ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಕಾಸವಾದ 2

ವಿಕಿಸೋರ್ಸ್ದಿಂದ

ವಿಕಾಸವಾದ 2

ಜಗತ್ತಿನ ಮತ್ತು ಜೀವಿಗಳ ಹುಟ್ಟು, ಬೆಳೆವಣಿಗೆ ಮತ್ತು ಅಂತಿಮ ಸ್ಥಿತಿಯನ್ನು ಕುರಿತ ವಾದ (ಎವಲೂಷನ್ ಥಿಯರಿ). ಇದರಲ್ಲಿ ಪ್ರಸಿದ್ಧವಾದುದು ಡಾರ್ವಿನ್‍ನ ವಿಕಾಸವಾದ. ಬಲಿಷ್ಠವಾದುದು ಮಾತ್ರ ಉಳಿಯುತ್ತದೆ; ಉಳಿದುದೆಲ್ಲವೂ ನಿರ್ನಾಮವಾಗುತ್ತವೆ ಎಂಬುದು ಇವನ ವಾದ(ನೋಡಿ-ಡಾರ್ವಿನ್, ಚಾಲ್ರ್ಸ್). ತತ್ತ್ವಶಾಸ್ತ್ರದಲ್ಲೂ ಈ ಬಗ್ಗೆ ಅಧ್ಯಯನ ಮತ್ತು ಚಿಂತನೆ ಸಾಕಷ್ಟು ನಡೆದಿದೆ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಸಾಂಖ್ಯದರ್ಶನ ಸ್ವಾರಸ್ಯಕರವಾದ ವಿಕಾಸವಾದವನ್ನು ಮುಂದಿಟ್ಟಿದೆ. ಬುದ್ಧಿ, ಮನಸ್ಸು, ಅಹಂಕಾರ, ಇಂದ್ರಿಯ ಮುಂತಾದ 24 ತತ್ತ್ವಗಳಾಗಿ ಜಡಪ್ರಕೃತಿ ವಿಕಾಸವನ್ನು ಹೊಂದುತ್ತದೆಂದು ಈ ದರ್ಶನ ಪ್ರತಿಪಾದಿಸುತ್ತದೆ. ಪ್ರಪಂಚದ ವಿಕಾಸ, ಚೇತನ ತತ್ತ್ವವಾದ ಪುರುಷನ ಭೋಗಕ್ಕಾಗಿದೆ ಎಂಬುದು ಈ ದರ್ಶನದ ತೀರ್ಮಾನವಾಗಿದೆ. ಅರವಿಂದರ ವಿಕಾಸವಾದದ ಪ್ರಕಾರ ಭೌತಿಕದ್ರವ್ಯ ಹಂತ ಹಂತವಾಗಿ ಜೀವ, ಮನಸ್ಸು ಮುಂತಾದ ತತ್ತ್ವಗಳಾಗಿ ವಿಕಾಸ ಹೊಂದಿ ಸಚ್ಚಿದಾನಂದ ತತ್ತ್ವವಾದ ಬ್ರಹ್ಮವಾಗುತ್ತದೆ. ಭೌತಿಕವಸ್ತುವಿನಲ್ಲಿ ಬ್ರಹ್ಮತತ್ತ್ವ, ಅವ್ಯಕ್ತವಾಗಿ ಅಡಗಿರುತ್ತದೆ; ಇದೇ ವಿಕಾಸದ ವಿವಿಧ ಹಂತಗಳಲ್ಲಿ ಅಸ್ಪಷ್ಟವಾಗಿ ವ್ಯಕ್ತವಾಗುತ್ತಾ ಹೋಗಿ ಅಂತಿಮವಾಗಿ ಸ್ಪಷ್ಟ ಬ್ರಹ್ಮತ ತ್ತ್ವವಾಗುತ್ತದೆ. ಹೀಗೆ ವಿಕಾಸವಾದದ ಪ್ರಕಾರ ಮೂಲದ್ರವ್ಯವಾದ ಭೌತಿಕ ವಸ್ತುವೂ ಸತ್ಯ; ಅದು ಏನಾಗಿ ವಿಕಾಸ ಹೊಂದುತ್ತದೋ ಅದೂ ಸತ್ಯ. ಭ್ರಮೆ, ಭ್ರಾಂತಿ, ಮಾಯೆ, ದುರ್ನಿರೂಪಗಳಿಗೆ ವಿಕಾಸವಾ ದಿಗಳಲ್ಲಿ ಮಾನ್ಯತೆ ಇಲ್ಲ.

ಸತ್ಯ ನಿಷ್ಕ್ರಿಯವಾದುದಲ್ಲ, ಕ್ರಿಯೆಯಿಂದ ತುಂಬಿ ತುಳುಕುತ್ತಿರು ವಂಥದು ಎಂಬುದು ಈ ವಾದದ ಸಂದೇಶ. ಸತ್ಯ ಹೊಸ ಹೊಸ ರೂಪಗಳನ್ನು ಧರಿಸಿ ಹೆಚ್ಚು ಹೆಚ್ಚು ಶಕ್ತಿ ಸಾಮಥ್ರ್ಯಗಳಿಂದ ಶೋಭಿಸುತ್ತದೆ. ಇದು ಎಲ್ಲ ವಿಕಾಸವಾದಗಳ ಮೂಲ ಕಲ್ಪನೆ. ಅನಿಷ್ಟ ಸಮಸ್ಯೆಗೆ ಸರಿಯಾದ ಹಾಗೂ ಸಮರ್ಪಕವಾದ ಪರಿಹಾರ ದೊರಕುವುದು ಈ ವಾದದಲ್ಲಿ ಮಾತ್ರ ಎಂದು ಹೇಳಬಹುದು. ಪ್ರಕೃತಿಯಲ್ಲಿ ಅನಿಷ್ಟ ಏಕೆ ಇದೆ ಎಂಬುದು ಜ್ವಲಂತ ಪ್ರಶ್ನೆ. ಈ ಪ್ರಶ್ನೆಗೆ ಆಸ್ತಿಕರಿಂದ ತರ್ಕ ಸಮ್ಮತವಾದ ಉತ್ತರವಿಲ್ಲ. ಆದರೆ ಈ ವಾದ ಅನಿಷ್ಟವು ಜಗತ್ತಿನ ವಿಕಾಸದ ಒಂದು ಅನಿವಾರ್ಯ ಎಂದು ಬೋಧಿಸುತ್ತದೆ. ಜಗತ್ತಿನ ವಿಕಾಸ ಮುಂದುವರಿದಂತೆ, ವಿಕಾಸದ ವ್ಯವಸ್ಥೆಯಲ್ಲಿ ಅನಿಷ್ಟ ಆವಶ್ಯಕವಾಗಿ ಕಾಣಿಸಿಕೊಳ್ಳುತ್ತದೆ; ಆದರೆ ಅಂತಿಮವಾಗಿ ಅದು ಪರಿವರ್ತಿತವಾಗಿ ಪ್ರಪಂಚದ ಒಳಿತೇ ಆಗುತ್ತದೆ ಎಂಬುದು ಇದರ ಧೋರಣೆ. ಪಾಶ್ಚಾತ್ಯರಲ್ಲಿ ಅರಿಸ್ಟಾಟಲ್, ಲಾಯ್ಡ್ ಮಾರ್ಗನ್, ಹೆನ್ರಿ ಬರ್ಗ್‍ಸನ್, ಸ್ಯಾಮ್ಯುಯಲ್ ಅಲೆಕ್ಸಾಂಡರ್ ವಿಕಾಸವಾದದ ಪ್ರತಿಪಾದಕರಾಗಿದ್ದಾರೆ. ಭೌತಿಕ ದ್ರವ್ಯ ಜೀವತತ್ತ್ವವಾಗಿ, ಮನಸ್ಸಾಗಿ ವಿಕಾಸ ಹೊಂದುತ್ತದೆಂದು ಮಾರ್ಗನ್ ಮತ್ತು ಬರ್ಗ್‍ಸನ್ ಪ್ರತಿಪಾದಿಸಿದರೆ, ಅಲೆಕ್ಸಾಂಡರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೈವತತ್ತ್ವವೇ ವಿಕಾಸದ ಅಂತಿಮ ಹಂತ ಎಂದು ಘೋಷಿಸು ತ್ತಾನೆ. ವಿಕಾಸ ಎಂದೆಂದಿಗೂ ಮುಮ್ಮುಖವೇ ಹೊರತು ಹಿಮ್ಮುಖವಲ್ಲ. ಭೌತಿಕ ದ್ರವ್ಯವೂ ಸತ್ಯ; ಅದರಿಂದ ಹೊರಹೊಮ್ಮುವ ವಿಕಾಸದ ಘಟ್ಟಗಳೂ ಸತ್ಯ ಎಂಬುದು ವಾಸ್ತವವಾದ, ಪ್ರಾಚ್ಯ ಮತ್ತು ಪಾಶ್ಚಾತ್ಯ ವಿಕಾಸವಾದಗಳ ತಿರುಳು. (ವಿ.ಎನ್.ಎಸ್.)

  *