ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಷ್ಟ್ರೀಯ ಉಳಿತಾಯ ಯೋಜನೆ

ವಿಕಿಸೋರ್ಸ್ದಿಂದ

ರಾಷ್ಟ್ರೀಯ ಉಳಿತಾಯ ಯೋಜನೆ - ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲೊಂದು. ಇದರ ಮುಖ್ಯ ಉದ್ದೇಶ ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು. ಯಾವುದೇ ರಾಷ್ಟ್ರದ ಅಥವಾ ವ್ಯಕ್ತಿಯ ಆದಾಯದಲ್ಲಿ ಪೂರ್ಣ ಭಾಗವನ್ನು ಅನುಭೋಗಕ್ಕಾಗಿ ವೆಚ್ಚ ಮಾಡಿದರೆ ಅದರಿಂದ ಮುಂದಿನ ಹೂಡಿಕೆಗೆ ಅಥವಾ ಭವಿಷ್ಯಕ್ಕೆ ತೊಂದರೆಯಾಗಬಹುದು. ಉಳಿತಾಯದ ಆಧಾರದಲ್ಲೇ ಬಂಡವಾಳ ಹೂಡಿಕೆಯು ನಿಂತಿರುವುದರಿಂದ ಭಾರತದಂಥ ಮುಂದುವರೆಯುತ್ತಿರುವ ದೇಶಗಳಲ್ಲಿ ದೊಡ್ಡ ಪ್ರಮಾಣದ ಉಳಿತಾಯ ಅಸಾಧ್ಯ. ಅದಕ್ಕಾಗಿ ಸಣ್ಣ ಪ್ರಮಾಣದಲ್ಲಿ ಉಳಿತಾಯವನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ರೀತಿಯಲ್ಲಿ ಉಳಿತಾಯ ಮಾಡಿದ ಹಣವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲವಾಗಿ ಬಳಸಲಾಗುತ್ತದೆ. ಈ ರೀತಿಯ ಉಳಿತಾಯದಿಂದ ಪ್ರತಿಯೊಬ್ಬ ಉಳಿತಾಯ ಗಾರನೂ ತನ್ನ ದೇಶದ ಅಭಿವೃದ್ಧಿಗೆ ಬುನಾದಿ ಹಾಕಿದಂತಾಗುತ್ತದೆ. ಈ ಯೋಜನೆಯ ಸಂಪನ್ಮೂಲ ಸಂಗ್ರಹಣ ಕಾರ್ಯವನ್ನು ರಾಷ್ಟ್ರಾದ್ಯಂತ ಅಂಚೆ ಕಚೇರಿಗಳು ನಿರ್ವಹಿಸುತ್ತಿವೆ.

ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ಸಣ್ಣ ಉಳಿತಾಯ ಯೋಜನೆಯಲ್ಲಿ ಹಲವಾರು ಬಗೆಗಳಿವೆ.

1. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 2. ಸಾರ್ವಜನಿಕ ಭವಿಷ್ಯ ನಿಧಿ 3. ಕಿಸಾನ್ ವಿಕಾಸ್ ಪತ್ರ 4. ಅಂಚೆ ಕಚೇರಿ ಅವಧಿ ಠೇವಣಿ 5. ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ 6. ಸರ್ಕಾರಿ ಅಥವಾ ಸಾರ್ವಜನಿಕ ನಿವೃತ್ತ ನೌಕರರ ಠೇವಣಿ ಯೋಜನೆ.+

ಈ ಮೇಲಿನ ಎಲ್ಲ ಸಣ್ಣ ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿ ನಿರ್ವಹಿಸುತ್ತದೆ. ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಸಹ ಸಾರ್ವಜನಿಕ ಭವಿಷ್ಯ ನಿಧಿ ಠೇವಣಿಗಳನ್ನು ಸ್ವೀಕರಿಸುತ್ತದೆ. ಇದರ ಜೊತೆಗೆ ಇಂದಿರಾ ವಿಕಾಸ ಪತ್ರ ಮತ್ತು ಆರ್.ಬಿ.ಐ ಪರಿಹಾರ ಕರಾರು ಪತ್ರ ಮುಂತಾದ ಯೋಜನೆಗಳನ್ನೂ ಗುರುತಿಸಬಹುದು.

ಪ್ರಸ್ತುತ ಸು. ಸೇ.80ರಷ್ಟು ಸಣ್ಣ ಉಳಿತಾಯ ಯೋಜನೆ ನಿಧಿ ಹಣವನ್ನು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ರೀತಿಯ ಸಣ್ಣ ಉಳಿತಾಯ ಯೋಜನೆಗಳಿಗೆ ಆಯಾ ರಾಜ್ಯ ಸರ್ಕಾರಗಳು ಉತ್ತೇಜನವನ್ನು ಕೊಡುತ್ತಿವೆ. ಸಣ್ಣ ಉಳಿತಾಯ ಯೋಜನೆಯಲ್ಲಿ ತೊಡಗಿಸಿದ ಹಣ ಹೂಡಿಕೆದಾರರಿಗೆ ಸುರಕ್ಷಿತವೂ ಕಡಿಮೆ ಬಡ್ಡಿದರದ ಬಂಡವಾಳವೂ ಆಗಿ ಲಭ್ಯವಾಗುತ್ತದೆ. ಈ ಯೋಜನೆಗಳನ್ನು ಅಂಚೆ ಕಚೇರಿಗಳ ಮುಖಾಂತರ ಭಾರತ ಸರ್ಕಾರದ ಕೇಂದ್ರ ಹಣಕಾಸು ಸಚಿವಾಲಯವು ನೇರವಾಗಿ ನಡೆಸುತ್ತದೆ. ಈ ಎಲ್ಲಾ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ತುಂಬಾ ಪ್ರಮುಖವಾದುದು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ. ಆದಾಯ ತೆರಿಗೆ ಕಾಯ್ದೆ 1961ರ 88ನೆಯ ಪರಿಚ್ಛೇದದಲ್ಲಿ ಈ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಯೋಜನೆಯಲ್ಲಿ ಉಳಿತಾಯ ಮಾಡುವ ಹಣಕ್ಕೆ ತೆರಿಗೆಯಿಂದ ವಿನಾಯಿತಿಯನ್ನು ಕೊಡಲಾಗಿದೆ. ಹಾಗೆಯೇ ಇದಕ್ಕೆ ಸು. ಸೇ 8ರಷ್ಟು ಬಡ್ಡಿಯನ್ನು ಸಹ ಕೊಡಲಾಗುತ್ತದೆ. ಇದರ ಅವಧಿ 6 ವರ್ಷ. ಅವಧಿಯ ಅನಂತರ ಉಳಿತಾಯ ಮಾಡಿದ ಹಣದೊಡನೆ ಸೇ. 8ರಷ್ಟು ಬಡ್ಡಿ ದರವನ್ನು ಸೇರಿಸಿ ಹಿಂದಿರುಗಿಸ ಲಾಗುತ್ತದೆ. ಹಾಗೆಯೇ ಅಂಚೆ ಕಚೇರಿಯಲ್ಲಿನ ತಿಂಗಳ ಆದಾಯ ಯೋಜನೆ ಸಹ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಇದೂ 6 ವರ್ಷದ ಅವಧಿಯದ್ದಾಗಿದ್ದು ಸೇ.8ಬಡ್ಡಿಯನ್ನು ನೀಡಲಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿಗೂ ಸೇ.8ಬಡ್ಡಿದರವನ್ನು ಕೊಡಲಾಗುತ್ತದೆ. ಆದರೆ ಇದು 15 ವರ್ಷದ ಅವಧಿಯದ್ದಾಗಿರುತ್ತದೆ.

ಈ ಕೆಳಗಿನ ಪಟ್ಟಿಯು ವಿವಿಧ ಯೋಜನೆಗಳ ಅವಧಿ ಹಾಗೂ ಅವುಗಳ ಬಡ್ಡಿ ದರಗಳನ್ನು ಸೂಚಿಸುತ್ತದೆ.

ಕ್ರ.ಸಂ. ಯೋಜನೆಯ ಹೆಸರು ಅವಧಿ (ವರ್ಷ) ಬಡ್ಡಿದರ 1. ಆರ್‍ಬಿಐ ಪರಿಹಾರ 5 6.5% ಕರಾರುಪತ್ರ-ತೆರಿಗೆ ರಹಿತ 2. ಆರ್‍ಬಿಐ ಪಡಿತರ 6 8.0% ಕರಾರುಪತ್ರ-ತೆರಿಗೆ ರಹಿತ 3. ರಾಷ್ಟ್ರೀಯ ಉಳಿತಾಯ 6 8.0% ಪ್ರಮಾಣ ಪತ್ರ 4. ಸಾರ್ವಜನಿಕ ಭವಿಷ್ಯ ನಿಧಿ 15 8.0%

ಈ ರೀತಿಯ ಯೋಜನೆಯಲ್ಲಿ ಉಳಿತಾಯವಾದ ಹಣಕ್ಕೆ ತೆರಿಗೆಯ ವಿನಾಯಿತಿಯಿರುವುದರಿಂದ ಜನರಿಗೆ ಯಾವುದೇ ತೆರಿಗೆಯ ಭಯವಿರುವುದಿಲ್ಲ. ಹಾಗೆಯೇ ಸರ್ಕಾರವೇ ಜವಾಬ್ದಾರವಾಗುವುದರಿಂದ ಈ ಯೋಜನೆಯ ಹಣದ ಬಗ್ಗೆ ಯಾವುದೇ ಅಪನಂಬಿಕೆಯೂ ಇರುವುದಿಲ್ಲ. (ಎಚ್.ಜಿ.)