ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಜನಿಕಾಂತ್

ವಿಕಿಸೋರ್ಸ್ದಿಂದ

ರಜನಿಕಾಂತ್ ತಮಿಳು ಚಿತ್ರರಂಗದ ಪ್ರಸಿದ್ಧ ನಾಯಕ ನಟ. ಕನ್ನಡ, ತೆಲುಗು, ಹಿಂದೀ ಚಿತ್ರಗಳಲ್ಲೂ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದರು. ಶಿವಾಜಿರಾವ್ ಗಾಯಕ್‍ವಾಡ್ ಎಂಬುದು ಇವರ ನಿಜನಾಮ. ಇವರ ತಂದೆ ಪೋಲೀಸ್ ಪೇದೆಯಾಗಿದ್ದರು. ರಜನಿಕಾಂತ್ ಪ್ರಾರಂಭದಲ್ಲಿ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಕನ್ನಡದ ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಥಾಸಂಗಮ ಎಂಬ ಚಿತ್ರದ ಮುನಿತಾಯಿ ಎಂಬ ಚಿತ್ರ ಭಾಗದಲ್ಲಿ ಸಣ್ಣ ಪಾತ್ರವೊಂದನ್ನು ಮಾಡುವುದರ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಅನಂತರ ಕೆ. ಬಾಲಚಂದರ್ ನಿರ್ದೇಶನದ ಅಪೂರ್ವರಾಗಂಗಳ್ ಎಂಬ ತಮಿಳು ಚಿತ್ರದಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿ ಜನಪ್ರಿಯರಾದರು. ತಮಿಳು ಚಿತ್ರರಂಗದಲ್ಲಿ ಬೆಳೆಯತೊಡಗಿ ಉತ್ತುಂಗಕ್ಕೇರಿದರು. ಅಭಿನಯದಲ್ಲಿ ಇವರದು ವಿಶಿಷ್ಟ `ಸ್ಟೈಲ್`. ಉರಿಯುತ್ತಿರುವ ಸಿಗರೇಟನ್ನು ಗಾಳಿಯಲ್ಲಿ ಮೇಲಕ್ಕೆ ಎಸೆದು ಅದರ ತುದಿಯನ್ನು ಬಾಯಲ್ಲಿ ಕಚ್ಚಿಹಿಡಿದು ತುಟಿಗಳ ನಡುವೆ ಸೇರಿಸುವುದು ಇವರ ವೈಶಿಷ್ಟ್ಯ. ಇವರು ನಟಿಸುವ ಚಿತ್ರಗಳಲ್ಲಿ ಇಂಥ ಒಂದಾದರೂ ದೃಶ್ಯವಿರುತ್ತದೆ. ಹೀಗಾಗಿ ಸ್ಟೈಲ್‍ಕಿಂಗ್ ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಹಾಗೂ ಬಂಡಾಯ ತೋರುವ ಪಾತ್ರಗಳಲ್ಲಿ ನಟಿಸಿ ಇವರು ಯುವಜನರ ಮೆಚ್ಚುಗೆಗೆ ಪಾತ್ರರಾದರು. ಕೆಲವೊಮ್ಮೆ ಇವರ ಅಭಿನಯ ಅತಿರೇಕ ಎಂಬಷ್ಟರಮಟ್ಟಿಗೆ ಕಂಡುಬರುತ್ತದೆ. ಪಾತ್ರಗಳಿಗೆ ಭಾವತುಂಬಿ ನಟಿಸುವ ಕಲೆಗಾರಿಕೆ ಇವರಿಗೆ ಕರಗತವಾಗಿದೆ. ತಮಿಳು ಚಿತ್ರರಂಗದಲ್ಲಿ ಪ್ರಮುಖ ತಾರೆಯಾಗಿ ಆ ರಾಜ್ಯದ ಯುವಜನತೆಯನ್ನು ಆಕರ್ಷಿಸಿರುವಂತೆಯೇ ಅಲ್ಲಿನ ರಾಜಕೀಯ ರಂಗದಲ್ಲಿಯೂ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದಾರೆ.

ರಜನಿಕಾಂತ್ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಥಾಸಂಗಮ (1975), ಸಹೋದರರ ಸವಾಲ್, ಮಾತು ತಪ್ಪದ ಮಗ (1978) - ಇವು ಇವರು ನಟಿಸಿರುವ ಕೆಲವು ಕನ್ನಡ ಚಿತ್ರಗಳು. ಅಪೂರ್ವ ರಾಗಂಗಳ್ (1976), ಅವರ್‍ಗಳ್ (1977), ಪದಿನಾರು ವಯಿದಿನಿಲೆ (1977), ಮುಳ್ಳುಂ ಮಲರುಂ (1978), ಯಜಮಾನ್ (1993), ದಳಪತಿ (1991), ಅರುಣಾಚಲಂ, ಪಡೆಯಪ್ಪ, ಬಾಬಾ, ಚಂದ್ರಮುಖಿ - ಇವು ಇವರು ನಟಿಸಿರುವ ಕೆಲವು ತಮಿಳು ಚಿತ್ರಗಳು.