ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿದ್ಯಾರಣ್ಯ

ವಿಕಿಸೋರ್ಸ್ದಿಂದ
Jump to navigation Jump to search

ವಿದ್ಯಾರಣ್ಯ 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ ಪ್ರಸಿದ್ಧರಾಗಿರುವ ಅದ್ವೈತ ಪಂಥದ ಯತಿ, ಶೃಂಗೇರಿ ಮಠಾಧೀಶ; ದರ್ಶನ, ಸಂಗೀತ ಇತ್ಯಾದಿಗಳ ಬಗ್ಗೆ ಮಹತ್ಕøತಿಗಳನ್ನು ರಚಿಸಿರುವ ಪ್ರತಿಭಾನ್ವಿತ ವಿದ್ವಾಂಸ.

ವಿದ್ಯಾರಣ್ಯರ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ವಿವಾದಗಳಿವೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದ ಹಕ್ಕ, ಬುಕ್ಕ ಎಂಬ ಸೋದರರನ್ನು ಇವರು ತಮ್ಮ ಗುರುಗಳ ಅನುಜ್ಞೆಯನ್ನು ಪಡೆದು ಹಿಂದುಧರ್ಮಕ್ಕೆ ಮತಾಂತರಿಸಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಿಸಿದರೆಂದು ಕೆಲವು ಐರೋಪ್ಯ ಮತ್ತು ಮುಸ್ಲಿಂ ಗ್ರಂಥಕಾರರ ಬರೆಹಗಳು ಸೂಚಿಸುತ್ತವೆ. ಶಿಥಿಲವಾಗುತ್ತಿದ್ದ ಹಿಂದುಧರ್ಮದ ಪುನರುದ್ಧಾರಕ್ಕೆ ಶಕ್ತಿಯುತ ಹಿಂದು ರಾಜ್ಯದ ಆವಶ್ಯಕತೆಯಿದೆ ಎಂಬುದನ್ನು ಗಮನಿಸಿದ ವಿದ್ಯಾರಣ್ಯರು, ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಪಂಪಾ ಕ್ಷೇತ್ರದಲ್ಲಿ ಒಂದು ಪಟ್ಟಣವನ್ನು ಕಟ್ಟಿ, ರಾಜ್ಯಸ್ಥಾಪನೆ ಮಾಡಬೇಕೆಂದು ಹರಿಹರ ಮತ್ತು ಬುಕ್ಕ ಎಂಬ ಸೋದರರನ್ನು ಪ್ರೋತ್ಸಾಹಿಸಿದರೆಂದೂ ಇವರು ಆ ಕಾರ್ಯವನ್ನು ನೆರವೇರಿಸಿ (1336) ತಮ್ಮ ಗುರುಗಳ ಹೆಸರಿನಲ್ಲಿ ವಿದ್ಯಾನಗರ ಎಂದು ಆ ನಗರಕ್ಕೆ ಹೆಸರಿಟ್ಟರೆಂದೂ ಮುಂದೆ ಅದೇ ವಿಜಯನಗರವೆಂದು ಪ್ರಸಿದ್ಧವಾಯಿತೆಂದು ಹಲವಾರು ದೇಶಿ ಗ್ರಾಂಥಿಕ ಆಧಾರಗಳ ಮೇಲೆ ಚರಿತ್ರಕಾರರು ಊಹಿಸಿದ್ದಾರೆ. ಈ ವಿಷಯಗಳು 14ನೆಯ ಶತಮಾನದ ಅಂತ್ಯ ಮತ್ತು 15ನೆಯ ಶತಮಾನದ ಹಲವು ಶಾಸನಗಳಲ್ಲೂ ಕಂಡುಬರುತ್ತವೆ.

(ಎಚ್.ವಿ.ಎಚ್.)

ಆದರೆ ವಿದ್ಯಾರಣ್ಯರು ವಿಜಯನಗರ ರಾಜ್ಯ ಸ್ಥಾಪನೆಗೆ ಕಾರಣರಾದ ರೆಂಬ ವಿಷಯ ಯಾವ ಸಮಕಾಲೀನ ಶಾಸನಗಳಲ್ಲೂ ಪ್ರಸ್ತಾಪವಾಗಿಲ್ಲ; ಅಂದಿನ ಶಾಸನಗಳೆಲ್ಲ ಪಾಶುಪತ ಪಂಥದ ಕ್ರಿಯಾಶಕ್ತಿ ಎಂಬವರನ್ನೆ ರಾಜಗುರುಗಳಾಗಿ ಹೆಸರಿಸುತ್ತವೆ ಇತ್ಯಾದಿ ಕಾರಣಗಳಿಂದ ಇವೆಲ್ಲ ಕಟ್ಟುಕಥೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶೃಂಗೇರಿ ಮಠದ ಗುರುಪರಂಪರೆಯಲ್ಲಿ ವಿದ್ಯಾರಣ್ಯರು 1331ರಲ್ಲಿ ಸಂನ್ಯಾಸ ಸ್ವೀಕಾರ ಮಾಡಿದರೆಂದೂ ಇವರ ಗುರುಗಳಾದ ಭಾರತೀತೀರ್ಥರ ಅನಂತರ 1377-86ರವರೆಗೆ ಪೀಠಾಧಿಪತಿಗಳಾಗಿದ್ದರೆಂದೂ ಉಲ್ಲೇಖಗಳಿವೆ. ವಿಜಯನಗರ ಅರಸರು ಶೃಂಗೇರಿ ಮಠಕ್ಕೆ ವಿಶೇಷ ಗೌರವಸ್ಥಾನವಿತ್ತಿದ್ದರು ಎಂಬುದು ಶಾಸನಗಳಿಂದ ಸ್ಪಷ್ಟವಾಗಿರುವುದಲ್ಲದೆ ವಿದ್ಯಾರಣ್ಯರ ಹೆಸರು ವಿಜಯನಗರ ಸಾಮ್ರಾಜ್ಯದ ಎರಡನೆಯ ದೊರೆ ಒಂದನೆಯ ಬುಕ್ಕನ ಹಲವು ಶಾಸನಗಳಲ್ಲಿ ಕಂಡುಬರುತ್ತದೆ. ಈ ವಿಷಯಗಳನ್ನು ಗಮನಿಸಿದ ಹಲವು ವಿದ್ವಾಂಸರು ವಿಜಯನಗರ ರಾಜ್ಯ ಸ್ಥಾಪನೆಗೆ ಕಾರಣರಾದವರು ವಿದ್ಯಾರಣ್ಯರು. ಆದರೆ ರಾಜ್ಯಸ್ಥಾಪನೆ ಮತ್ತು ಅದರ ಅನಂತರದ ಕಾಲಗಳಲ್ಲಿ ಇವರ ಗುರುಗಳೂ ಪರಮ ಗುರುಗಳೂ ಜೀವಿಸಿದ್ದರಿಂದ ಈ ಕಿರಿಯ ಯತಿಯ ಪ್ರಸ್ತಾಪ ಅಸಾಧುವಾಗುವುದರಿಂದ ಉಲ್ಲೇಖಗಳು ದೊರೆಯುವುದಿಲ್ಲ ಎಂದು ಭಾವಿಸಿದ್ದಾರೆ. ವಿಜಯನಗರದ ಮೊದಲ ಶಾಸನಗಳಲ್ಲಿ ಬಹು ಗೌರವ ವಿಶೇಷಣಗಳೊಡನೆ ಕಂಡುಬರುವ ಪಾಶುಪತಾಚಾರ್ಯ ರಾಜರಾಜ ಗುರು ಕಾಶೀವಿಲಾಸ ಕ್ರಿಯಾಶಕ್ತಿಯೇ ಮುಂದೆ ಅದ್ವೈತಿಯಾಗಿ ಶೃಂಗೇರಿಯ ಮಠದ ಪೀಠವನ್ನು ಅಲಂಕರಿಸಿದ ರೆಂಬ ಒಂದು ಅಭಿಪ್ರಾಯವೂ ಇದೆ.

ಈ ಕಾಲದಲ್ಲಿದ್ದ ಪ್ರಸಿದ್ಧ ಗ್ರಂಥಕಾರ ಮಾಧವ ಮತ್ತು ವಿದ್ಯಾರಣ್ಯ ಒಬ್ಬರೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬುದೂ ವಿವಾದದ ವಿಷಯವಾಗಿದೆ. ಕೆಲವು ವಿದ್ವಾಂಸರು ವಿದ್ಯಾರಣ್ಯರೇ ಮಾಧವರೆಂದೂ ವೇದಭಾಷ್ಯಗಳನ್ನು ರಚನೆ ಮಾಡಿರುವ ಸಾಮಂತಾಚಾರ್ಯರ ಸೋದರರೆಂದೂ ಅಭಿಪ್ರಾಯಪಡುತ್ತಾರೆ. ಇದಲ್ಲದೆ ಉಪನಿಷತ್ತುಗಳ ವಿವರಣಕಾರರಾದ ಶಂಕರಾನಂದರ ಶಿಷ್ಯರು ಇವರಿದ್ದಿರಬಹುದೆಂಬ ಪ್ರತೀತಿ ಇದೆ. ವಿದ್ಯಾರಣ್ಯ, ಗ್ರಂಥಕಾರ ಮಾಧವ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಾಂತಾಧಿಕಾರಿಯಾಗಿದ್ದ ಮಾಧವ ಒಬ್ಬನೇ ವ್ಯಕ್ತಿ ಎಂದೂ ಕೆಲವರು ಊಹಿಸಿದ್ದಾರೆ. ಆದರೆ ಈ ಅಭಿಪ್ರಾಯಕ್ಕೆ ಹೆಚ್ಚು ಗೌರವ ದೊರಕಿಲ್ಲ.

ಸಂಪ್ರದಾಯದಲ್ಲಿ ಪ್ರಸಿದ್ಧರಾಗಿರುವ ವಿದ್ಯಾರಣ್ಯ ಬಹುಮುಖ ಪ್ರತಿಭೆಯ ವ್ಯಕ್ತಿ. ಇವರು ಹಿಂದು ರಾಜ್ಯ ಸ್ಥಾಪನೆಗೆ ಕಾರಣರೂ ಪ್ರಸಿದ್ಧ ಮಠದ ಅಧಿಪತಿಗಳೂ ಆಗಿದ್ದರು. ಶಂಕರಾಚಾರ್ಯರ ಅನಂತರ ಅದ್ವೈತ ವೇದಾಂತ ಪುಷ್ಟಿ ನಡೆದದ್ದು ಇವರಿಂದಲೇ. ಇವರು ವಿವರಣಾ ಸಂಪ್ರದಾಯ ಎಂದು ಕರೆಯಲ್ಪಡುವ ಅದ್ವೈತ ಪರಂಪರೆಯನ್ನು ಸ್ಪಷ್ಟವಾಗಿ ನಿರೂಪಿಸಿ ಜನಪ್ರಿಯಗೊಳಿಸಿದರು. ಇವರ ವಿವರಣಾಪ್ರಮೇಯ ಸಂಗ್ರಹ ಈ ದೃಷ್ಟಿಯಿಂದ ಬರೆದ ಮಹತ್ತ್ವದ ಕೃತಿ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ಇವರು ಬರೆದಿದ್ದಾರೆ. ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳ ಸುಲಭ ಪರಿಚಯವನ್ನು ಮಾಡಿಕೊಡುವ ಸರ್ವದರ್ಶನ ಸಂಗ್ರಹ ಜ್ಯೋತಿಷಕ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಇತರ ಗ್ರಂಥಗಳೂ ಇವರೇ ರಚಿಸಿದರೆಂಬ ನಂಬಿಕೆ ಇದೆ.

ಇವರು ಸಂಗೀತಸಾರ (ಈಗ ಅನುಪಲಬ್ಧ) ಎಂಬ ಸಂಗೀತ ಗ್ರಂಥವನ್ನೂ ರಚಿಸಿದ್ದಾರೆ. ಅದರಲ್ಲಿ ರಾಗಗಳ ಜನಕ ಜನ್ಯ ರೀತಿಗಳ ಮೊದಲ ನಿರೂಪಣೆ ಕಂಡುಬರುವುದೆಂದೂ ಇವರು ನಿರೂಪಿಸಿರುವ ಪ್ರಕಾರದಿಂದಲೇ ದಕ್ಷಿಣಾದಿ ಸಂಗೀತ ರೀತಿಗೆ ಕರ್ಣಾಟಕ ಸಂಗೀತ ಎಂಬ ಹೆಸರು ಬರಲು ಕಾರಣವಾಯಿತೆಂದೂ ಒಂದು ಅಭಿಪ್ರಾಯವಿದೆ. ಇವರು ವಿದ್ಯಾಪ್ರೇಮಿಗಳಾಗಿದ್ದರೆಂದೂ ವಿಶಿಷ್ಟಾದ್ವೈತ ವೇದಾಂತ ದೇಶಿಕ, ದ್ವೈತಿ ಟೀಕಾಚಾರ್ಯ ಈ ಸಮಕಾಲೀನರನ್ನು ಗೌರವಿಸಿದ್ದರೆಂದೂ ಪ್ರತೀತಿಗಳಿವೆ. 1386ರಲ್ಲಿ ಹಂಪೆಯಲ್ಲಿ ಮೃತರಾದರೆಂದೂ ಅಲ್ಲಿಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಇವರ ಸಮಾಧಿ ಇದೆಯೆಂದೂ ಕೆಲವು ದಾಖಲೆಗಳು ತಿಳಿಸುತ್ತವೆ.

  *

*