ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಸ್ಕ್‌, ರಾಸ್ಮಸ್ ಕ್ರಿಶ್ಚಿಯನ್

ವಿಕಿಸೋರ್ಸ್ದಿಂದ

ರಾಸ್ಕ್, ರಾಸ್ಮಸ್ ಕ್ರಿಶ್ಚಿಯನ್ 1787-1832. ಪ್ರಸಿದ್ಧ ಐತಿಹಾಸಿಕ ಭಾಷಾವಿಜ್ಞಾನಿ, ಡೇನಿಷ್ ವಿದ್ವಾಂಸ. ಫಿನ್ ದ್ವೀಪದಲ್ಲಿ 1787 ನವೆಂಬರ್ 22ರಂದು ಜನಿಸಿದ. ಜಾಡೆನ್ಸ್ ಎಂಬ ಊರಿನ ಕ್ರೈಸ್ತ ಶಾಲೆಯೊಂದರ ವಿದ್ಯಾರ್ಥಿಯಾಗಿ ಗ್ರೀಕ್, ಲ್ಯಾಟಿನ್ ಮತ್ತು ಗಣಿತ ವಿಷಯಗಳಲ್ಲಿ ಪರಿಣತಿ ಪಡೆದ. ಜೊತೆಗೆ ಪ್ರಾಚೀನ ನಾರ್ಸ್ ಅಥವಾ ಐಸ್‍ಲ್ಯಾಂಡಿಕ್ ಮತ್ತು ಇಂಗ್ಲಿಷನ್ನು ಕಲಿತ, ಶಾಲಾಶಿಕ್ಷಣದ ತರುವಾಯ ಕೋಪನ್ ಹೇಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿದ. ಆದರೆ ವಿಶ್ವವಿದ್ಯಾಲಯದ ಶಿಕ್ಷಣವನ್ನು ಪೂರೈಸಲಿಲ್ಲ. ಆದರೆ ಅಲ್ಲಿದ್ದ ಐಸ್‍ಲೆಂಡಿನ ಜನರೊಡನೆ ಸ್ನೇಹಬೆಳೆಸಿ ಐಸ್‍ಲ್ಯಾಂಡಿಕ್ ಭಾಷೆಯನ್ನು ಚೆನ್ನಾಗಿ ಕಲಿತು, ಪ್ರಭುತ್ವ ಸಾಧಿಸಿದ. 1814ರಲ್ಲಿ ಡೇನಿಷ್ ವೈಜ್ಞಾನಿಕ ಸಂಘ (ಡ್ಯಾನಿಷ್ ಸೈಂಟಿಫಿಕ್ ಸೊಸೈಟಿ) ಭಾಷೆಗೆ ಸಂಬಂಧಿಸಿದಂತೆ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಐತಿಹಾಸಿಕ ವಿವರಗಳೊಂದಿಗೆ ಮತ್ತು ಯುಕ್ತ ಉದಾಹರಣೆಗಳೊಡನೆ ಸ್ಕ್ಯಾಡಿನೇವಿಯನ್ ಭಾಷೆಯ ಮೂಲವನ್ನು ಕಂಡುಹಿಡಿಯಬೇಕೆಂಬುದು ಈ ಸ್ಪರ್ಧೆಯ ವಸ್ತು ಮತ್ತು ನಿಯಮವಾಗಿತ್ತು. ಇದರ ಜೊತೆಗೆ ಸ್ಕ್ಯಾಂಡಿನೇವಿಯನ್ ಮತ್ತು ಜಮ್ರ್ಯಾನಿಕ್ ಭಾಷೆಗಳ ಪರಸ್ಪರ ಅಂತಃ ಸಂಬಂಧವನ್ನೂ ಅವಕ್ಕೆ ಮೂಲಭಾಷೆಯನ್ನೂ ಅದರ ಸ್ವರೂಪವನ್ನೂ ಪರಿವರ್ತನೆಗಳನ್ನೂ ಸ್ಪಷ್ಟವಾಗಿ ವಿವರಿಸಿ ವಿಶ್ಲೇಷಿಸಬೇಕೆಂಬ ನಿರ್ದೇಶನವೂ ಇತ್ತು. ಈ ಎಲ್ಲ ನಿಯಮಗಳಿಗನುಸಾರವಾಗಿ ಸಂಪ್ರಬಂಧ ಸಿದ್ಧಪಡಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಈತ ಈ ಸವಾಲನ್ನು ಸ್ವೀಕರಿಸಿದ. ಸತತ ಪರಿಶ್ರಮದಿಂದ ಪಾಂಡಿತ್ಯಪೂರ್ಣ ಪ್ರಬಂಧ ಸಿದ್ಧಪಡಿಸಿ, ಸಂಘಕ್ಕೆ ಸಾದರಪಡಿಸಿದ. ಪ್ರಬಂಧ ಒಪ್ಪಿಸಿದ ನಾಲ್ಕು ವರ್ಷಗಳ ಬಳಿಕ ಬಹುಮಾನ ಪಡೆದ (1818). ಕೆಲವು ದಿನಗಳ ತರುವಾಯ ಇವನ ಪ್ರಬಂಧ ಪ್ರಕಟವಾಯಿತು. ಇದು ಶ್ರೇಷ್ಠ ಸಂಶೋಧನೆ ಎಂದು ವಿದ್ವಾಂಸರಿಂದ ಮೆಚ್ಚುಗೆ ಪಡೆಯಿತು.

ಇಂಡೋ ಯುರೋಪಿ ಯನ್ ಭಾಷಾಪರಿವಾರದ ವೈಜ್ಞಾನಿಕ ವರ್ಗೀ ಕರಣಕ್ಕೆ ಈತಯುಕ್ತ ಮಾದರಿಯನ್ನು ರೂಪಿಸಿದ. ಭಾಷೆಯ ಸಂರ ಚನೆಯನ್ನು ಶಾಸ್ತ್ರೀಯವಾಗಿ ಪರಿಶೀಲಿಸುವ ಅಗತ್ಯವನ್ನು ತನ್ನ ಕೃತಿಯ ಮೊದಲಲ್ಲೇ ಹೇಳಿದ್ದಾನೆ. ನೆರೆಹೊರೆಯ ಭಾಷೆಗಳಿಂದ ಎಲ್ಲ ಭಾಷೆಗ ಳಿಗೂ ಸ್ವೀಕರಣ ಪ್ರಕ್ರಿಯೆ ಯಿಂದಾಗಿ ಸಾವಿರಾರು ಪದ ಗಳು ಸೇರುತ್ತವೆ. ಇವನ್ನು ಪರಿಶೀಲಿಸಿದಾಗ, ಕಂಡು ಬರುವ ಸಾದೃಶ್ಯದಿಂದ ಆ ಭಾಷೆಗಳಲ್ಲಿ ಪರಸ್ಪರ ಸಂಬಂಧವಿದೆಯೆಂದೂ ಅವು ಒಂದೇ ಮೂಲದಿಂದ ಬಂದಿರುವ ಭಾಷೆಗಳೆಂದೂ ಪರಿಭಾವಿಸು ವುದು ದೊಡ್ಡ ದೋಷವಾಗುತ್ತದೆಂದು ಈತ ಎಚ್ಚರಿಕೆ ನೀಡಿ, ಭಾಷಾ ವರ್ಗೀಕರಣಕ್ಕೆ ವ್ಯಾಕರಣವನ್ನು ಅಳತೆಗೋಲನ್ನಾಗಿಟ್ಟುಕೊಂಡು ಅಭ್ಯಸಿಸಬೇಕೆಂದಿದ್ದಾನೆ. ಏಕೆಂದರೆ ವ್ಯಾಕರಣದಲ್ಲಿ ಕಾಣಿಸಿಕೊಳ್ಳುವ ಹೊಂದಾಣಿಕೆ ಭಾಷೆಗಳ ನೈಜಬಾಂಧವ್ಯವನ್ನು ಪ್ರಕಟ ಪಡಿಸುತ್ತದೆ. ಪದಕೋಶಕ್ಕಿಂತಲೂ ವ್ಯಾಕರಣ ಅನ್ಯದೇಶೀಯ ಪ್ರಭಾವಕ್ಕೆ ಹೊರತಾಗಿ ನಿಲ್ಲುವ ಶಕ್ತಿ ಪಡೆದಿದೆ. ಈ ಮುಖ್ಯ ವಿಚಾರವನ್ನು ಗಮನಿಸದವರ ಎಲ್ಲ ಸಂಶೋಧನೆಯೂ ವ್ಯರ್ಥ ಮತ್ತು ಅಪೂರ್ಣವೆಂಬುದು ಇವನ ವಿಚಾರಧಾರೆಯಾಗಿತ್ತು.

ಆರಿಜನ್ ಆಫ್ ದಿ ಓಲ್ಡ್‍ನಾರ್ಸ್ ಆರ್ ಐಸ್‍ಲ್ಯಾಂಡಿಕ್ ಲಾಂಗ್ವೇಜ್ ಎಂಬುದು ಈತನ ವಿಖ್ಯಾತ ಸಂಶೋಧನ ಪ್ರಬಂಧ. ಇದರಲ್ಲಿಯ ವಿವರಣೆಗಳ ಪೈಕಿ ಮುಖ್ಯವಾದುದೆಂದರೆ ಸ್ವರ ಪರಿವರ್ತನೆಗೆ (ಓವಲ್ ಮ್ಯುಟೇಶನ್) ಸಂಬಂಧಿಸಿದ್ದು. ಈತ ಅವೆಸ್ತಾ, ಎಸ್ಕಿಮೊ, ಪಾರ್ಸಿ, ಫಿನ್ನಿಶ್, ಬಾಲ್ಟಿಕ್, ಭಾರತೀಯ ಭಾಷೆಗಳು, ಲಪ್ಪಿಶ್, ಜರ್ಮನ್ ಮೊದಲಾದ ಭಾಷೆಗಳನ್ನು ಕುರಿತು ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾನೆ. ಈತ 1837 ನವೆಂಬರ್ 14 ರಂದು ನಿಧನಹೊಂದಿದ. (ಆರ್.ಎಮ.ಕೆ.)