ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೈಬ್‍ನಿಟ್ಸ್, ಗಾಟ್‍ಫ್ರೀಟ್ ವಿಲ್‍ಹೆಲ್ಮ್ ಫಾನ್

ವಿಕಿಸೋರ್ಸ್ದಿಂದ

1646-1716. ಜರ್ಮನಿಯ ಗಣಿತವಿದ. ಅವಕಲನ ಹಾಗೂ ಅನುಕಲನವಿಜ್ಞಾನಗಳಿಗೆ ಸುಭದ್ರ ಬುನಾದಿಯನ್ನು ಒದಗಿಸಿದ ಮೇಧಾವಿ (ಡಿಫರೆನ್ಶಿಯಲ್ ಅಂಡ್ ಇಂಟಿಗ್ರಲ್ ಕ್ಯಾಲ್ಕುಲಸ್). ನುರಿತ ರಾಜನೀತಿಜ್ಞ, ತತ್ತ್ವಚಿಂತಕ ಹಾಗೂ ಬಹುಮುಖಪ್ರತಿಭೆಯ ನಿಶಿತಮತಿ. ಆಗ್ನೇಯ ಜರ್ಮನಿಯ ಹಿಂದಿನ ರಾಜ್ಯವಾಗಿದ್ದ ಸ್ಯಾಕ್ಸನಿಯ ಲೈಪ್‍ಸಿಗ್ ಪಟ್ಟಣದಲ್ಲಿ 1646 ಜುಲೈ 1ರಂದು ಜನಿಸಿದ. ಇವನ ಪ್ರಾಥಮಿಕ ವಿದ್ಯಾಭ್ಯಾಸ ಅದೇ ಪಟ್ಟಣದಲ್ಲಿ ನಡೆಯಿತು. ಚಿಕ್ಕಂದಿನಿಂದಲೂ ಪ್ರಪಂಚದ ಸಮಸ್ತ ವಿಷಯಗಳ ಬಗ್ಗೆಯೂ ಅಮಿತಾಸಕ್ತಿ ತಳೆದಿದ್ದವ. ಎಲ್ಲವನ್ನೂ ಅರಿತುಕೊಳ್ಳಬೇಕು ಎಂಬ ತೀವ್ರಬಯಕೆ. ಈ ಉತ್ಸಾಹ ಜೀವನಪರ್ಯಂತವೂ ಉಳಿದು ಬಂದಿತ್ತು. ಪ್ರತಿಯೊಂದನ್ನೂ ತಾನೇ ಮಾಡಬೇಕೆಂಬುದಾಗಿ ನಡೆಸಿದ ಪ್ರಯತ್ನ ಇವನನ್ನು ಯಾವುದೇ ಒಂದು ನಿರ್ದಿಷ್ಟ ವಿಚಾರದಲ್ಲೂ ಪ್ರಥಮನೆಂದಿಸಲು ಬಿಡಲಿಲ್ಲ.

ಇಪ್ಪತ್ತನೆಯ ವಯಸ್ಸಿಗಾಗಲೇ ಈತ ಪ್ರಮುಖ ಗಣಿತ ಗ್ರಂಥಗಳನ್ನು ಅಧ್ಯಯನ ಮಾಡಿ ಸಾಕಷ್ಟು ಪಾಂಡಿತ್ಯ ಗಳಿಸಿದ್ದ. ಲೈಪ್‍ಸಿಗ್‍ನಲ್ಲಿದ್ದಾಗ ಗಣಿತ ಅಭ್ಯಾಸದ ಜೊತೆಗೆ ತತ್ತ್ವಶಾಸ್ತ್ರವನ್ನೂ ಅಭ್ಯಸಿಸಿದ. ನರ್ನ್‍ಬರೋ ಎಂಬ ಪಟ್ಟಣದಲ್ಲಿ ನ್ಯಾಯಶಾಸ್ತ್ರವನ್ನು ವ್ಯಾಸಂಗ ಮಾಡಿ, ಮೇನ್ಸಿನ ಪ್ರತಿನಿಧಿಯೊಂದಿಗೆ ಕೆಲಕಾಲ ಕೆಲಸ ಮಾಡಿದ. ಅನಂತರದ ಸಂದರ್ಭಗಳು ಇವನಿಗೆ ನುರಿತ ರಾಜಕಾರಣಿ ಎಂಬ ಪ್ರಶಂಸೆಗಳಿಸಲು ಸಹಾಯವೆಸಗಿದುವು. ಕ್ಯಾತೊಲಿಕ್ ಮತ್ತು ಪ್ರಾಟೆಸ್ಟೆಂಟ್ ಚರ್ಚುಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಸಮನ್ವಯಿಸಲು ಈತ ಸಾಕಷ್ಟು ಶ್ರಮಿಸಿದ. ಜರ್ಮನಿಯ ಮೇಲೆ ಆಕ್ರಮಣ ನಡೆಸಬೇಕೆಂದು ಯೋಚಿಸಿದ್ದ 14ನೆಯ ಲೂಯಿ ದೊರೆಯ(1638-1715) ಮನಸ್ಸನ್ನು ಪರಿವರ್ತಿಸಿ, ಈಜಿಪ್ಟಿನ ವಿರುದ್ಧ ಹೋರಾಟ ನಡೆಸುವಂತೆ ಪ್ರೇರೇಪಿಸಿದ. ಲೂಯಿ ಈ ಆಕ್ರಮಣ ನಡೆಸಲಿಲ್ಲವಾದರೂ ಮುಂದೆ ಅದು ನೆಪೋಲಿಯನ್ನನಿಂದ ನಡೆಯಿತು. ರಷ್ಯದ ಜ಼ಾರ್ ದೊರೆಯಾಗಿದ್ದ ಒಂದನೆಯ ಪೀಟರ್‍ನಿಗೆ (1672-1725) ಸಲಹೆಗಾರನಾಗಿದ್ದ. ಮುಂದೆ ಈತ ಹಾಲೆಂಡ್, ಫ್ರಾನ್ಸ್, ಇಂಗ್ಲೆಂಡುಗಳಲ್ಲಿ ಪ್ರವಾಸಕೈಗೊಂಡು ಅಲ್ಲಿಯ ಪ್ರಮುಖ ವಿದ್ವಾಂಸರನ್ನೂ ಗಣಿತವಿದರನ್ನೂ ಭೇಟಿ ಆದ. ಆ ಬಳಿಕ ಕೆಲಕಾಲ ಬ್ರನ್ಸ್‍ವಿಕ್ ಒಡೆಯರಲ್ಲಿ ಕೆಲಸ ಮಾಡಿಕೊಂಡಿದ್ದು 1676ರಲ್ಲಿ ಹ್ಯಾನೋವರ ಡ್ಯೂಕನ ಗ್ರಂಥಾಲಯದ ಗ್ರಂಥಪಾಲಕನಾಗಿ ಸೇವೆಗೈದ. ಅನಂತರ 40 ವರ್ಷಗಳ ತನಕವೂ ಅಲ್ಲೇ ನೆಲಸಿದ್ದ.

ಇಂಗ್ಲೆಂಡಿನಲ್ಲಿದ್ದಾಗ ಇವನಿಗೆ ಹೆಚ್ಚಿನ ವಿರಾಮ ಒದಗಿತ್ತು. ಈ ಅವಧಿಯಲ್ಲಿ ತನ್ನ ಬಹುಪಾಲು ವೇಳೆಯನ್ನು ಗಣಿತಸಂಶೋಧನೆ ಗಾಗಿಯೇ ವಿನಿಯೋಗಿಸಿದ. ಆ ವೇಳೆಗಾಗಲೆ ಐಸಾಕ್ ನ್ಯೂಟನ್ (1642-1727) ಇಂಗ್ಲೆಂಡಿನ ಬಹುಮುಖ ಪ್ರತಿಭಾವಂತನೆಂದು ಹೆಸರುವಾಸಿಯಾಗಿದ್ದ. ಆತನೂ ಕಲನವಿಜ್ಞಾನವನ್ನು (ಕ್ಯಾಲ್ಕುಲಸ್) ಕುರಿತು ಬಹಳಷ್ಟು ಕೆಲಸಮಾಡಿದ್ದ. ಇಬ್ಬರೂ ಸಮಕಾಲೀನರೇ ಆಗಿದ್ದುದರಿಂದ ಒಂದೇ ಗಣಿತವಿಚಾರವನ್ನು ಕುರಿತು ಇಬ್ಬರಲ್ಲೂ ಆಲೋಚನೆಗಳು ಮೂಡುತ್ತಿದ್ದುದು ಸಹಜವೇ ಆಗಿರುತ್ತಿತ್ತು. ಕಲನವಿಜ್ಞಾನದಲ್ಲಿ ಬಳಸುವ ಗಣಿತೀಯ ಪ್ರತೀಕಗಳನ್ನು ನ್ಯೂಟನ್ ಉಪಜ್ಞಿಸಿದ್ದನಾದರೂ ಲೈಬ್‍ನಿಟ್ಸ್ ಬಳಸಿದ ಪ್ರತೀಕಗಳು ಹೆಚ್ಚು ಉತ್ಕೃಷ್ಟವಾಗಿದ್ದುವು. ಕಲನವಿಜ್ಞಾನ ಸಂಬಂಧಿ ಪರಿಕಲ್ಪನೆಗಳನ್ನು ನ್ಯೂಟನ್ ಮೊದಲು ಗ್ರಹಿಸಿದ್ದನೇ ಲೈಬ್‍ನಿಟ್ಸ್ ಮೊದಲು ಗ್ರಹಿಸಿದ್ದನೇ ಎಂಬುದರ ಬಗ್ಗೆ ಭಿನ್ನಾಭಿಪ್ರಾಯ-ಗಳಿದ್ದುವು. ಇಬ್ಬರ ಪರವಾಗೂ ವಾದಮಾಡುವಂಥ ಜನ ಇರುತ್ತಿದ್ದರು. ನ್ಯೂಟನ್ನನ ವಿಚಾರಗಳ ಬಗ್ಗೆ ಲೈಬ್‍ನಿಟ್ಸ್ ಕೃತಿಚೌರ್ಯ ಎಸಗಿದ್ದಾನೆಂದೂ ಜನ ಆಪಾದನೆ ಮಾಡುತ್ತಿದ್ದರು. 1675ರ ವೇಳೆಗೆ ಈತ ಕಲನವಿಜ್ಞಾನವನ್ನು ಸಾಕಷ್ಟು ಸುಪುಷ್ಟವಾಗಿ ಬೆಳೆಸಿದ. ಇವನ ಶೋಧನೆಯ ವಿವರಗಳು 1684ರಿಂದ ಕೆಲಕಾಲ ‘ಆಕ್ಟ ಎರೂಡಿಟೋರಮ್’ ಎಂಬ ವಿಜ್ಞಾನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. ಈ ಪತ್ರಿಕೆಯನ್ನು ಲೈಬ್‍ನಿಟ್ಸ್ ಆಟೋ ಮೆಂಕೇ ಎಂಬವನ ಸಹಕಾರ-ಸಹಾಯದಿಂದ ಪ್ರಕಟಿಸಿದ್ದ (1682). ನ್ಯೂಟನ್ ತನ್ನ ಗಣಿತಶೋಧನೆಗಳನ್ನು ಪ್ರಕಟಿಸುವುದು ವಿಳಂಬಮಾಡಿದ್ದರಿಂದ (1704) ಯಾವ ಶೋಧನೆಗೆ ಯಾರು ಆದ್ಯರು ಎಂಬುದರ ಬಗ್ಗೆ ಸಂದಿಗ್ಧತೆ ಕಂಡುಬರುತ್ತಿತ್ತು. ಕೆಲವೊಮ್ಮೆ ಇದು ವಿರಸಕ್ಕೂ ಎಡೆಮಾಡಿ ಕೊಟ್ಟದ್ದುಂಟು. ಆದರೆ ಶೋಧನೆಗಳ ಪ್ರಗತಿಗೆ ಯಾವುದೇ ಅಡ್ಡಿ ಆತಂಕಗಳೂ ಎದುರಾಗಲಿಲ್ಲ. ಕಲನವಿಜ್ಞಾನದಲ್ಲಿ ಬಳಕೆಯಲ್ಲಿರುವ ಕೆಲವೊಂದು ಪ್ರತೀಕಗಳು, ಅವಕಲಗಳು (ಡಿಫರೆನ್ಷಿಯಲ್ಸ್), ಆಚ್ಛಾದಕಗಳು (ಎನ್ವಲಪ್ಸ್), ಆಶ್ಲೇಷೀ ವರ್ತುಲಗಳು (ಆಸ್ಕ್ಯುಲೇಟಿಂಗ್ ಸರ್ಕಲ್ಸ್) ಮುಂತಾದವುಗಳ ಬಗ್ಗೆ ಲೈಬ್‍ನಿಟ್ಸ್ ವಿಶೇಷವಾಗಿ ಕೆಲಸಮಾಡಿದ. ಗಣನಯಂತ್ರವೊಂದನ್ನು ಈತ ಉಪಜ್ಞಿಸಿದ. ಆ ವೇಳೆಗಾಗಲೇ ಫ್ರೆಂಚ್ ಗಣಿತವಿದ ಬ್ಲೇಸ್ ಪಾಸ್ಕಲ್ (1623-62) ಎಂಬವ ಗಣನಯಂತ್ರ ವೊಂದನ್ನು ಉಪಜ್ಞಿಸಿದ್ದ. ಆದರೆ ಪಾಸ್ಕಲನ ಯಂತ್ರಕ್ಕಿಂತಲೂ ಲೈಬ್‍ನಿಟ್ಸ್‍ನ ಗಣನಯಂತ್ರವೇ ಮೇಲುಗೈ ಎನಿಸಿತ್ತು. ಈ ಕಾರಣಕ್ಕಾಗಿ ಇವನಿಗೆ ರಾಯಲ್ ಸೊಸೈಟಿಯ ಸದಸ್ಯತ್ವ ದೊರೆಯಿತು. ಹ್ಯಾನೋವರ್‍ನಲ್ಲಿದ್ದಾಗ ಕ್ರಿಯಾತ್ಮಕ ರಾಜಕಾರಣಿ ಎನಿಸಿಕೊಂಡಿದ್ದರೂ ಒಂದನೆಯ ಜಾರ್ಜ್ ದೊರೆ(1660-1727) ಪಟ್ಟಕ್ಕೆ ಬಂದಾಗ, ಇವನ ಜೀವಿತದ ಕೊನೆಯ ಎರಡು ವರ್ಷಗಳಲ್ಲಿ ಇವನಿಗೆ ಸಾಕಷ್ಟು ಗೌರವ ಸಲ್ಲದೆ ಅಲಕ್ಷ್ಯಕ್ಕೆ ಈಡಾದ. ಕೊನೆ ಕೊನೆಗೆ ರಾಜಕಾರಣದಲ್ಲಿ ಈತನಿಗೆ ಉಂಟಾದ ಶಂಕೆಗಳೇ ಇವನ ಗಣಿತಶೋಧನೆಯಲ್ಲೂ ಉಂಟಾಗಿವೆ ಎಂಬ ಅಭಿಪ್ರಾಯಕ್ಕೆ ಅಲ್ಲಿಯ ವಿಮರ್ಶಕರು ಬಂದರಾದರೂ ಮುಂದೆ ಆಧುನಿಕ ಗಣಿತವಿಮರ್ಶಕರು ಇವನನ್ನೂ ಇವನ ಗಣಿತಚಾತುರ್ಯವನ್ನೂ ಬಲುಮಟ್ಟಿಗೆ ಮೆಚ್ಚಿಕೊಂಡರು. ಈತ 1700ರಲ್ಲಿ ಪ್ರಷ್ಯದ ದೊರೆ ಒಂದನೆಯ ಫ್ರೆಡರಿಕನನ್ನು (1657-1713) ಪ್ರೇರೇಪಿಸಿ, ಲಂಡನ್ನಿನ ರಾಯಲ್ ಸೊಸೈಟಿ ಮತ್ತು ಪ್ಯಾರಿಸ್ಸಿನ ಅಕಾಡೆಮಿ ಆಫ್ ಸೈನ್ಸಸ್‍ಗಳ ಮಾದರಿಯಲ್ಲೆ ಬರ್ಲಿನ್ನಿನಲ್ಲೂ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆ ಸ್ಥಾಪಿಸಲು ಪ್ರಯತ್ನಿಸಿ ಸಫಲನಾದ. ಇವನಿಗೆ ಅದರ ಪ್ರಥಮ ಅಧ್ಯಕ್ಷಸ್ಥಾನವೂ ದೊರೆಯಿತು. ನ್ಯೂಟನ್ ಹಾಗೂ ಲೈಬ್‍ನಿಟ್ಸರು ಈ ಸಂಸ್ಥೆಯ ಪ್ರಥಮ ವಿದೇಶೀ ಸದಸ್ಯರಾಗಿ ಚುನಾಯಿತರಾದರು(1700).

ತತ್ತ್ವಚಿಂತಕನಾಗಿ ಲೈಬ್‍ನಿಟ್ಸ್, ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಮೋನ್ಯಾಡ್ (ಪರಮ ಮೂಲವಸ್ತು) ಪರಿಕಲ್ಪನೆಯನ್ನು ಮುಂದಿಟ್ಟು ತನ್ನ ತಾತ್ತ್ವಿಕ ವಾಸ್ತವಿಕ ಪ್ರಪಂಚವೇ ಇತರ ಎಲ್ಲ ಸಾಧ್ಯಪ್ರಪಂಚ- ಗಳಿಗಿಂತಲೂ ಉತ್ತಮವಾದದ್ದೆಂಬ ತತ್ತ್ವವನ್ನು ಪ್ರತಿಪಾದಿಸಿದ. ಇವನ ಬರೆಹಗಳು ಬೇರೆ ಬೇರೆ ಮಹಾಪ್ರಬಂಧಗಳಲ್ಲೂ ಲೇಖನಗಳಲ್ಲೂ ಪತ್ರಗಳಲ್ಲೂ ಚದುರಿಹೋಗಿವೆ. ಈತನ ತಾತ್ತ್ವಿಕ ಚಿಂತನೆಗಳ ಬಗ್ಗೆ ಇಂಗ್ಲೆಂಡಿನ ಮಹಾತತ್ತ್ವಚಿಂತಕ ಬಟ್ರ್ರಾಂಡ್ ರಸಲ್‍ನ ‘ಕ್ರಿಟಿಕಲ್ ಎಕ್ಸ್‍ಪೊಷಿಸನ್ ಆಫ್ ಫಿಲಾಸಫಿ ಆಫ್ ಲೈಬ್‍ನಿಟ್ಸ್’ ಎಂಬ ಗ್ರಂಥದಲ್ಲಿ (1900) ವಿವರಗಳಿವೆ. ಈತ 1916 ನವೆಂಬರ್ 14ರಂದು ನಿಧನನಾದ.

(ಬಿ.ಎಸ್.ಎಸ್.)