ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಪ್ರೊಫೈರ್‍ಗಳು

ವಿಕಿಸೋರ್ಸ್ದಿಂದ

ಅಗ್ನಿಶಿಲೆಗಳ ಗುಂಪಿಗೆ ಸೇರಿದವುಗಳ ಪೈಕಿ ಒಂದು. ಈ ಗುಂಪಿನ ಶಿಲೆಗಳು ಸಾಮಾನ್ಯವಾಗಿ ಸಣ್ಣ ಒಡ್ಡುಗಳಂತೆ ಕಾಣಬರುತ್ತವೆ. ಬಣ್ಣದಲ್ಲಿ ಕಪ್ಪಗಿರುವುದರಿಂದ ಇವುಗಳಲ್ಲಿ ಕಪ್ಪು ಛಾಯೆಯ ಖನಿಜಗಳೇ ಅಧಿಕ. ಫಾನ್ ಗಂಬೆಲ್ ಎಂಬ ಜರ್ಮನ್ ಭೂವಿಜ್ಞಾನಿ ಆ ನಾಡಿನ ಫಿಷೆಲ್‍ಬರ್ಗ್ ಪ್ರ್ಯಾಂತದ ಕಪ್ಪನೆಯ ಒಡ್ಡುಶಿಲೆಗಳನ್ನು ವಿವರಿಸುವಾಗ ಈ ಹೆಸರನ್ನು ಉಲ್ಲೇಖಿಸಿರುವುದು ಕಂಡುಬಂದಿದೆ.

ಲ್ಯಾಂಪ್ರೊಫೈರ್‍ಗಳು ಪಾರ್ಫಿರಿಟಿಕ್ ವಿನ್ಯಾಸ ಸೂಚಿಸುತ್ತವೆ. ಬಯೊಟೈಟ್, ಹಾರ್ನ್‍ಬ್ಲೆಂಡ್ ಮತ್ತು ಅಗೈಟ್ ಎಂಬ ವರ್ಣ ಖನಿಜಗಳು ದೊಡ್ಡ ದೊಡ್ಡ ಹರಳುಗಳ ಸೂಕ್ಷ್ಮಕಣರಚನೆಯ ವಸ್ತುವಿನ ಮಧ್ಯೆ ಹುದುಗಿರುತ್ತವೆ. ಹಲವು ಲ್ಯಾಂಪ್ರೊಫೈರ್‍ಗಳಲ್ಲಿ ಈ ಬಗೆಯ ಪಿನೋಕ್ರಿಸ್ಟ್‍ಗಳು ಶಿಲೆಯ ಉದ್ದಕ್ಕೂ ಹರಡಿದರೆ ಅಲ್ಲಲ್ಲಿ ಕೇಂದ್ರೀಕೃತವಾ ಗಿರುತ್ತವೆ. ಸೂಕ್ಷ್ಮಕಣರಚನೆಯ ಖನಿಜಗಳಲ್ಲಿ ಮುಖ್ಯವಾದದ್ದು ಫೆಲ್ಸ್‍ಪಾರ್. ಇದು ಸೂಜಿಯಂತೆ ಮೊನಚಾದ, ಸೂಕ್ಷ್ಮ ಹರಳುಗಳೋಪಾ ದಿಯಲ್ಲಿ ಹರಡಿಕೊಂಡಿರುತ್ತದೆ. ಹಲವುವೇಳೆ ಈ ಸೂಕ್ಷ್ಮಕಣಗಳ ಗೋಳಕಗಳೂ (ಸ್ಫೆರೂಲೈಟ್ಸ್) ಕಂಡುಬರುವುದುಂಟು.

ಇವುಗಳಲ್ಲಿರುವ ಮುಖ್ಯ ಖನಿಜಗಳೆಂದರೆ ಬಯೊಟೈಟ್, ಹಾರ್ನ್ ಬ್ಲೆಂಡ್, ಪೈರಾಕ್ಸೀನ್, ಪ್ಲೇಜಿ ಯೊಕ್ಲೇಸ್, ಆರ್ಥೊಕ್ಲೇಸ್, ಕ್ವಾಟ್ರ್ಸ್, ನೆಫೆಲೀನ್, ಆಲಿವೀನ್ ಇತ್ಯಾದಿ. ಖನಿಜ ಸಂಯೋಜನೆಯನ್ನು ಅನುಸರಿಸಿ ಸುಮಾರು ಮೂವತ್ತು ಬಗೆಗಳನ್ನು ವಿವರಿಸಲಾಗಿದೆ. ಇವುಗಳಲ್ಲಿ ಮುಖ್ಯವಾದವು: ಮಿನೆಟ್, ಕರ್ಸಂಟೈಟ್, ಸ್ಪೆಸಾರ್‍ಟೈಟ್, ಕ್ಯಾಂಪ್ಟೊನೈಟ್, ಮಾಂಚಿಕೈಟ್ ಮತ್ತು ಅಲ್‍ನ್ಡಾಟ್.

ಬಯೊಟೈಟ್ ಖನಿಜ ಪ್ರಧಾನವಾದವು ಮಿನೆಟ್ ಮತ್ತು ಕರ್ಸಂಟೈಟ್ ಗಳು. ಮಿನೆಟ್‍ನಲ್ಲಿ ಆರ್ಥೊಕ್ಲೇಸ್ ಅಧಿಕ ಪ್ರಮಾಣದಲ್ಲೂ ಕರ್ಸಂಟೈಟ್‍ನಲ್ಲಿ ಪ್ಲೇಜಿಯೊಕ್ಲೇಸ್ ಅಧಿವಾಗಿಯೂ ಇರುತ್ತವೆ. ಆಗೈಟ್ ಮತ್ತು ಹಾರ್ನ್‍ಬ್ಲೆಂಡ್ ಪ್ರಧಾನವಾದವು. ಓಜಸೈಟ್, ಸ್ಪೆಸಾರ್‍ಟೈಟ್ ಮತ್ತು ಕ್ಯಾಂಪ್ಟೊನೈಟ್. ಕ್ಯಾಂಪ್ಟೊನೈಟಿನ ಮ್ಯಾಫಿಕ್ ಖನಿಜಗಳು ಕ್ಷಾರೀಯ ವಾಗಿರುತ್ತವೆ. ಅಲ್‍ನೈಟ್ ಮತ್ತು ಮಾಂಚುಕೈಟ್‍ಗಳಲ್ಲಿ ಫೆಲ್ಸ್‍ಪಾರ್ ಬದಲು ಮೆಲಿಲೈಟ್, ಅನಾಲ್‍ಸೈಟ್ ಮತ್ತು ಆಲಿವೀನ್ ಮೊದಲಾದ ಖನಿಜಗಳಿರುತ್ತವೆ. ಸಾಮಾನ್ಯವಾಗಿ ಲ್ಯಾಂಪ್ರೊಫೈರ್‍ಗಳ ಖನಿಜಗಳು ಅಧಿಕವಾಗಿ ಶಿಥಿಲಗೊಂಡಿರುತ್ತವೆ. ಅದರಲ್ಲೂ ಪ್ರೀಕೇಂಬ್ರಿಯನ್ ಯುಗದ ಶಿಲೆಗಳಲ್ಲಿ ಶಿಥಿಲತೆ ಅಧಿಕ. ಈ ಕಾರಣ ಮ್ಯಾಫಿಕ್ ಖನಿಜಗಳು ಕ್ಲೋರೈಟ್ ಸರ್ಪೆಂಟೀನ್‍ಗಳಾಗಿಯೂ ಫೆಲ್ಸ್‍ಪಾರ್‍ಗಳು ಸೆರಿಸೈಟ್, ಎಪಿಡೋಟ್, ಕ್ಯಾಲ್ಸೈಟ್ ಮುಂತಾದ ಖನಿಜಗಳಾಗಿಯೂ ಮಾರ್ಪಟ್ಟಿರುತ್ತವೆ. ಕರ್ನಾಟಕದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹಲವೆಡೆ ಲ್ಯಾಂಪ್ರೊಫೈರ್ ಒಡ್ಡುಗಳನ್ನು ಗುರುತಿಸಲಾಗಿದೆ.

(ಬಿ.ವಿ.ಜಿ)