ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮಚಂದ್ರನ್, ಎಂ ಜಿ

ವಿಕಿಸೋರ್ಸ್ದಿಂದ

ರಾಮಚಂದ್ರನ್, ಎಂ ಜಿ 1912 - 87. ಎಂಜಿಆರ್ ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ತಮಿಳು ಚಿತ್ರರಂಗದ ಮೇರುನಟ ಮತ್ತು ಜನಪ್ರಿಯ ರಾಜಕಾರಣಿ. 1912ರಲ್ಲಿ ಶ್ರೀಲಂಕಾದ ಕಂದಿ ಎಂಬಲ್ಲಿ ಹುಟ್ಟಿದರು. ಇವರು ಹುಟ್ಟಿದೊಡನೆಯೇ ತಂದೆ ನಿಧನಹೊಂದಿದರೆಂದು ತಿಳಿದುಬರುತ್ತೆ. ತಂದೆಯ ನಿಧನದ ಅನಂತರದಲ್ಲಿ ಇಡೀ ಸಂಸಾರ ತಮಿಳುನಾಡಿಗೆ ಬಂದು ನೆಲಸಿ, ಬಹಳ ನಿರ್ಗತಿಕರಾಗಿ ಬದುಕಬೇಕಾಯಿತು. ಆ ಕಾಲದಲ್ಲಿ ವರ ಮೂರು ಜನ ರಕ್ತ ಸಂಬಂಧಿಗಳು ತೀರಿಕೊಂಡರು. ಇವರು ಆರು ವರ್ಷದ ಬಾಲಕನಾಗಿದ್ದಾಗಲೇ ನಾಟಕದ ತಂಡದೊಂದಿಗೆ ಸೇರಿಕೊಂಡರು. ಮದುರೈ ಒರಿಜಿನಲ್ ಬಾಯ್ಸ್ ಎಂಬ ಸಂಸ್ಥೆ ಸೇರಿ ಅಲ್ಲಿ ನಾಟ್ಯ, ಅಭಿನಯ ಮತ್ತು ಕತ್ತಿವರಸೆಗಳನ್ನು ಕಲಿತರು.

ಸತಿ ಲೀಲಾವತಿ (1936) ಚಿತ್ರದ ಮೂಲಕ ನಟರಾದರು. ಆದರೆ ಎ. ಎಸ್. ಎ. ಸ್ವಾಮಿಯವರ ರಾಜಕುಮಾರಿ (1947) ಚಿತ್ರದಿಂದ ಮುಖ್ಯಪಾತ್ರಧಾರಿಯಾಗಿ ನಟನೆಯನ್ನು ವೃತ್ತಿಯಾಗಿ ಅವಲಂಬಿಸಿದರು. 1953ರಲ್ಲಿ ಡಿಎಂಕೆ ಪಕ್ಷದ ಸದಸ್ಯರಾದರು, ಚಲನಚಿತ್ರದಲ್ಲಿನ ಇವರ ಪಾತ್ರಗಳು ರಾಜಕಾರಣಿಯಾಗಲು ಇವರನ್ನು ಪ್ರೇರೇಪಿಸಿದುವು. ಇವರು ನಟಿಸಿದ ಟಿ. ಆರ್. ಸುಂದರಂ. ಯೋಗಾನಂದ ಮತ್ತು ಪಿ. ನೀಲಕಂಠನ್ ಅವರ ನಿರ್ದೇಶನದ ಚಿತ್ರಗಳು ಜನರ ಮೆಚ್ಚುಗೆಯನ್ನು ಗಳಿಸಿದ್ದುವು. 60ರ ದಶಕದ ಅನಂತರದಲ್ಲಿನ ಇವರ ಚಿತ್ರಗಳು ವಾಸ್ತವಕ್ಕೆ ಹತ್ತಿರವಾಗಿದ್ದ ಜನ ಬಹುವಾಗಿ ಮೆಚ್ಚಿಕೊಂಡರು. ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದಲೂ ಇವರ ಚಿತ್ರಗಳು ಯಶ ಕಂಡವು. ಇವರು ಕೆಳವರ್ಗದ ಜನರ ನೋವುನಲಿವುಗಳನ್ನು ಬೆಳ್ಳ ತೆರೆಯ ಮೇಲೆ ಸಮರ್ಥವಾಗಿ ಅಭಿವ್ಯಕ್ತಿಸಿದರು. ಅದರಲ್ಲೂ ಇವರ ಕೂಲಿಕಾರ, ಮೀನುಗಾರ, ರಿಕ್ಷಾಚಾಲಕ, ಟ್ಯಾಕ್ಸಿಚಾಲಕ ಪಾತ್ರಗಳು ಇವರನ್ನು ಕೆಳವರ್ಗದ ಜನ ತಮ್ಮವನೆಂದೇ ಆರಾಧಿಸಲು ಮುಖ್ಯ ಕಾರಣವಾಯಿತು.

1967ರಲ್ಲಿ ಮದರಾಸಿನ ವಿಧಾನಸಭೆಯ ಸದಸ್ಯರಾದರು. ದ್ರಾವಿಡ ಕಜಗಂ ಪಕ್ಷದ ರೂವಾರಿ ಇ. ವಿ. ರಾಮಸ್ವಾಮಿ ನಾಯಕರ್ ಅವರ ನೇರ ಪ್ರಭಾವಕ್ಕೆ ಒಳಗಾದ ಇವರು 1970ರಲ್ಲಿ ಡಿಎಂಕೆ ಪಕ್ಷದ ಖಜಾಂಚಿಯಾದರು. 1969ರಲ್ಲಿ ಡಿಎಂಕೆ ಸ್ಥಾಪಕ ಅಣ್ಣಾದೊರೈ ನಿಧನ ಹೊಂದಿದ್ದರು. ಈ ಸಂಧರ್ಭದಲ್ಲಿ ಪಕ್ಷದಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಹೊಸ ಪಕ್ಷ ರೂಪು ತಳೆಯುವಂತಾಯಿತು. ಎಂಜಿಆರ್ ಅವರು ಅಣ್ಣಾದೊರೈ ಅವರಲ್ಲಿ ಇಟ್ಟಿದ್ದ ನಿಷ್ಠೆಯಿಂದಾಗಿ ಹೊಸ ಪಕ್ಷಕ್ಕೆ ಅಣ್ಣಾ ಡಿಎಂಕೆ. ಎಂದು ಹೆಸರಿಟ್ಟರು. ಬಳಿಕ 1977ರಲ್ಲಿ ಅಣ್ಣಾ ಡಿಎಂಕೆ ಪಕ್ಷಕ್ಕೆ ಆಲ್ ಇಂಡಿಯ ಅಣ್ಣಾ ದ್ರಾವಿಡ ಮುನ್ನೇರ ಕಜಗಂ (ಎಐಎಡಿಎಂಕೆ) ಎಂದು ಮರುನಾಮಕರಣ ಮಾಡಿದರು. ಆ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್ ರಾಜ್ಯದಲ್ಲಿ ಪ್ರಬಲ ಪಕ್ಷವಾಗಿತ್ತು. ಎಂಜಿಆರ್ ಪಕ್ಷ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಸೋಲಿಸಿತು. 1977ರಲ್ಲಿ ಇವರು ತಮಿಳುನಾಡಿನ ಮುಖ್ಯಮಂತ್ರಿಯಾದರು. ಇವರು ತಮ್ಮ ಜೀವಿತದ ಕೊನೆಯ ಕ್ಷಣದವರೆಗೂ ತಮಿಳುನಾಡಿನ ಅಚ್ಚುಮೆಚ್ಚಿನ ರಾಜಕಾರಣಿಯಾಗಿದ್ದರು. ಇದರಿಂದಾಗಿ ಇವರ ವಿರುದ್ಧ ಯಾವುದೇ ವಿರೋಧ ಪಕ್ಷ ತಲೆಯೆತ್ತಲು ಸಾಧ್ಯವಾಗಿರಲಿಲ್ಲ. ಇವರ ಅಧಿಕಾರವಧಿಯಲ್ಲಿ ಬಡವರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಪೌಷ್ಟಿಕ ಆಹಾರವನ್ನು ಕೊಡುವುದು, ರೈತಿಗೆ ಸಹಾಯಧನ ಮುಂತಾದವುಗಳ ಮೂಲಕ ಕೆಳವರ್ಗವನ್ನು ಮೇಲೆತ್ತುವ ಕಾರ್ಯಗಳಲ್ಲಿ ತೊಡಗಿದ್ದರು. ಇದೇ ಇವರ ಯಶಸ್ವೀ ರಾಜಕಾರಣದ ಗುಟ್ಟು ಆಗಿತ್ತು.

ಇವರ ಮತ್ತು ಎಂ. ಆರ್. ರಾಧಾ ಅವರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದ ಸಲುವಾಗಿ ಒಮ್ಮೆ ಎಂ. ಆರ್. ರಾಧಾ ಹಾರಿಸಿದ ಗುಂಡಿನಿಂದ ಗಾಯಗೊಂಡಿದ್ದರು (1967). 1984ರಲ್ಲಿ ಪಾಶ್ರ್ವವಾಯುಪೀಡಿತರಾಗಿ ಮೂರು ವರ್ಷಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿದರು. ಇವರ ಕೊನೆಯ ಚಿತ್ರ (ಮೀಟ ಸುಂದರಪಾಂಡ್ಯನ್) 1977ರಲ್ಲಿ ಬಿಡುಗಡೆಯಾಯಿತು. ಸಾವಿರಾರು ಜನ ಬೆಂಬಲವನ್ನು ವ್ಯಕ್ತಪಡಿಸಿದರು; ಹಾಗೆಯೇ ರಾಜಕೀಯ ಬೆಂಬಲವನ್ನೂ ನೀಡಿದರು. ಎಂಜಿಆರ್ ನಟಿಸಿದ ಚಲನಚಿತ್ರಗಳು ಸಾಮಾನ್ಯ ಜನರಲ್ಲಿ ಒಂದು ರೀತಿಯ ಭ್ರಮಾಲೋಕವನ್ನೇ ಸೃಷ್ಟಿಸಿದುವು. ಕೆಲವು ಐತಿಹಾಸಿಕ ನಾಯಕ ಪಾತ್ರಗಳಲ್ಲಿ ಅಭಿನಯಿಸಿದ ಇವರು ಪ್ರಸ್ತುತ ಪ್ರಚಲಿತ ವಿದ್ಯಮಾನಗಳನ್ನು ಸಂಭಾಷಣೆಯಲ್ಲಿ ತರುವುದರೊಂದಿಗೆ ಬಹಳಷ್ಟು ಜನರ ಮನವನ್ನು ಒಲಿಸಿಕೊಳ್ಳಲು ಸಾಧ್ಯವಾಯಿತು.

ಎಂಜಿಆರ್ ನಟಿಸಿದ ಚಲನಚಿತ್ರಗಳು ಅಂದಿಗೆ ಕ್ರಾಂತಿಕಾರಿ ವಿಚಾರಗಳನ್ನೇ ವಸ್ತುವಾಗಿಸಿಕೊಂಡಿದ್ದುವು. ರೈತರ ಜಮೀನನ್ನು ಕಬಳಿಸುವ ಜಮೀನುದಾರನ ಚಿತ್ರ (ವ್ಯವಸಾಯಂ, ಹಳ್ಳಿಯ ಶ್ರೀಮಂತರು ದುಡಿಯುವ ವರ್ಗವನ್ನು ತನ್ನ ಕೈವಶದಲ್ಲಿರಿಸಿಕೊಳ್ಳುವುದು (ಎಂಗವೀಟ್ಟು ಪಿಳ್ಳೈ), ಲೇವಾದೇವಿಗಾರರು ಬಡವರ ರಕ್ತ ಹೀರುವುದು (ಪದಕೋಟೈ), ಕೈಗಾರಿಕೋದ್ಯಮಿಗಳು ತಮ್ಮ ಕೆಲಸಗಾರರಿಗೆ ನೀಡುವ ಕಿರುಕುಳ (ತೊಳಿಲಾಳಿ), ನಗರವಾಸಿಗಳು ಬಡಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವುದು (ತೇರ್ ತಿರಿವಿಯ), ಮದುವೆಯಾದ ಗಂಡಸರು ಮತ್ತೊಂದು ಹೆಣ್ಣನ್ನು ಬಯಸುವುದು (ಜಿನೋವ, ಆಸೈ ಮೊಗಂ. ಮಹದೇವಿ) - ಈ ಚಲಚ್ಚಿತ್ರಗಳಲ್ಲಿ ಕೆಳವರ್ಗ ಮತ್ತು ಮೇಲುವರ್ಗದ ನಡುವಿನ ಸಂಘರ್ಷವನ್ನು ಕಾಣಬಹುದು. ಈ ಸಂಘರ್ಷವನ್ನು ಇವರು ವಿವಿಧ ಸಂಕೇತಗಳ ಮೂಲಕ ನಿರೂಪಿಸಿದರು. ಇವುಗಳ ಪೈಕಿ ಮೂರು ಸಂಕೇತಗಳು ಮುಖ್ಯವಾದವು. ಅಧಿಕಾರಯುತವಾಗಿ ನ್ಯಾಯ ಗಳಿಸಿಕೊಡುವುದು ಮತ್ತು ಘರ್ಷಣೆಯನ್ನು ಹೋಗಲಾಡಿಸಿವುದು; ಅಕ್ಷರ ಕಲಿಕೆಯ ಕಡೆಗೆ ಒತ್ತು ನೀಡುವುದು; ಶಿಕ್ಷಣದಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ. ಈ ರೀತಿಯ ಸಂಕೇತಗಳು ಚಲನಚಿತ್ರದಲ್ಲಿ ಕನಸಿನಂತೆ ಮೂಡಿಬರುತ್ತವಾದರೂ ವಾಸ್ತವತೆಯಲ್ಲಿ ನಿರ್ದಿಷ್ಟ ನಂಬಿಕೆಯ ಯಥಾರ್ಥತೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಎಂಜಿಆರ್ ಇಂಥ ಸನ್ನಿವೇಶಗಳ ನಿರೂಪಣೆಗಾಗಿ ತನ್ನ ಪಕ್ಷದ ಚಿಹ್ನೆಯಲ್ಲಿನ ಬಣ್ಣಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಎಂಜಿಆರ್ ಚಲನಚಿತ್ರಗಳನ್ನು ನೋಡುವುದೆಂದರೆ ವಾಸ್ತವ ಆಚರಣೆಗಳಲ್ಲಿ ಪಾಲುಗೊಳ್ಳುವಷ್ಟೇ ಉತ್ಸಾಹ, ಆನಂದ ಇರುವುದು ಕಂಡುಬರುತ್ತದೆ. ಇಂಥ ಅಭಿಮಾನಿಗಳಿಗಾಗಿ ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.

ಎಂಜಿಆರ್. ನಟಿಸಿರುವ ಮುಖ್ಯ ಚಿತ್ರಗಳಿವು: ಇರು ಸಹೋದರರ್‍ಗಳ್ (1936), ಅಶೋಕ್ ಕುಮಾರ್ (1941), ಮೀರಾ (1945), ಮಂತಿರಿ ಕುಮಾರಿ (1950), ಮರ್ಮಯೋಗಿ (1951, ಹಿಂದಿ ರೂಪ: ಏಕ್ ತಾ ರಾಜ), ಮದುರೈ ವಿರನ್ (1956), ನಾಡೋಡಿ ಮನ್ನನ್ (2958), ತಾಯ್‍ಕು ತಲೈಮಗನ್ (2967), ಪುದಿಯಭೂಮಿ (2969), ಕಣವನ್ (1969), ನಮ್‍ನಾಡು (1969), ಮಟ್ಟುಕ್ಕಾರ ವೇಲನ್ (1969), ಎಂಗಳ್ ತಂಗಮ್ (1970), ಉಲಗಂ ಸುಟ್ರುಂ ವಾಲಿಬನ್ (1973).

ರಾಮಚಂದ್ರನ್ ಅವರ ನಿಧನಾನಂತರ (1987) ಇವರ ಆತ್ಮೀಯ ವಲಯದಲ್ಲಿದ್ದ ಜಯಲಲಿತ ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಹಿಡಿದು ತಮಿಳುನಾಡಿನ ಮುಖ್ಯಮಂತ್ರಿಯಾದರು. ರಾಮಚಂದ್ರನ್ ಅವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ಸರ್ಕಾರ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು (1988). ಇವರ ಅಭಿಮಾನಿಗಳು ಮದರಾಸಿನಲ್ಲಿ ಇವರಿಗೆ ಆಲಯವೊಂದನ್ನು ಕಟ್ಟಿಸಿದ್ದಾರೆ.