ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಜಶೇಖರ

ವಿಕಿಸೋರ್ಸ್ದಿಂದ

ರಾಜಶೇಖರ:- ಸು. 900. ಸಂಸ್ಕøತ ಸಾಹಿತ್ಯದ ಪ್ರಸಿದ್ಧ ನಾಟಕಕಾರ ಹಾಗೂ ಕಾವ್ಯಮೀಮಾಂಸಕ. ಕಾವ್ಯಮೀಮಾಂಸೆ ಎಂಬ ಶಾಸ್ತ್ರಗ್ರಂಥದ ಕರ್ತೃ. ಆರಂಭದಲ್ಲಿ ಈತನ ಕಾಲದ ಬಗ್ಗೆ ಜರ್ಮನ್ ವಿದ್ವಾಂಸರ ವಿವಿಧ ಅಭಿಪ್ರಾಯಗಳನ್ನು ಮಂಡಿಸಿದ್ದರು. ಸ್ಪೆನ್‍ಕೊನೊ ಮತ್ತು ವಿ. ವಿ. ಮಿರಾಶಿಯವರು ಈತನ ಆಶ್ರಯದಾತರ ಬಗ್ಗೆ ವಿಶೇಷ ಶೋಧನೆಮಾಡಿ ಆ ಮೂಲಕ ಈತನ ಕಾಲವನ್ನು ನಿರ್ಣಯಿಸಿದರು. 907ರಲ್ಲಿ ಕನ್ಯಾಕುಬ್ಜದಲ್ಲಿ ಆಳುತ್ತಿದ್ದ ಮಹೇಂದ್ರಪಾಲನಿಗೆ ತಾನು ಗುರುವೆಂದು ರಾಜಶೇಖರ ಹೇಳಿಕೊಂಡಿದ್ದಾನೆ. ಸು. 950ರಲ್ಲಿದ್ದ ಸೋಮದೇವಸೀರಿ ತನ್ನ `ಯಶಸ್ತಿಲಕ ಚಂಪೂವಿನಲ್ಲಿ ರಾಜಶೇಖರನನ್ನು ಉಲ್ಲೇಖಿಸಿದ್ದಾನೆ. ಆದ್ದರಿಂದ ರಾಜಶೇಖರನ ಕಾಲ ಸು. 900 ಎಂದು ಹೇಳಬಹುದು. ರಾಜಶೇಖರ ತನ್ನ ಕೃತಿಗಳಲ್ಲಿ ತನ್ನ ವಂಶದ ಬಗ್ಗೆ ಪೂರ್ವಿಕರ ಬಗ್ಗೆ ಸ್ವವಿಷಯವಾಗಿ ಹೇಳಿಕೊಂಡಿರುವ ಸಂಗತಿಗಳು ಹೀಗಿವೆ: ಇವನು ಯಾಯಾವರ ವಂಶದವನು. ಮಹಾರಾಷ್ಟ್ರ ಚೂಡಾಮಣಿಯೆಂದು ಖ್ಯಾತನಾಗಿದ್ದ ಆ ಕಾಲ ಜಲದ ಇವನ ಪ್ರಪಿತಾಮಹ. ಸುರಾನಂದ, ತರಲ, ಕವಿರಾಜ ತರುವಾಯದವರು. ದುರ್ಮಕ-ಶೀಲವತಿ ದಂಪತಿಗಳು ಇವನ ತಂದೆ ತಾಯಿಗಳು. ಇವನ ತಂದೆ ದುರ್ಮಕ ಕನೋಜಿನ ಅರಸರಿಗೆ ಮಹಾಮಂತ್ರಿಯಾಗಿದ್ದನೆಂದು ತಿಳಿದುಬಂದಿದೆ. ಆತ ಲಾಟ ದೇಶವನ್ನು ಕೆಲಕಾಲ ಆಳಿದ್ದಿರಬೇಕು. ಶೈವ ಬ್ರಾಹ್ಮಣನಾದ ರಾಜಶೇಖರ ಚೌಹಾಣ (ಚಾಹಮಾನ) ಕುಲದ ಕುಲಪುತ್ರಿ ಅವಂತಿ ಸುಂದರಿಯನ್ನು ವಿವಾಹವಾಗಿದ್ದ. ಆಕೆ ಕವಯಿತ್ರಿಯೂ ಅಲಂಕಾರ ಶಾಸ್ತ್ರತಜ್ಞೆಯೂ ಪ್ರಾಕೃತ ಪಂಡಿತೆಯೂ ಆಗಿದ್ದಳು. ಕರ್ಪೂರಮಂಜರಿ ಎಂಬ ಪ್ರಾಕೃತ ನಾಟಕವನ್ನು ರಾಜಶೇಖರ ಆಕೆಗೆಂದೇ ರಚಿಸಿದ. ರಾಜಶೇಖರನ ಕೃತಿಗಳಲ್ಲಿ ದೊರೆಯುವ ಭೌಗೋಳಿಕ ವರ್ಣನೆಗಳಿಂದ ಈತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶಾಟನ ಮಾಡಿದ್ದನೆಂದು ವಿದ್ವಾಂಸರು ಊಹಿಸಿದ್ದಾರೆ. ಸುಖಲೋಲುಪ ಜೀವನವನ್ನು ನಡೆಸಿದ ಈತ ಕೊನೆಗಾಲದಲ್ಲಿ ವಿರಕ್ತನಾಗಿ ಕಾಶಿಗೆ ಹೋದ. ಕವಿರಾಜ ಎಂಬುದು ಈತನ ನೆಚ್ಚಿನ ಬಿರುದು. ಬಾಲಕವಿ, ಸರ್ವಭಾಷಾ ವಿಚಕ್ಷಣ ಇತರ ಬಿರುದುಗಳು.

ರಾಜಶೇಖರ ಹಲವಾರು ಕೃತಿಗಳನ್ನು ರಚಿಸಿದ್ದಾನೆ. ಉಪಲಬ್ಧವಿರುವುದು ಈತನ ಕಾವ್ಯಮೀಮಾಂಸೆ ಮತ್ತು ನಾಲ್ಕು ನಾಟಕಗಳು ಮಾತ್ರ. ಹರವಿಲಾಸ ಭುವನಕೋಶ ಎಂಬ ಕೃತಿಗಳನ್ನು ಈತ ರಚಿಸಿದ್ದನೆನ್ನಲಾಗಿದೆ. `ಭುವನಕೋಶ ಭೂವಿವರಣೆಯ ಕೃತಿಯೆಂದು ವಿದ್ವಾಂಸರ ಊಹೆ. ತನ್ನ ನಾಟಕಗಳಿಂದ ಉದಾಹರಣ ಪದ್ಯಗಳನ್ನು ಎತ್ತಿಕೊಟ್ಟಿರುವುದರಿಂದ `ಕಾವ್ಯಮೀಮಾಂಸೆ ಈತನ ಉಪಲಬ್ಧ ಕೃತಿಗಳಲ್ಲಿ ಕೊನೆಯದಾಗಿದೆ. ಈತನ ಎಲ್ಲ ನಾಟಕಗಳೂ ರೂಪಕಗಳು.

ಬಾಲರಾಮಾಯಣ ಪ್ರಾಯಶಃ ರಾಜಶೇಖರನ ಮೊದಲ ರಚನೆ. ಇದು 10 ಅಂಕಗಳ ನಾಟಕ. ವಿಶ್ವಾಮಿತ್ರ ರಾಮನನ್ನು ಕರೆತರುವುದರಿಂದ ಪೂರ್ವರಾಮಾಯಣ ಆರಂಭಿಸಿ, ರಾಮಪಟ್ಟಾಭಿಷೇಕದವರೆಗೆ ಕಥೆಯನ್ನು ಸಂಯೋಜಿಸಿದೆ. ಪ್ರತಿಯೊಂದು ಅಂಕವೂ ಇಬ್ಬರ ಸಂವಾದ, ನಿಷ್ಕಂಭಕಗಳಿಂದ ಆರಂಭ. ಸು. 740 ರಷ್ಟು ಪದ್ಯಗಳಿರುವ ಈ ಕೃತಿಯಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚು. ರಾವಣನಿಗೆ ಆರಂಭದಿಂದಲೂ ಸೀತೆಯಲ್ಲಿ ಆಸಕ್ತಿ; ಕೈಕೆ ದಶರಥರು ಇಲ್ಲಿ ನಿರಪರಾಧಿಗಳು. ರಾವಣನಿಂದ `ಸೀತಾಸ್ವಯಂವರ ನಾಟಕ ವೀಕ್ಷಣೆ; `ಯಂತ್ರಸೀತೆಯ ಕಲ್ಪನೆ; ವಿಷ್ಣುಧನುರ್ಭಂಗವಾಡಿದ ಲಕ್ಷ್ಮಣನೊಂದಿಗೆ ಊರ್ಮಿಳೆಯ ವಿವಾಹ ಮುಂತಾದ ನವೀನ ವಸ್ತುಕಲ್ಪನೆಗಳಿವೆ. ವಾಕ್ ಪ್ರೌಢಿಮೆಯ ಈ ನಾಟಕದಲ್ಲಿ ಭವಭೂತಿಯ `ಮಹಾವೀರ ಚರಿತ ದಟ್ಟ ಪ್ರಭಾವವಿದೆ. `ಬಾಲಭಾರತ ನಾಟಕಕ್ಕೆ ಪ್ರಚಂಡ ಪಾಂಡವ ಎಂಬ ಹೆಸರೂ ಇದೆ. ಈಗ ದೊರೆತಿರುವುದು ಇದರ ಎರಡು ಅಂಕಗಳು ಮಾತ್ರ. ನಾಟಕಾರಂಭದಲ್ಲಿ ವ್ಯಾಸ-ವಾಲ್ಮೀಕಿಗಳ ಸಂವಾದವಿದೆ. ಮೊದಲ ಅಂಕದಲ್ಲಿ ದ್ರೌಪದೀ ಸ್ವಯಂವರ, ಎರಡನೆಯ ಅಂಕದಲ್ಲಿದ್ಯೂತ, ದ್ರೌಪದೀ ವಸ್ತ್ರಾಪಹರಣ, ವನಪ್ರಯಾಣಗಳಿವೆ. ಬಾಲರಾಮಾಯಣದ ಸಂವಿಧಾನ ಕೌಶಲವೇ ಈ ನಾಟಕದಲ್ಲಿಯೂ ಕಂಡುಬರುತ್ತದೆ.

`ವಿದ್ದಶಾಲಭಂಜಿಕಾ ನಾಲ್ಕು ಅಂಕಗಳ ನಾಟಕ. ಮೃಗಾಂಕಾವಳಿ ಎಂದು ಹುಡುಗಿಗೆ ಗಂಡುವೇಶ ಹಾಕಿ ಮದುವೆ ಪ್ರಯತ್ನ ಮಾಡುವುದು ನಾಟಕದ ವಸ್ತು ಕಥೆಯಲ್ಲಿ ಚಮತ್ಕಾರವಿದೆ. ವಾಸ್ತವಿಕತೆಯಿಲ್ಲ. ನಾಂದಿ, ವಸ್ತೂಪಕ್ಷೇಪ ಪಾತ್ರಗಳ ಹೆಸರು ಮುಂತಾದವುಗಳಲ್ಲಿ ಶ್ರೀ ಹರ್ಷನ `ಪ್ರಿಯದರ್ಶಿಕಾದ ಅನುಸರಣೆ ಇದೆ. ಆದರೆ ಅದರ ಪರಿಪಾಕವಿಲ್ಲ. `ಕರ್ಪೂರಮಂಜರಿ' ಪ್ರಾಕೃತದಲ್ಲಿರುವ ಪ್ರವೇಶಕ ವಿಷ್ಕಂಭಕಗಳಿಲ್ಲದ ನಾಲ್ಕು ಅಂಕಗಳ ಸಟ್ಟಕ. ಅಂಕಗಳನ್ನು ಜನನಿ ಕಾರಂತಗಳೆಂದು ಕರೆದಿದ್ದಾರೆ. ಚಂಡಪಾಲರಾಜ ಮತ್ತು ಕರ್ಪೂರಮಂಜರಿಯರ ವಿವಾಹ ವೃತ್ತಾಂತ ಇದರ ವಸ್ತು. ಸಿದ್ದಾದೇಶ, ಇಂದ್ರಜಾಲ, ಮೋಹದ ಉಯ್ಯಾಲೋತ್ಸವ, ಕೌಮುದೀ ವಿಹಾರ, ಕಾಮ ತಂತ್ರಗಳಿರುವ ಇದು ಶ್ರೀಹರ್ಷನ `ರತ್ನಾವಳಿಯನ್ನು ಹತ್ತಿರದಿಂದ ಅನುಸರಿಸಿದೆ; ಆದರೆ ಅದರ ಪರಿಪೂರ್ಣತೆಯಿಲ್ಲ. ರಾಜಶೇಖರನ ನಾಟಕಗಳಲ್ಲಿ ಭಾವಸಂಪತ್ತಿಗಿಂತ ಭಾಷಾ ಸಂಪತ್ತು, ಜೀವನ ದರ್ಶನಕ್ಕಿಂತ ಜೀವನವಿನೋದವೇ ಹೆಚ್ಚಾಗಿ ಕಂಡುಬರುತ್ತದೆ. `ಕಾವ್ಯಮೀಮಾಂಸೆ ರಾಜಶೇಖರನಿಗೆ ಖ್ಯಾತಿಯನ್ನು ತಂದುಕೊಟ್ಟಿರುವ ಕೃತಿ. ಅರ್ಥಶಾಸ್ತ್ರದ ಮಾದರಿಯಲ್ಲಿರುವ ಈ ಕೃತಿಯಲ್ಲಿ 18 ಅಧ್ಯಾಯಗಳಿವೆ. ಶಾಸ್ತ್ರ ಸಂಗ್ರಹ, ಶಾಸ್ತ್ರನಿರ್ದೇಶ, ಕಾವ್ಯ ಪುರುಷನ ಉತ್ಪತ್ತಿ ಕುರಿತ ಮೊದಲ ಮೂರು ಅಧ್ಯಾಯಗಳು ಕೃತಿಗೆ ಹಿನ್ನೆಲೆಯಂತಿವೆ. ಪದವಾಕ್ಯ ವಿವೇಕ, ಕಾವ್ಯಪಾಕ ವ್ಯುತ್ಪತ್ತಿ, ಕಾವ್ಯಾರ್ಥ ಕುರಿತ ಅನಂತರದ ಐದು ಅಧ್ಯಾಯಗಳು ಕಾವ್ಯಪರಿಕರ ಕುರಿತಿವೆ; ಹತ್ತನೆಯ ಅಧ್ಯಾಯ ಕವಿಚರ್ಯೆಗೆ ಸಂಬಂಧಿಸಿದ್ದು. ಶಬ್ದಾರ್ಥಹರಣ, ಕವಿಸಮಯ, ದೇಶ ಕಾಲ ವಿಭಾಗ ಕುರಿತವು. ಅನಂತರದ ಎಂಟು ಅಧ್ಯಾಯಗಳು ಸಂಸ್ಕøತ ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಇದೊಂದು ಮಾಹಿತಿಕೋಶ; ಕವಿಗಳ ಕೈಪಿಡಿ, ಕೈದೀವಿಗೆ ಎಂದು ಹೆಸರಾಂತಿರುವ ಇಂಥ ಕೃತಿಯನ್ನು ರಾಜಶೇಖರನ ಕಾಲದವರೆಗೆ ಮತ್ತಾವ ಸಂಸ್ಕøತ ಲೇಖಕರೂ ಮಾಡಿರಲಿಲ್ಲ. ಸಾಹಿತ್ಯ ವಿದ್ಯೆ ಏಳನೆಯ ವೇದಾಂಗವೆಂದಿರುವುದು, ಕಾವ್ಯಪುರುಷನ ಕಲ್ಪನೆ, ವಸ್ತು ಮತ್ತು ವಾಗಾಕೃತಿಗಳ ಸಂಯೋಜನೆ, ಭಾವಯಿತ್ರಿ-ಕಾರಯಿತ್ರಿ ಪ್ರತಿಭಾಭೇದ, ಶಾಸ್ತ್ರಕವಿ-ಕಾವ್ಯಕವಿ-ಉಭಯ ಕವಿಗಳ ವೈಶಿಷ್ಟ್ಯ. ಕವಿಶಿಕ್ಷೆ - ಇವು ರಾಜಶೇಖರನ ಸ್ವಂತ ವಿವೇಚನೆಯ ವಿಚಾರಗಳು. ಕವಿಶಿಕ್ಷೆಯ ಹೊಸ ಹಾದಿಯ ಉಪಕ್ರಮಕ್ಕೆ ಈ 'ಕಾವ್ಯಮೀಮಾಂಸೆಯೇ ಕಾರಣವಾಯಿತು. ವಿಷಯದ ವ್ಯಾಪ್ತಿ, ನಿರೂಪಣೆಯ ನೂತನತೆ, ವಿಷಯ ಸಂಗ್ರಹ ಕೌಶಲ, ಪ್ರಾಯೋಗಿಕ ಕವಿಗಳಿಗೆ ಮಾರ್ಗದರ್ಶಕವಾಗುವ ರಚನಾ ವಿಧಾನಗಳಿಂದ ಇದು ಅಪೂರ್ವ ಕೃತಿಯೆನಿಸಿಕೊಂಡಿದೆ. ರಾಜಶೇಖರ ತನ್ನ ಕೃತಿಗಳಲ್ಲಿ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಮೆಚ್ಚುಮಾತಗಳನ್ನಾಡಿರುವುದು ಇಲ್ಲಿ ಉಲ್ಲೇಖನೀಯ. (ಟಿ.ಎನ್.)