ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಟಿಮರ್, ಹ್ಯೂ

ವಿಕಿಸೋರ್ಸ್ದಿಂದ

1485-1555. ಇಂಗ್ಲಿಷ್ ಗದ್ಯಬರೆಹಗಾರ. ಆಕ್ಸ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ ಮಾಡಿದ, ಪ್ರೀಚರ್ (ಉಪದೇಶಕ) ಆಗಿ ನೇಮಕಗೊಂಡ. ಪಾಷಂಡವಾದಿ ಎಂದು ವಿಚಾರಣೆಗೆ ಒಳಗಾದ. ಜೀವನದುದ್ದಕ್ಕೂ ಮತೀಯ ವಿಚಾರಗಳಿಗೆ ಒಳಗಾಗಿ ತೊಂದರೆಪಟ್ಟ. 1555ರಲ್ಲಿ ಪಾಷಂಡವಾದಿಯೆಂದು ಈತನನ್ನು ಸುಡಲಾಯಿತು. ಇವನ ಉಪದೇಶ ಭಾಷಣಗಳು ಗಮನಾರ್ಹವಾದುವು. ಇವುಗಳಲ್ಲಿ ‘ನೇಗಿಲನ್ನು ಕುರಿತು’ (1548) ಎನ್ನುವುದು ಬಹಳ ಪ್ರಸಿದ್ಧವಾದುದು. ಈ ಭಾಷಣಗಳು ಈತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಸರಳತೆ, ನೈತಿಕ ಶ್ರದ್ಧೆ, ಪ್ರಾಮಾಣಿಕತೆಗಳಿಂದ ಈ ಭಾಷಣಗಳು ಬೆಳಗುತ್ತವೆ. ಅಲ್ಲಲ್ಲಿ ತಿಳಿಹಾಸ್ಯವೂ ಉಂಟು. ಯೇಸುಕ್ರಿಸ್ತನ ಜೀವನವನ್ನು ಈತ ಆದರ್ಶವೆಂದು ಎತ್ತಿಹಿಡಿದ. ಉದ್ದೇಶಿತ ಕಲೆಯಿಲ್ಲದಿದ್ದರೂ ಈ ಭಾಷಣಗಳು ಅವಕ್ಕೆ ಸ್ಫೂರ್ತಿಯಿತ್ತ ಸಮರ್ಥ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆಗಳಿಂದ ಪರಿಣಾಮಕಾರಿಯಾಗಿವೆ.

(ಎಲ್.ಎಸ್.ಎಸ್.)