ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಗ್ಗೇಯಕಾರರು

ವಿಕಿಸೋರ್ಸ್ದಿಂದ

ವಾಗ್ಗೇಯಕಾರರು ಕರ್ಣಾಟಕ ಸಂಗೀತಕ್ಕೆ ಕೃತಿ ರಚನೆಗಳನ್ನು ನೀಡಿದ ವಾಗ್ಗೇಯಕಾರರಲ್ಲಿ ಅತಿ ಪ್ರಾಚೀನರಾದವರು ಯಾರೆಂಬ ವಿಷಯದಲ್ಲಿ ಒಮ್ಮತಾಭಿಪ್ರಾಯವಿಲ್ಲ. 5ನೆಯ ಶತಮಾನದಲ್ಲಿ ರಚಿತವಾದ ಮತಂಗನ ಬೃಹದ್ದೇಶೀಯಲ್ಲಿ ಕನ್ನಡದ ಪ್ರಬಂಧಗಳ ಬಗ್ಗೆ ಕೆಲವು ಹೇಳಿಕೆಗಳಿರುವುವಾದರೂ ಅದರ ಸ್ವರೂಪ ಸ್ಪಷ್ಟವಾಗಿ ಕಾಣಬರುವುದಿಲ್ಲ. ಅದನ್ನು ಬಿಟ್ಟರೆ 12ನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ರಚಿತವಾದ ವಚನಗಳನ್ನೇ ಅತಿ ಪ್ರಾಚೀನವಾದ ಹಾಡುಗಳೆನ್ನಬಹುದು. ಆದರೆ ಇವುಗಳಲ್ಲಿ ಸಂಗೀತ ದೃಷ್ಟಿಗಿಂತ ತತ್ತ್ವಬೋಧೆಯೇ ಪ್ರಮುಖ ಉದ್ದೇಶವಾಗಿರುವುದು ಕಂಡುಬರುತ್ತದೆ.

ಮುಂದೆ ಪುರಂದರದಾಸರ ಕಾಲಕ್ಕೆ ಮುಂಚೆ ಎಂದರೆ 15ನೆಯ ಶತಮಾನದವರೆನ್ನಲಾದ ನಿಜಗುಣ ಶಿವಯೋಗಿಗಳನ್ನು ಕರ್ನಾಟಕದ ಪ್ರಥಮ ವಾಗ್ಗೇಯಕಾರರೆನ್ನಬಹುದು. ಇವರಿಂದ ರಚಿತವಾದ ವಿವೇಕ ಚಿಂತಾಮಣಿಯ ಕೆಲವು ಅಧ್ಯಾಯಗಳಲ್ಲಿ ಕಂಡುಬರುವ ವಿವರಣೆಯಿಂದ ಇವರಿಗೆ ಸಂಗೀತಶಾಸ್ತ್ರದಲ್ಲಿದ್ದ ಅಪಾರ ಪ್ರೌಢಿಮೆ ಅಭಿವ್ಯಕ್ತವಾಗುತ್ತದೆ. ಇವರ ಮತ್ತೊಂದು ಗ್ರಂಥವಾದ ಕೈವಲ್ಯಪದ್ಧತಿಯ ಹಾಡುಗಳೂ ರಾಗತಾಳಸಮನ್ವಿತವಾದ ಕೃತಿಗಳಾಗಿವೆ. ಪಲ್ಲವಿ, ಅನುಪಲ್ಲವಿ, ಚರಣಗಳನ್ನು ಹೊಂದಿ ಬಳಕೆಯಲ್ಲಿರುವ ಇಂದಿನ ಕೃತಿರೂಪಕ್ಕೆ ಇವರೇ ಮೂಲಪುರುಷರೆಂಬುದೂ ಕೆಲವರ ಅಭಿಪ್ರಾಯ ವಾಗಿದೆ.

ಶ್ರೀಪಾದರಾಜರು (ಸು. 1450) ದಾಸಕೂಟದ ಆದ್ಯಪ್ರವರ್ತಕರಾದ ನರಹರಿತೀರ್ಥರ ಶಿಷ್ಯರು. ದಾಸಸಾಹಿತ್ಯವನ್ನು ಬೆಳೆಸಿದವರಲ್ಲಿ ಮೊದಲಿಗರು. ಸಂಸ್ಕøತ ಮತ್ತು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದಿದ್ದ ಇವರು ರಂಗವಿಠಲ ಎಂಬ ಅಂಕಿತದಲ್ಲಿ ಉಗಾಭೋಗ ವೃತ್ತನಾಮ ಮತ್ತು ದೇವರನಾಮಗಳನ್ನು ರಚಿಸಿರುವರು. ಇವರ ಅನಂತರ ವ್ಯಾಸರಾಯರು (1447-1539) ಹರಿದಾಸಪಂಥ ಉನ್ನತಮಟ್ಟದಲ್ಲಿದ್ದ ಕಾಲದಲ್ಲಿದ್ದವರು. ಕನ್ನಡ, ಸಂಸ್ಕøತ ಮತ್ತು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದಿದ್ದ ಇವರು ಕೃಷ್ಣ, ಸಿರಿಕೃಷ್ಣ ಎಂಬ ಅಂಕಿತದಲ್ಲಿ ವೃತ್ತನಾಮ ಉಗಾಭೋಗ ಮತ್ತು ಪದಗಳನ್ನು ವಿಪುಲವಾಗಿ ರಚಿಸಿರುವರು. ವ್ಯಾಸರಾಯರ ಶಿಷ್ಯರಾದ ಪುರಂದರದಾಸರು (1484-1564) ಅಭ್ಯಾಸ ಗಾನಗಳನ್ನೇ ಅಲ್ಲದೆ (ಸರಳ, ಅಲಂಕಾರ, ಗೀತೆ) ಕೃತಿಗಳು, ಸುಳಾದಿಗಳು, ಸುವ್ವಾಲೆ ಹಾಗೂ ಉಗಾಭೋಗಗಳನ್ನು ಅಸಂಖ್ಯಾತವಾಗಿ ರಚಿಸಿ ಕರ್ನಾಟಕ ಸಂಗೀತಕ್ಕೆ ಭದ್ರ ಬುನಾದಿಯನ್ನು ಹಾಕಿ ಕರ್ನಾಟಕ ಸಂಗೀತ ಪಿತಾಮಹರೆ ನಿಸಿದ್ದಾರೆ. ಕನಕದಾಸರು (1508-1606) ಪುರಂದರದಾಸರಂತೆಯೇ ವ್ಯಾಸರಾಯರಲ್ಲಿ ಶಿಷ್ಯವೃತ್ತಿ ಯನ್ನು ವಹಿಸಿದ್ದವರು. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಕನಕದಾಸರ ಅನಂತರ, ಅನೇಕ ಸಂಖ್ಯೆಯಲ್ಲಿ ಉಗಾಭೋಗಗಳನ್ನೂ ದೇವರನಾಮಗಳನ್ನು ರಚಿಸಿದ ವಾಗ್ಗೇಯಕಾರರುಗಳಲ್ಲಿ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಪ್ರಸನ್ನವೆಂಕಟದಾಸರು ಮತ್ತು ಹೆಳವನಕಟ್ಟೆ ಗಿರಿಯಮ್ಮ-ಈ ಹೆಸರುಗಳು ಕಾಣಬರುತ್ತವೆ.

ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಆಸ್ಥಾನ ವಿದ್ವಾಂಸರಾ ಗಿದ್ದ ಮೈಸೂರು ಸದಾಶಿವರಾಯರು ತ್ಯಾಗರಾಜರನ್ನು ಪ್ರತ್ಯಕ್ಷವಾಗಿ ಕಂಡು ಅವರಿಂದ ಅನುಗ್ರಹೀತರಾದವರು. ಇವರು ಸ್ವನಾಮ ಮುದ್ರೆಯಲ್ಲಿ ಅನೇಕ ಪದವರ್ಣಗಳನ್ನೂ ಕೃತಿಗಳನ್ನೂ ವಿದ್ವತ್ಪೂರ್ಣವಾಗಿ ರಚಿಸಿರು ವರು. ಇವರ ಶೈಲಿಯಲ್ಲಿ ಬಹುವಾಗಿ ತ್ಯಾಗರಾಜರ ಶೈಲಿಯ ಹೋಲಿಕೆ ಯಿರುವುದನ್ನು ಕಾಣುತ್ತೇವೆ. ವೀಣೆ ಪದ್ಮನಾಭಯ್ಯನವರು ಮತ್ತು ಕರಿಗಿರಿರಾಯರು ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರೂ ಆಸ್ಥಾನ ವಿದ್ವಾಂಸರೂ ಆಗಿದ್ದು ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿದರು. ಪದ್ಮನಾಭಯ್ಯನವರು ಜತಿಸ್ವರ, ಕೃತಿ ಮುಂತಾದ ರಚನಾಪ್ರಕಾರಗಳನ್ನು ರಚಿಸಿರುವರು. ವಾಸುದೇವಾಚಾರ್ಯರು, ಸುಂದರಶಾಸ್ತ್ರೀಗಳು ಮತ್ತು ಕೇಶವಭಟ್ಟರು ಇವರ ಶಿಷ್ಯವರ್ಗದಲ್ಲಿ ಖ್ಯಾತಿಗಳಿಸಿರುವರು. ಕರಿಗಿರಿ ರಾಯರು ರಾಜಸಭೆಯಲ್ಲಿದ್ದ ಪ್ರಸಿದ್ಧ ವಿದ್ವನ್ಮಣಿಗಳ ನಡುವೆ ಸನ್ಮಾನ್ಯರಾಗಿ ಮೆರೆದವರು. ಲಕ್ಷ್ಯಲಕ್ಷಣಗಳೆಡರಲ್ಲೂ ಪಾಂಡಿತ್ಯವನ್ನು ಪಡೆದಿದ್ದ ಇವರು ಸಂಗೀತವಿದ್ಯಾ ಕಂಠೀರವ ಎಂಬ ಪ್ರಶಸ್ತಿಯನ್ನು ಪಡೆದಿದ್ದರು. ಸಂಗೀತಸುಬೋಧಿನಿ ಮತ್ತು ಗಾನವಿದ್ಯಾರಹಸ್ಯ ಪ್ರಕಾಶಿನೀ ಎಂಬ ಗ್ರಂಥಗಳನ್ನು ರಚಿಸಿರುವ ಇವರು ಹಲವಾರು ವರ್ಣಗಳನ್ನೂ ಕೀರ್ತನೆಗಳನ್ನೂ ದೇವರನಾಮಗಳನ್ನೂ ನೃಸಿಂಹ ಎಂಬ ಅಂಕಿತದಿಂದ ರಚಿಸಿದ್ದಾರೆ. ಪ್ರಖ್ಯಾತ ಸಂಗೀತಗಾರರಾದ ವೀಣೆ ಶೇಷಣ್ಣನವರು (1852-1946) ಮತ್ತು ಸುಬ್ಬಣ್ಣನವರು ವಾಗ್ಗೇಯಕಾರರಾಗಿ ಸ್ವರಜತಿ, ಕೃತಿ ತಿಲ್ಲಾನ ಮುಂತಾದ ರಚನಾ ಪ್ರಕಾರಗಳನ್ನು ರಚಿಸಿ ಸಂಗೀತ ಪ್ರಪಂಚದಲ್ಲಿ ಮೆರೆದಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಗಾನವಿಶಾರದ ಬಿಡಾರಮ್ ಕೃಷ್ಣಪ್ಪ(1866-1931) ಶ್ರೀಕೃಷ್ಣ ಎಂಬ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿರುವರು.

ಪ್ರಸಿದ್ಧ ಸಂಗೀತತಜ್ಞರಾದ ಕಾನಕಾನಹಳ್ಳಿ (ಮೈಸೂರು) ವಾಸುದೇವಾ ಚಾರ್ಯರು ಗಾಯಕರಾಗಿದ್ದುದಕ್ಕಿಂತ ವಾಗ್ಗೇಯಕಾರರಾಗಿಯೇ ಜನಮನ ದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇವರಿಂದ ರಚಿತವಾಗಿರುವ ಕೃತಿ ಮತ್ತು ವರ್ಣಗಳು ಸಂಖ್ಯೆಯಲ್ಲಿ 200ಕ್ಕೂ ಮೇಲ್ಪಟ್ಟಿವೆ. ಅವು ವಾಸುದೇವ ಎಂಬ ಅಂಕಿತದಲ್ಲಿ ರಚಿತವಾಗಿವೆ. ವೈಣಿಕಪ್ರವೀಣ ವೆಂಕಟಗಿರಿಯಪ್ಪ ನವರೂ ಕೆಲವು ಕೃತಿಗಳನ್ನು ರಚಿಸಿದ್ದಾರೆ. ಸಂಗೀತರತ್ನ ಚೌಡಯ್ಯನವರು ತ್ರಿಮಕುಟ ಎಂಬ ಅಂಕಿತದಿಂದ ಕನ್ನಡ, ತೆಲಗು ಹಾಗೂ ಸಂಸ್ಕøತದಲ್ಲಿ ವರ್ಣ, ಕೃತಿ, ತಿಲ್ಲಾನ ಮುಂತಾದವುಗಳನ್ನು ರಚಿಸಿದ್ದಾರೆ. ಜಯಚಾಮ ರಾಜ ಒಡೆಯರ್ (1919-74) ಇತ್ತೀಚಿನ ವಾಗ್ಗೇಯಕಾರರಲ್ಲಿ ಪ್ರಸಿದ್ಧರು. ಇವರು ಶ್ರೀವಿದ್ಯಾ ಎಂಬ ಅಂಕಿತದಲ್ಲಿ ವಿದ್ವತ್‍ಪೂರ್ಣವೂ ಸುಂದರವೂ ಆದ ಅನೇಕ ಕೃತಿಗಳನ್ನು ಸಂಸ್ಕøತದಲ್ಲಿ ರಚಿಸಿರುವರು. (ವಿ.ಆರ್.)