ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಂಗವಲ್ಲಿ

ವಿಕಿಸೋರ್ಸ್ದಿಂದ

ರಂಗವಲ್ಲಿ- ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಜನಪದ ಕಲೆ. ಚತುಷಷ್ಠಿ ಕಲೆಗಳಲ್ಲಿ ಚಿತ್ರಕಲೆಯೂ ಪ್ರಧಾನವಾದುದು. ಇದರ ಒಂದು ಭಾಗವೇ ರಂಗವಲ್ಲಿ. ಇದು ಚಿತ್ರಕಲೆಯ `ಬಿಂದುಜ' ಎಂಬ ವಿಭಾಗಲ್ಲೆ ಸೇರಿದ್ದು; ಸ್ತ್ರೀಯರ ಕಲಾನೈಪುಣ್ಯ, ಕಲ್ಪನಾಶಕ್ತಿಯ ಪ್ರತೀಕ. ರಂಗವಲ್ಲಿ ಬೆರಳುಗಳ ಸಹಾಯದಿಂದ, ಊಹಾಸಾಮಥ್ರ್ಯದಿಂದ ವಿಧವಿಧವಾದ ರೀತಿಯಲ್ಲಿ ಮೂಡುವ ಕಲೆ ಸಾತ್ತ್ವಿಕ ಗುಣಕ್ಕೆ ಸಂಕೇತವಾದಶುಭ್ರ ಬಿಳಿಯ ಹುಡಿಮಣ್ಣಿನಿಂದ ಮನೆಯ ಅಂಗಳ, ದೇವಸ್ಥಾನದ ಅಂಗಳದಲ್ಲಿ ಕಂಗೊಳಿಸುವ ಈ ಚಿತ್ತಾಕರ್ಷಕ ಲಲಿತಕಲೆ ಭಾರತಾದ್ಯಂತ ಕಂಡುಬರುತ್ತದೆ. ಪರಿಸರವನ್ನು ಸುಂದರವಾಗಿ, ಸ್ವಚ್ಛವಾಗಿಡುವುದೇ ಇದರ ಪ್ರಧಾನವಾದ ಉದ್ದೇಶವಾದರೆ ಸಂಪ್ರದಾಯ, ಆಚರಣೆಗಳ ಅನುಸರಣೆ ರಂಗವಲ್ಲಿ ಹಾಕುವುದರ ಮತ್ತೊಂದು ಉದ್ದೇಶ.

ರಂಗವಲ್ಲಿಯ ಇತಿಹಾಸ ಮಾನವನ ಇತಿಹಾಸದಷ್ಟೇ ಪ್ರಾಚೀನಾದುದು. ಪ್ರಾಗಿತಿಹಾಸಕಾಲಕ್ಕೆ ಸಂಬಂಧಿಸಿದ ಗೃಹಾಲಂಕರಣಗಳಲ್ಲಿ ಕಂಡುಬಂದಿರುವ ರಂಗವಲ್ಲಿಯಂಥಹ ಚಿಹ್ನೆಗಳು ಮಾಂತ್ರಿಕೆ ಕ್ರಿಯೆಗೆ ಸಂಬಂಧಪಟ್ಟವಾಗಿದ್ದು, ದುಷ್ಟಶಕ್ತಿಗಳ ನಿವಾರಣೆಯ, ಸತ್ಫಲಸಾಧನೆಯ ಪ್ರಯತ್ನಕ್ಕೆ ಸಂಬಂಧಿಸಿದ ಸಂಕೇತಗಳೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕ್ರಿ. ಪೂ. 2-3 ನೆಯ ಶತಮಾನಕ್ಕೆ ಸೇರಿದ ಸಿಂಧೂ ನಾಗರಿಕತೆಯಲ್ಲಿ ತ್ರಿಕೋನ, ವಲಯಾಕಾರ, ಚತುರಸ್ರಾಕಾರ, ಮತ್ಸ್ಯ, ಸ್ವಸ್ತಿಕ, ಪದ್ಮ-ಈ ಚಿತ್ರಗಳು ಕಂಡುಬರುತ್ತವೆ. ಆರ್ಯ ಸ್ತ್ರೀಯರು ಹೋಮಕುಂಡಗಳನ್ನೂ ಅತಿಥಿಗಳನ್ನೂ ಸ್ವಾಗತಿಸಲು ಮನೆ ಹಾಗೂ ಯಜ್ಞವೇದಿಕೆಗಳನ್ನೂ ಅಲಂಕರಿಸುತ್ತಿದ್ದರು. ಅವರ ಅಲಂಕರಣ ದೃಷ್ಟಿಯೇ ರಂಗವಲ್ಲಿಯಲ್ಲಿ ಪ್ರತಿಬಿಂಬಿತವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ. ರಂಗಾವಳಿ ಎಂದರೆ ಬಣ್ಣಗಳ ಸಮೂಹ. ರಂಗ ಎಂದರೆ ಕೃಷ್ಣ. ಭಗವಂತ ಎಂದೂ ಅರ್ಥವಿದೆ. ಒಲಿ ಎಂದರೆ ಆನಂದಿಸು, ಅನುಗ್ರಹಿಸು ಎಂದೂ ಅರ್ಥವಿದೆ. ಭಗವಂತನ ಅನುಗ್ರಹಕ್ಕಾಗಿ ರೂಪತಳೆದ ಕಲೆಯೇ ರಂಗವಲ್ಲಿ. ಸ್ತ್ರೀಯರ ದೃಷ್ಟಿಯಲ್ಲಿ ಕಲಾರಾಧನೆ ಎಂದರೆ ಭಗವಂತನ ಆರಾಧನೆಯೇ. ತಮ್ಮ ಕೋರಿಕೆಗಳನ್ನೂ ಈಡೇರಿಸಿಕೊಳ್ಳಲು ಭಗವಂತನಿಗೆ ನಿವೇದಿಸಿಕೊಳ್ಳುವ ಬಿನ್ನಪವಾಗಿ ಕೂಡ ರಂಗೋಲಿ ಬಿಡಿಸುತ್ತಾರೆ. ರಂಗವಲ್ಲಿ ಭಕ್ತ ಭಗವಂತನ ನಡುವಣ ಸಂವಹನ ಮಾಧ್ಯಮವೆಂದು ಭಾವಿಸುತ್ತಾರೆ. ಆಯಾ ದೇವತೆಗಳ ಪ್ರತೀಕವಾಗಿ ರಂಗವಲ್ಲಿ ಇರುತ್ತದೆ. ಲಕ್ಷ್ಮಿಗೆ ಪದ್ಮ, ಸೂರ್ಯನಿಗೆ ಸ್ವಸ್ತಿಕ, ವೃತ್ತಾಕಾರ, ಚಕ್ರ, ರಥ - ಇವು ಚಿಹ್ನೆಗಳು. ಸುಗ್ಗಿಯ ಸಂದರ್ಭದಲ್ಲಿ ವೃತ್ತಾಕಾರದ ರಂಗವಲ್ಲಿ ಹಾಕುವರು. ಇದು ಹೊಟ್ಟೆಗೆ ಅಂದರೆ ಹಸಿವಿಗೆ ಸಂಕೇತ. ಶುಭಕಾರ್ಯಗಳಲ್ಲಿ ಚತುರಸ್ರಾಕಾರವಾಗಿ ರಂಗವಲ್ಲಿ ಬಿಡುತ್ತಾರೆ. ಇದು ಸ್ಥಿರತೆಯನ್ನು ಸೂಚಿಸಿವಂಥದ್ದು. ಶುಭ ಸ್ಥಿರವಾಗಿರಲೆಂಬುದು ಇಲ್ಲಿನ ಆಶಯ.

ರಂಗವಲ್ಲಿ ಕಲೆ ಭಾರತಕ್ಕೆ ವಿಶಿಷ್ಟವಾದದ್ದು. ಕರ್ನಾಟಕದಲ್ಲಿ ಈ ಕಲೆಯನ್ನು ರಂಗೋಲಿ, ರಂಗೋಲೆಎಂದೂ ಗುಜರಾತಿನಲ್ಲಿ ಸತಿಯಾ ಎಂದೂ ಉತ್ತರ ಪ್ರದೇಶದಲ್ಲಿ ಸಾಝ ಎಂದೂ ಆಂಧ್ರದಲ್ಲಿ ಮುಗ್ಗು ಎಂದೂ ತಮಿಳುನಾಡು ಹಾಗೂ ಕೇರಳಗಳಲ್ಲಿ ಕೋಲಂ ಎಂದೂ ಬಂಗಾಲದಲ್ಲಿ ಅಲ್ಪನಾ ಎಂದೂ ಮಹಾರಾಷ್ಟ್ರದಲ್ಲಿ ರಂಗೋಲಿ ಎಂದೂ ಮಧ್ಯಪ್ರದೇಶದಲ್ಲಿ ಎಷನ್ ಎಂದೂ ರಾಜಸ್ತಾನದಲ್ಲಿ ಮಂಡನಾ ಎಂದೂ ಒರಿಸ್ಸದಲ್ಲಿ ಝುಟಿ ಎಂದು ಹೆಸರಿಸಲಾಗುತ್ತದೆ. ರಂಗವಲ್ಲಿ ಇಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಭಾರತದ ಭೌಗೋಳಿಕತೆಯನ್ನು ಅನುಸರಿಸಿ ಪರ್ವತ ಪ್ರಾಂತ್ಯಗಳ ರಂಗೋಲಿ, ಕರಾವಳಿ ಪ್ರದೇಶದ ರಂಗೋಲಿ ಅಥವಾ ಮೈದಾನ ಪ್ರದೇಶದ ರಂಗೋಲಿ ಇವುಗಳೆರಡರ ನಡುವಣ ಪ್ರಾಂತ್ಯಗಳ ರಂಗೋಲಿ ಎಂದು ಮೂರು ವಿಧವಾಗಿ ವಿಭಜಿಸಬಹುದು. ರಂಗವಲ್ಲಿಯಲ್ಲಿ ಆಕೃತಿ, ಬಳ್ಳಿ ಹಾಗೂ ಇವೆರಡರ ಸಂಗಮವಿರುತ್ತದೆ. ಪರ್ವತ ಪ್ರಾಂತ್ಯಗಳಲ್ಲಿ ಆಕೃತಿ ಪ್ರಧಾನ ರಂಗೋಲಿ ಕಂಡುಬರುತ್ತವೆ. ಪರ್ವತಗಳ ಸ್ಥಿರತೆ ಹಾಗೂ ಕಾಠಿಣ್ಯವನ್ನು ಸೂಚಿಸುವ ರೇಖಾಗಣಿತ ಮಾದರಿಯಲ್ಲಿ ಚಿತ್ರಿತವಾಗುತ್ತದೆ. ರಾಜಸ್ತಾನ, ಉತ್ತರಪ್ರದೇಶದ, ಹಿಮಾಚಲಪ್ರದೇಶ, ಮಹಾರಾಷ್ಟ್ರ ಮೊದಲಾದ ಪ್ರಾಂತ್ಯಗಳಲ್ಲಿ ಇಂತಹ ರಂಗೋಲಿಗಳು ಕಂಡುಬರುತ್ತವೆ. ಹೂವು, ಬಳ್ಳಿ, ಚಿಕ್ಕ ಚಿಕ್ಕ ರೇಖಾಚಿತ್ರಗಳು ಬಂಗಾಲ, ಬಿಹಾರ ಪ್ರಾಂತ್ಯಗಳಲ್ಲಿಯೂ ಆಕೃತಿ, ಬಳ್ಳಿ, ಮಿಶ್ರವಾದಂಥವು ದಕ್ಷಿಣ ಪ್ರಾಂತ್ಯಗಳಾದ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಗಳಲ್ಲಿಯೂ ಕಂಡುಬರುತ್ತವೆ. ರಂಗವಲ್ಲಿಯನ್ನು ಧೂಳೀಚಿತ್ರ ಎಂದೂ ಕರೆಯುವುದುಂಟು. ವಿವಿಧ ಬಣ್ಣಗಳ ಪುಡಿಯನ್ನು ಬಳಸಿ ರಚಿಸುವ ಚಿತ್ರವೇ ಧೂಳಿಚಿತ್ರ. ಅನೇಕ ಸಂಸ್ಕøತ ಕಾವ್ಯಗಳಲ್ಲಿ ವಿವಿಧ ರಿತಿಯ ರಂಗವಲ್ಲಿಯ ವಿವರಣೆಗಳಿವೆ. ಕನ್ನಡ `ಬಸವಪುರಾಣ'ದಲ್ಲಿ ರಂಗವಲ್ಲಿಯ ಅಂಗಗಳನ್ನು ಕುರಿತು `ವೃಕ್ಷಂ ಲತೆ ಸ್ವಸ್ತಿಕಂ ಪದ್ಮರೇಖೆ ಗೃಹಲಕ್ಷಣಮೆನಿಪ್ಪ ಬಂಧಂ ರಂಗವಾಲಿಯಕ್ಕು ಎಂದು ಹೇಳಿದೆ.

ರಂಗವಲ್ಲಿಯನ್ನು ತೋರುಬೆರಳು, ಹೆಬ್ಬೆರಳುಗಳ ನಡುವೆ ರಂಗೋಲಿ ಪುಡಿ ಹಿಡಿದು ಬಿಡುವುದು ಒಂದು ರೀತಿಯಾದರೆ, ಮುಷ್ಟಿಯಲ್ಲಿ ರಂಗೋಲಿಪುಡಿ ಹಿಡಿದು ಅದು ಪೂರ್ತಿ ಮುಗಿಯುವವರೆಗೆ ಕೈಮೇಲೆತ್ತದೆ ನೈಪುಣ್ಯದಿಂದ ವಿವಿಧ ಆಕಾರಗಳನ್ನು ರೂಪಿಸುವುದು ಮತ್ತೊಂದು ಬಗೆ. ಎಳೆ ರಂಗೋಲಿ, ಚುಕ್ಕಿ ರಂಗೋಲಿ ಎಂಬ ಎರಡು ಬಗೆಯ ರಂಗೋಲಿಗಳಿವೆ. ಈ ಎರಡು ಬಗೆಯ ರಂಗೋಲಿಗಳಿಗೂ ವಿಶೇಷ ದಿನಗಳಲ್ಲಿ ಬಣ್ಣ, ಕೆಮ್ಮಣ್ಣು, ಹೂ, ಉಪ್ಪು, ತುಂಬಿ ಅಲಂಕರಿಸುವುದುಂಟು.

ರಂಗವಲ್ಲಿ ಹಾಕಲು ಬಳಸುವ ವಸ್ತುಗಳು ಹಲವು. ಬಿಳಿಮಣ್ಣನ್ನು ಪುಡಿಮಾಡಿ ರಂಗವಲ್ಲಿ ಬಿಡಲು ಬಳಸುವರು; ನಿತ್ಯದಲ್ಲಿ ಇದೇ ಹೆಚ್ಚು ಬಳಕೆಯಲ್ಲಿದೆ. ವಿಶೇಷ ದಿನಗಳಲ್ಲಿ ಅಕ್ಕಿ ನೆನೆಸಿ ರುಬ್ಬಿಮಾಡಿದ ಹಿಟ್ಟಿನಿಂದ ರಂಗವಲ್ಲಿ ಇಡುವರು. ವಿವಿಧ ರೀತಿಯ ಬಣ್ಣಗಳಿಗೆ ಮಣ್ಣಿನ ಪುಡಿಬೆರೆಸಿ ರಂಗವಲ್ಲಿಯನ್ನು ಅಲಂಕರಿಸುವರು. ಗಾರೆನೆಲ ಮತ್ತು ನುಣುಪಿನ ನೆಲದಲ್ಲಿ ಮಾತ್ರ ಅಕ್ಕಿಹಿಟ್ಟಿನ ರಂಗವಲ್ಲಿಯನ್ನು ಬಿಡಿಸಲಾಗುತ್ತದೆ. ಇತ್ತೀಚೆಗೆ ಸೀಮೆಸುಣ್ಣ, ಬಿಳಿ ಬಣ್ಣಗಳನ್ನು ರಂಗವಲ್ಲಿ ಬಿಡಿಸಲು ಬಳಸಲಾಗುತ್ತಿದೆ. ಇಂದು ರಂಗವಲ್ಲಿಗಳ ತಯಾರಿಕೆ ಒಂದು ಸಣ್ಣ ಗೃಹ ಉದ್ಯಮವಾಗಿದೆ. ತೆಳು ಪ್ಲಾಸ್ಟಿಕ್ ಹಾಳೆಯಲ್ಲಿ ರಂಗವಲ್ಲಿ ನಮೂನೆಗಳನ್ನು ತಯಾರಿಸಲಾಗುತ್ತದೆ. ಇವು ಸ್ಟಿಕ್ಕರಿನ ರೂಪದಲ್ಲಿರುತ್ತವೆ. ಬೇಕಾದ ಜಾಗದಲ್ಲಿ ಇವುಗಳನ್ನು ಅಂಟಿಸಬಹುದು. ರಂಗವಲ್ಲಿಗಳನ್ನು ಬಣ್ಣದಪುಡಿಗಳಿಂದ ಅಲಂಕರಿಸುವುದಲ್ಲದೆ, ವಿವಿಧ ಬಣ್ಣದ ಹೂಗಳಿಂದಲೂ ಅಲಂಕರಿಸುವುದು ಇತ್ತೀಚೆಗೆ ಜನಪ್ರಿಯವಾಗಿದೆ. ಇದಲ್ಲದೆ ಹರಳು ಉಪ್ಪಿಗೆ ವಿವಿಧ ಬಣ್ಣಗಳನ್ನು ಬೆರೆಸಿ ರಂಗವಲ್ಲಿಗಳನ್ನು ಅಲಂಕರಿಸುವುದಿದೆ.

ಹಬ್ಬ, ಮದುವೆ, ವ್ರತ, ಉಪನಯನ, ರಥೋತ್ಸವಗಳಲ್ಲಿ ತಳಿರು ತೋರಣಗಳು ಹಾಗೂ ರಂಗವಲ್ಲಿ ಅವಿಚ್ಛಿನ್ನ ಅಂಗಗಳಾಗಿವೆ. ರಂಗವಲ್ಲಿ ಶುಭದ ಸಂಕೇತ. ಹೀಗಾಗಿ ಇದನ್ನು ವ್ಯಕ್ತಿ ಮೃತಪಟ್ಟಾಗ ಆತನ ಪುಣ್ಯಕಾರ್ಯ ಮುಗಿಯುವವರೆಗೆ ಹಾಕುವಂತಿಲ್ಲ. ಕಪ್ಪುಬಣ್ಣ ಬಳಸಿ ರಂಗವಲ್ಲಿ ಇಡುವುದು ನಿಷಿದ್ಧ. ರಂಗವಲ್ಲಿ ದಾಟಿ ಭೂತ, ಪ್ರೇತಗಳು ಮನೆಯೊಳಗೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆ ಇದೆ. ರಂಗವಲ್ಲಿ ತುಳಿಯುವುದು ನಿಷಿದ್ಧ. ರಂಗವಲ್ಲಿಯನ್ನು ಸೂರ್ಯೋದಯಕ್ಕೆ ಮುಂಚೆ ಹಾಕಬೇಕು. ಒಂದು ಎಳೆಯಿಂದ ರಂಗವಲ್ಲಿ ಹಾಕಬಾರದು. ಕನಿಷ್ಠ ಪಕ್ಷ ಎರಡು ಎಳೆಗಳಾದರೂ ಇರಬೇಕು ಅಥವಾ ಸಮಸಂಖ್ಯೆಯಲ್ಲಿ ಗೀರುಗಳನ್ನು ಹಾಕಿ ರಂಗವಲ್ಲಿ ಬಿಡಿಸಬೇಕು, ಮನೆಯ ಮುಂದೆ ಬಾಗಿಲಿನ ಮಧ್ಯದಲ್ಲಿ ರಂಗವಲ್ಲಿ ಹಾಕಬೇಕು ಎಂಬ ನಿಯಮಗಳಿವೆ.

ರಂಗವಲ್ಲಿಯನ್ನು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಗಂಡಸರೂ ಹಾಕುವರು. ದಕ್ಷಿಣ ಕನ್ನಡ ಜಿಲ್ಲೆಯ ನಾಗಮಂಡಲದಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ವೈದ್ಯರೆಂಬ ಪಂಗಡದ ಗಂಡಸರೇ ರಂಗವಲ್ಲಿ ಹಾಕಬೇಕೆಂಬ ನಿಯಮವಿದೆ. ಭೂತಾರಾಧಕರು, ದೇವಿ ಆರಾಧಕರು, ನಾಟಿ ವೈದ್ಯರು, ತಾಂತ್ರಿಕರು ರಂಗವಲ್ಲಿಯನ್ನು ಹಾಕಿ ಪೂಜೆ ಪ್ರಾರಂಭಿಸುವರು. ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಗೆರಟಿಗನಬೆಲೆಯ ಗೌಡರಲ್ಲಿ ಮದುವೆ ಸಂದರ್ಭದಲ್ಲಿ ಗೋಡೆಗೆ ರಂಗವಲ್ಲಿ ಬರೆಯುವವರು ಗಂಡಸರು. ಮದುವೆ ಸಮಾರಂಭಗಳಲ್ಲಿ ಪೂಜಿಸುವ ಅರವಿಯನ್ನು (ಮಣ್ಣಿನ ಮಡಕೆ) ಅಕ್ಕಿಹಿಟ್ಟಿನ ರಂಗವಲ್ಲಿಯಿಂದ ಅಲಂಕರಿಸುವುದುಂಟು.

ಭಾರತದ ವಿವಿಧ ಪ್ರಾಂತ್ಯಗಳಲ್ಲಿ ರಂಗವಲ್ಲಿ ಹಾಕುವ ವಿಧಾನಗಳಲ್ಲಿ, ಆಚಾರಗಳಲ್ಲಿ ಆಕಾರಗಳಲ್ಲಿ ವೈವಿಧ್ಯ ಗೋಚರಿಸಿದರೂ ಅವುಗಳ ಆಶಯ ಹಾಗೂ ಸಂಕೇತಗಳಲ್ಲಿ ಸಾಮ್ಯತೆ ಇದೆ. ಮಾಮೂಲು ದಿವಸಗಳಲ್ಲಿ ಮಹಿಳೆಯರು ತಮಗೆ ಇಷ್ಟವಾದ ರಂಗವಲ್ಲಿ ಹಾಕುವರು. ಹಬ್ಬಹರಿದಿನಗಳಲ್ಲಿ, ಶುಭಕಾರ್ಯಗಳಲ್ಲಿ ಸಂದರ್ಭಕ್ಕೆ ಸಂಪ್ರದಾಯಕ್ಕೆ ಅನುಗುಣವಾಗಿ ರಂಗವಲ್ಲಿ ಬಿಡುವುದು ರೂಢಿಯಲ್ಲಿದೆ. ವಾರದ ಏಳು ದಿನಗಳನ್ನು ಏಳು ಗ್ರಹಗಳಿಗೆ ಸೇರಿದ ವಾರಗಳೆಂದು ಭಾವಿಸಿ ಆ ಗ್ರಹಗಳಿಗೆ ಅನುಗುಣವಾಗಿ ರಂಗವಲ್ಲಿ ಇಟ್ಟು, ಉಳಿದ ಎರಡು ಗ್ರಹಗಳಾಗಿರುವ ರಾಹು ಮತ್ತು ಕೇತುಗಳನ್ನು ಅನುಕ್ರಮವಾಗಿ ಮಂಗಳವಾರ, ಶನಿವಾರಗಳಿಗೆ ಆರೋಪಿಸಿ ರಂಗವಲ್ಲಿಯನ್ನು ಬಿಡುವುದಿದೆ. ರಂಗವಲ್ಲಿಯ ಮೇಲೆ ದೀಪ ಬೆಳಗಿಸುವ ಪದ್ಧತಿ ತಮಿಳುನಾಡಿನಲ್ಲಿ ಕಂಡುಬರುತ್ತದೆ. ದೈವಗಳ ವಾಸಸ್ಥಾನವೆಂಬ ನಂಬಿಕೆಯಿರುವ ಅತ್ತಿ, ಆಲ, ಅರಳಿ, ಬಿಳಿಎಕ್ಕದಗಿಡ, ತುಳಸಿಕಟ್ಟೆಗಳ ಮುಂದೆ ರಂಗವಲ್ಲಿ ಹಾಕುವ ಪದ್ಧತಿ ಹಲವೆಡೆ ಉಂಟು.

ಭಾರತದ ಬಹುಪಾಲು ಎಲ್ಲ ಪ್ರಾಂತ್ಯಗಳಲ್ಲೂ ಪದ್ಮ, ಸ್ವಸ್ತಿಕ್, ಪಾದದ ಗುರುತು ಇವು ಮಂಗಳಪ್ರದವೆಂಬ ನಂಬಿಕೆಯಿದೆ. ಸೂರ್ಯ, ಚಂದ್ರ, ನಕ್ಷತ್ರ, ತ್ರಿಭುಜ ಷಡ್ಭುಜ-ಈ ಬಗೆಯ ಚಿಹ್ನೆಗಳೂ ಎಲ್ಲ ಕಡೆ ಕಂಡುಬರುತ್ತವೆ. ಪಶುಪಕ್ಷಿ, ಹೂಬಳ್ಳಿ, ಕಾಯು, ಹಣ್ಣು, ಗೃಹೋಪಕರಣಗಳು, ವೃತ್ತಿಪರಿಕರಗಳು, ಪೌರಾಣಿಕ ಇತಿವೃತ್ತಗಳನ್ನು ಸೂಚಿಸುವ ರಂಗೋಲಿಯನ್ನು ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಕೂಡ ನಾವು ಭಾರತದ ವಿವಿಧತೆಯಲ್ಲಿ ಏಕತೆ ಅಂತರ್ಲೀನವಾಗಿರುವುದನ್ನು ಕಾಣುತ್ತೇವೆ.

ಸಂಕೇತಾರ್ಥದಲ್ಲಿ ಆರಂಭಗೊಂಡ ರಂಗವಲ್ಲಿ ಕಾಲಕ್ರಮೇಣ ಆ ಸಾಂಕೇತಿಕತೆಯ ಅಂಶವನ್ನು ಬಹುಪಾಲು ಕಳೆದುಕೊಂಡು ಕೇವಲ ರಂಗವಲ್ಲಿಯ ರೂಪಗಳು, ಅದಕ್ಕೆ ಸಂಬಂಧಿಸಿದ ಸಂಪ್ರದಾಯ ಆಚರಣೆಗಳು ಮಾತ್ರ ಉಳಿದುಬಂದುವೆಂದು ತೋರುತ್ತದೆ. ದುಷ್ಟಶಕ್ತಿಗಳ ವಿರುದ್ಧ ರಕ್ಷಣೆಗಾಗಿ ಆರಂಭಗೊಂಡ ರಂಗವಲ್ಲಿ ಶುಭಸೂಚಕವಾಗಿ ಪರಿಣಮಿಸಿದೆ. ರಂಗವಲ್ಲಿಯ ಚುಕ್ಕೆಗಳು ಆಚರಣೆಯಾಗಿ ನೀಲಾಕಾಶದ ನಕ್ಷತ್ರಗಳನ್ನು, ಅಧ್ಯಾತ್ಮವಾದಿಗಳಿಗೆ ಧ್ಯಾನಕ್ಕೆ ಆಧಾರವಾದ ಬಿಂದುವನ್ನು ತಂತ್ರಶಾಸ್ತ್ರದಲ್ಲಿನ ಬಿಂದು ಶಕ್ತಿಯ ಪರಾರೂಪವನ್ನೂ ಸೂಚಿಸುತ್ತವೆ. ಪ್ರಾಣಕ್ಕೆ, ಶಕ್ತಿಗೆ, ಸೃಷ್ಟಿಗೆ ಮೂಲಕಾರಣವಾದ ಬಿಳಿಚುಕ್ಕೆ ಪುರುಷನಿಗೆ ಕೆಂಪುಚುಕ್ಕೆ ಸ್ತ್ರೀಗೆ ಪ್ರತೀಕವಾಗಿದೆ. ವೇದಾಂತಿಗಳ ವಾದದಂತೆ ರೂಪರಹಿತವಾದ ಬಿಂದುವಿನಿಂದ ರೂಪ ಉಂಟಾಗುವಂತೆ ರಂಗವಲ್ಲಿಯಲ್ಲಿನ ರೂಪರಹಿತವಾದ ಚುಕ್ಕಿಗಳು ಸೇರಿ ರೂಪ ಪಡೆಯುತ್ತವೆ. ರಂಗವಲ್ಲಿಯ ಚತುರ್ಭುಜ ಸ್ಥಿರತೆಗೆ ಸೂಚಕ. ತ್ರೀಕೊನದಲ್ಲಿನ ಮೂರು ಭುಜಗಳು ಸತ್ತ್ವ, ರಜಸ್ಸು, ತಮಸ್ಸು, - ಈ ತ್ರಿಗುಣಗಳನ್ನೂ ತ್ರಿಮೂರ್ತಿಗಳನ್ನೂ ಸೂಚಿಸುತ್ತದೆ. ತಾಂತ್ರಿಕರಿಗೆ ಭೌತಿಕವಾದಿಗಳಿಗೆ ತ್ರಿಕೋನ ಸ್ತ್ರೀ ಸಂಕೇತ. ಸಂತಾನಕ್ಕೂ ಭೌತಿಕಾಭಿವೃದ್ಧಿಗೂ ಇದು ಸಂಕೇತ. ಪದ್ಮದ ಚಿತ್ರ ರಂಗವಲ್ಲಿಯ ಮಧ್ಯದಲ್ಲೋ ಕಡೆಯಲ್ಲೋ ಸುತ್ತಲೋ ಇರುತ್ತದೆ. ಈ ಹೂ ಸೌಂದರ್ಯಕ್ಕೆ, ಪವಿತ್ರತೆಗೆ, ಸ್ವಚ್ಛತೆಗೆ, ಸೂರ್ಯನಿಗೆ, ಲಕ್ಷ್ಮಿಗೆ, ಸಫಲತೆಗೆ ಸಂಕೇತ. ಜೈನಧರ್ಮದ ಪ್ರಭಾವದಿಂದ ಸ್ವಸ್ತಿಕ್ ರೂಪ ರಂಗವಲ್ಲಿಯಲ್ಲಿ ಪ್ರವೇಶಿಸಿರಬಹುದು. ಇದು ಸೂರ್ಯ ಪರಿಭ್ರಮಣಕ್ಕೆ ಚಿಹ್ನೆ; ನಾಲ್ಕು ದಿಕ್ಕುಗಳ ಸೂಚಕ; ಧರ್ಮಾರ್ಥ ಕಾಮಮೋಕ್ಷ ಮಾರ್ಗಕ್ಕೆ ಪ್ರತೀಕ. ಸ್ವಸ್ತಿಕ್ ಮೂಲವಾದ ಎರಡು ಬಲಮುರಿ ಗೆರೆಗಳು ಸ್ತ್ರೀಪುರುಷರ ಸಮ್ಮಿಲನವನ್ನು ಸೂಚಿಸುತ್ತವೆ.

ಹೀಗೆ ಆಚಾರ, ವಿಚಾರ, ನಂಬಿಕೆ, ಕೋರಿಕೆಗಳನ್ನೂ ಸಾಮಾಜಿಕ ವ್ಯವಸ್ಥೆಯ ರೀತಿಯನ್ನೂ ರಂಗವಲ್ಲಿಯಲ್ಲಿ ಲೇಖಿಸಿರುವ ಸ್ತ್ರೀಯರು ಸಂಸ್ಕøತಿಯ ರಕ್ಷಕರು. ಈಗ ರಂಗವಲ್ಲಿ ಒಂದು ಸ್ಪರ್ಧಾತ್ಮಕ ಕಲೆಯಾಗಿಯೂ ಬೆಳೆದಿದೆ. ವಿವಿಧ ಪತ್ರಿಕೆಗಳಲ್ಲಿ ರಂಗವಲ್ಲಿಯ ನಮೂನೆಗಳು ಪ್ರಕಟವಾಗುತ್ತವೆ.