ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರುದ್ರಭಟ್ಟ

ವಿಕಿಸೋರ್ಸ್ದಿಂದ

ರುದ್ರಭಟ್ಟ : - ಸು. 1185. ಕನ್ನಡ ವೈಷ್ಣವಕವಿಗಳಲ್ಲಿ ಮೊದಲನೆ ಯವನು. ಜಗನ್ನಾಥವಿಜಯ, ರಸಕಲಿಕೆ ಎಂಬ ಗ್ರಂಥಗಳ ಕರ್ತೃ. ನೇಮಿಚಂದ್ರನ ಸಮಕಾಲೀನನಾದ ಈತ ಹೊಯ್ಸಳ ವೀರಬಲ್ಲಾಳನಿಂದ (1173-1220) ಪೋಷಿತನಾಗಿದ್ದಂತೆ ತೋರುತ್ತದೆ. ಜಗನ್ನಾಥ ವಿಜಯ ವನ್ನು ಚಂದ್ರಮೌಳಿ ಪ್ರಮುಖ ನಿಖಿಲ ವಿದ್ವಜ್ಜನಂ ಮೆಚ್ಚೆ ಪೇಳ್ದೆಂ ಎಂದು ಕವಿ ಹೇಳಿಕೊಂಡಿರುವುದರಿಂದ ಚಂದ್ರಮೌಳಿ ಎಂಬ ವಿದ್ವಾಂಸ ಈತನ ಕಾವ್ಯವನ್ನು ಮೆಚ್ಚಿಕೊಂಡಿರಬೇಕು. ಈ ಚಂದ್ರಮೌಳಿ ವೀರಬಲ್ಲಾಳನ ಮಂತ್ರಿಯಾಗಿದ್ದಂತೆ 1181ರ ಶ್ರವಣಬೆಳಗೊಳದ ಒಂದು ಶಾಸನದಿಂದ ತಿಳಿಯುತ್ತದೆ. ಕವಿಗೆ ಕೃತಿಶಾರದಾಂಬ ಚಂದ್ರಾತಪ, ಕವಿರಾಜ ಎಂಬ ಬಿರುದುಗಳಿದ್ದಂತೆ ತೋರುತ್ತದೆ. ಪೂರ್ವಕವಿಗಳಲ್ಲಿ ಪಂಪ, ಪೊನ್ನ, ಗಜಾಂಕುಶ, ಗುಣವರ್ಮ, ಕರ್ಣಪಾರ್ಯ ಮೊದಲಾದವರನ್ನು ಸ್ತುತಿಸಿದ್ದಾನೆ. ಇವನನ್ನು ದೇವಕವಿ, ಚೌಂಡರಸ ಮೊದಲಾದವರು ಸ್ಮರಿಸಿದ್ದಾರೆ.

  • ಜಗನ್ನಾಥವಿಜಯ 18 ಆಶ್ವಾಸಗಳುಳ್ಳ ಚಂಪೂಗ್ರಂಥ. ವಿಕ್ರಮಾರ್ಜುನ ವಿಜಯದಲ್ಲಿ ಪಂಪ ಅರಿಕೇಸರಿಯನ್ನು ಅರ್ಜುನನೊಡನೆ, ಸಾಹಸಭೀಮ ವಿಜಯದಲ್ಲಿ ರನ್ನ ಸತ್ಯಾಶ್ರಯನನ್ನು ಭೀಮನೊಡನೆ ಸಮೀಕರಿಸಿ ಕಾವ್ಯರಚಿಸಿದ ಹಾಗೆಯೇ ರುದ್ರಭಟ್ಟ ವೀರಬಲ್ಲಾಳನನ್ನು ಜಗನ್ನಾಥನೊಡನೆ ಸಮೀಕರಿಸಿ ಈ ಕಾವ್ಯ ರಚಿಸಿದ್ದಾನೆ. ಈ ವೀರಬಲ್ಲಾಳ ಕಾಮದೇವನೆಂಬ ದೊರೆಯನ್ನು ಗೆದ್ದದ್ದರಿಂದ ಅರಿಕಾಮಧ್ವಂಸಿ, ರಾಜರಾಜನೆಂಬ ಚೋಳದೊರೆಯನ್ನು ಸಿಂಹಾಸನದಲ್ಲಿ ಪ್ರತಿಷ್ಠಿಸಿದ್ದರಿಂದ ರಾಜರಾಜ ಪ್ರತಿಷ್ಠಾನಿರತ, ಇವನ ರಾಣಿ ಉಮಾದೇವಿಯಾಗಿದ್ದರಿಂದ ಉಮಾಕಾಮಿ ನೀಜೀವಿತೇಶ-ಹೀಗೆ ಕವಿ ತನ್ನ ದೊರೆಯನ್ನು ಅಲ್ಲಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜಗನ್ನಾಥನೊಂದಿಗೆ ಸಮೀಕರಿಸಿ ಹೇಳಿದ್ದಾನೆ. ಜಗನ್ನಾಥ ವಿಜಯವೆಂಬ ಹೆಸರಿನ ಸಾರ್ಥಕತೆ ಹೀಗೆ ಚಾರಿತ್ರಿಕ ದೃಷ್ಟಿಯಿಂದಲೂ ಮಹತ್ತ್ವದ್ದಾಗಿದೆ.

ಜಗನ್ನಾಥವಿಜಯ ಕೃಷ್ಣನ ಚರಿತ್ರೆಯನ್ನು ಹೇಳುವ ಕಾವ್ಯ. ಇದರಲ್ಲಿ ಕೃಷ್ಣನ ಜನನದಿಂದ ಮೊದಲಗೊಂಡು ಆತ ಸಾಲ್ವ ವಧೆಯನ್ನು ಮಾಡಿ ದ್ವಾರಕಾಪಟ್ಟಣದಲ್ಲಿ ನೆಲಸುವ ವರೆಗಿನ ಕಥೆ ಚಿತ್ರಿತವಾಗಿದೆ. ಈ ಕಾವ್ಯಕ್ಕೆ ಮೂಲ ಸಂಸ್ಕøತ ವಿಷ್ಣಪುರಾಣವಾದರೂ ಕವಿ ಬರಿಯ ಭಾಷಾಂತರಕಾರನಲ್ಲ. ಮೂಲ ಕಥೆಯ ನೀರಸಭಾಗಗಳನ್ನು ತನ್ನ ಪ್ರತಿಭೆಯಿಂದ ರಸಾದ್ರಗೊಳಿಸಿದ್ದಾನೆ. ವಿಷ್ಣುಪುರಾಣದ ಪಂಚಮಾಂಶ ದಲ್ಲಿ ಕೃಷ್ಣಜನನ, ಪೂತನಿ, ಶಕಟ, ಧೇನುಕ, ರಜಕ, ಕೇಶಿ, ಮುಷ್ಟಿಕ, ಚಾಣೂರ ಮೊದಲಾದ ರಾಕ್ಷಸರ ಸಂಹಾರ, ಕಾಳಿಂಗಮರ್ದನ, ಗೋವರ್ಧನೋದ್ಧರಣ, ರಾಸಕ್ರೀಡೆ, ಅಕ್ರೂರಾಗಮನ, ಕಾರ್ಮುಕೋತ್ಸವ, ಕಂಸಸಂಹಾರ, ಪಾರಿಜಾತಾಪಹರಣ, ನರಕಾಸುರವಧೆ, ಉಷಾ-ಅನಿರುದ್ಧವಿವಾಹ, ಬಾಣಾಸುರ ಪರಾಜಯ ಮೊದಲಾದ ಕಥೆಗಳು ವಿವರವಾಗಿ ನಿರೂಪಿತವಾಗಿದ್ದರೂ ಕೇವಲ ವಾರ್ತಾರೂಪವಾಗಿವೆ. ಇವುಗಳಲ್ಲಿ ಕಾವ್ಯಸೌಂದರ್ಯವಾಗಲಿ, ರಸಾನುಭೂತಿಯಾಗಲಿ, ಪ್ರತಿಭಾ ಸೃಷ್ಟಿಯಾಗಲಿ ಕಂಡುಬರುವುದಿಲ್ಲ. ಆದರೆ ಜಗನ್ನಾಥ ವಿಜಯದಲ್ಲಿ ಈ ಒಂದೊಂದು ಸನ್ನಿವೇಶವೂ ರಸವತ್ತಾಗಿ ನಿರೂಪಿತವಾಗಿದೆ. ಅದರಲ್ಲೂ ಕೃಷ್ಣನ ಬಾಲಲೀಲೆ, ಅಕ್ರೂರಾಗಮನ, ಪಾರಿಜಾತಾಪಹರಣ, ಗೋಪಿಯರು ಕೃಷ್ಣನ ಕೊಳಲಗಾನಕ್ಕೆ ಮನಸೋತು ಓಡಿಬರುವ ಪ್ರಸಂಗ-ಈ ಸನ್ನಿವೇಶಗಳು ಕಾವ್ಯಮಯವಾಗಿವೆ. ಅಷ್ಟೇ ಅಲ್ಲ ಮೂಲದೊಂದಿಗೆ ಈ ಕೃತಿಯನ್ನು ಹೋಲಿಸಿ ನೋಡಿದರೆ ರುದ್ರಭಟ್ಟನ ಪ್ರತಿಭಾದರ್ಶನ ಸಹೃದಯರಿಗಾಗುತ್ತದೆ.

ದೀರ್ಘವಾದ ಸಮಾಸಪದಗಳಿಂದಲೂ ಅಪೂರ್ವವಾದ ಸಂಸ್ಕøತ ಶಬ್ದಗಳಿಂದಲೂ ಕೂಡಿರುವ ರುದ್ರಭಟ್ಟನ ಶೈಲಿ ಪ್ರೌಢವಾದುದು. ಆದರೆ ಕವಿ ಮನಸ್ಸು ಮಾಡಿದರೆ ತಿಳಿಯಾದ ಕನ್ನಡ ಪದಗಳನ್ನೇ ಬಳಸಿ ಚೆನ್ನಾಗಿ ಕಾವ್ಯ ಬರೆಯಬಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸಾಕಷ್ಟು ನಿದರ್ಶನಗಳು ಕಾಣಸಿಗುತ್ತವೆ. ಕಾವ್ಯದ ತುಂಬ ಬರುವ ಹದಿನೆಂಟು ವರ್ಣನೆಗಳಲ್ಲಿಯೂ ಸಂದರ್ಭಗಳನ್ನು ಬೆಳೆಸಿ ನಿರೂಪಿಸುವುದರಲ್ಲಿಯೂ ಕವಿಗೆ ಸಾಕಷ್ಟು ಶಕ್ತಿಯಿರುವುದು ವಿದಿತವಾಗುತ್ತದೆ. ವಿಷ್ಣುಭಕ್ತಿ ಈ ಕಾವ್ಯದ ಮುಖ್ಯರಸ.

  • ರಸಕಲಿಕೆ ಅಲಂಕಾರ ಗ್ರಂಥವಾಗಿದ್ದು ಸಂಸ್ಕøತದಲ್ಲಿ ರಚಿತವಾಗಿರು ವಂತೆ ತಿಳಿದು ಬರುತ್ತದೆ. ಸಾಳ್ವ ತನ್ನ ರಸರತ್ನಾಕರದಲ್ಲಿ ಈ ಗ್ರಂಥದ ಅನೇಕ ಭಾಗಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ಸರಸ್ವತೀ ತಿಲಕಕಾರ ತನ್ನ ಗ್ರಂಥದ ವ್ಯಂಗ್ಯ ಪ್ರಕರಣದಲ್ಲಿ ಜಗನ್ನಾಥವಿಜಯದ ಪದ್ಯಗಳನ್ನು ಉದಾಹರಿಸಿ ವ್ಯಾಖ್ಯಾನ ಮಾಡಿದ್ದಾನೆ. ಶಬ್ದಾನುಶಾಸನಕಾರ ತನ್ನ ವ್ಯಾಕರಣ ಗ್ರಂಥದಲ್ಲಿ ಈ ಗ್ರಂಥದಿಂದ ಲಕ್ಷ್ಯಪದ್ಯಗಳನ್ನು ಉದಾಹರಿಸಿದ್ದಾನೆ. ಸೂಕ್ತಿಸುಧಾರ್ಣವ ಹಾಗೂ ಕಾವ್ಯಸಾರಗಳಲ್ಲಿಯೂ ಈ ಗ್ರಂಥದ ಅನೇಕ ಪದ್ಯಗಳು ದೊರೆಯುತ್ತವೆ.

ಸಂಸ್ಕøತ ಪಂಡಿತನೊಬ್ಬ ಜಗನ್ನಾಥವಿಜಯದ ಮಂಗಳಶ್ಲೋಕಗಳಿಗೆ ಸಂಸ್ಕøತದಲ್ಲಿ ಪಾಷಾಣವ್ಯಾಖ್ಯಾ ಎಂಬ ವ್ಯಾಖ್ಯಾನವೊಂದನ್ನು ಬರೆದಿದ್ದಾನೆ. (ಪಿ.ವಿ.ಸಿ.)