ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಿಚಡ್ರ್ಸ್‌, ಐ ಎ

ವಿಕಿಸೋರ್ಸ್ದಿಂದ

ಐ.ಎ.ರಿಚರ್ಡ್ಸ್ : - 1893-1979. ಇಪ್ಪತ್ತನೆಯ ಶತಮಾನದ ಇಂಗ್ಲೆಂಡಿನ ಮುಖ್ಯ ಮತ್ತು ಪ್ರಭಾವೀ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬ. ಇಂಗ್ಲೆಂಡಿನ ಚೆಷೈರ್ ಎಂಬಲ್ಲಿ ಜನಿಸಿದ ಈತ ಕೇಂಬ್ರಿಜ್ ವಿಶ್ವವಿದ್ಯಾಲ ಯದಲ್ಲಿ ಶಿಕ್ಷಣ ಪಡೆದು, ಅಲ್ಲಿಯೇ ಫೆಲೊ ಆಗಿ ಅನಂತರ ಇಂಗ್ಲಿಷ್ ಅಧ್ಯಾಪಕನಾದ. 1944 ರಿಂದ 1963ರವರೆಗೆ ಹಾರ್ವರ್ಡ್ ವಿಶ್ವವಿದ್ಯಾಲ ಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸೇವೆಸಲ್ಲಿಸಿದ. ಚೀನದ ಟ್ಸಿಂಗ್ ಹುಆ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕನಾಗಿದ್ದ. ತರಗತಿಯಲ್ಲಿ ಇವನ ಪಾಠಗಳು ಸಾಹಿತ್ಯ ವಿಮರ್ಶೆಯಲ್ಲಿ ಹೊಸದೊಂದು ಯುಗವೇ ಪ್ರಾರಂಭವಾಗುತ್ತಿದೆ ಎನ್ನುವ ಭರವಸೆಯನ್ನು ಮೂಡಿಸಿದವು. ಇವನು ತೋರಿಸಿಕೊಟ್ಟ ಮಾರ್ಗ ವಿದ್ಯಾರ್ಥಿಗಳಲ್ಲಿ ಅತ್ಯುತ್ಸಾಹವನ್ನು ತಂದು ಕೊಟ್ಟಿತು. ಇವನ ಪಾಠಗಳು ಎಷ್ಟು ಜನಪ್ರಿಯವಾದುವೆಂದರೆ ಕೆಲವೊಮ್ಮೆ ಯಾವ ತರಗತಿಯ ಕೊಠಡಿಯೂ ಸಾಲದೆ ಒಮ್ಮೊಮ್ಮೆ ಈತ ತರಗತಿಗಳನ್ನು ಬಯಲಿನಲ್ಲಿ ನಡೆಸಬೇಕಾಗುತ್ತಿತ್ತು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಜನತೆಗಾಗಲಿ, ಸೈನಿಕರಿಗಾಗಲಿ ವಿಷಯಗಳನ್ನು ಸ್ಪಷ್ಟವಾಗಿ ಮನ ಒಲಿಸುವಂತೆ ಅಭಿವ್ಯಕ್ತಿಗೊಳಿಸುವುದು ಒಂದು ಮುಖ್ಯ ಪ್ರಶ್ನೆಯಾಯಿತು. ಜೊತೆಗೆ, ಭಾಷೆಯ ಜಾಣ ಪ್ರಯೋಗದಿಂದ ಒಂದು ಇಡೀ ದೇಶ ತನ್ನನ್ನು ತಾನು ಹೇಗೆ ಮೋಸಗೊಳಿಸಿಕೊಳ್ಳಬಹುದು ಎಂದೂ ಕಂಡ. ಇದರಿಂದ ಭಾಷೆಯ ಸ್ವರೂಪ, ಅದು ಕೆಲಸ ಮಾಡುವ ವಿಧಾನ ಇವುಗಳತ್ತ ಈತನ ಗಮನ ಹರಿಯಿತು. ಈ ಕ್ಷೇತ್ರದಲ್ಲಿ ಇವನ ಮೊದಲ ಹೆಜ್ಜೆ ಸಿ.ಕೆ.ಆಗ್ಡನನೊಂದಿಗೆ ಬರೆದ ದಿ ಮೀನಿಂಗ್ ಆಫ್ ಮೀನಿಂಗ್ (1923). ಕಾವ್ಯದಲ್ಲಿ ಭಾಷೆ ಹೇಗೆ ಕೆಲಸಮಾಡುತ್ತದೆ ಎನ್ನುವುದರಲ್ಲಿ ಇವನ ಆಸಕ್ತಿಯು ತೀವ್ರವಾಗಿ, ಈ ಅಧ್ಯಯನವನ್ನು ಪ್ರಾರಂಭಿಸಿದ. ತನ್ನ ಆನರ್ಸ್ ವಿದ್ಯಾರ್ಥಿಗಳಿಗೆ, ಕವನಗಳನ್ನು ಬರೆದವರು ಯಾರು ಎಂದು ತಿಳಿಸದೆ ಹಲವಾರು ಕವನಗಳನ್ನು ಕೊಟ್ಟು ಅವರಿಂದ ಬಿಚ್ಚುಮನಸ್ಸಿನ ಪ್ರತಿಕ್ರಿಯೆಗಳನ್ನು ಪಡೆದು ಅವುಗಳನ್ನು ವಿಶ್ಲೇಷಿಸಿದ. ಈ ವಿಶ್ಲೇಷಣೆಯೇ ಪ್ರಿನ್ಸಿಪಲ್ಸ್ ಆಫ್ ಲಿಟರರಿ ಕ್ರಿಟಿಸಿಸಂ (1924) ಮತ್ತು ಪ್ರಾಕ್ಟಿಕಲ್ ಕ್ರಿಟಿಸಿಸಂ (1929) ಎಂಬ ಎರಡು ಮಹತ್ವದ ಗ್ರಂಥಗಳಲ್ಲಿ ಫಲ ನೀಡಿತು.

ಸಾಹಿತ್ಯ ವಿಮರ್ಶೆ ಮತ್ತು ಭಾಷೆಯ ಅಧ್ಯಯನಕ್ಕೆ ಇವನ ಕೊಡುಗೆ ಬಹುಮುಖವಾದದ್ದು. ಬಳಕೆಯಲ್ಲಿ ಭಾಷೆಯು ಸಂವಹನ ಮಾಡುವ ರೀತಿಗಳನ್ನು ವಿಶ್ಲೇಷಿಸಿದ; ಒಂದು ಬರೆಹ (ಭಾಷಣ)ದಲ್ಲಿ ಅರ್ಥ ಹೇಗೆ ಆಗುತ್ತದೆ ಎಂಬುದನ್ನು ವಿಶ್ಲೇಷಿಸಿದ. ವಿಜ್ಞಾನದ ಭಾಷೆ ಸಾಂಕೇತಿಕ (ಸಿಂಬಾಲಿಕ್), ಕಾವ್ಯದ ಭಾಷೆ ಹೊರಸೆಳೆಯುವ (ಇವೊಕೆಟಿವ್)ಭಾಷೆ ಎಂದು ವಿವರಿಸಿದ. ಹೇಳಿಕೆ, ತೋರಿಕೆಯ (ಸ್ಯೂಡೊ) ಹೇಳಿಕೆ ಎನ್ನುವ ಪಾರಿಭಾಷಿಕ ಪದಗಳನ್ನು ಬಳಸಿ ವಿವರಿಸಿದ. ಹೇಳಿಕೆಯನ್ನು ವಿಜ್ಞಾನದಲ್ಲಿ ಕಾಣುತ್ತೇವೆ. ಕಾವ್ಯದಲ್ಲಿ ಹೇಳಿಕೆಗಳು ಎಂದು ಕಾಣುವ ಭಾಷಾರಚನೆಗಳು “ಹೀಗೆ” ಎಂದು ಹೇಳುವುದಿಲ್ಲ, ವಿಶಿಷ್ಟ ಸೌಂದರ್ಯ ಭಾವವನ್ನು ನಮ್ಮಲ್ಲಿ ಉಕ್ಕಿಸುತ್ತವೆ. `ಸೌಂದರ್ಯ ಎನ್ನುವ ಪರಿಕಲ್ಪನೆಯನ್ನು ವಿಶ್ಲೇಷಿಸಿದ. ಕಾವ್ಯದಲ್ಲಿ ಭಾಷೆಯ ಪಾತ್ರದ ಅಧ್ಯಯನವನ್ನು ಮುಂದುವರೆಸಿ `ಅಂಬ್ಯುಗಿಯಿಟಿ (ಅರ್ಥ ಸಂದಿಗ್ಧತೆ) ಮತ್ತು `ಐರನಿ ಶಬ್ದಗಳನ್ನು ಬಳಸಿದ. ಸಾಮಾನ್ಯವಾಗಿ ಅರ್ಥಸಂದಿಗ್ಧ ತೆಯು ಒಂದು ದೋಷ. ಆದರೆ ರಿಚಡ್ರ್ಸ್ ಇದನ್ನು ಕಾವ್ಯದ ಭಾಷೆಯಲ್ಲಿ ಅಂತರ್ಗತವಾಗಿ ಏಕಕಾಲದಲ್ಲಿ ಕವನವು (ಎಲ್ಲವೂ ಒಪ್ಪಿಕೊಳ್ಳಬೇಕಾ ದಂತಹ) ಹಲವು ಅರ್ಥಗಳನ್ನು ಪಡೆಯುವುದನ್ನು ಸೂಚಿಸಲು ಬಳಸುತ್ತಾ ನೆ. ಮಿತವಾದ, ಏಕಮುಖವಾದ ಅನುಭವವನ್ನು ಅಭಿವ್ಯಕ್ತಿಗೊಳಿಸುವ ಕವನಗಳು (ಉದಾಹರಣೆಗೆ, ಟೆನಿಸನ್‍ನ ಬ್ರೇಕ್, ಬ್ರೇಕ್, ಬ್ರೇಕ್) ಶ್ರೇಷ್ಠ ಕವನಗಳಲ್ಲ; ಪರಸ್ಪರ ವಿರುದ್ಧವಾದ ಪ್ರಧಾನ ಪ್ರವೃತ್ತಿಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸಿ ಹಿಡಿದಿಟ್ಟುಕೊಳ್ಳಬಹುದಾದ ಕವನವು (ಉದಾಹರಣೆಗೆ, ಕೀಟ್ಸ್‍ನ ನೈಟಿಂಗೇಲ್ ಪ್ರಗಾಥ) ಶ್ರೇಷ್ಠ ಕವನ; ಭಾಷೆಯ ಇಂತಹ ಕವನ `ಐರಾನಿಕ್ ಎಂದ. ಕಲಾನುಭವವನ್ನು ಮನೋವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಣೆ ಮಾಡುವ ಮೊದಲ ಕೂಲಂಕಷ ಪ್ರಯತ್ನ ನಡೆದದ್ದು ಇವನ ಕೃತಿಗಳಲ್ಲಿ. ಸೌಂದರ್ಯಾನುಭವವನ್ನು ವಿವರಿಸಲು ಸೈನೇಸ್ತಿಸಸ್ ಎಂಬ ಪದವನ್ನು ಬಳಸಿದ. ಹೀಗೆಂದರೆ ಪ್ರವೃತ್ತಿಗಳ ಸಮನ್ವಯ ಮತ್ತು ಸಾಮರಸ್ಯ. ಇದೇ ಅನುಭವವನ್ನು ಸೌಂದರ್ಯ ಕೊಡುತ್ತದೆ ಎಂದು ವಿವರಿಸಿದ. ಇದನ್ನು ವಿವರಿಸಲು ಮನಸ್ಸಿನ ವ್ಯಾಪಾರಗಳತ್ತ ತಿರುಗಿದ. ಪ್ರಿನ್ಸಿಪಲ್ ಆಫ್ ಲಿಟರರಿ ಕ್ರಿಟಿಸಿಸಂ, ಪ್ರ್ಯಾಕ್ಟಿಕಲ್ ಕ್ರಿಟಿಸಿಸಂ-ಎಂಬ ಕೃತಿಗಳಲ್ಲಿ ಈ ವಿವರಣೆಯನ್ನೂ ನಾಲ್ಕು ಬಗೆಯ ಅರ್ಥಗಳು ವಿವರಣೆಯನ್ನೂ ಕಾಣಬಹುದು. ಸಂದರ್ಭ ಸಿದ್ಧಾಂತವನ್ನೂ (ಕಾನ್‍ಟೆಕ್ಸ್ಟ್ ಥಿಯರಿ) ಈತ ಮುಂದಿಟ್ಟ.

ಸಾಹಿತ್ಯ ವಿಮರ್ಶೆಯನ್ನು ಈತ ಅರ್ಥಗಳ ವಿಜ್ಞಾನ ಎಂದು ಕರೆದ. ಒಂದು ಕೃತಿಗಿರಬಹುದಾದ ಹಲವು ಅರ್ಥಗಳು, ಅವುಗಳ ಪರಸ್ಪರ ಸಂಬಂಧಗಳನ್ನು ವಿಮರ್ಶಕ ವಿಶ್ಲೇಷಿಸಬೇಕು ಎಂದು ಹೇಳಿದ. ವಿಮರ್ಶೆಗೆ ಅಡ್ಡಿಬರುವ ಹಲವು ಅಂಶಗಳನ್ನೂ (ಉದಾಹರಣೆಗೆ: ಸೆಂಟಿಮೆಂಟಾಲಿಟಿ-ಅತಿಭಾವುಕತೆ, ಸ್ಟಾಕ್ ರೆಸ್‍ಪಾನ್ಸ್-ಸಿದ್ಧವಾಗಿರುವ ಪ್ರತಿಕ್ರಿಯೆ) ವಿವರಿಸಿದ. ಇವನ ವಿಮರ್ಶೆಗೆ ಮಿತಿಗಳಿವೆ. ಈತ ಎಲ್ಲ ಕಲೆಗಳ ಅನುಭವ ವನ್ನೂ ಒಟ್ಟಾಗಿ ಪರಿಶೀಲಿಸುತ್ತಾನೆ. ಆದರೆ ಬೇರೆ ಬೇರೆ ಕಲೆಗಳ ಮಾಧ್ಯಮಗಳ ವೈಶಿಷ್ಟ್ಯವನ್ನು ಗಮನಿಸುವುದಿಲ್ಲ. ಸಾಹಿತ್ಯ ಕೃತಿ ಸಾವಯವ ಎಂದು ಒತ್ತಿಹೇಳಿದರೂ ಕೆಲವೆಡೆ ಇದನ್ನು ಮರೆತಂತೆ ಕಾಣುತ್ತದೆ; ಕಲೆ ನೀಡುವ ಅನುಭವದ ವೈಶಿಷ್ಟ್ಯವನ್ನು ಗಮನಿಸುವುದಿಲ್ಲ. ಇಂಥದೇ ಅನುಭವವನ್ನು ಇತರ ಮೂಲಗಳಿಂದಲೂ ಪಡೆದುಕೊಳ್ಳ ಬಹುದು ಎನ್ನುತ್ತಾನೆ. ಆದರೂ ಈತ ಪ್ರಥಮ ಪಂಕ್ತಿಯ ವಿಮರ್ಶಕ ಮತ್ತು ಪ್ರಭಾವೀ ವಿಮರ್ಶಕ. ನಮ್ಮ ಆಸಕ್ತಿ ಇರುವುದು ಕವನದಲ್ಲಿ, ಕವಿಯಲ್ಲಲ್ಲ ಎನ್ನುವುದನ್ನು ವಿಮರ್ಶೆಯ ಸೂತ್ರವನ್ನಾಗಿ ಮಾಡಿದವನು ರಿಚಡ್ರ್ಸ್. ವಿಮರ್ಶೆಗೆ ಖಚಿತತೆಯ ಅಗತ್ಯವನ್ನು ಒತ್ತಿಹೇಳಿದ; ಇವನ ವಿಮರ್ಶೆಯೇ ಅದಕ್ಕೆ ನಿದರ್ಶನವೂ ಆಯಿತು. ಕವನದ ಸಾವಯವ ಸ್ವರೂಪದತ್ತ ಗಮನ ಸೆಳೆದ. ಅರ್ಥ ಎಂದರೇನು ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಉತ್ತರಿಸಲು ಪ್ರಯತ್ನಿಸಿದ. ಕಾವ್ಯದ ಅನುಭವದಲ್ಲಿ ಭಾಷೆಯ ಮಹತ್ತ್ವ, ಭಾಷೆ ಕೆಲಸ ಮಾಡುವ ರೀತಿಗಳನ್ನು ವಿಶ್ಲೇಷಿಸಿದ. ಸಾಹಿತ್ಯ ವಿಮರ್ಶೆಗೆ ಅಡ್ಡಿಬರಬಹುದಾದ ಅಂಶಗಳನ್ನು ವಿಶ್ಲೇಷಿಸಿದ. ಈ ಎಲ್ಲ ರೀತಿಗಳಲ್ಲಿ ನವ್ಯ ವಿಮರ್ಶೆಯ ಪ್ರಮುಖ ಪ್ರೇರಕರಲ್ಲಿ ಒಬ್ಬನಾದ. ಇವನನ್ನು ಸಾಮಾನ್ಯವಾಗಿ ಫಾರ್ಮಲ್ ಕ್ರಿಟಿಸಿಸಂ ಪಂಥಕ್ಕೆ ಸೇರಿದವನೆಂದು ಪರಿಗಣಿಸಲಾಗುತ್ತದೆ.

ದಿ ಮೀನಿಂಗ್ ಆಫ್ ಮೀನಿಂಗ್ ಪುಸ್ತಕವು ಬೇಸಿಕ್ ಇಂಗ್ಲಿಷ್ ರೂಪ ತಾಳಲು ಬುನಾದಿಯನ್ನು ನಿರ್ಮಿಸಿತು. ಇಂಗ್ಲಿಷನ್ನು ಅದರ ಉಪಯುಕ್ತತೆಗಾಗಿಯೇ ಕಲಿಯಲು ಬಯಸುವ, ಇಂಗ್ಲಿಷ್ ಮಾತೃಭಾಷೆ ಅಲ್ಲದವರು 850 ಶಬ್ದಗಳಲ್ಲಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವಂತೆ ಇದನ್ನು ರೂಪಿಸಿದ.

ಸೈನ್ಸ್ ಅಂಡ್ ಪೊಯಟ್ರಿ (1925), ಕೋಲ್‍ರಿಜ್ ಅಂಡ್ ದಿ ಇಮ್ಯಾಜಿನೇಷನ್ (1934), ದಿ ಫಿಲಾಸಫಿ ಆಫ್ ರೆಟಾರಿಕ್ (1936), ಇಂಟರ್‍ಪ್ರಿಟೀಷನ್ ಇನ್ ಟೀಚಿಂಗ್ (1938)-ಇವು ಇವನ ಇತರ ಕೃತಿಗಳು.

(ಎಲ್.ಎಸ್.ಎಸ್.)