ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಡಿಯೊಮೀಟರ್

ವಿಕಿಸೋರ್ಸ್ದಿಂದ

ರೇಡಿಯೊಮೀಟರ್ ವಿಕಿರಣ ರೂಪದ ಶಕ್ತಿಯನ್ನು ದಾಖಲಿಸಲು ಅಥವಾ ಅಳೆಯಲು ಬಳಸುವ ಉಪಕರಣಗಳ ಸರ್ವನಾಮ.

ಥರ್ಮೊಪೈಲ್: ಆನೇಕ ಉಷ್ಣಯುಗ್ಮಗಳ (ಥರ್ಮೊಕಪಲ್) ಶ್ರೇಣಿ ಜೋಡಣೆ. ಉಷ್ಣಯುಗ್ಮಗಳ ಸಂಖ್ಯೆಗೆ ಅನುಪಾತೀಯವಾಗಿ ಇದರ ಸಂವೇದನಶೀಲತೆ ಹೆಚ್ಚುತ್ತದೆ. ವಿಕಿರಣ ಬೀಳುವ ಸಂಧಿಗಳಿಗೆ (ಊ, ಊ: ಚಿತ್ರ 1) ಮಾಡಿದ ಹಣತೆಮಸಿಯ ಲೇಪನದಿಂದಾಗಿ ವಿಕಿರಣ ಹೀರಿಕೆಯ ದಕ್ಷತೆಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಇಂಥ ಉಷ್ಣಯುಗ್ಮಗಳಲ್ಲಿ ಬಿಸ್ಮತ್ ಮತ್ತು ಬೆಳ್ಳಿಯ ಸಪುರ ತಂತಿಗಳ ಬಳಕೆ ಇದೆ. ಥರ್ಮೊಪೈಲಿನಲ್ಲಿ ಉಂಟಾಗುವ ವಿದ್ಯುತ್‍ಪ್ರವಾಹದ ಪ್ರಮಾಣ ವಿಕಿರಣತೀವ್ರತೆಯ ಸೂಚಕ.

ಬಾಯ್ಸ್ ರೇಡಿಯೊ ಮೈಕ್ರೊಮೀಟರ್: ಉಷ್ಣಯುಗ್ಮ ಮತ್ತು ವಿದ್ಯುತ್‍ಪ್ರವಾಹ ಮಾಪಕ ಇವೆರಡರ ಕಾರ್ಯಗಳನ್ನೂ ಮಾಡಬಲ್ಲ ಉಪಕರಣ. ಆಂಟಿಮನಿ-ಬಿಸ್ಮತ್ ಲೋಹಗಳ ಉಷ್ಣಯುಗ್ಮ; ಲೋಹದ್ವಯದ ಒಂದು ಜೊತೆ ತುದಿಗಳನ್ನು ತಾಮ್ರದ ತಗಡಿಗೆ ಬೆಸೆದು ರೂಪಿಸಿದ ಒಂದು ಸಂಧಿ; ತಾಮ್ರದ ತಗಡಿಗೆ ಹಣತೆಕಪ್ಪಿನ ಲೇಪನ; ಕ್ವಾಟ್ರ್ಸ್ ತಂತುವಿನ ನೆರವಿನಿಂದ ಕಾಂತಧ್ರುವಗಳ ನಡುವೆ ತೂಗಾಡುತ್ತಿರುವ ತಾಮ್ರತಂತಿಯ ಹಗುರ ಸುರುಳಿ ಮತ್ತು ಇದಕ್ಕೆ ಲೋಹದ್ವಯದ ಮತ್ತೆರಡು ತುದಿಗಳ ಜೋಡಣೆ; ಸುರುಳಿಯ ಮೇಲ್ಭಾಗದಲ್ಲಿ ಸ್ಥಾಪಿತವಾದ ಚಿಕ್ಕ ಕನ್ನಡಿ; ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣದಲ್ಲಿ ಆಗುವ ವಿಚಲನೆಯನ್ನು ಅಳೆಯಲು ನೆರವು ನೀಡುವ ಅಳತೆಪಟ್ಟಿ—ಇದು ಉಪಕರಣದ ರಚನೆ (ಚಿತ್ರ 2). ತಾಮ್ರದ ತಗಡಿನ ಮೇಲೆ ವಿಕಿರಣ ಬಿದ್ದಾಗ ತಾಪ ಹೆಚ್ಚಿ ಸುರುಳಿಯಲ್ಲಿ ಔಷ್ಣಿಕ ವಿದ್ಯುತ್ ಪ್ರವಹಿಸುತ್ತದೆ. ವಿದ್ಯುತ್ ಪ್ರವಾಹದ ಪ್ರಮಾಣಕ್ಕೆ ಅನುಪಾತೀಯವಾಗಿ ಸುರುಳಿ ತಿರುಗುತ್ತದೆ. ಈ ತಿರುಗುವಿಕೆಗೆ ಅನುಗುಣ ವಾಗಿ ಸುರುಳಿಯಲ್ಲಿಯ ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣ ವಿಚಲಿಸುತ್ತದೆ. ಈ ವಿಚಲನೆಯನ್ನು ಅಳೆದು ವಿಕಿರಣತೀವ್ರತೆಯನ್ನು ಲೆಕ್ಕಿಸಬಹುದು.

ಬೊಲೊಮೀಟರ್: ವಾಹಕದ ತಾಪ ಬದಲಾವಣೆಯೊಂದಿಗೆ ಅದರ ವಿದ್ಯುತ್‍ರೋಧವೂ ಬದಲಾಗುತ್ತದೆ ಎಂಬ ತತ್ತ್ವಾಧಾರಿತ ಉಪಕರಣ. ವೀಟ್ಸ್‍ಟನ್ ಬ್ರಿಡ್ಜ್ ಎಂಬುದು ನಾಲ್ಕು ರೋಧಗಳುಳ್ಳ ವ್ಯವಸ್ಥೆ. ಇದರಲ್ಲಿ ಎರಡು ಪ್ಲಾಟಿನಮ್ ಪಟ್ಟಿಗಳು ಎರಡು ರೋಧಗಳ ಪಾತ್ರ ನಿರ್ವಹಿಸುತ್ತವೆ. ಇವುಗಳ ಪೈಕಿ ಒಂದಕ್ಕೆ ಹಣತೆ ಕಪ್ಪು ಲೇಪಿಸಿದರೆ ಬೊಲೊಮೀಟರ್ ಸಿದ್ಧ. ಹಣತೆ ಕಪ್ಪು ಲೇಪಿಸಿದ ಪಟ್ಟಿಯ ಮೇಲೆ ವಿಕಿರಣ ಬಿದ್ದು ಬಿಸಿಯಾದಾಗ ವಿದ್ಯುತ್ ರೋಧವೂ ಬದಲಾಗುತ್ತದೆ. ಗಾಲ್ವನೊಮೀಟರ್ ನೆರವಿನಿಂದ ರೋಧದಲ್ಲಿ ಆದ ಬದಲಾವಣೆ ಅಳೆಯಬಹುದು. ಕ್ಯಾಲೆಂಡರ್ ರೇಡಿಯೊ ಬ್ಯಾಲನ್ಸ್, ಕ್ರೂಕ್ಸ್ ರೇಡಿಯೊಮೀಟರ್, ನಿಕೊಲ್ಸ್ ಟಾರ್ಶನ್ ರೇಡಿಯೊಮೀಟರ್ ಮೊದಲಾದವು ಬಳಕೆಯಲ್ಲಿರುವ ಇತರ ರೇಡಿಯೊಮೀಟರುಗಳು. ಸಂದರ್ಭೋಚಿತವಾಗಿ ಇವುಗಳ ಪೈಕಿ ಒಂದನ್ನು ಬಳಸಲಾಗುತ್ತದೆ.