ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಂಜಾಳ ಗೋಪಾಲ ಶೆಣೈ

ವಿಕಿಸೋರ್ಸ್ದಿಂದ

ರಂಜಾಳ ಗೋಪಾಲ ಶೆಣೈ 1897 ಕರ್ನಾಟಕದ ಪ್ರಸಿದ್ಧ ಶಿಲ್ಪಿಗಳು ಕಾರ್ಕಳದಲ್ಲಿ 1897 ಜನವರಿ 1ರಂದು ಜನಿಸಿದರು. ಕಾರ್ಕಳಕ್ಕೆ ಹತ್ತಿರದಲ್ಲಿರುವ ರಂಜಾಳ ಇವರ ಹಿರಿಯರ ಮೂಲಸ್ಥಳ. ಇವರ ತಂದೆ ಜನಾರ್ಧನ ಶೆಣೈಯವರು ಶಿಲ್ಪಿಗಳು. ಗೋಪಾಲ ಶೆಣೈಯವರಿಗೂ ತಂದೆಯಿಂದ ಶಿಲ್ಪಕಲೆ ಇಳಿದು ಬಂತು. ಶೆಣೈ ಅವರು ಶಾಸ್ತ್ರೀಯವಾಗಿ ಎಲ್ಲರೂ ಕಲಾಭ್ಯಾಸ ಮಾಡದಿದ್ದರೂ ಗುರುಕರುಣೆ. ತಂದೆಯ ಮಾರ್ಗದರ್ಶನ, ಅಚಲ ಶ್ರದ್ಧೆ ಹಾಗೂ ನಿರಂತರ ಪ್ರಯತ್ನಗಳಿಂದ ಪರಿಣಿತ ಶಿಲ್ಪಿಯೆನಿಸಿದರು. ಶಿಲ್ಪಕ್ಕೆ ತಮ್ಮ ಬದುಕನ್ನು ಮೀಸಲಿಡುವ ಮೊದಲು ಸುಮಾರು ಹದಿನೈದು ವರ್ಷಗಳ ಕಾಲ ಇವರು ಕಾರ್ಕಳದ ವಿ.ಡಿ.ಎ. ಸಂಸ್ಕøತ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಶೆಣೈ ಅವರಿಗೆ ಸಂಸ್ಕøತ ಭಾಷೆಯಲ್ಲಿ ಪಾಂಡತ್ಯವಿತ್ತು. ಜೈನಶಾಸ್ತ್ರ ಧರ್ಮ ಗ್ರಂಥಗಳನ್ನೂ ಕಾವ್ಯಗಳನ್ನೂ ಸಾಕಷ್ಟು ಅಧ್ಯಯನ ಮಾಡಿದ್ದರು. 1920ರ ಸುಮಾರಿಗೆ ಇವರು ತಮ್ಮ ಶ್ರೀಮದ್ಭುವ ನೇಂದ್ರ ಶಿಲ್ಪಶಾಲೆಯನ್ನು ಸ್ಥಾಪಿಸಿದರು. ಅಂದಿನಿಂದ ಇವರ ಬದುಕಿನುದ್ದಕ್ಕೂ ಅದೇ ಇವರ ಕಾರ್ಯಕ್ಷೇತ್ರವಾಗಿತ್ತು.

ಕಾರ್ಕಳ ವೆಂಕಟರಮಣ ನಾಲ್ಕು ಕಂಬಗಳನ್ನು ಕಡೆದ ಮೇಲೆಯೇ ಶೆಣೈಯವರ ಕಲಾ ವಿದಗತ್ಥೆ ಜನರ ಕಣ್ಮನಗಳನ್ನು ಸೆಳೆದದ್ದು. ಆ ಕಂಬಗಳ ಕಂಡರಣೆಗೆ ಇವರಿಗೆ ಎಂಟು ವರ್ಷಗಳು ಹಿಡಿದುವು (1934 - 42). ನೆಲ್ಲಿಕಾರು ಶಿಲೆಯಲ್ಲಿ ನಿರ್ಮಿತವಾದ ಆ ಕಂಬಗಳ ಕುಸುರಿಗೆಲಸ ತುಂಬ ಸೊಗಸಿನದು ಮತ್ತು ನಯಗಾರಿಕೆಯದು.

ಗೋಪಾಲ ಶೆಣೈಯವರಿಗೆ ವಿಗ್ರಹ ಶಿಲ್ಪದಲ್ಲಿ ಆಸಕ್ತಿ ಹೆಚ್ಚು. ಈವರೆಗೆ ಇವರು ನಿರ್ಮಿಸಿರುವ ವಿಗ್ರಹಗಳು ಅನೇಕ. ಹೃಷಿಕೇಶದ ಶಿವಾನಂದ ಆಶ್ರಮದಲ್ಲಿರುವ ಮುರಳೀಧರ, ಅಲಹಾಬಾದಿಗೆ ಕಳುಹಿದ ಕಡೆಗೋಲು ಕೃಷ್ಣ, ಪರ್ತಗಾಳಿ ಮಥಕ್ಕೆ ನೀಡಿದ ವೃಂದಾವನ, ವಡಾಲ ಮಠಕ್ಕೆ ಒಪ್ಪಿಸಿದ ರಾಮಲಕ್ಷ್ಮಣ ಸೀತೆ - ಇವುಗಳ ಕೆಲವು ಉತ್ಕøಷ್ಟ ರಚನೆಗಳು. ಕಂಚು, ಬೆಳ್ಳಿ, ಬಂಗಾರ ಮುಂತಾದ ಲೋಹಗಳಿಂದ, ಮಣ್ಣು ಮತ್ತು ದಂತಗಳಿಂದಲೂ ಸೂಕ್ಷ್ಮ ಸುಂದರ ಪ್ರತಿಮೆಗಳನ್ನು ಶೆಣೈಯವರು ನಿರ್ಮಿಸಿದ್ದಾರೆ. ಅಮೃತ ಶಿಲೆ, ಸಾಲಿಗ್ರಾಮಗಳಲ್ಲೂ ಮೋಹಕ ಮೂರ್ತಿಗಳನ್ನು ಕಡೆದಿದ್ದಾರೆ. ಶೆಣೈ ಅವರು ಕೆಲಕಾಲ ಚಿತ್ರಕಲೆಯಲ್ಲೂ ನಿರತರಾಗಿದ್ದರು. ಇವರ ಮನೆಯಲ್ಲಿ ಇನ್ನೂ ಮಾಸದೇ ಉಳಿದಿರುವ ಹಿರಿಯಂಗಡಿ ಮಾನಸ್ತಂಭ, ಸಿದ್ಧಾರ್ಥನ ರಾಜ್ಯತ್ಯಾಗ, ಹೊಲಯರ ಮದುವೆ ಈ ಕೆಲವು ಚಿತ್ತಾಕರ್ಷಕ ವರ್ಣಚಿತ್ರಗಳು ಇವರ ಚಿತ್ರಕಲೆಯ ನೆನಪಿನ ಹೆಗ್ಗುರುತಾಗಿದೆ.

ಗೋಪಾಲ ಶೈಣೈಯವರ ಹೆಸರು ಕರ್ನಾಟಕದಲ್ಲೇ ಅಲ್ಲದೆ ಹೊರನಾಡುಗಳಿಗೂ ಹಬ್ಬುವಂತಾದುದು ಇವರು ಧರ್ಮಸ್ಥಳಕ್ಕಾಗಿ ನಿರ್ಮಿಸಿದ ಗೊಮ್ಮಟ ಸ್ವಾಮಿಯ ಬೃಹನ್ಮೂರ್ತಿಯಿಂದ. ಈ ಬೃಹನ್ಮೂರ್ತಿಯ ಕೆತ್ತನೆ 1967 ನೆಯ ಅಕ್ಟೋಬರ್ 12 ರಂದು ಕಾರ್ಕಳದ ಮಂಗಲಪಾದೆ ಎಂಬಲ್ಲಿ ವಿದ್ಯುಕ್ತವಾಗಿ ಆರಂಭವಾಗಿ ಸುಮಾರು ಐದು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಜನ ಕುಶಲಕರ್ಮಿಗಳ ನೆರವಿನಿಂದ ಪೂರ್ಣಗೊಂಡಿತು. 1973 ನೆಯ ಮಾರ್ಚ್ ತಿಂಗಳಲ್ಲಿ ಮೂರ್ತಿಯನ್ನು ಕಾರ್ಕಳದಿಂದ ತಂದು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. 13 ಅಡಿಗಳ ಪೀಠ ಭಾಗವನ್ನು ಬಿಟ್ಟು ಪಾದದಿಂದ ಶಿರಸ್ಸಿನವರೆಗೆ 39 ಅಡಿ ಉದ್ದ 14 ಅಡಿ ಅಗಲ, 170 ಟನ್ ಭಾರವಿರುವ ಈ ಮೂರ್ತಿ ಆಧುನಿಕ ಶಿಲ್ಪಚರಿತ್ರೆಗೆ ಅಚ್ಚರಿಯ ಒಂದು ಅಧ್ಯಾಯವನ್ನೇ ಸೇರಿಸಿದೆ. ಗೋಪಾಲ ಶೆಣೈಯವರಿಗೆ 1960 ರಲ್ಲಿ ಭಾರತ ಸರ್ಕಾರ ಮಾಸ್ಟರ್ ಕ್ರ್ಯಾಫ್ಟ್ಸ್‍ಮನ್ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷ ಕರ್ನಾಟಕ ಲಲಿತಕಲಾ ಅಕಾಡೆಮಿಯೂ ಇವರಿಗೆ ಪ್ರಶಸ್ತಿಯನ್ನಿತ್ತು ಗೌರವಿಸಿತು.