ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಂಗಾಚಾರ್ಯ, ಆದ್ಯ

ವಿಕಿಸೋರ್ಸ್ದಿಂದ

ರಂಗಾಚಾರ್ಯ, ಆದ್ಯ 1904 - 84. ಶ್ರೀರಂಗ ಎಂಬ ಕಾವ್ಯನಾಮದಿಂದ ಖ್ಯಾತರಾದ ಆಧುನಿಕ ಕನ್ನಡದ ಪ್ರಸಿದ್ಧ ನಾಟಕಕಾರರು. ಸಮಕಾಲೀನ ಕನ್ನಡ ರಂಗಭೂಮಿಗೆ ಆಳ ಅಗಲಗಳನ್ನು, ವೈವಿಧ್ಯವನ್ನು ತಂದುಕೊಟ್ಟ ಪ್ರಯೋಗಶೀಲರು. ಕನ್ನಡ, ಸಂಸ್ಕøತ, ಇಂಗ್ಲಿಷ ಮತ್ತು ಮರಾಠಿ ಭಾಷೆಗಳಲ್ಲಿ ಪರಿಣಿತರಾದ ಇವರು ರಾಷ್ಟ್ರೀಯ ಖ್ಯಾತಿಗಳಿಸಿದವರು. ಆರ್. ವಿ. ಜಾಗೀರ್‍ದಾರ್ ಎಂಬುದು ಇವರ ನಿಜನಾಮ. ಇವರು ಬಿಜಾಪುರ ಜಿಲ್ಲೆಯ ಅಗರಖೇಡದಲ್ಲಿ 1904 ಅಕ್ಟೋಬರ್ 26 ರಂದು ಜನಿಸಿದರು. ಸಂಸ್ಕøತವನ್ನು ವಿಶೇಷ ವ್ಯಾಸಂಗ ಮಾಡಿ ಪುಣೆಯ ಡೆಕ್ಕನ್ ಕಾಲೇಜಿನಿಂದ ಬಿ. ಎ. ಪದವಿ ಪಡೆದ (1925) ಅನಂತರ ಐ. ಸಿ. ಎಸ್. ಪರೀಕ್ಷೆಗೆ ಇಂಗ್ಲೆಂಡಿಗೆ ತೆರಳಿ ಅಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು ಹಿಂತಿರುಗಿದರು. ಕೆಲಕಾಲ ನಿರುದ್ಯೋಗಿಯಾಗಿದ್ದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕøತ ಅಧ್ಯಾಪಕರಾಗಿ 18 ವರ್ಷಗಳ ಕಾಲ ಕೆಲಸ ಮಾಡಿದರು. (1930 - 48). ಬೆಂಗಳೂರು ಆಕಾಶವಾಣಿಯಲ್ಲಿ ನಾಟಕ ವಿಭಾಗದ ನಿರ್ದೇಶಕರಾಗಿಯೂ ಸ್ವಲ್ಪ ಕಾಲ ಕೆಲಸ ಮಾಡಿದರು.

ಚಿಕ್ಕಂದಿನಿಂದ ಸಾಹಿತ್ಯಕ್ಕೆ ಒಲಿದಿದ್ದ ಶ್ರೀರಂಗರು ವಿದ್ಯಾರ್ಥಿಯಾಗಿದ್ದಾಗಲೇ ಸಂಸ್ಕøತದಲ್ಲಿ ಪದ್ಯ ಬರೆದದ್ದುಂಟು. ತಮ್ಮ 15 ನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರಲ್ಲದೆ ಆರ್ಥಿಕ ಅಡಚಣೆಗಳಿಗೂ ಒಳಗಾದರು. ಸುತ್ತಣ ಪರಿಸರದ ಕೃತಕತೆ ಮತ್ತು ಅರ್ಥಹೀನತೆಗಳನ್ನು ತಿರಸ್ಕರಿಸಿ, ಹೊಸದನ್ನು ಕಟ್ಟುವ, ಅದಕ್ಕಾಗಿ ದುಡಿಯುವ ಹೋರಾಟದ ಮನೋಭಾವವನ್ನು ರೂಢಿಸಿಕೊಂಡರು. ಇದರ ಫಲವೇ `ಉದರ ವೈರಾಗ್ಯ (1929) ನಾಟಕ. ಇವರಿಗೆ ಅಖಿಲ ಕರ್ನಾಟಕ ಖ್ಯಾತಿಯನ್ನು ತಂದುಕೊಟ್ಟಿದ್ದು `ಹ-ರಿ-ಜ-ನ್ವಾ-ರ (1933). ನಾಟಕರಚನೆಯನ್ನು ಆರಂಭಿಸಿದ ಮೊದಲ ಹಂತದಲ್ಲಿ ಇವರು ಬರೆದ ಕೆಲವು ಮುಖ್ಯ ನಾಟಕಗಳಿವು: ಸಂಸಾರಿಗೆ ಕಂಸ, ನರಕದಲ್ಲಿ ನರಸಿಂಹ, ಪ್ರಪಂಚ ಪಾಣಿಪತ್ತು, ಸಂಧ್ಯಾಕಾಲ, ಜರಾಸಂಧಿ, ದರಿದ್ರನಾರಾಯಣ, ಶ್ರೀರಂಗರು, 100 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸುಮಾರು 70 ಏಕಾಂಕ ನಾಟಕಗಳು. ಶ್ರೀರಂಗ - ನಾಟ್ಯ - ತರಂಗ (1967) ಇವರ 27 ಏಕಾಂಕಗಳ ಸಂಗ್ರಹ. ಸಂಪ್ರದಾಯದ ವಿರುದ್ಧ ಬಂಡಾಯ ಇವರ ನಾಟಕಗಳ ಮುಖ್ಯ ಲಕ್ಷಣ. ಜೊತೆಗೆ ಹರಿತವಾದ ಬುದ್ಧಿಶಕ್ತಿ, ವ್ಯಂಗ್ಯ, ಹಾಸ್ಯ, ಕಟುವಿಡಂಬನೆ ಮಾರ್ಮಿಕವಾದ ಮಾತುಗಾರಿಕೆ, ಉದ್ದಕ್ಕೂ ಸ್ವತಂತ್ರ ವಿಚಾರ ಸರಣಿ ಎದ್ದು ಕಾಣುತ್ತದೆ. ಪ್ರಯೋಗಶೀಲರಾದ ಶ್ರೀರಂಗರು ತಮ್ಮ ನಾಟಕಗಳ ವಸ್ತುವಿನ ಆಯ್ಕೆ ಮತ್ತು ತಂತ್ರಗಳಲ್ಲಿ ಹೊಸತನವನ್ನು ಮೆರೆದಿದ್ದಾರೆ. ಈ ದೃಷ್ಟಿಯಿಂದ ಕೇಳು ಜನಮೇಜಯ, ರಂಗಭಾರತ, ಶತಾಯು ಗತಾಯು, ಸ್ವರ್ಗಕ್ಕೆ ಮೂರೇ ಬಾಗಿಲು, ಗೆಳೆಯ ನೀನು ಹಳೆಯ ನಾನು, ನೀ ಕೊಡೆ ನಾ ಬಿಡೆ, ಸಮಗ್ರ ಮಂಥನ ಮುಂತಾದ ನಾಟಕಗಳನ್ನು ಹೆಸರಿಸಬಹುದು.

ಸಾಹಿತ್ಯದ ಇನ್ನಿತರ ಪ್ರಕಾರಗಳಲ್ಲೂ ಶ್ರೀರಂಗರ ಸಾಧನೆ ಗಮನಾರ್ಹ. ಇವರ ಹಲವು ಕಾದಂಬರಿಗಳಲ್ಲಿ `ವಿಶ್ವಾಮಿತ್ರನ ಸೃಷ್ಟಿ ಮುಖ್ಯವಾದುದು. ಭಾಷಾ ಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕ `ಶಾರದೆಯ ಸಂಸಾರ, ನಗುವಿನ ಸ್ವರೂಪವನ್ನು ಕುರಿತ ಪುಸ್ತಕ `ನಗೆ (1994). `ಗೀತಾಗಾಂಭೀರ್ಯ ದಲ್ಲಿ ಗೀತೆಯನ್ನು ಕುರಿತ ವಿಚಾರಾತ್ಮಕ ಅಧ್ಯಯನ ಇದೆ. `ಆಹ್ವಾನ ಇವರ ಒಂದು ಕವನ ಸಂಕಲನ. ನನ್ನ ನಾಟ್ಯ ನೆನಪುಗಳು (1960) ಮತ್ತು ಸಾಹಿತಿಯ ಆತ್ಮಜಿಜ್ಞಾಸೆ (1973) ಆತ್ಮಕಥನ ರೂಪದ ಕೃತಿಗಳು. ಸಮತೂಕದ ಸಾಹಿತ್ಯ ವಿಮರ್ಶೆ ಇರುವ ಕಾಳಿದಾಸ ಗ್ರಂಥ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿದೆ (1970). ಭಾರತೀಯ ರಂಗಭೂಮಿಯನ್ನು ಕುರಿತ `ದಿ ಇಂಡಿಯನ್ ಥಿಯೇಟರ್ ಇವರ ಇಂಗ್ಲಿಷ್ ಪುಸ್ತಕ. ರಂಗಭೂಮಿಗೆ ಸಂಬಂಧಿಸಿದಂತೆ ಪ್ರೇಕ್ಷಕ ವರ್ಗ : ನಮ್ಮ ರಂಗಭೂಮಿಯ ಸಮಸ್ಯೆ (1969) ; `ರಂಗನಾಟಕ ಶಾಸ್ತ್ರ (1971) ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ.

ಶ್ರೀರಂಗರ ಸಾಹಿತ್ಯ ಸೇವೆಗಾಗಿ ಸಂದಿರುವ ಪ್ರಶಸ್ತಿಗಳು ಹಲವು. ರಾಯಚೂರಿನಲ್ಲಿ 1955ರಲ್ಲಿ ನಡೆದ 38 ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. 1969ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಗೌರವ ದೊರೆಯಿತು. 1972ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿಗೆ ಇವರು ಮೂರುವರ್ಷ ಕಾಲ ಅಧ್ಯಕ್ಷರಾಗಿದ್ದರು (1971 - 74). ಇವರು ಬೆಂಗಳೂರಿನಲ್ಲಿ 17 ಅಕ್ಟೋಬರ್ 1984ರಲ್ಲಿ ನಿಧನ ಹೊಂದಿದರು.