ ಹೆಚ್ಚಾಗಿದ್ದು ವಸ್ತುಗಳನ್ನು ಗ್ರಾಮಗಳ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುವರು.  ಈ ರಾಜ್ಯದ ಕೆಲವು ಭಾಗಗಳಲ್ಲಿ ಪೆಟ್ರೊಲಿಯಂ ದೊರೆಯುತ್ತದೆ.  ಈ ರಾಜ್ಯ ಕೆಂಪು ಸಮುದ್ರದ ಸಾನ್ನಿಧ್ಯವನ್ನು ಪಡೆಯುವುದರಿಂದ ಪ್ರಪಂಚದ ಎಲ್ಲ ದೇಶಗಳಲ್ಲೂ ವ್ಯಾಪಾರ ಸೌಕರ್ಯಗಳನ್ನಿಟ್ಟುಕೊಳ್ಳಲು ಸಾಧ್ಯವಿದೆ.  ಕೆಂಪು ಸಮುದ್ರದಲ್ಲಿರುವ ಪೆರಿಮ್ ದ್ವೀಪ್ ಕೆಂಪು ಸಮುದ್ರದ 

ಮುಖಾಂತರ ಹಾದು ಹೋಗುವ ಎಲ್ಲ ಹಡಗುಗಳ ನಿಲ್ದಾಣ ಮತ್ತು ವ್ಯಾಪಾರ ಕೇಂದ್ರವಾಗಿದೆ. ಹೊಡೈಡ ಮತ್ತು ಮೊeóÁ ಮುಖ್ಯವಾದ ಬಂದರುಗಳಾಗಿವೆ.

  	ಸಾನ :  ಯೆಮನ್‍ನ ದೊಡ್ಡ ಪಟ್ಟಣ ಮತ್ತು ರಾಜಧಾನಿ.  ಇದು ಫಲವತ್ತಾದ ಕಣಿವೆಯಲ್ಲಿದೆ.  ಇಲ್ಲಿ ಹೆಚ್ಚಾಗಿ ಶ್ರೀಮಂತರು ವಾಸಿಸುತ್ತಾರೆ.
  	ಇತಿಹಾಸ :  ಕ್ರಿ.ಪೂ. ಸು. 2000 ವರ್ಷಗಳ ಹಿಂದೆ ಈ ಪ್ರದೇಶವನ್ನು ಸಿಮೈಟರು ಆಕ್ರಮಿಸಿಕೊಂಡು ಇಲ್ಲಿನ ಮೂಲವಾಸಿಗಳಿಗೆ ವ್ಯವಸಾಯ ಹಾಗೂ ಗೃಹನಿರ್ಮಾಣ ಮುಂತಾದವುಗಳನ್ನು ಕಲಿಸಿದರೆಂದೂ ಹೇಳುವರು.  ಕ್ರಿ.ಪೂ. ಸು. 1400ರಲ್ಲಿ ಯೆಮನ್ ಮೂಲಕ ಮುತ್ತುಗಳು, ಸಾಂಬಾರ ಪದಾರ್ಥಗಳನ್ನು ಸಾಗಿಸುವ ವ್ಯಾಪಾರಿ ದೋಣಿಗಳ ಸಂಚಾರ ಪ್ರಾರಂಭವಾಗಿ ಇಲ್ಲಿ ಪಟ್ಟಣಗಳು ಕೋಟೆಗಳು, ದೇವಾಲಯಗಳು ಮತ್ತು ನದಿ ಕಟ್ಟೆಗಳನ್ನು ನಿರ್ಮಿಸಲಾಯಿತು.  ಕ್ರಿ.ಪೂ. 900 ರಲ್ಲಿ ಯೆಮನ್ ರಾಜ್ಯವನ್ನು ಆಳುತ್ತಿದ್ದ ತೀಬಾ ರಾಣಿ ಕ್ರಿ.ಪೂ. 950ರಲ್ಲಿ ದೊರೆ ಸಾಲೊಮನ್ನನನ್ನು ಭೇಟಿಯಾಗಿದ್ದಳೆಂದು ತಿಳಿದುಬರುತ್ತದೆ.  ಮುಂದೆ ಅಲ್ಲಿನ ಮುಖಂಡರೇ ಪರಸ್ಪರ ಹೋರಾಟಕ್ಕಿಳಿದು ಯೆಮನ್ ಅಭಿವೃದ್ಧಿ ಕುಂದಿತು.  ಹಿಂದಿನ ಅಬಿಸೀನಿಯ, ಈಗಿನ ಈಥೋಪಿಯನ್ ಈ ರಾಜ್ಯವನ್ನು ಆಕ್ರಮಿಸಿತು.  ಮುಂದಿನ 1300 ವರ್ಷಗಳು ಈಥೋಪಿಯನ್ ಟಕ್ರ್ಸ್ ಮತ್ತು ಯೆಮನ್ ಗುಂಪುಗಳ ಮಧ್ಯೆ ಕಾದಾಟದಲ್ಲಿ ಕಳೆಯಿತು.  1517-1918ರವರೆಗೆ ಒಟ್ಟೊಮನ್ ಚಕ್ರಾಧಿಪತ್ಯಕ್ಕೆ ಈ ಪ್ರದೇಶ ಸೇರಿದ್ದು 1924ರಲ್ಲಿ ಲೂಸಾನ್ ಒಪ್ಪಂದದಂತೆ ಇದು ಟರ್ಕಿಯಿಂದ ಮುಕ್ತವಾಯಿತು.  1958-61ರವರೆಗೆ ಸಂಯುಕ್ತ ಅರಬ್ ಗಣರಾಜ್ಯದಲ್ಲಿ ಸೇರಿತ್ತು.  1962 ಸೆಪ್ಟೆಂಬರ್ 26ರಂದು ಯೆಮನ್‍ನಲ್ಲಿ ಇಮಾಮ್‍ರ ಆಡಳಿತ ಕೊನೆಗೊಂಡು ಗಣರಾಜ್ಯ ಸ್ಥಾಪನೆಯಾಯಿತು.  1974ರಲ್ಲಿ ಸೈನ್ಯಾಡಳಿತಕ್ಕೆ ಒಳಗಾಯಿತು.  ಈ ಏರಿಳಿತಗಳ ಮುನ್ನಡೆಯಲ್ಲಿ 1990ರ ಮೇ ತಿಂಗಳಲ್ಲಿ ದಕ್ಷಿಣ ಯೆಮನ್ ಜೊತೆ ಸೇರಿ ಸಂಯುಕ್ತ ಯೆಮನ್ ಗಣರಾಜ್ಯವಾಯಿತು.  1994ರಲ್ಲಿ ಅಂತರ್ಯುದ್ಧದಿಂದಾಗಿ ದಕ್ಷಿಣ ಯೆಮನ್ ಒಕ್ಕೂಟದಿಂದ ಹೊರಬಂದು ಮತ್ತೆ ಯೆಮನ್ (ಸಾನ) ತನ್ನದೇ ಆದ ಪ್ರತ್ಯೇಕತೆ ಪಡೆಯಿತು.	

(ಟಿ.ಎ.ಟಿ.)