ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಗ್, ಆಂಡ್ರು

ವಿಕಿಸೋರ್ಸ್ದಿಂದ

1844-1912. ಪುರಾಣ ಮಾನವಶಾಸ್ತ್ರ ಹಾಗೂ ಜನಾಂಗ ಶಾಸ್ತ್ರಗಳ ಪರಸ್ಪರ ಸಂಬಂಧ ಗುರುತಿಸಿ ಇವನ್ನು ಒಂದ ಕ್ಕೊಂದು ಪೂರಕವಾಗಿ ಅಭ್ಯಾಸಮಾಡಬೇಕೆಂದು ಕಂಡುಕೊಂಡ ಪ್ರಸಿದ್ಧ ವಿದ್ವಾಂಸ ಲೇಖಕ. ಸ್ಕಾಟ್ಲೆಂಡಿನ ಸೆಲ್ಕರ್ಕ್‍ನಲ್ಲಿ 1844ರಂದು ಜನಿಸಿದ. 1875ರಲ್ಲಿ ಪತ್ರಿಕೋದ್ಯೋಗಿಯಾಗಿ ಲಂಡನ್ನಿಗೆ ಬಂದ. ಪುರಾಣ ಕಲ್ಪನೆಯ ಬಗ್ಗೆ ಮ್ಯಾಕ್ಸ್‍ಮುಲ್ಲರ್‍ನ ಅಭಿಪ್ರಾಯಗಳನ್ನು ವಿರೋಧಿಸಿದ ಮಾನವಶಾಸ್ತ್ರಜ್ಞರಲ್ಲಿ ಇವನ ಹೆಸರು ಪ್ರಮುಖವಾದದ್ದು. ಎಲ್ಲ ಜನಪದ ಕಥೆಗಳ ಮೂಲವನ್ನು ಭಾರತಕ್ಕೆ ಆರೋಪಿಸಿದ ಬೆನ್ಛೆಯ ತತ್ತ್ವವನ್ನು ವಿರೋಧಿಸಿ, ಟೇಲರನ ‘ಸರ್ವೈವಲ್’ ಸೂತ್ರದ ಮೇರೆಗೆ ಕಥೆಗಳು ಆದಿಮಾನವರ ಕಾಣಿಕೆಗಳೆಂದು ಮಾನವಶಾಸ್ತ್ರೀಯ ಮಾರ್ಗದಲ್ಲಿ ವಿವರಿಸಲು ಪ್ರಯತ್ನಿಸಿದ.

ಬ್ಯಾಲಡ್ಸ್ ಅಂಡ್ ಲಿರಿಕ್ಸ್ ಆಫ್ ಫ್ರಾನ್ಸ್ (1872), ಪೆರ್ರಾಲ್ಟನ್ ಪಾಪ್ಯುಲರ್ ಟೇಲ್ಸ್ (1880) ಮಿಥ್, ರಿಚುಯಲ್ ಅಂಡ್ ರಿಲಿಜನ್ (1887), ಬ್ಲೂ ಫೇರಿ ಟೇಲ್ ಬುಕ್ (1889)-ಇವು ಈತನ ಪ್ರಸಿದ್ಧ ಕೃತಿಗಳು. ಸ್ಕಾಟ್ಲೆಂಡಿನ ಇತಿಹಾಸವನ್ನು ಕುರಿತು ನಾಲ್ಕು ಸಂಪುಟಗಳನ್ನು ಪ್ರಕಟಿಸಿದ್ದಾನೆ (1900-07). ಅಲ್ಲದೆ ಜನಪದ ಲಾವಣಿಗಳ ಧಾಟಿಯಲ್ಲಿ ಈತ ರಚಿಸಿರುವ ಅನೇಕ ಕವನಗಳು (ಬ್ಯಾಲಡ್ಸ್ ಇನ್ ಬ್ಲೂ ಚೈನ, 1880) ಮನೋಹರವಾಗಿವೆ. ಇತರ ವಿದ್ವಾಂಸರೊಡನೆ ಈತ ಹೋಮರ್‍ನ ಒಡಿಸ್ಸಿ (1879) ಹಾಗೂ ಇಲಿಯಡ್ (1883) ಕಾವ್ಯಗಳನ್ನು ಅನುವಾದಿಸಿದ್ದಾನೆ.

(ಜೆ.ಎಸ್.ಪಿ.)