ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಗಳೆ

ವಿಕಿಸೋರ್ಸ್ದಿಂದ

ರಗಳೆ
ಸಂಸ್ಕ್ರತ-ಪ್ರಾಕೃತ ಪ್ರಭಾವದಿಂದ ಹುಟ್ಟಿ ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ಬಳಕೆಗೊಂಡಿರುವ ಮಾತ್ರಾಗಣಬದ್ಧವಾದ ವಿಶಿಷ್ಟ ಛಂದೋರೂಪ. ಇದರಲ್ಲಿ ಉತ್ಸಾಹ, ಮಂದಾನಿಲ, ಲಲಿತವೆಂಬ ಮೂರು ಪ್ರಭೇದಗಳಿವೆ. ರಗಳೆ ರಘಟಾ ಎಂಬ ಶಬ್ದಗಳನ್ನು ಮೊದಲಬಾರಿಗೆ ಬಳಸಿದವನು ಛಂದೋಂಬುಧಿಯ ಕರ್ತೃ ನಾಗವರ್ಮ. ಇದರ ಲಕ್ಷಣಗಳನ್ನು ಹೇಳಿರುವವರಲ್ಲಿ ನಾಗವರ್ಮ ಮತ್ತು ಜಯಕೀರ್ತಿ ಮುಖ್ಯರು. ರಗಳೆ ಛಂದಸ್ಸು ಮಾರ್ಗಕಾವ್ಯಗಳಲ್ಲಿ ವರ್ಣಕ ಭಾಗವಾಗಿ ಸೇರಿ ಹರಿಹರನ ಕಾವ್ಯಗಳಲ್ಲಿ ಒಂದು ಸ್ವತಂತ್ರ ದೇಸೀಕಾವ್ಯ ಮಾಧ್ಯಮವಾಗಿ ಬೆಳೆದದ್ದನ್ನು ಕನ್ನಡ ಸಾಹಿತ್ಯ ಚರಿತೆಯಲ್ಲಿ ಕಾಣತ್ತೇವೆ. ಸಂಸ್ಕøತ, ಪ್ರಾಕೃತ ಛಂದೋಗ್ರಂಥಗಳಲ್ಲಿ 'ರಘಟಾ ಶಬ್ದದ ಉಲ್ಲೇಖ ಕಾಣುವುದಿಲ್ಲ. ಇದರಿಂದಾಗಿ ಉಳಿದ ಛಂದೋವ್ಯಾಕಾರಣ ಗ್ರಂಥಗಳಲ್ಲಿ ಕಾಣುವ ಉಲ್ಲೇಖಗಳಿಗೆಲ್ಲ ಛಂದೋಂಬುಧಿಯ ಉಲ್ಲೇಖವೇ ಮೂಲವಾಗಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ.

ತೆಲುಗು ಭಾಷೆಯಲ್ಲಿ 'ರಗಳೆ ಎಂಬುದಕ್ಕೆ 'ರಗಡ ಎಂಬ ಪದದ ಬಳಿಕೆಯಿದೆ. ಆದರೆ ಈ ಭಾಷೆಯ ಪ್ರಾಚೀನ ಲಕ್ಷಣ ಗ್ರಂಥಗಳಲ್ಲಾಗಲಿ, ಆಧುನಿಕ ವಿದ್ವಾಂಸರಲ್ಲಾಗಲಿ ಈ ಶಬ್ದದ ಬಗೆಗೆ ವಿಶೇಷ ಚರ್ಚೆ ನಡೆದಂತಿಲ್ಲ. ಸಂಸ್ಕøತದಲ್ಲಿ ಅಲಂಕಾರ ಸಂಗ್ರಹ, ಛಂದಶೇಖರ ಇತ್ಯಾದಿ ಕೃತಿಗಳಲ್ಲಿ ರಗಲಾ, ರಗಡಾ ಎಂಬ ಪ್ರಯೋಗಗಳು ಕಾಣಿಸಿಕೊಂಡಿದ್ದರೂ ಶಬ್ದಶಃ ಯಾವ ಅರ್ಥದಲ್ಲಿ ಅವು ಬಳಕೆಗೊಂಡಿರಬಹುದು ಎಂಬುದರ ವಿವರಣೆ ದೊರೆಯುವುದಿಲ್ಲ.

ರಗಳೆ ಹೆಸರಿನ ಬಗೆಗೆ ಕನ್ನಡ ವಿದ್ವಾಂಸರಲ್ಲಿ ವಿಪುಲ ಚರ್ಚೆಯಿದೆ. ವಿದ್ವಾಂಸರ ಪ್ರಕಾರ ಈ ಪದ್ಯಜಾತಿ ಕನ್ನಡಕ್ಕೆ ಪ್ರಾಕೃತ ಸಾಹಿತ್ಯದ ವಿಶೇಷ ಸಂಪರ್ಕವುಂಟಾದ ಕಾಲದಲ್ಲಿ ಕಾಣಿಸಿಕೊಂಡಿತು. ಆದ್ದರಿಂದ ಇದರ ಮೂಲವೂ ಪ್ರಾಕೃತ ಅಥವಾ ಅಪಭ್ರಂಶ ಸಾಹಿತ್ಯಕ್ಕೆ ಸಂಬಂಧಿಸಿರಬಹುದೆಂಬ ಅಭಿಪ್ರಾಯವಿದೆ. ರಾಜಶೇಖರನ ಛಂದಶೇಖರದಲ್ಲಿ ರಗಡಾದ್ರುವಕ ಎಂಬ ಪದಪ್ರಯೋಗವಿದೆ. ಇಲ್ಲಿ 'ರಗಡಾ ಎಂಬುದು ಒಂದು ಪದ್ಯಜಾತಿಯನ್ನು ಹೇಳುವ ಶಬ್ದವಾಗಿರುವುದು ಸ್ಪಷ್ಟ. ಈ ಪದ್ಯಜಾತಿಯ ಲಕ್ಷಣಗಳೇ ಕನ್ನಡ ರಗಳೆಯ ಮೂಲ ಎಂಬುದು ರಾಜಶೇಖರ ಹಾಗೂ ಹೇಮಚಂದ್ರ ಈ ಇಬ್ಬರ ಅಭಿಮತವೂ ಆಗಿದೆ. ಈ 'ರಗಡಾದ್ರುವಕವೇ ಕನ್ನಡದ 'ರಗಳೆ ಮತ್ತು ಸಂಸ್ಕøತದ 'ರಘಟ' ಶಬ್ದಗಳ ಹುಟ್ಟಿಗೆ ಪ್ರೇರಕವಾಗಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ (ರಗಡಾ(ಪ್ರಾ)>ರಗಳೆ(ಕ)<ರಘಟಾ (ಸಂ).

ಬೇರೆಬೇರೆ ಪಾದಗಳ ಒಂದು ಘಟಕವನ್ನು ಹೇಳುವ ಶಬ್ದ 'ರಗಳೆ ಬೇರೆ ಬೇರೆ ಗಣನಿಯಮಗಳಿಗನುಸಾರವಾಗಿ ಇದರ ಪಾದರಚನೆಯೂ ಬೇರೆ ಬೇರೆಯಾಗುತ್ತದೆ. ಇವು ಪಂಪಾದ್ಯರ ಕಾಲದಲ್ಲಿ 'ಪದ್ದಳಿ ಇತ್ಯಾದಿ ಹೆಸರುಗಳಿಂದ ಸೂಚಿತವಾಗಿವೆ ಕನ್ನಡದ ಪದ್ದಳಿಯ ರಗಳೆ ಅಪಭ್ರಂಶದಲ್ಲಿ ಕಾಣುವ ಪಜ್ಝಟಿಕೆಯ ಕಡವಕಗಳಂತೆ. ಹೀಗೆ ಪ್ರಾಕೃತ ಮೂಲವನ್ನು ಅನುಸರಿಸುವಾಗ ಕನ್ನಡದಲ್ಲಿ ಕೆಲವು ಸ್ವತಂತ್ರ ವ್ಯತ್ಯಾಸಗಳನ್ನು ಮಾಡಿಕೊಳ್ಳಲಾಗಿದೆ. ಚಂಪೂಕಾವ್ಯಗಳಲ್ಲಿ ವಿಪುಲವಾಗಿ, ಶಾಸನಗಳಲ್ಲಿ ಕ್ವಚಿತ್ತಾಗಿ ಕಾಣಿಸಿಕೊಳ್ಳುವ ರಗಳೆಗಳಿಗೆ ಅಪಭ್ರಂಶ ಛಂದಸ್ಸಿನಲ್ಲಿ ಕಾಣುವ ತ್ರಿಕಲ, ಚತಷ್ಕಲ ಮತ್ತು ಪಂಚಕಲ ಎಂಬ ಹೆಸರುಗಳಿಂದ ಕಟ್ಟಿರುವ ಕಡವಕಗಳೇ ಮೂಲ ಮತ್ತು ಪ್ರೇರಕ ಎಂಬ ಅಭಿಪ್ರಾಯವಿದೆ. 3, 4 ಮತ್ತು 5 ಮಾತ್ರೆಗಳ ಈ ರಗಳೆಗಳಲ್ಲಿನ ಪ್ರಾಚೀನ ಕನ್ನಡ ಕವಿಗಳು ಅಪಭ್ರಂಶ ಕವಿಗಳಂತೆಯೇ ವೈವಿಧ್ಯತೆ ವ್ಯತ್ಯಾಸಗಳನ್ನೂ ಮಾಡಿಕೊಂಡಿದ್ದಾರೆ. ಈ ರಗಳೆಗಳು 12ನೆಯ ಶತಮಾನದಲ್ಲಿ ಹರಿಹರನ ಕೈಯಲ್ಲಿ ಸ್ಥಾಯೀ ರೂಪವನ್ನು ಪಡೆದು ಉತ್ಸಾಹ, ಮಂದಾನಿಲ ಮತ್ತು ಲಲಿತವೆಂಬ ಹೆಸರುಗಳಿಂದ ಪ್ರಸಿದ್ಧಗೊಂಡವು. ಪ್ರಾಚೀನ ಕಾವ್ಯಶಾಸ್ತ್ರಾದಿ ಗ್ರಂಥಗಳಲ್ಲಿ ರಗಳೆ ಪ್ರಯೋಗಗೊಂಡಿದ್ದರೂ ಅದರ ಸಂಪೂರ್ಣ ಸತ್ತ್ವ ವ್ಯಾಪ್ತಿಗಳನ್ನು ಮನಗಂಡು ಇದನ್ನೇ ತನ್ನ ಕಾವ್ಯಗಳ ಪ್ರಧಾನ ಛಂದಸ್ಸನ್ನಾಗಿ ಗಣಿಸಿ ಅತ್ಯಂತ ಯಶಸ್ವಿಯಾಗಿ ಪ್ರಯೋಗಿಸಿದವನು ಹರಿಹರ, ಈತ ರಗಳೆಯ ಕವಿಯೆಂದೇ ಪ್ರಸಿದ್ಧನಾದ. ಕೆರೆಯ ಪದ್ಮರಸ. ತ್ರಿಭುವನ ತಾತ, ರಾಘವಾಂಕ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಸ್ವತಂತ್ರ ಸಿದ್ಧಲಿಂಗೇಶ್ವರ, ಅಂಡಯ್ಯ ಮೊದಲಾದವರು ಹರಿಹರನ ಅನಂತರ ರಗಳೆ ಪ್ರಕಾರವನ್ನು ತಮ್ಮ ಕಾವ್ಯಗಳಲ್ಲಿ ಮುಂದುವರಿಸಿಕೊಂಡು ಹೋದರು.

ರಗಳೆ ಯಾವ ಛಂದಸ್ಸಂಪ್ರದಾಯದ್ದು ಎಂಬ ಸೂಚನೆ ನಮಗೆ ನಾಗವರ್ಮನಲ್ಲಿ ಸಿಗಬಹುದಾದರೂ ಅದರ ಮೂಲಕ ನೇರ ನಿರ್ದೇಶನ ನಮಗೆ ದೊರೆಯುವುದು ಜಯಕೀರ್ತಿಯ ಛಂದೋನುಶಾಸನದಲ್ಲಿ. ಇದರಲ್ಲಿ ರಘಟಾದ ಲಕ್ಷಣವನ್ನು ಹೇಳುತ್ತಾ 'ಪದ್ಧತಿ' ಎಂಬ ಛಂದಸ್ಸಿನೊಂದಿಗೆ ರಗಳೆಯನ್ನು ಸಮೀಕರಿಸಿದ್ದಾನೆ. ಇವನು ಬಳಸುವ ಸೈವ ಪದ್ಧತಿ' ಎಂಬ ಮೂಲದ ಮಾತು ರಗಳೆ ಛಂದಸ್ಸಿನ ಮೂಲದ ಮೇಲೆ ಬೆಳಕು ಚೆಲ್ಲಿದೆ.

ಕನ್ನಡ ಕಾವ್ಯಗಳ ಮಾತೃಕೆಗಳಲ್ಲಿ ರಗಳೆಯ ಪದ್ಯಗಳಿಗೆ ಅಲ್ಲಲ್ಲಿ 'ಪದ್ಧತಿ' ಎಂಬ ಸಂಸ್ಕøತ ಪದದ ಪ್ರಾಕೃತ ರೂಪವಾದ 'ಪದ್ಧಡಿ', 'ಪದ್ಧಳಿ ಎಂಬ ಹೆಸರುಗಳ ಬಳಕೆಯನ್ನು ಕಾಣಬಹುದು. ಇದು ಆ ಪದ್ಯಜಾತಿ ಪದ್ಧತಿ ಛಂದಸ್ಸಿನ ರಗಳೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.

ಉತ್ಸಾಹ, ಮಂದಾನಿಲ, ಲಲಿತ ಈ ಮೂರು ಪ್ರಭೇದಗಳ ಹೆಸರು ಮತ್ತು ಲಕ್ಷಣ ನಿರೂಪಣೆ ಮೊದಲ ಬಾರಿಗೆ ಕಂಡುಬರುವುದು ಗುಣಚಂದ್ರನ 'ಛಂದಸ್ಸಾರ ದಲ್ಲಿ. ಈ ಬಗೆಗೂ ವಿದ್ವಾಂಸರಲ್ಲಿ ವಿಪುಲ ಚರ್ಚೆಯಾಗಿದೆ. ಈ ಮೂರು ಹೆಸರುಗಳೂ ಕನ್ನಡ ಛಂದಶ್ಯಾಸ್ತ್ರ ಸಂಪ್ರದಾಯಮೂಲವಾಗಿ ಬಂದಿರಬಹುದು. ಇವಕ್ಕೆ ಈ ಮೂರು ರಗಳೆಗಳ ಸಾಮಾನ್ಯ ಮುಖ್ಯ ಪ್ರೇರಣೆ ಛಂದೋಂಬುಧಿಯೇ ಆಗಿರಬೇಕು.

ಉತ್ಸಾಹ ರಗಳೆಯ ಸಾಮಾನ್ಯ ಲಕ್ಷಣ: ಒಂದು ರೀತಿ -4 ತ್ರಿಮಾತ್ರಾಗಣ ಗಳಂತೆ ಪಾದಕ್ಕೆ 12 ಮಾತ್ರೆಗಳು:

ಕುಳಿರ್ವ | ಪೂಗೊ | ಳಂಗ | ಳಲ್ಲಿ ತಳಿರ | ಕಾವ | ಣಂಗ | ಳಲ್ಲಿ

(ಕಬ್ಬಿಗರಕಾವ)

ಇನ್ನೊಂದು ರೀತಿ:- s ತ್ರಿಮಾತ್ರಾಗಣಗಳಂತೆ ಪಾದಕ್ಕೆ 16 ಮಾತ್ರೆಗಳು: ಮಗನ | ಕಲೆಯ | ಲಂದು | ಶಂಕೆ | ಯಿಲ್ಲ | ದಿರ್ದ | ರೆಳ್ದು | ಪೋಗಿ ಮಗನ | ಮಗನೆ | ಬಾರೆ | ನುತ್ತೆ | ತಂದೆ | ಕರೆದು | ನೋಡಿ | ಬೀಗಿ ||

(ಸಿರಿಯಾಳನ ರಗಳೆ)

ಮಂದಾಲನಿಲ ರಗಳೆಯ ಸಾಮಾನ್ಯ ಲಕ್ಷಣ: 4 ಚತುರ್ಮಾತ್ರಾಗಣಗಳಂತೆ

ಪಾದಕ್ಕೆ 16 ಮಾತ್ರೆಗಳು: ಪಂಕಜ | ದಂತಿರೆ | ಪುಟ್ಟಿದ | ಳೊಲವಿಂ ಪಂಕವ | ನೆಂದುಂ | ಪೊರ್ದದೆ | ನಲವಿಂ (ಆದಯ್ಯನ ರಗಳೆ)

ಲಲಿತ ರಗಳೆಯ ಸಾಮಾನ್ಯ ಲಕ್ಷಣ: 4 ಪಂಚಮಾತ್ರಾಗಣಗಳಂತೆ ಪಾದಕ್ಕೆ 20 ಮಾತ್ರೆಗಳು ಸೊಂಪಿನಿಂ | ಕಂಪಿಡುವ | ಸಂಪಗೆಗ |ಳಂ ಕೊಂಡು ಪೊಂಪೆಸೆವ | ಹೊಂಗೇದ | ಗೆಯ ಹೂಗ | ಳಂ ಕೊಂಡು

(ಬಸವರಾಜದೇವರ ರಗಳೆ)

ಕನ್ನಡದ ಲಲಿತರಗಳೆ ಇಂಗಿಷ್‍ನ ಬ್ಲಾಂಕ್‍ವರ್ಸ್ ಎಂಬ ಛಂದಃಪ್ರಕಾರದ ಕೆಲವು ಸೌಲಭ್ಯಗಳನ್ನು ಅಳವಡಿಸಿಕೊಂಡು ಸರಳರಗಳೆ, ಮಹಾಛಂದಸ್ಸುಗಳೆಂಬ ಹೆಸರುಗಳಲ್ಲಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಕಾಸಗೊಂಡದ್ದನ್ನೂ ನಾವು ಗಮನಿಸಬಹುದು.