ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರತಿ

ವಿಕಿಸೋರ್ಸ್ದಿಂದ

ರತಿ - ಭಾರತೀಯ ಪುರಾಣಗಳಲ್ಲಿ ಅಪ್ರತಿಮ ಸುಂದರಿ ಎಂದು ವರ್ಣಿತವಾಗಿರುವ ಕಾಮದೇವನ ಹೆಂಡತಿ. ಕಾಮನಿಗೆ ಸ್ಮರ (ಮನೋವಿಕಾರ ಉಂಟುಮಾಡುವವನು). ಮನ್ಮಥ (ಮತ್ತು ಬರುವ ಹಾಗೆ ಮಾಡುವವನು), ಮದನ (ಸೊಕ್ಕಿನವ), ಅನಂಗ (ದೇಹವಿಲ್ಲದವನು) ಎಂಬ ಅನೇಕ ಹೆಸರುಗಳಿವೆ. ಧರ್ಮಪುರುಷನ ಮೂವರು ಮಕ್ಕಳಲ್ಲಿ ಕಾಮ ಒಬ್ಬ. ಕಾಮನ ಹುಟ್ಟು ಮತ್ತು ರತಿಯ ಜನಕ, ಕಾಮ-ರತಿಯರ ವಿವಾಹ-ಈ ಸಂಗತಿಗಳು ಶಿವಪುರಾಣದಲ್ಲಿ ವರ್ಣಿತವಾಗಿವೆ.

ಬ್ರಹ್ಮನು ಮರೀಚಿ, ಅತ್ರಿ, ಪುಲಹ, ಪುಲಸ್ತ್ಯ, ಅಂಗೀರಸ್ಸು, ಕ್ರತುಮುನಿ, ವಸಿಷ್ಠ, ನಾರದ, ದಕ್ಷ, ಭೃಗು-ಹೀಗೆ ಒಂಬತ್ತು ಜನ ಪ್ರಜಾಪತಿಗಳನ್ನು ಸೃಷ್ಟಿಸಿದ. ಇವರೆಲ್ಲ ಬ್ರಹ್ಮನ ಮಾನಸ ಪುತ್ರರು. ಈ ಸಂದರ್ಭದಲ್ಲಿಯೆ ಬ್ರಹ್ಮನ ಮನಸ್ಸಿನಿಂದ ಓರ್ವ ಸುಂದರ ಸ್ತ್ರೀ ಜನಿಸಿದಳು. ಇವಳಿಗೆ ಸಂಧ್ಯೆ, ಜಯಂತಿಕಾ ಎಂಬ ಹೆಸರುಗಳು ಇವೆ. ಬ್ರಹ್ಮನಿಂದ ಹಿಡಿದು ಎಲ್ಲರೂ ಇವಳ ಸೌಂದರ್ಯಕ್ಕೆ ಮರುಳಾಗಿ ಕಾಮಪರವಶರಾದರು. ಆ ಸಂದರ್ಭದಲ್ಲಿಯೇ ಬ್ರಹ್ಮನ ಮನಸ್ಸಿನಿಂದ ಅತ್ಯಂತ ಸುಂದರನಾದ ಪುರುಷನೊಬ್ಬ ಹುಟ್ಟಿದ. ಅವನದು ಸುವರ್ಣದ ಶರೀರ ಕಾಂತಿ, ಉನ್ನತ ಭುಜ, ಹುಣ್ಣಿಮೆ ಚಂದ್ರನಂಥ ಮುಖ, ಅವನು ಮೀನಧ್ವಜ, ಪಂಚಬಾಣಗಳುಳ್ಳವನು. ಅವನು ಬ್ರಹ್ಮನನ್ನು ಕುರಿತು ತನ್ನ ಕರ್ತವ್ಯಗಳೇನು, ತಾನು ಹುಟ್ಟಿದ್ದೇಕೆ ಎಂದು ಪ್ರಶ್ನಿಸಿದಾಗ ಜಗತ್ತಿನ ಎಲ್ಲ ಮುನುಷ್ಯರು, ಪ್ರಾಣಿಗಳು, ದೇವತೆಗಳು ಎಲ್ಲರ ಮನಸ್ಸಿನಲ್ಲಿಯೂ ಕಾಮವನ್ನು ಹುಟ್ಟಿಸಿ, ಸೃಷ್ಟಿಯನ್ನು ವೃದ್ಧಿಗೊಳಿಸು ಎಂದು ಬ್ರಹ್ಮ ಹೇಳಿದ. ಆಗ ಋಷಿಮುನಿಗಳು ಆ ಸುಂದರ ಪುರುಷನಿಗೆ ಮನ್ಮಥ, ಕಾಮ ಎಂಬ ಹೆಸರುಗಳನ್ನಿಟ್ಟರು.

ಮನ್ಮಥ ತನ್ನ ಪಂಚಬಾಣಗಳನ್ನು ಬ್ರಹ್ಮ ಮತ್ತು ಮರೀಚಿ ಮೊದಲಾದ ಮುನಿಗಳು, ದಕ್ಷ ಮೊದಲಾದ ಪ್ರಜಾಪತಿಗಳ ಮೇಲೆ ಪ್ರಯೋಗಿಸಿದ. ಆ ಸಂದರ್ಭದಲ್ಲಿ `ಸಂಧ್ಯೆಯನ್ನು ಕಂಡು ಎಲ್ಲರೂ ಮೋಹಿತರಾದರು. ಸಂಧ್ಯೆಯೂ ಕಾಮಪರವಶಳಾದಳು. ಸಹೋದರರು ಸಹೋದರಿಯಲ್ಲಿಯೂ ತಂದೆ (ಬ್ರಹ್ಮ) ಮಗಳಲ್ಲಿಯೂ (ಸಂಧ್ಯೆ) ಮೋಹಿತರಾದರು. ಇದರಿಂದ ಭಯಭೀತರಾಗಿ ಅವರು ಶಿವನನ್ನು ಸ್ಮರಿಸಿದರು. ಇದನ್ನು ಕಂಡ ಶಿವ ಹಾಸ್ಯಮಾಡಿದ. ಅವರನ್ನು ಎಚ್ಚರಿಸಿದ. ಕಾಮತಾಪವನ್ನು ನಿಗ್ರಹಿಸಿದ್ದರಿಂದ ಬ್ರಹ್ಮನ ಬೆವರು ಹನಿ ನೆಲಕ್ಕೆ ಬಿತ್ತು. ಆದರಿಂದ ಪಿತೃಗಣಗಳು ಜನಿಸಿದವು. ಪ್ರಜಾಪತಿ ಬ್ರಹ್ಮನ ಶರೀರದಿಂದ ಬಿದ್ದ ಬೆವರ ಹನಿಯಿಂದ ಅಪ್ರತಿಮ ಸುಂದರಿಯಾದ ಒಬ್ಬ ಸ್ತ್ರೀ ಹುಟ್ಟಿದಳು. ಇವಳೇ ರತಿ. ವಿರಕ್ತರಾದ ಮುನಿಗಳನ್ನೂ ಮೋಹಗೊಳಿಸುವಂಥ ಚೆಲವು ಇವಳದ್ದು (ಇವಳ ದೇಹ ಸೌಂದರ್ಯದ ವರ್ಣನೆ ಶಿವಪುರಾಣದಲ್ಲಿ ದೀರ್ಘವಾಗಿ ಬರುತ್ತದೆ).

ರತಿ ಮತ್ತು ಮನ್ಮಥರ ಮದುವೆಯಾಯಿತು. ರತಿಯ ಸೌಂದರ್ಯದಿಂದ ಮನ್ಮಥ ಮೋಹಿತನಾದ. ಗಂಗೆಯನ್ನು ಮಹಾದೇವ ಸ್ವೀಕರಿಸುವಂತೆ ರತಿಯನ್ನು ಮನ್ಮಥ ಸ್ವೀಕರಿಸಿದ. ರತಿ ಸಕಲರನ್ನು ತನ್ನ ಸೌಂದರ್ಯದಿಂದ ಮೋಹಗೊಳಿಸುವಂತಿದ್ದು ತನ್ನ ಶರೀರದ ಕಾಂತಿಯಿಂದ ಹತ್ತೂ ದಿಕ್ಕುಗಳನ್ನು ಬೆಳಗುತ್ತಿದ್ದಳು. ಕಾಮ-ರತಿಯರಿಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸಿದರು. ಮನ್ಮಥನ ಎಲ್ಲ ಕಾರ್ಯಗಳಲ್ಲಿಯೂ ರತಿ ಸಹಯೋಗಿಯಾದಳು.

ತಾರಕಾಸುರನ ಉಪಟಳವನ್ನು ತಡೆಯಲಾರದೆ ದೇವತೆಗಳು ಬ್ರಹ್ಮನ ಮಾತಿನಂತೆ ತಮ್ಮ ಸೈನ್ಯಕ್ಕೆ ತಕ್ಕ ಸೇನಾಪತಿಯನ್ನು ಪಡೆಯಲು, ಧ್ಯಾನಾಸಕ್ತನಾಗಿದ್ದ ಪರಮೇಶ್ವರನ ಮೇಲೆ ಪ್ರಭಾವವನ್ನು ಬೀರಿ ಪಾರ್ವತಿಯನ್ನು ಆತ ವಿವಾಹವಾಗುವಂತೆ ಮಾಡಬೇಕೆಂದು ಮನ್ಮಥನನ್ನು ಪ್ರಾರ್ಥಿಸಿದರು.

ಶಿವ ಪಾರ್ವತಿಯಲ್ಲಿ ಪ್ರವೃತ್ತನಾಗುವಂತೆ ಮಾಡುವ ಪ್ರಯತ್ನದಲ್ಲಿ ಶಿವನ ಹಣೆಗಣ್ಣಿನ ಅಗ್ನಿಜ್ವಾಲೆಯಿಂದ ಕಾಮ ವಿನಾಶಹೊಂದಿದ. ಆಗ ರತಿ ಮನ್ಮಥನಿಗಾಗಿ ವಿಲಾಪಿಸಿದಳು. ಈ ಸಂದರ್ಭ ಶಿವಪುರಾಣದಲ್ಲಿ ವರ್ಣಿತವಾಗಿದೆ. (ಹರಿಹರನ ಗಿರಿಜಾ ಕಲ್ಯಾಣ ಮತ್ತು ಕನಕದಾಸರ ಮೋಹನ ತರಂಗಿಣಿಯಲ್ಲಿ ರತಿವಿಲಾಪ ಹೃದಯಂಗಮವಾಗಿ ವರ್ಣಿತವಾಗಿದೆ).

ಮನ್ಮಥ ಸುಟ್ಟು ಭಸ್ಮವಾದೊಡನೆ, ದುಃಖದಿಂದ ರತಿ ವಿಲಾಪಿಸುತ್ತ ಮೂರ್ಛೆ ಹೋದಳು. ಆಗ ಬ್ರಹ್ಮಾದಿದೇವತೆಗಳು ರತಿಯ ಪರವಾಗಿ ಶಿವನನ್ನು ಪ್ರಾರ್ಥಿಸಿದರು. ಶಿವ ಕರುಣೆಹೊಂದಿ, ಮುಂದೆ ಕೃಷ್ಣನು ರುಕ್ಮಿಣಿಯಲ್ಲಿ ಮನ್ಮಥನನ್ನು ಪಡೆಯುವನೆಂದೂ ಆಗ ಮನ್ಮಥನ ಹೆಸರು ಪ್ರದ್ಯುಮ್ನ ಎಂದಾಗುತ್ತದೆಂದೂ ಶಂಬರಾಸುರನನ್ನು ಕೊಂದು ಕಾಮನು ಪ್ರದ್ಯುಮ್ನನೆಂಬ ಹೆಸರಿನಿಂದ ರತಿಯೊಡನೆ ಸೇರುವನೆಂದೂ ಅಲ್ಲಿಯವರೆಗೆ ಶಂಬರಾಸುರನ ನಗರದಲ್ಲಿಯೇ ರತಿ ಇರಬೇಕೆಂದೂ ತಿಳಿಸಿದ. ಅಲ್ಲದೆ, ಮನ್ಮಥ ಶಿವನ ಗಣವಾಗಿದ್ದು ನಿತ್ಯವೂ ವಿಹರಿಸುವನು ಎಂದೂ ತಿಳಿಸಿದ. ಶಿವ ಹೇಳಿದಂತೆ ರತಿ ಶಂಬರಾಸುರನ ನಗರಕ್ಕೆ ಹೋಗಿ ಕಾಮನನ್ನು ನಿರೀಕ್ಷಿಸುತ್ತ ಇದ್ದಳು. ಮುಂದೆ ಶಿವ ನುಡಿದ ಭವಿಷ್ಯದಂತೆ ಪ್ರದ್ಯುಮ್ನ ಶಂಬರಾಸುರನನ್ನು ಕೊಂದು ರತಿಯನ್ನು ಸೇರಿದ. ಕಾಮದೇವನಿಗೆ ಇಬ್ಬರು ಹೆಂಡಿರು ರತಿ ಮತ್ತು ಪ್ರೀತಿ. (ರತಿ ಎಂಬುದು ಒಬ್ಬ ಅಪ್ಸರೆಯ ಹೆಸರು ಕೂಡ. ಆಕೆ ವಿಭು ಎಂಬುವನ ಪತ್ನಿ). ಹರ್ಷ ಮತ್ತು ಯಶಸ್ ಕಾಮ-ರತಿಯರ ಇಬ್ಬರು ಮಕ್ಕಳು.

ಭಾರತೀಯ ಕಾವ್ಯಮೀಮಾಂಸೆಯಲ್ಲಿ ರತಿ ಎಂಬುದು ಶೃಂಗಾರ ರಸ ಸ್ಥಾಯಿ ಭಾವವಾಗಿ ಚರ್ಚೆಗೊಂಡಿದೆ. ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸೆ ಮತ್ತು ವಿಸ್ಮಯ-ಇವು ಸ್ಥಾಯಿಭಾವಗಳು.

`ರತಿ ಎಂದರೆ ಸ್ತ್ರೀ ಪುರಷರಲ್ಲಿ ಪರಸ್ಪರವಾಗಿರುವ ಪ್ರೀತಿ, ಪುರುಷನ ಹೃದಯದಲ್ಲಿ ಮತ್ತು ಸ್ತ್ರೀ ಹೃದಯದಲ್ಲಿ ರತಿ ಸ್ಥಾಯಿಭಾವವು ವಾಸನಾರೂಪದಲ್ಲಿ ಇರುತ್ತದೆ. ಇದನ್ನು ಜಾಗೃತಗೊಳಿಸುವ ಪುರುಷನೂ ಸ್ತ್ರೀಯೂ ಇದ್ದಾಗ `ರತಿ ಗೋಚರವಾಗುತ್ತದೆ. ಈ ಸ್ಥಾಯಿಭಾವ ಜಾಗೃತವಾಗಿರುವ ಕಾಲದಲ್ಲಿ ಅನೇಕ ಸಂಚಾರೀಭಾವಗಳು ಹುಟ್ಟಿ ಲಯವಾಗುತ್ತವೆ. ಔತ್ಸುಕ್ಯ, ಉತ್ಸಾಹ, ವಿಷಾದ, ಅಸೂಯೆ, ಉತ್ಕಟಪ್ರೇಮ-ಹೀಗೆ ಅಸಂಖ್ಯ ಸಂಚಾರೀಭಾವಗಳು ಬಂದು ಹೋಗುತ್ತವೆ. ಇದಕ್ಕೆಲ್ಲ ಮೂಲ ಕಾರಣ ರತಿಸ್ಥಾಯಿಭಾವವೆ. ಶೃಂಗಾರಕ್ಕೆ ಸ್ಥಾಯಿಭಾವ `ರತಿ, `ರತಿಭಾವ ಸ್ತ್ರೀ ಪುರುಷ. ಪಶುಪಕ್ಷಿಗಳಲ್ಲಿ ಸಮಾನವಾಗಿ ಇರತಕ್ಕದ್ದು. ನವರಸಗಳಲ್ಲಿ `ಶೃಂಗಾರವೇ ಜನಪ್ರಿಯ ರಸವಾಗಿದೆ.