ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಕ್ಟೋಸ್

ವಿಕಿಸೋರ್ಸ್ದಿಂದ

ಎಲ್ಲ ಸ್ತನಿಗಳ ಹಾಲಿನಲ್ಲಿ 2-8%ರಷ್ಟಿರುವ ದ್ವಿಶರ್ಕರ ಅಥವಾ ಡೈಸ್ಯಾಕರಾಯ್ಡ್. ಅಣುಸೂತ್ರ : C12H22O11. ಹಾಲುಸಕ್ಕರೆ (ಮಿಲ್ಕ್ ಶುಗರ್) ಎಂಬ ಹೆಸರೂ ಉಂಟು.

ಚಿತ್ರ

ಹಾಲಿಗೆ ಹುಳಿ ಹಿಂಡಿದಾಗ ಉಂಟಾಗುವ ಅವಕ್ಷೇಪವನ್ನು ಸೋಸಿ ತೆಗೆದರೆ ಉಳಿಯುವ ದ್ರವವೇ ಹಾಲೊಡಕುನೀರು (ಹ್ವೇ). ಇದನ್ನು ಇಂಗಿಸಿದರೆ ಸ್ಫಟಿಕೀಯ ಲ್ಯಾಕ್ಟೋಸ್ ಲಭ್ಯ. ಅಣುಸೂತ್ರ: C12H22O11. H2O. ಇದು 140°ಸೆನಲ್ಲಿ ನೀರನ್ನು ಕಳೆದುಕೊಳ್ಳುತ್ತದೆ, 202°ಸೆನಲ್ಲಿ ದ್ರವಿಸಿ ವಿಘಟಿಸುತ್ತದೆ.

ಲ್ಯಾಕ್ಟೋಸನ್ನು ಜಲವಿಭಜಿಸಿದರೆ ಘಟಕ ಏಕಶರ್ಕರಗಳು- ಗ್ಲೂಕೋ ಸ್ ಮತ್ತು ಗ್ಯಾಲಕ್ಟೋಸ್ ಲಭಿಸುತ್ತವೆ. ಗ್ಲೂಕೋಸಿನ ಅನೋಮರಿಕ್ ಕಾರ್ಬನಿಗೆ ವರ್ತನಾ ಸ್ವಾತಂತ್ರ್ಯವಿರುವ ರೀತಿಯಲ್ಲಿ ಜೋಡಣೆಯಾಗಿರುವ ಆಲ್ಡೊಹೆಕ್ಸೋಸುಗಳು ಇವು. ಯುಕ್ತ ಕಿಣ್ವಗಳ ಸಂಪರ್ಕದಲ್ಲಿ ಲ್ಯಾಕ್ಟೋಸ್ ಲ್ಯಾಕ್ಟಿಕ್ ಮತ್ತು ಬ್ಯುಟೈರಿಕಾಮ್ಲಗಳಾಗಿ ಹುದುಗುತ್ತದೆ (ಫರ್ಮೆಂಟ್ಸ್). ಇದು ಕಬ್ಬಿನ ಸಕ್ಕರೆಯಷ್ಟು (ಸುಕ್ರೋಸ್) ಸಿಹಿ ಇಲ್ಲ. ನೀರಿನಲ್ಲಿ ಸುಕ್ರೋಸ್ ಅಥವಾ ಗ್ಲೂಕೋಸಿನಷ್ಟು ವಿಲೇಯವಲ್ಲ. ಇದೊಂದು ದಕ್ಷಿಣಾವರ್ತಕ (ಡೆಕ್ಸ್‍ಟ್ರೊರೊಟೇಟರಿ), ಅರ್ಥಾತ್ ಧ್ರುವೀಕೃ ತ ಬೆಳಕಿನ ತಲವನ್ನು ಪ್ರದಕ್ಷಿಣ ದಿಸೆಯಲ್ಲಿ ಆವರ್ತಿಸುತ್ತದೆ.

ಎಲ್ಲ ಸ್ತನಿಗಳಿಗೂ ಇದು ಪೋಷಕ. ಶಿಶು-ಆಹಾರ ಮತ್ತು ಮಿಠಾಯಿಗಳಲ್ಲಿ ವ್ಯಾಪಕ ಬಳಕೆ ಇದೆ. ಇದರ ಉಪಾಪಚಯಕ್ಕೆ ಸಂಬಂಧಿಸಿದ ರೋಗಗಳು ಶಿಶುಗಳನ್ನು ಕಾಡುವ ಸಾಧ್ಯತೆ ಇದೆ.

(ಎಚ್.ಜಿ.ಎಸ್.)