ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಜಾರಾವ್, ಹಾಸನದ

ವಿಕಿಸೋರ್ಸ್ದಿಂದ

ರಾಜಾರಾವ್, ಹಾಸನದ 1908-ಇಂಗ್ಲಿಷ್‍ನಲ್ಲಿ ಸಾಹಿತ್ಯ ರಚನೆ ಮಾಡಿ ಹೆಸರಾದ ಭಾರತೀಯ ಲೇಖಕ. ಶ್ರೇಷ್ಠ ಕಾದಂಬರಿಕಾರ, ಒಳ್ಳೆಯ ಸಣ್ಣಕತೆಗಾರ ಎಂಬ ಮನ್ನಣೆ ಪಡೆದವರು. ಸ್ವಂತಿಕೆ ಹಾಗೂ ವೈಶಿಷ್ಟ್ಯಗಳಿಂದ ಭಾರತೀಯ ಹಾಗೂ ಪಾಶ್ಚಾತ್ಯ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

	ಇವರು ಕರ್ನಾಟಕದ (ಹಳೆಯ ಮೈಸೂರು ಸಂಸ್ಥಾನದ) ಹಾಸನ ಎಂಬ ಸ್ಥಳದಲ್ಲಿ 1908 ನವೆಂಬರ್ 8 ರಂದು ಹುಟ್ಟಿದರು. ತಂದೆ, ಎಚ್.ವಿ. ಕೃಷ್ಣಸ್ವಾಮಿ; ತಾಯಿ ಗೌರಮ್ಮ. ನಾಲ್ಕು ವರ್ಷಗಳ ಮಗುವಾಗಿದ್ದಾಗ ತಾಯಿಯನ್ನು ಕಳೆದುಕೊಂಡರು (1912). ಕನ್ನಡನಾಡಿನಲ್ಲಿ ಹುಟ್ಟಿದರೂ ಬೆಳೆದದ್ದು ಆಗಿನ ಹೈದರಾಬಾದು ಸಂಸ್ಥಾನದ ರಾಜಧಾನಿ ಹೈದರಾಬಾದಿನಲ್ಲಿ. ತಮ್ಮ ಏಳನೆಯ ವಯಸ್ಸಿನಲ್ಲಿ (1915) ಮದ್ರಸಾ-ಎ-ಆಲಿಯಾ ಎಂಬ ಶಾಲೆಯನ್ನು ಸೇರಿ 1925 ರ ವರೆಗೂ ಹೈದರಾಬಾದಿನಲ್ಲೇ ಶಿಕ್ಷಣ ಪಡೆದರು. ಪದವಿಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ (1925) ಒಂದು ವರ್ಷ ಕಾಲ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಏರಿಕ್ ಡಿಕಿನ್ಸನ್ ಎಂಬವರಲ್ಲಿ ಆಂಗ್ಲಭಾಷೆಯನ್ನೂ ಜಾಕ್‍ಹಿಲ್ ಎಂಬವರ ಬಳಿ ಫ್ರೆಂಚ್ ಭಾಷೆಯನ್ನೂ ಅಧ್ಯಯನ ಮಾಡಿದರು. 1927 ರಲ್ಲಿ ಹೈದರಾಬಾದಿಗೆ ಹಿಂತಿರುಗಿ ನಿಜಾಮ್ ಕಾಲೇಜು ಸೇರಿ ಇಂಗ್ಲಿಷ್ ಸಾಹಿತ್ಯ ಮತ್ತು ಇತಿಹಾಸ ವಿಷಯಗಳನ್ನು ತೆಗೆದುಕೊಂಡು ಬಿ.ಎ ಪದವಿ ಪಡೆದರು (1929). ಸರ್ ಪ್ಯಾಟ್ರಿಕ್ ಗೆಡ್ಡೆಸ್ ಅವರ ಆಹ್ವಾನದ ಮೇರೆಗೆ ಹೈದರಾಬಾದು ಸರ್ಕಾರದ ಏಷಿಯಾಟಿಕ್ ವಿದ್ಯಾರ್ಥಿ ವೇತನ ಪಡೆದು ಮೌಂಟ್ ಪೆಲಿಯರ್‍ನ ಕೊಲೇಜ್ ಡೆ ಎಕೋಸದಲ್ಲಿ ಫ್ರೆಂಚ್ ಭಾಷೆ, ಸಾಹಿತ್ಯಗಳ ಅಧ್ಯಯನ ಮತ್ತು ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆ ಮಾಡಲು ಫ್ರಾನ್ಸಿಗೆ ಹೋದರು. ಅನಂತರ ಸಾರಬಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಕ್ಯಜಾಮಿಯೂ ಅವರ ಮಾರ್ಗದರ್ಶನದಲ್ಲಿ ಐರಿಷ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ ಎಂಬ ವಿಷಯದ ಕುರಿತು ಸಂಶೋಧನೆ ವ್ಯಾಸಂಗವನ್ನು ಮುಂದುವರಿಸಿದರು. ಆದರೆ ಸಾಹಿತ್ಯದ ಕಡೆ ಒಲವು ಹೆಚ್ಚಾಗಿ ಬರೆವಣಿಗೆಯಲ್ಲಿ ನಿರತರಾದರು. ಹದಿಹರಯದಲ್ಲೇ ಸಣ್ಣಕತೆಗಳನ್ನು ಬರೆಯಲಾರಂಭಿಸಿದ್ದ ಇವರು 1930ರ ಅನಂತರ ಪ್ರೌಢಕತೆಗಳನ್ನು ಬರೆಯುವಷ್ಟು ಪಳಗಿದರು.

1931ರಲ್ಲಿ ಕ್ಯಾಮಿಲೆ ಮೌಲಿ ಎಂಬ ಫ್ರೆಂಚ್ ಯುವತಿಯನ್ನು ಪ್ರೀತಿಸಿ ಮದುವೆಯಾದರು. ಸಂಸಾರಹೂಡಿ ಫ್ರಾನ್ಸಿನಲ್ಲೇ ಕೆಲವು ಕಾಲ ನೆಲೆಸಿದರೂ ಇವರ ಸೃಜನಶೀಲ ಸಾಹಿತ್ಯದ ಬೇರು ಆಳವಾಗಿ ಬಿಟ್ಟದ್ದು ಪ್ರಾಚೀನ ಸಂಸ್ಕøತಿ, ಆಧ್ಯಾತ್ಮಿಕ ಕತೆಗಳ ಚಿರಂತನ ಸತ್ಯವನ್ನೊಳಗೊಂಡ ಭಾರತೀಯ ಪರಂಪರೆಯಲ್ಲಿ. ಆಲ್ಪ್ಸ್ ಪರ್ವತ ತಪ್ಪಲಿನಲ್ಲಿ ಲಾಮನ್ ಸರೋವರದ ತೀರದಲ್ಲಿ ಒಂದು ಆಶ್ರಮವನ್ನು ಮಾಡಿಕೊಂಡು ಋಷಿಜೀವನವನ್ನು ನಡೆಸುತ್ತಿದ್ದ ರೊಮೇನ್ ರೋಲಾ ಅವರನ್ನು ಸಂದರ್ಶನ ಮಾಡಿ ನಡೆಸಿದ ಸಂಭಾಷಣೆಗಳ ಫಲ ಮಹರ್ಷಿ ರೊಮೇನ್ ರೋಲಾ ಎಂಬ ಕನ್ನಡ ಲೇಖನ 1933ರ ಜಯಕರ್ನಾಟಕದಲ್ಲಿ (ಸಂ.1 ಸಂ. 1) ಪ್ರಕಟವಾಯಿತು. ಪಿಲ್‍ಗ್ರಿಮೇಜ್ ಟು ಯುರೋಪ್ (1931, ಸಂ. 10, ಸಂ 1) ಮತ್ತು ಯುರೋಪ್ ಅಂಡ್ ಅವರ್‍ಸೆಲ್ವ್‍ಸ್ (1931 ಸಂ.10, ಸಂ 3) ಇದೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ರೋಲಾ ಕುರಿತ ಲೇಖನದ ಕೆಳಗೆ ಕರ್ನಾಟಕದ ಮಹಾಜನರಲ್ಲಿ ಪ್ರಾರ್ಥನೆ ಎಂಬ ಶೀರ್ಷಿಕೆಯಡಿ ತಾವು ಪ್ಯಾರಿಸ್‍ನಲ್ಲಿ ನೆಲೆಸಿದ್ದು ಮಯಕ್ರ್ಯೂರೆಡ್ ಫ್ರಾನ್ಸ್, ಅಫೆರ್ ಎತ್ರಾಂಜೆರ್ ಮುಂತಾದ ಕೆಲವು ಫ್ರೆಂಚ್ ಪತ್ರಿಕೆಗಳಿಗೆ ಭಾರತ ಹಾಗೂ ಕರ್ನಾಟಕದ ಬಗ್ಗೆ ಲೇಖನಗಳನ್ನು ಬರೆಯುತ್ತಿರುವುದಾಗಿಯೂ ಅದಕ್ಕೆ ಸಾಮಗ್ರಿ ಒದಗಿಸುವಂತಹ ಕನ್ನಡದ ಪತ್ರಿಕೆ-ಪುಸ್ತಕಗಳನ್ನು ತಮಗೆ ಕಳಿಸಿಕೊಟ್ಟರೆ ಉಪಕಾರವೆಂದೂ ಮನವಿ ಮಾಡಿಕೊಂಡಿದ್ದರು. 1932 ರಿಂದ 37 ರ ವರೆಗೆ ಪ್ಯಾರಿಸ್ ನಗರದಲ್ಲಿದ್ದುಕೊಂಡು ಮಕ್ರ್ಯೂರೆಡ್ ಫ್ರಾನ್ಸ್ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದರು.

	1937 ರಲ್ಲಿ ಭಾರತಕ್ಕೆ ಹಿಂದಿರುಗಿ ತುಂಗಭದ್ರಾ ತೀರದ ಪಂಡಿತ ತಾರಾನಾಥರ ಆಶ್ರಯದಲ್ಲಿ ಉಳಿದರು. ಆಧ್ಯಾತ್ಮಿಕ ಗುರುವಿನ ಮತ್ತು ನೆಲೆಯ ಅನ್ವೇಷಣೆಯಲ್ಲಿದ್ದ ರಾಯರ ಜೀವನದಲ್ಲಿ ಇಂಥ ಪ್ರಯತ್ನಗಳು ಹಲವಾರಿವೆ. 1939 ರಲ್ಲಿ ಪುದುಚೆರಿಗೆ ಹೋಗಿ ಶ್ರೀ ಅರವಿಂದರನ್ನು ಭೆಟ್ಟಿಯಾದರು. ಅನಂತರ ತಿರುವಣ್ಣಾಮಲೆಯ ಶ್ರೀ ರಮಣಾಶ್ರಮದಲ್ಲಿ 1940ರ ವರೆಗೂ ಇದ್ದರು.
	ಸಣ್ಣ ಕತೆಗಳಾದ `ಜವನಿ ಯುರೋಪ್ ಪತ್ರಿಕೆಯಲ್ಲೂ `ಅಕ್ಕಯ್ಯ ಕಾಹಿಯರ್ಸ್ ಡುಸೂಡ್ ಪತ್ರಿಕೆಯಲ್ಲೂ ಪ್ರಕಟವಾದವು. ಎ ಕ್ಲಯಂಟ್ ಎಂಬ ಕತೆಯ ಫ್ರೆಂಚ್ ಭಾಷಾಂತರ ಮಕ್ರ್ಯೂರೆಡ ಫ್ರಾನ್ಸ್‍ನಲ್ಲೂ, ಇನ್ ಖಾನ್‍ದೇಶ್ ಎಂಬ ಕತೆ ಅಡೆಲ್ಫಿನಲ್ಲೂ, (ಲಂಡನ್) ದ ಲಿಟ್ಲ್ ಗ್ರಾಮ್ ಷಾಪ್ ಎಂಬ ಕತೆ ಫ್ರೆಂಚ್‍ಗೆ ಅನುವಾದಗೊಂಡು ವೆಂಡ್ರಿಡಿಯಲ್ಲೂ (1937), 1935 ರಲ್ಲಿ ದ ಟ್ರೂ ಸ್ಟೋರಿ ಆಫ್ ಕನೆಕಪಾಲ್-ದ ಪ್ರೋಟೆಕ್ಟರ್ ಆಫ್ ಗೋಲ್ಡ್ ಎಂಬ ಕಥೆ ಏಷ್ಯದಲ್ಲೂ ಪ್ರಕಟವಾದವು. ಈ ಕತೆಗಳಲ್ಲಿ ಕಾಲ್ಪನಿಕ, ಪಾತ್ರಚಿತ್ರಣ, ಕಥನ ಕೌಶಲ ಚಿಂತನೆಗಳಲ್ಲಿ ಉತ್ತಮ ಕಾದಂಬರಿಕಾರರಾಗುವ ಪೂರ್ವಸೂಚಿಗಳನ್ನು ಗುರುತಿಸಬಹುದು. ಸುತ್ತಮುತ್ತಣ ಸಾಮಾನ್ಯ ಜನಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ, ತೀವ್ರ ಸಂವೇದನೆ, ದುರ್ಬಲವರ್ಗದವರ ಬದುಕಿನ ಬವಣೆಗಳ ಬಗ್ಗೆ ಅನುಕಂಪ ಇತ್ಯಾದಿ ಸಾಮಾಜಿಕ ಕಾಳಜಿಗಳು ಈ ಮೊದಲ ಬರಹಗಳಲ್ಲೇ ಕಾಣಿಸಿಕೊಂಡಿವೆ.
	1938 ರಲ್ಲಿ ಇವರ ಮೊದಲ ಕಾದಂಬರಿ ಕಾಂತಾಪುರ ಮತ್ತು ದ ಕೌ ಆಫ್ ದ ಬ್ಯಾರಿಕೇಡ್ಸ್ ಎಂಬ ಸಣ್ಣ ಕತೆಗಳ ಸಂಕಲನ ಲಂಡನ್‍ನಲ್ಲಿ ಪ್ರಕಟವಾದವು. 1940 ರಲ್ಲಿ ಮುಂಬಯಿಯಲ್ಲಿ ಅಹ್ಮದ್ ಅಲಿಯವರೊಡನೆ ಟುಮಾರೊ ಎಂಬ ನಿಯತಕಾಲಿಕದ ಸಂಪಾದಕರಾಗಿದ್ದರು. ಅದೇ ವರ್ಷ ತಂದೆ ಕೃಷ್ಣಸ್ವಾಮಿಯವರು ನಿಧನರಾದರು. 1942ರಲ್ಲಿ ಮಹಾತ್ಮಗಾಂಧಿಯವರ ಸೇವಾಗ್ರಾಮ ಆಶ್ರಮದಲ್ಲಿ ಆರು ತಿಂಗಳಿದ್ದರು. 1934ರಲ್ಲಿ ಕೇರಳದ ತಿರುವನಂತಪುರದಲ್ಲಿ ಶ್ರೀ ಆತ್ಮಾನಂದ ಗುರುಗಳನ್ನು ಭೆಟ್ಟಿಯಾದರು.
	1944 ರಲ್ಲಿ ಮುಂಬಯಿಯ ಹೊರೈಜನ್ ಎಂಬ ಪತ್ರಿಕೆಯಲ್ಲಿ ನರ್ಸಿಗ ಎಂಬ ಸಣ್ಣಕತೆ ಪ್ರಕಟವಾಯಿತು. 1947 ರಲ್ಲಿ ಕಾಂತಾಪುರ ಕಾದಂಬರಿ ಮತ್ತು ದ ಕೌ ಆಫ್ ದಿ ಬ್ಯಾರಿಕೇಡ್ಸ್ ಎಂಬ ಸಣ್ಣ ಕತೆಗಳ ಸಂಕಲನಗಳ ಭಾರತೀಯ ಆವೃತ್ತಿ ಹೊರಬಂದವು.
	1948 ರಲ್ಲಿ ಫ್ರಾನ್ಸ್‍ಗೆ ಹಿಂತಿರುಗಿದ ಇವರು 1950 ರಲ್ಲಿ ಅಮೆರಿಕಕ್ಕೆ ಹೋದರು. ಎರಡನೆಯ ಕಾದಂಬರಿ ದ ಸರ್ಪೆಂಟ್ ಅಂಡ್ ದ ರೋಪ್ 1960 ರಲ್ಲಿ ಲಂಡನ್‍ನಲ್ಲಿ ಪ್ರಕಟವಾಯಿತು. 1963 ರಲ್ಲಿ ನಿಮ್‍ಕಾ ಮತ್ತು ದ ಪೋಲಿಸ್‍ಮನ್ ಆ್ಯಂಡ್ ದ ರೋಜ್ ಎಂಬ ಕತೆಗಳು ಮುಂಬಯಿಯ ದ ಇಲಸ್ಟ್ರೇಟಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದವು. 

ರಾಜಾರಾಯರ ಸಾಹಿತ್ಯಸೃಷ್ಟಿ ವಿಪುಲವಾದುದಲ್ಲ. ಸಂಪಾದಿತ ಕೃತಿಗಳೂ ಸೇರಿ ಒಟ್ಟು ಹತ್ತು ಕೃತಿಗಳಿಗಿಂತ ಹೆಚ್ಚಿಲ್ಲ. ಆದರೂ ಗುಣಮಟ್ಟದಲ್ಲಿ ನಿಪುಣ ಸಾಹಿತ್ಯ ವಿಮರ್ಶಕರಿಂದ ಶ್ರೇಷ್ಠವೆಂದು ಮನ್ನಣೆ ಪಡೆದಂತಹ ಕೃತಿಗಳಾಗಿವೆ. ಇಂಗ್ಲಿಷ್ ಸಾಹಿತ್ಯಕ್ಕೆ ಗಣನೀಯವಾದ ಕಾಣಿಕೆಗಳಾಗಿವೆ.

	ಇವರ ಕಾಂತಾಪುರ ಅನನುಕರಣೀಯವಾದ ಹೊಸ ಬಗೆಯ ಕೃತಿ ಎನಿಸಿದರೆ, ದ ಸರ್ಪೆಂಟ್ ಅಂಡ್ ದ ರೋಪ್ ಎಂಬ ಕಾದಂಬರಿ ಕೆ. ಆರ್. ಶ್ರೀನಿವಾಸ ಅಯ್ಯಂಗಾರರಂಥ ಉದ್ದಾಮ ವಿಮರ್ಶಕರಿಂದ ಭಾರತೀಯನೊಬ್ಬ ಇಂಗ್ಲಿಷಿನಲ್ಲಿ ಬರೆದ ಅತ್ಯಂತ ಮನೋಜ್ಞವಾದ ಕಾದಂಬರಿ ಎಂಬ ಹೆಗ್ಗಳಿಕೆಯ ಮಾತುಗಳಿಗೆ ಪಾತ್ರವಾಗಿದೆ.
	ಭಾರತೀಯ ಇಂಗ್ಲಿಷ್ ಬರೆಹಗಾರರಲ್ಲಿ ಮುಲ್ಕ್‍ರಾಜ್ ಆನಂದ್, ಆರ್.ಕೆ. ನಾರಾಯಣ್, ರಾಜಾರಾವ್, ಶ್ರೇಷ್ಠ ಸಾಹಿತ್ಯ ತ್ರಯರೆಂದು ಪರಿಗಣಿತರಾಗಿದ್ದಾರೆ. ಸಮಕಾಲೀನರಾಗಿ ಭಾರತೀಯ ಜೀವನ ಹಾಗೂ ಮನೋಧರ್ಮಗಳನ್ನು ಬಿಂಬಿಸುವಂಥ ವಸ್ತುಗಳನ್ನೇ ಆರಿಸಿರುವುದರಲ್ಲಿ ಸಾಮ್ಯವಿರುವ ಕಾರಣ ಲೇಖಕ ತ್ರಿಮೂರ್ತಿಗಳೆನಿಸಿದರೂ ಒಬ್ಬೊಬ್ಬರ ಜೀವನ ದೃಷ್ಟಿ, ಬರೆಹದ ಶೈಲಿ ಬೇರೆಯೇ ಆಗಿರುವುದು ಸಹಜವೇ. ಮೂವರೂ ತಮ್ಮ ತಮ್ಮ ಸ್ವಂತಿಕೆ ಹಾಗೂ ವೈಶಿಷ್ಟ್ಯಗಳನ್ನು ಮೆರೆದಿದ್ದಾರೆ. ಕಲೆಗಾರಿಕೆಯಲ್ಲಿ, ಮೋಹಕವಾದ ಗದ್ಯಶೈಲಿಯಲ್ಲಿ ರಾಜಾರಾಯರು ವಿಶಿಷ್ಟವಾಗಿ ನಿಲ್ಲುತ್ತಾರೆ. ಇವರ ಸಣ್ಣಕತೆಗಳಲ್ಲಿ ಹಾಗೆಯೇ ಕಾದಂಬರಿಗಳಲ್ಲಿ ಗಾಂಧಿಯುಗದ ಮುದ್ರೆ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆ ಕಾಲದ ಭಾರತೀಯ ಬರಹಗಾರರಲ್ಲಿ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗದವರೇ ಇಲ್ಲ. ರಾಜಾರಾಯರಂತೂ ಅವರ ಗಾಢವಾದ ಪ್ರಭಾವಕ್ಕೆ ಒಳಗಾಗಿದ್ದರೆಂಬುದಕ್ಕೆ ಆಗ ಬರೆದ ಸಣ್ಣಕತೆಗಳೂ ಮೊದಲ ಕಾದಂಬರಿಯೂ ಸಾಕ್ಷಿಯಾಗಿವೆ. ಭಾರತದ ಹೊರಗೆ ದೂರದ ಫ್ರಾನ್ಸ್‍ನಲ್ಲಿ ಬಹುಕಾಲ ನೆಲಸಿದರೂ ಸ್ವದೇಶದ ಪ್ರಚಲಿತ ಸಾಮಾಜಿಕ ಪರಿಸ್ಥಿತಿ, ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರವಾದ ಆಸಕ್ತಿ ಇದ್ದುದು ಆ ಕೃತಿಗಳಲ್ಲಿ ಸುವ್ಯಕ್ತವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಣ ಹಾಗೂ ನಿರೂಪಣೆ ಕಥೆಯೊಡನೆ ಹೆಣೆದುಕೊಂಡೇ ಬರುತ್ತದೆ. ಮುಖ್ಯವಾಗಿ ಗಾಂಧೀಜಿಯ ಮತ್ತು ಅವರ ಸತ್ಯಾಗ್ರಹ ಚಳುವಳಿಯ ಪ್ರಭಾವಕ್ಕೊಳಗಾದ ಭಾರತವನ್ನು ಹಳ್ಳಿಗಳ್ಳಿಗೂ ಕಾಣುತ್ತಾರೆ. ಗಾಂಧೀಜಿಯವರ ಅಸಾಧಾರಣ ವ್ಯಕ್ತಿತ್ವದ ಪ್ರಭಾವವನ್ನು ರಾಜಾರಾಯರ ಸೂಕ್ಷ್ಮ ಸಂವೇದನೆ ಗುರುತಿಸುತ್ತದೆ. ಸಮಕಾಲೀನ ರಾಷ್ಟ್ರನಾಯಕನೊಬ್ಬ ಸಾಮಾನ್ಯ ಜನತೆಯ ಕಲ್ಪನೆ ಮತ್ತು ಭಾವನಾ ವಿಶೇಷತೆಯಲ್ಲಿ ಪೌರಾಣಿಕ ವ್ಯಕ್ತಿಯಾಗುವ ಅವತಾರ ಪುರುಷನೆನಿಸಿಕೊಳ್ಳುವ ಪರಿಯನ್ನು ಇವರ ಲೇಖನಿ ಯಥಾವತ್ತಾಗಿ ಹಿಡಿದಿಟ್ಟಿದೆ.
	ಇದು ಮೇಲ್ಮೈಯ ಚಿತ್ರಣವಾದರೆ-ಆಳದಲ್ಲಿ ಪ್ರಾಚೀನ ಭಾರತದ ಸಂಸ್ಕøತಿಯ (ಅಲ್ಲಿ, ಧರ್ಮ, ಆಧ್ಯಾತ್ಮ, ನೈತಿಕ, ಮೌಲ್ಯ, ಸಾಮಾಜಿಕ ಮೌಲ್ಯ ಎಲ್ಲ ಸೇರಿಕೊಳ್ಳುತ್ತವೆ) ಸೆಳೆತವಿರುವುದು ಕಾಣುತ್ತದೆ. ಜನಸಾಮಾನ್ಯರಲ್ಲಿ ಅಕ್ಷರಜ್ಞಾನ ವಿದ್ಯೆ ಇಲ್ಲದಿದ್ದರೂ ಅವರ ದೈನಂದಿನ ಬದುಕಿನಲ್ಲಿ ಸಹಜ ವರ್ತನೆಗಳಲ್ಲಿ ಈ ಸಂಸ್ಕøತಿಯ ಶ್ರೇಷ್ಠ ಮೌಲ್ಯಗಳು ಅಂತರ್ಗತವಾಗಿರುವುದನ್ನು ಇವರ ಲೇಖನಿ ಎತ್ತಿ ತೋರಿಸುತ್ತದೆ; ಮೆಚ್ಚುಗೆಗೆ ಯೋಗ್ಯವೆಂದು ಮನವರಿಕೆ ಮಾಡಿಸುತ್ತದೆ; ಜನಸಾಮಾನ್ಯರ ಬಡತನ ಮತ್ತು ನಾನಾ ಬವಣೆಗಳ ವಾಸ್ತವಚಿತ್ರವನ್ನು ಕೊಡುತ್ತದೆ. ಹೀಗೆಯೆ ಶೋಚನೀಯ ಸ್ಥಿತಿಯಲ್ಲಿರುವ ದೀನ, ದಲಿತರ ಬಗೆಗೆ ಇನ್ನೂ ಹೆಚ್ಚಿನ ಕಾಳಜಿಯನ್ನು ಲೇಖಕರ ಅಂತಃಕರಣ ತೋರುತ್ತದೆ. ಇವರ ಕತೆ ಕಾದಂಬರಿಗಳ ಪ್ರಧಾನವಸ್ತು ಮಧ್ಯಮವರ್ಗದ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಚಿತ್ರಣ ಕೆಳಜಾತಿಯವರಾದರೂ ನಡೆನುಡಿಗಳಲ್ಲಿ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಸಹಜವಾಗಿ ಮೈಗೂಡಿಸಿಕೊಂಡಿರುವ ಉತ್ತಮ ವ್ಯಕ್ತಿಗಳ ನಿದರ್ಶನಗಳನ್ನೂ ಕಥೆಯ ಹಂದರದಲ್ಲಿ ಜೋಡಿಸುತ್ತಾರೆ. 1933 ರಲ್ಲಿ ಬರೆದ `ಜವನಿ ಎಂಬ ಸಣ್ಣಕತೆ ಶೂದ್ರಜಾತಿಯ ಮಧ್ಯಮವಯಸ್ಕಳಾದ ವಿಧವೆ ಜವನಿಯ ಕತೆ. ಬಡವಳಾದರೂ ಹೊಟ್ಟೆಪಾಡಷ್ಟೆ ಅವಳ ಜೀವನವಲ್ಲ. ಸಾಕಷ್ಟು ನೊಂದಿದ್ದರೂ ಅವಳಲ್ಲಿ ಅಚಲವಾದ ದೈವಭಕ್ತಿ, ನಿಷ್ಠೆ, ನಿಯತ್ತು, ಮಾನವೀಯ ಹೃದಯ ಇರುವ ಅವಳು ಉತ್ತಮ ವ್ಯಕ್ತಿಯಾಗಿ ಕಾಣುತ್ತಾಳೆ. ಮನೆಕೆಲಸದವಳಾದರೂ ತಾನು ಕೆಲಸ ಮಾಡುವ ಮನೆಯ ಕುಟುಂಬದ ಬಗ್ಗೆ ಪ್ರೀತಿ ಅಭಿಮಾನ ತೋರುತ್ತ ಒಡತಿಯ ಒಡಹುಟ್ಟಿದ ಸೋದರಿಯಂತೆ ಇದ್ದು ಬಿಡುತ್ತಾಳೆ. ತನ್ನ ಸ್ಥಾನದ ಅರಿವಿದ್ದೂ ವಿನಯ ಸೌಜನ್ಯಗಳಿಂದ ಎಲ್ಲರ ಮನವನ್ನು ಗೆದ್ದು ಶ್ರೇಷ್ಠಳೆನಿಸಿಕೊಳ್ಳುತ್ತಾಳೆ. ಹೀಗೆಯೆ `ಅಕ್ಕಯ್ಯ ಬ್ರಾಹ್ಮಣ ವಿಧವೆಯೊಬ್ಬಳ ಕತೆ. ಎಲೆಮರೆಯ ಕಾಯಿಯಂತೆ ಇದ್ದು ತನ್ನ ವೈಯಕ್ತಿಕ ನೋವು-ಅಳಲುಗಳನ್ನು ನುಂಗಿಕೊಂಡು ಎಲ್ಲರಿಗೂ ನೆರವಾಗುವದರಲ್ಲೇ ಒಳ್ಳೆಯದನ್ನು ಮಾಡುವುದರಲ್ಲೇ ಸಂತೋಷಪಡುವ ಹಸುವಿನಂತಹ ಹೆಣ್ಣೊಬ್ಬಳ ಚಿತ್ರಣ. ಈ ಎರಡು ಕತೆಗಳಲ್ಲಿ ಪ್ರೀತಿ, ಸೇವೆ, ತ್ಯಾಗ, ಸಹನೆಗಳಿಗೆ ಪ್ರತೀಕವಾಗುವ ಆದರ್ಶ ಭಾರತೀಯ ಮಹಿಳೆಯ ಚಿತ್ರವನ್ನು ಮೂಡಿಸಿದ್ದಾರೆ. ಅಜ್ಞಾತ ವ್ಯಕ್ತಿಗಳಾದರೂ ಈ ಇಬ್ಬರೂ ಮಹಾಮಹಿಳೆಯರೆಂದೆನಿಸಿಕೊಳ್ಳಲು ಯೋಗ್ಯತೆ ಉಳ್ಳವರಾಗಿದ್ದಾರೆ.
	`ನರ್ಸಿಗ ಸಣ್ಣಕತೆಯ ಕೇಂದ್ರ ನರ್ಸಿಗ ಎಂಬ ಕುರುಬರ ಹುಡುಗ. ದ ಕೌ ಆಫ್ ದ ಬ್ಯಾರಿಕೇಡ್ಸ್‍ನ ಕೇಂದ್ರಪಾತ್ರ ಗೌರಿ ಎಂಬ ಹಸು (ಇದು ತಾಯಿಯ ಭಾರತಮಾತೆಯ ಸಮೃದ್ಧಿಯ ಸಂಕೇತವಾಗಿ ಬೆಳೆಯುತ್ತ ಹೋಗುವ ರೀತಿ ಅದ್ಭುತವಾದುದು). ನಿಮ್ಯಾ ಕತೆಯ ಕೇಂದ್ರಪಾತ್ರ ರಷ್ಯದ ಒಬ್ಬ ಚೆಲುವೆ. ಒಂದೊಂದು ಸಣ್ಣಕತೆಯೂ ಒಂದೊಂದು ಪಾತ್ರದ ಸುತ್ತ ಹೆಣೆದ ವ್ಯಕ್ತಿಚಿತ್ರ. ನಿಮ್ಯಾ ಜಗತ್ತಿನ ಶ್ರೇಷ್ಠ ಸಣ್ಣಕತೆಗಳ ಸಾಲಿನಲ್ಲಿ ನಿಲ್ಲುವಂಥದು. ಇಲ್ಲಿ ಕತೆಗಾರ ಪಾತ್ರಚಿತ್ರಣದ ವೈಶಿಷ್ಟ್ಯ ಕೇವಲ ಕಲಾಕೌಶಲದಲ್ಲಿ ಹೃದಂಯಗಮ ಎಂಬಷ್ಟರಲ್ಲಿ ನಿಲ್ಲದೆ ಜೀವನದ ಅಂತರ್ದಶನದ ಗಹನತೆಯನ್ನು ಪಡೆಯುತ್ತದೆ.
	ರಾಜಾರಾಯರ ಮಹತ್ತ್ವದ ಕೃತಿಗಳೆಂದರೆ ಇವರ ಕಾದಂಬರಿಗಳು. ಮೊತ್ತ ಮೊದಲ ಕಾದಂಬರಿ ಕಾಂತಾಪುರ, ಭಾಷೆ ಮತ್ತು ನಿರೂಪಣಾ ತಂತ್ರಗಳ ದೃಷ್ಟಿಯಿಂದ ಒಂದು ಹೊಸ ಪ್ರಯೋಗ. ಇದರ ಇಂಗ್ಲಿಷ್ ಕನ್ನಡದ ನುಡಿಗಟ್ಟು ಜಾಯಮಾನ, ಮಾತಾಡುವ ರೀತಿಗಳಿಗೆ ಪದಶಃ ಎನ್ನುವಷ್ಟು ಇಂಗ್ಲಿಷ್ ರೂಪ ಕೊಟ್ಟಿರುವ ಸಂಗತಿ ಓದುಗರನ್ನು ಚಕಿತಗೊಳಿಸುತ್ತದೆ. ಭಾರತೀಯ ಭಾಷೆಗಳಲ್ಲಿ ಕಾಣುವ ಕೆಲವು ಅಭಿವ್ಯಕ್ತಿ ಸಾಮ್ಯಗಳಿಂದಾಗಿ ಇಲ್ಲಿನ ಭಾಷೆಯ ಭಾರತೀಯತೆ ದೇಶದ ಎಲ್ಲ ಓದುಗರಿಗೂ ಕೊಂಚ ಖುಷಿ ಕೊಡಬಹುದಾದರು ಕನ್ನಡಿಗರಿಗೂ ಇದು ಹೆಚ್ಚು ಚೆನ್ನಾಗಿ ಅರ್ಥವಾಗುವುದಲ್ಲದೆ ಹೆಚ್ಚು ಆತ್ಮೀಯವಾಗುತ್ತದೆ.
	ಕಾಂತಾಪುರ ಕನ್ನಡ ನಾಡಿನ ಒಂದು ಹಳ್ಳಿ. ಭಾರತದ ಅದರಲ್ಲೂ ದಕ್ಷಿಣ ಭಾರತದ ಯಾವುದಾರೂ ಹಳ್ಳಿಯಾಗಬಹುದು. ಇದು ಆ ಹಳ್ಳಿಯ ಕತೆ. ಕತೆ ಹೇಳುವವಳು ಅದೇ ಹಳ್ಳಿಯ ಅಜ್ಜಿ-ರಂಗಮ್ಮ. ಕಥಾನಾಯಕ ಮೂರ್ತಿ ಅದೇ ಹಳ್ಳಿಯವನಾದರೂ ಪಟ್ಟಣಕ್ಕೆ ಹೋಗಿ ವಿದ್ಯಾವಂತನಾಗಿ ವಿಜ್ಞಾನ, ದೇಶಸ್ಥಿತಿ, ಗಾಂಧೀವಿಚಾರ ಎಲ್ಲ ತಿಳಿದವನು. ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಆದರ್ಶವಾದಿಯಾಗಿ, ಸ್ವದೇಶಿ ಚಳುವಳಿಯಲ್ಲಿ ಧುಮುಕುವ ಉಜ್ವಲ ದೇಶಪ್ರೇಮಿ. ಹಳ್ಳಿಯ ಮುಗ್ಧರಿಗೆ ಇವನೇ ಗಾಂಧಿ. ದೇವರ ಪ್ರತಿನಿಧಿ. ಗಾಂಧಿ ಶ್ರೀರಾಮನಿದ್ದಂತೆ; ಕೆಂಪುಮೂತಿಯವರ ಸರ್ಕಾರ ರಾವಣನಿದ್ದಂತೆ, ಹರಿಕಥೆಯ ಜಯರಾಮಾಚಾರ್ಯರು ಪುರಾಣ, ಇತಿಹಾಸ, ಪ್ರಚಲಿತ ರಾಜಕೀಯ ಚಟುವಟಿಕೆ ಗಾಂಧೀಜಿ, ಸತ್ಯಾಗ್ರಹ ಎಲ್ಲವನ್ನೂ ತಮ್ಮ ಹರಿಕಥೆಯಲ್ಲಿ ಸೇರಿಸಿಕೊಂಡು ದೇಶ ಭಕ್ತಿಯನ್ನು ಉದ್ದೀಪಿಸುತ್ತಾರೆ. ಕಥೆ ನೆನಪಿನ ಸುರುಳಿ ಬಿಚ್ಚುತ್ತ-ರಂಗಮ್ಮನ ಬಾಯಿಂದ ನಿರೂಪಿತವಾದಂತೆ ಆಷಾಢಭೂತಿ-ನರಿಯುಕ್ತಿಯ ಭಟ್ಟ, ಪೊಲೀಸ್ ಪೇದೆ ಬಡೇಖನ್ ಪಟೇಲ್ ರಂಗೇಗೌಡ, ಮೂರ್ತಿ, ರತ್ನ ಜಯರಾಮಚಾರ್, ರಾಚಣ್ಣ, ಚಂದ್ರಣ್ಣ, ಅಬ್ಬಿ, ಚಂದ್ರಣ್ಣ, ಅಬ್ಬಿ ವೆಂಕಮ್ಮ, ಸೀತಮ್ಮ, ಪುಟ್ಟಮ್ಮ ಹೀಗೆ ಹಳ್ಳಿಯ ಹಲವು ಹನ್ನೊಂದು ಪಾತ್ರಗಳ ಪರಿಚಯವಾಗುತ್ತದೆ. ಹಳ್ಳಿಯ ಸಾಮಾಜಿಕ ಬದುಕಿನ ಕಷ್ಟಸುಖಗಳ ಜೊತೆಗೆ ದಾಸ್ಯ, ಸ್ವಾತಂತ್ರ್ಯ ಹೋರಾಟ ಗಾಂಧೀಜಿಯ ಸತ್ಯ-ಅಹಿಂಸಾ ತತ್ತ್ವಗಳು ಸತ್ಯಾಗ್ರಹ, ಪಾನನಿರೋಧ ಚಳವಳಿ ದಂಡಿಯಾತ್ರೆಯ ಸ್ಫೂರ್ತಿ ಇತ್ಯಾದಿ ರಾಜಕೀಯ ಚಟುವಟಿಕೆಗಳು ಸೇರಿಸಿಕೊಳ್ಳುತ್ತವೆ. ಹಳ್ಳಿ ಕ್ರಮಕ್ರಮೇಣ ಬದಲಾಗುತ್ತ ಸ್ವಾತಂತ್ರ್ಯ ಹೋರಾಟದ ಚಂಡ ಮಾರುತಕ್ಕೆ ಸಿಕ್ಕು ಅಲ್ಲೋಲಕಲ್ಲೋಲವಾಗುತ್ತದೆ. ರಮ್ಯ ಕಥೆಯ ನೆನಪಾಗಿ ಮಾತ್ರ ಉಳಿಯುತ್ತದೆ. ಗ್ರ್ರಾಮದೇವತೆ ಬೆಟ್ಟದ ಕೆಂಚಮ್ಮನ ಬಗ್ಗೆ ಭಕ್ತಿ ಭಾವುಕತೆ ಹಬ್ಬ ಹರಿದಿನ ಜಾತ್ರೆಗಳ ವರ್ಣನೆ ವಿಶೇಷವಾಗಿ ಕಾರ್ತೀಕದ ದೀಪಾವಳಿಯ ವರ್ಣನೆ ಕಾವ್ಯಮಯವಾಗಿದ್ದು ಕಾದಂಬರಿಯ ಒಡಲೊಳಗೆ ಅರ್ಥಪೂರ್ಣವಾಗಿ ಲೀನವಾಗಿದೆ.
	ಕಾಂತಾಪುರ ಜನಪ್ರಿಯವಾಗದೆ ಹೋದರೂ ಓದುಗರು ಮರೆಯಲಾಗದ ಕಾದಂಬರಿ. `ಕಾಂತಾಪುರ ಒಂದು ಅತ್ಯುತ್ತಮ ಕಾದಂಬರಿ ಭಾರತೀಯ ಲೇಖಕನೊಬ್ಬನಿಂದ ಇಂಗ್ಲಿಷ್ ಭಾಷೆಯಲ್ಲಿ ಇದುವರೆಗೂ ಇಂಥ ಕೃತಿ ಬಂದಿಲ್ಲ ಎಂದು ಪ್ರಸಿದ್ಧ ಇಂಗ್ಲಿಷ್ ಲೇಖಕ ಇ. ಎಂ. ಫಾಸ್ರ್ಟರ್ ಅಭಿಪ್ರಾಯಪಟ್ಟಿದ್ದಾರೆ.
	ರಾಜಾರಾಯರ ಎರಡನೆಯ ಕಾದಂಬರಿ `ದ ಸರ್ಪೆಂಟ್ ಆ್ಯಂಡ್ ದ ರೋಪ್ 1960 ರಲ್ಲಿ ಹೊರಬಂದಿತು. ಈ ಕಾದಂಬರಿಯ ಹರಹು ಕಾಂತಾಪುರದ ವಸ್ತುವಿಗಿಂತ ವಿಸ್ತಾರವಾದುದು. ಚಿಂತನೆ, ಆಧ್ಯಾತ್ಮಿಕ ಜಿಜ್ಞಾಸೆ, ಜೀವನದ ಅರ್ಥವನ್ನು ಕಂಡುಕೊಳ್ಳಲು ನಡೆಸುವ ಅನ್ವೇಷಣೆಗಳಿಂದಾಗಿ ಇದಕ್ಕೆ ಹೆಚ್ಚಿನ ತೂಕ, ಗಹನತೆ ಸ್ವಾಭಾವಿಕವಾಗಿಯೇ ಬಂದಿವೆ. ಮಹಾಕಾವ್ಯದ ಗಂಭೀರಗತಿಯಲ್ಲಿ ಕಥೆಸಾಗುತ್ತದೆ. ಸ್ವಾರಸ್ಯವಾದ ಘಟನೆಗಳು ಸಾಕಷ್ಟಿದ್ದರೂ ಕಾದಂಬರಿ ಚಿಂತನಪ್ರಧಾನವಾಗಿದೆ. ಭಾರತದ ಸಂಸ್ಕøತಿಯ ದರ್ಶನವನ್ನಿಲ್ಲಿ ಕಾಣಬಹುದು. ಪ್ರಾಚೀನ ಸಂಸ್ಕøತಜ್ಞಾನಸಂಪದ ಇಲ್ಲಿ ಕಥೆಯಾಗಿದೆ. ಕಾಂತಾಪುರ ರಾಮಾಯಣವಾದರೆ ಇದು ಮಹಾಭಾರತ ಎಂಬ ಅರ್ಥದ ಮಾತುಗಳನ್ನು ವಿಮರ್ಶಕರಾದ ಶ್ರೀನಿವಾಸ ಅಯ್ಯಂಗಾರರು ಬರೆದಿದ್ದಾರೆ.

ಇಲ್ಲಿ ಕಥಾನಾಯಕನಾದ ರಾಮ (ರಾಮಸ್ವಾಮಿ) ಆತ್ಮಕಥನ ರೂಪದಲ್ಲಿ ತನ್ನ ಜೀವನ ಕತೆಯನ್ನು ನಿರೂಪಿಸುತ್ತಾನೆ. ಇವನದು ಭೋಗ ಯೋಗಗಳೆರಡರ ಸಮನ್ವಯ ಮನೋಧರ್ಮ. ಈತ ಸ್ಮಾರ್ತಬ್ರಹ್ಮಣ, ಹೈದರಾಬಾದಿನ ಗಣಿತದ ಪ್ರೊಫೆಸರ್‍ನ ಮಗ. ಉನ್ನತ ವ್ಯಾಸಂಗಕ್ಕಾಗಿ ಯುರೋಪಿಗೆ ಹೋಗುತ್ತಾನೆ. ಫ್ರಾನ್ಸಿನಲ್ಲಿದ್ದೂ ಹಿಂದೂ ವೇದಾಂತದಲ್ಲಿ ಮುಳುಗುತ್ತಾನೆ. ತಾಯಿನುಡಿ ಕನ್ನಡ, ಸಂಸ್ಕøತವೂ ಗೊತ್ತು. ಕಲಿತದ್ದು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು. ತೊಡಗಿದ್ದು ಇತಿಹಾಸ ಸಂಶೋಧನೆಯಲ್ಲಿ. ಪತ್ನಿಯಾಗಿ ಪಡೆದದ್ದು ತನಗಿಂತ 5 ವರ್ಷಕ್ಕೆ ದೊಡ್ಡವಳಾದ ಇತಿಹಾಸದ ಅಧ್ಯಾಪಕಿ ಮ್ಯಾಡಲಿನ್ ಎಂಬಾಕೆಯನ್ನು. ಇವನದು ಪ್ರೇಮವಿವಾಹ. ತಂದೆ ಮೃತ್ಯುಶಯಲ್ಲಿದ್ದಾರೆಂಬ ಸುದ್ದಿ ಬಂದು ಭಾರತಕ್ಕೆ ಹಿಂತಿರುಗುತ್ತಾನೆ. ಅಲ್ಲಿಂದ ಕಾದಂಬರಿ ಆರಂಭವಾಗುತ್ತದೆ. ಮೂರು ವರ್ಷಗಳ ಕಥೆ ಇದರ ವಸ್ತು. ಹುಟ್ಟಿದೂರು ಹರಿಹರಪುರ ಎಂಬ ಹಳ್ಳಿ. ಹೇಮಾವತಿಯ ತೀರ. ಅಲ್ಲಿಯೂ ಬೆಟ್ಟದ ಕೆಂಚಮ್ಮನೇ ಜನತೆಯ ದೇವಿ. ರಕ್ಷಿಸುವ ತಾಯಿ. ಚಿಕ್ಕಂದಿನಲ್ಲೇ ತೀರಿ ಹೋದ ತಾಯಿ ಗೌರಮ್ಮನ ನೆನಪು, ಭಾವನಾಶೀಲ ಸ್ವಭಾವ, ಸೂಕ್ಷ್ಮ ಸಂವೇದನೆ, ಕವಿಹೃದಯ, ಭಕ್ತಿ, ಆಧ್ಯಾತ್ಮ ಮನೋಧರ್ಮ, ನಾಜೂಕುದೇಹ, ಕ್ಷಯ ಎಲ್ಲ ಅನುವಂಶಿಕವಾಗಿ ತಾಯಿಯಿಂದ ಬಂದಂತಹವು. ಶಿಸ್ತು, ಹರಿತವಾದ ಬುದ್ದಿ ವೈಚಾರಿಕತೆ ತಂದೆಯಿಂದ ಬಂದಂಥವು. ಕಾಶಿ, ಪ್ರಯಾಗ, ಗಯಾ, ಹರಿದ್ವಾರ, ಮುಂತಾದ ಪುಣ್ಯಕ್ಷೇತ್ರಗಳ ಸಂದರ್ಶನದಲ್ಲಿ ವೇದ, ಉಪನಿಷತ್ತು, ಬೌದ್ಧತತ್ತ್ವಗಳಲ್ಲಿ ಶಾಂತಿಯನ್ನರಸುತ್ತಾನೆ. ನಾಲ್ಕು ವರ್ಷಕಾಲ ಫ್ರಾನ್ಸಿನಲ್ಲಿದ್ದಾಗ ಭಾರತದ ಆಧ್ಯಾತ್ಮ ಸಂಸ್ಕøತಿಗಳ ಹಿರಿಮೆ ಅರಿವಾಗುತ್ತದೆ. ತಾನು ಬ್ರಾಹ್ಮಣನಾಗಿದ್ದು ಮದುವೆಯಾದುದು ಕ್ಯಾಥೊಲಿಕ್ ಧರ್ಮದವಳನ್ನು. ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕøತಿಗಳ ಘರ್ಷಣೆ ಆರಂಭವಾಗುವುದೇ ಇಲ್ಲಿ. ಎರಡು ವಿಭಿನ್ನ ಸಂಸ್ಕøತಿಗಳ ಹಾಗೂ ಮನೋಧರ್ಮಗಳ ಸಮನ್ವಯ ಕಷ್ಟ ಮಾತ್ರವಲ್ಲ ಸಾಧ್ಯವಲ್ಲದ ಆದರ್ಶವೆಂದು ತಿಳಿಯುತ್ತದೆ. ದಾಂಪತ್ಯ ಸಾಮರಸ್ಯವಿರುವುದಿಲ್ಲ. ರಾಮ ಹೆಚ್ಚು ಹೆಚ್ಚು ಅಂತರ್ಮುಖಿಯಾಗುತ್ತಾನೆ. ಪರಸತಿಯರಾದ ಸಾವಿತ್ರಿ, ಲಕ್ಷ್ಮಿಯರೂ ಇವನ ಹೃದಯದಲ್ಲಿ ಬಂದು ಹೋಗುತ್ತಾರೆ. ತಂಗಿಯ ಮದುವೆಗೆಂದು ಭಾರತಕ್ಕೆ ಎರಡನೆಯ ಬಾರಿ ಬಂದ ರಾಮ ಆಧ್ಯಾತ್ಮಪಥದಲ್ಲಿ ನಡೆಸಬಲ್ಲ ಗುರುವನ್ನರಸುತ್ತ ಅಲೆಯುತ್ತಾನೆ. ಯಾವುದು ನಿತ್ಯ ಯಾವುದು ಅನಿತ್ಯ, ಯಾವುದು ಸತ್ಯ (ಸರ್ಪ), ಯಾವುದು ಮಿಥ್ಯ (ಹಗ್ಗ) ಎಂಬ ಸಾರಾಸಾರ ವಿವೇಚನೆಯೇ ಜ್ಞಾನ ಎಂಬ ಬೋಧೆಯಾಗುತ್ತದೆ. ಕಡೆಗೆ ಅಹಂ ನಷ್ಟದಲ್ಲಿ ವೈಚಾರಿಕ ಬಿಡುಗಡೆಯನ್ನು ಕಾಣುತ್ತಾನೆ.

1965ರಲ್ಲಿ ಬಂದ ಮೂರನೆಯ ಕಾದಂಬರಿ `ದ ಕ್ಯಾಟ್ ಆ್ಯಂಡ್ ಷೇಕ್ಸ್‍ಪಿಯರ್ ಫ್ರೆಂಚ್ ನಾವೆಲಾ ಮಾದರಿಯ ಕಿರು ಕಾದಂಬರಿ. 1959ರಲ್ಲಿ ಪ್ರಕಟವಾಗಿದ್ದ ಒಂದು ಸಣ್ಣಕತೆಯ ವಿಸ್ತøತರೂಪ. 1971ರಲ್ಲಿ ಇದರ ಭಾರತೀಯ ಆವೃತ್ತಿ ಬಂದಿತು. ಇದರ ನಾಯಕ ಕ್ಲಾರ್ಕ್ ರಾಮಕೃಷ್ಣಪ್ಪ ತನ್ನ ಕತೆಯನ್ನು ತಾನೆ ನಿರೂಪಿಸುತ್ತಾನೆ. ಕತೆ ನೆಪಮಾತ್ರದ್ದು. ವಿಚಾರವೇ ಪ್ರಧಾನ. ರಾಜಾರಾಯರ ವಿಚಾರಧಾರೆ ಇಲ್ಲಿ ಮಾತು ಚರ್ಚೆಗಳಲ್ಲಿ ಹರಿಯುತ್ತದೆ-ಮಾತು, ಮಾತು, ಮಾತು `ಎಂಬಷ್ಟು ಅತಿಯಾಗಿ ಬದುಕು, ವಿವಿಧ ಸಂಬಂಧಗಳು, ಮಾಯೆ, ಆತ್ಮಚಿಂತನೆ ಆತ್ಮದರ್ಶನ ಮತ್ತು ನಿವೃತ್ತಿ ಇವೇ ಈ ಚಿಂತನದ ವಿಷಯಗಳು. ಈ ಮೂರೂ ಕಾದಂಬರಿಗಳನ್ನು ಒಂದು ಚಿಂತನೆಯ ಮೂರು ಮುಖದ ಕಾದಂಬರಿತ್ರಯ ಎನ್ನಬಹುದು.

`ಕಾಮ್ರೆಡ್ ಕಿರಿಲೊವ್ ನಾವೆಲಾ ಮಾದರಿಯ ಮತ್ತೊಂದು ಕಿರು ಕಾದಂಬರಿ. ಇಲ್ಲಿಯೂ ವಿಷಮ ದಾಂಪತ್ಯದ ಚಿತ್ರಣವಿದೆ. ಕಿರಿಲೊವ್ ಮತ್ತು ಐರಿನ್‍ರದು ಇಜ್ಜೋಡು. ಸರ್ಪೆಂಟ್ ಆ್ಯಂಡ್ ದಿ ರೋಪ್‍ನ ಮ್ಯಾಡಲಿನ್‍ಳಂತೆ ಬರೀನ್ ಸಹ ತನ್ನ ಗಂಡನನ್ನು ತುಂಬ ಪ್ರೀತಿಸುತ್ತಾಳೆ. ಆದರೆ ತನ್ನ ಗಂಡ ಭಾರತೀಯಳನ್ನು ಮದುವೆಯಾದರೆ ಸಂತೋಷವಾಗಿರಬಹುದೆಂದು ಭಾವಿಸಿ ರಾಮನಿಗೆ ವಿವಾಹಮುಕ್ತಿಯನ್ನು ಕೊಡಲು ಮ್ಯಾಡಲಿನ್ ತೀರ್ಮಾನಿಸುತ್ತಾಳೆ. ಆದರೆ ಕಿರಿಲೊವ್‍ನ ದ್ವಂದ್ವ ಭಾವವನ್ನು ಐರಿನ್ ಅನುಮೋದಿಸುವುದಿಲ್ಲ. ಅವನನ್ನು ತಿದ್ದುವುದು ಸಾಧ್ಯವಿಲ್ಲವೆಂದು ಅರಿಯುತ್ತಾಳೆ. ತನ್ನ ಮಗನಾದರೂ ರಾಷ್ಟ್ರೀಯ ಗೋಡೆಗಳನ್ನೊಡೆದು ಸಮಸ್ತ ಮಾನವಕುಲವನ್ನು ಪ್ರೀತಿಸುವನೆಂದು ಆಶಿಸುತ್ತಾಳೆ.

ಐದನೆಯ ಕಾದಂಬರಿ `ದ ಚೆಸ್‍ಮಾಸ್ಟರ್ ಆ್ಯಂಡ್ ಹಿಸ್ ಮೂವ್ಸ್ 1988ರಲ್ಲಿ ಪ್ರಕಟವಾಗಿದೆ. ಇದು ತಮ್ಮ ಇದುವರೆಗಿನ ಕೃತಿಗಳಿಗಿಂತ ತುಂಬ ಉತ್ತಮವಾದ ಬರೆವಣಿಗೆಯೆಂದೂ ತಾವು ಅಭಿವ್ಯಕ್ತಿಸಲಾಶಿಸುವ ಜೀವನ ದರ್ಶನವನ್ನು `ಸಂವಹನ ಮಾಡುವಲ್ಲಿ ಇದು ಸಫಲವಾಗಿದೆಯೆಂದೂ ಲೇಖಕರು ಒಂದೆಡೆ ಹೇಳಿಕೊಂಡಿದ್ದಾರೆ.

ರಾಜಾರಾಯರು ತಮ್ಮ ಎಲ್ಲ ಕತೆ, ಕಾದಂಬರಿಗಳಲ್ಲೂ ಆತ್ಮಕಥನ ತಂತ್ರವನ್ನು ಬಳಸಿದ್ದಾರೆ. ಅಂತರಂಗದ ಭಾವನೆಗಳನ್ನು ವಿಚಾರಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಆತ್ಮಕಥನದಲ್ಲಿ ಮಾತ್ರ ಸಾಧ್ಯ ಎಂಬುದು ಇವರ ಅಭಿಮತ ಇರಬಹುದು. ಆತ್ಮಕಥನ ರೂಪದ ನಿರೂಪಣೆಯಲ್ಲಿಯೂ ಯಾವ ಅತಿಶಯೋಕ್ತಿ ಆತ್ಮ ಪ್ರಶಂಸೆ ಆತ್ಮನಿಂದೆಗಳಿಗೂ ಅವಕಾಶವೀಯದ ಸಂಯಮವನ್ನು ತೋರಿರುವುದು ಪ್ರಶಂಸಾರ್ಹವಾದುದು. ಸೂಕ್ಷ್ಮವಾದ ಬಹಿರಂಗಾವಲೋಕನ ಇವರಿಗೆ ಸಾಧ್ಯವಾದರೂ ಇವರದು ಅಂತರ್ಮುಖತೆಯ ಮನೋಧರ್ಮ. ಆಳವಾಗಿ ಚಿಂತನೆ ಮಾಡುತ್ತ ಸತ್ಯವನ್ನು ಅರಸುವ ಸ್ವಭಾವ. ಒಂದು ರೀತಿಯಲ್ಲಿ ತಮ್ಮ ಕಥಾನಾಯಕರ ಆತ್ಮಕಥನ ಆತ್ಮಗತವಾಗಿಯೇ ಹೇಳಿಕೊಂಡದ್ದು ಎನ್ನುತ್ತಾರೆ ರಾಜಾರಾಯರು. ಇವರ ದೃಷ್ಟಿಯಲ್ಲಿ ತಮ್ಮ ಸಾಹಿತ್ಯರಚನೆ ವೃತ್ತಿಯೂ ಅಲ್ಲ. ಹವಾಸ್ಯವೂ ಅಲ್ಲ. ಅದೊಂದು ಆಧ್ಯಾತ್ಮಸಾಧನೆ.

ರಾಜಾರಾಯರ ಕೃತಿಗಳು ಭಾಷಾಂತರವಾಗಿರುವುದು ಕಡಿಮೆ. ಫ್ರೆಂಚ್‍ಗೆ ಕೆಲವು ಕತೆಗಳು ಅನುವಾದಗೊಂಡಿವೆ. ಕೆಲವು ಕತೆಗಳು ಈಚೆಗೆ ಹಿಂದಿಗೆ ಭಾಷಾಂತರಗೊಂಡು ರಾಜಾರಾವ್ ಕಿ ಕಹಾನಿಯಾ ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಕಾಂತಾಪುರ ಕನ್ನಡಕ್ಕೂ ಅನುವಾದಗೊಂಡಿದೆ.

ರಾಜಾರಾಯರ ಸಾಹಿತ್ಯ ಸಾಧನೆಗಾಗಿ ಅನೇಕ ಗೌರವಗಳು ಲಭ್ಯವಾಗಿವೆ. 1964ರಲ್ಲಿ ದಿ ಸರ್ಪೆಂಟ್ ಆ್ಯಂಡ್ ದಿ ರೋಪ್ ಎಂಬ ಕೃತಿಗಾಗಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. 1969ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1972ರಲ್ಲಿ ವಾಷಿಂಗ್ಟ್‍ನ್ ಡಿ.ಸಿ.ಯ ವುಡ್ರೋ ವಿಲ್ಸನ್ ಅಂತಾರಾಷ್ಟ್ರೀಯ ಕೇಂದ್ರದ ಫೆಲೊ ಆಗಿ ಇವರು ಆಯ್ಕೆಗೊಂಡರು. 1980ರಲ್ಲಿ ಆಸ್ಟಿನ್‍ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರೊಫೆಸರ್ ಎಮಿರಿಟಸ್ ಆಗಿ ನೇಮಕಗೊಂಡರು. 1984ರಲ್ಲಿ ಅಮೆರಿಕದ ಮಾಡರ್ನ್ ಲ್ಯಾಂಗ್ವೇಜ್ ಅಸೋಸಿಯೇಷನ್‍ನ ಗೌರವ ಫೆಲೊ ಆಗಿ ಆಯ್ಕೆಯಾದರು. 1988ರಲ್ಲಿ ಓಕ್ಲೊಹಾಮ ವಿಶ್ವವಿದ್ಯಾಲಯದಲ್ಲಿ ನಾಯ್‍ಸ್ಟಾಟ್ ಅಂತಾರಾಷ್ಟ್ರೀಯ ಸಾಹಿತ್ಯ ಬಹುಮಾನವನ್ನು ಪಡೆದರು. 1965ರಿಂದ ಅನೇಕ ವರ್ಷಗಳ ಕಾಲ ಆಸ್ಟಿನ್‍ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. (ಕೆ.ಬಿ.ಪಿ.)

ಕಾಂತಾಪುರಕ್ಕೆ ರಾಜರಾಯರು ಬರೆದ ಮುನ್ನುಡಿಯು ಈಗ ಪ್ರಸಿದ್ಧ ಬರಹವಾಗಿದೆ. ಅದರಲ್ಲಿ ಅವರು ಹೀಗೆಂದಿದ್ದಾರೆ; ನಾವು ಇಂಗ್ಲಿಷರಂತೆ ಬರೆಯಲಾರೆವು, ಬರೆಯಲೂ ಬಾರದು. “ನಾವು ಭಾರತೀಯರಂತೆ ಮಾತ್ರ ಬರೆಯಬಲ್ಲೆವು. ವಿಶಾಲ ಜಗತ್ತನ್ನು ನಮ್ಮ ಭಾಗವಾಗಿ ಕಾಣುವಂತೆ ನಾವು ಬೆಳೆದಿದ್ದೇವೆ. ಐರಿಷ್ ಅಥವಾ ಅಮೆರಿಕನ್ ಉಪಭಾಷೆಯಂತೆ ನಮ್ಮದೂ ವಿಶಿಷ್ಟವಾದ, ವರ್ಣರಂಜಿತವಾಗುವಂತೆ ನಮ್ಮ ಅಭಿವ್ಯಕ್ತಿಯ ವಿಧಾನ ಇರಬೇಕು. ಕಾಲ ಕಳೆದಂತೆ ಅದಕ್ಕೆ ಸಮರ್ಥನೆ ದೊರೆಯುತ್ತದೆ.”

ದಿ ಸರ್ಪೆಂಟ್ ಅಂಡ್ ದಿ ರೋಪ್ ನಿಂದ ಪ್ರಾರಂಭವಾಗಿ ರಾಜಾರಾಯರ ಎಲ್ಲ ಕಾದಂಬರಿಗಳಲ್ಲಿಯೂ ಭಾರತೀಯ ಆಧ್ಯಾತ್ಮಿಕ ಚಿಂತನೆಯ ಅಡಿಪಾಯ ಸ್ಪಷ್ಟವಾಗಿದೆ. ದ ಸರ್ಪೆಂಟ್ ಅಂಡ್ ದ ರೋಪ್ ನ ಹೆಸರು ಶಂಕರಾಚಾರ್ಯರಿಂದ ಬಂದಿದ್ದು. ನಾವು ಎಷ್ಟೆಷ್ಟು ಭಾರಿ ಹಗ್ಗವನ್ನು ಸರ್ಪ ಎಂದು ಭ್ರಮಿಸುತ್ತೇವೆ. ವಾಸ್ತವ ಯಾವುದು, ಭ್ರಮೆ ಯಾವುದು? ಪ್ರೇಮ ಮದುವೆಗಳ ವಸ್ತುವಿನಿಂದ ಕಾದಂಬರಿಯು ವಿಭಿನ್ನ ಸಂಸ್ಕøತಿಗಳ ಮುಖಾಮುಖಿ ಮತ್ತು ವಾಸ್ತವ ಭ್ರಾಂತಿಗಳ ವಿಶ್ಲೇಷಣೆ ಇವುಗಳಿಗೆ ವಿಸ್ತಾರಗೊಳ್ಳುತ್ತದೆ. ಹಾಸ್ಯ ತುಂಬಿ ತುಳುಕುವ ದ ಕ್ಯಾಟ್ ಅಂಡ್ ಷೇಕ್ಸ್‍ಪಿಯರ್ ನಲ್ಲಿಯೂ ವೇದಾಂತದ ಆಸ್ತಿಭಾರವಿದೆ. ಈ ಕಾದಂಬರಿಗೆ ಒಂದು ಕಲಾಲಿಪಿ ಇದೆ. (ಆತ್ಮಾನಂದ ಗುರುಗಳ ಮಾತು): ಹೂವಿನ ಸೌಂದರ್ಯವಿದೆ, ಪರಿಮಳವಿದೆ, ಆದರೆ ನಿಜವಾಗಿ ಹೂವು ಏನು ಎಂದು ತಿಳಿದವರು ಯಾರು?

ರಾಜಾರಾಯರ ಸಾಹಿತ್ಯಕ್ಕೆ ಮುಲ್ಕ್‍ರಾಜ್ ಆನಂದರ ಮತ್ತು ಆರ್.ಪಿ. ನಾರಾಯಣರ ಸಾಮಾಜಿಕ ಆಯಾಮವಿಲ್ಲ. ಆದರೆ ಭಾರತೀಯ ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿ ಹೋದ ಮನಸ್ಸು ಅವರ ಸಾಹಿತ್ಯವನ್ನು ಸೃಷ್ಟಿಸಿದೆ. ತಮ್ಮ ಇಬ್ಬರು ಸಮಕಾಲೀನ ಕಾದಂಬರಿಕಾರರಿಗಿಂತ ವಿಪುಲವಾಗಿ, ವಿಶಿಷ್ಟವಾಗಿ ಅವರು ಸಂಕೇತಗಳನ್ನು ಬಳಸಿಕೊಳ್ಳತ್ತಾರೆ. ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಅವರದೊಂದು ವಿಶಿಷ್ಟ ದನಿ, ವಿಶಿಷ್ಟ ದರ್ಶನ.

ಪರಿಷ್ಕರಣೆ ಎಲ್. ಎಸ್. ಶೇಷಗಿರಿರಾವ್