ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಶ್ವನಾಥ ಪ್ರತಾಪ್ ಸಿಂಗ್

ವಿಕಿಸೋರ್ಸ್ದಿಂದ

ವಿಶ್ವನಾಥ ಪ್ರತಾಪ್ ಸಿಂಗ್ (1931- ). ಭಾರತದ ಮಾಜಿ ಪ್ರಧಾನಿ. ಜೂನ್ 25, 1931ರಂದು ಅಲಹಾಬಾದ್‍ನಲ್ಲಿ ಜನನ. ರಾಜಾಬಹದ್ದೂರ್ ರಾಮಗೋಪಾಲ್‍ಸಿಂಗ್‍ರವರ ಪುತ್ರ. ಅಲಹಾಬಾದ್ ಹಾಗೂ ಪುಣೆ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ.

ವಿದ್ವಾಂಸ, ಕವಿ, ಚಿತ್ರಕಾರ. ಅಲಹಬಾದ್‍ನ ಗೋಪಾಲ್ ವಿದ್ಯಾಲಯದ ಸಂಸ್ಥಾಪಕ. 1947-48ರಲ್ಲಿ ವಾರಾಣಸಿಯ ಉದಯಪ್ರತಾಪ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ. ಅಲಹಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ. 1957ರಲ್ಲಿ ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ ಸಕ್ರಿಯ, ಅಲಹಾಬಾದ್ ಜಿಲ್ಲೆಯ ಪಸ್ನಾದಲ್ಲಿ ತಮ್ಮ ಸುವ್ಯವಸ್ಥಿತ ಕೃಷಿತೋಟವನ್ನು ದಾನವಾಗಿ ನೀಡಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರು. 1969-71ರಲ್ಲಿ ಉತ್ತರ ಪ್ರದೇಶ ವಿಧಾನ ಸಭಾ ಸದಸ್ಯರು, 1970-71ರಲ್ಲಿ ಲೋಕಸಭಾ ಸದಸ್ಯ. 71-74ರಲ್ಲಿ ಕೇಂದ್ರ ವಾಣಿಜ್ಯ ಖಾತೆ ಉಪಮಂತ್ರಿ. 1974ರರ ಅಕ್ಟೋಬರ್ 1976ರ ನವೆಂಬರ್‍ವರೆಗೆ ಕೇಂದ್ರ ವಾಣಿಜ್ಯ ಸಚಿವ. 77ರ ಮಾರ್ಚಿನಲ್ಲಿ ಲೋಕಸಭಾ ಸದಸ್ಯ. 1980ರ ಜೂನ್ 9ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಡಕಾಯಿತರ ಪಿಡುಗನ್ನು ನಿವಾರಿಸಲು ಆಗಲಿಲ್ಲ ಎಂದು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.

1983ರ ಜನವರಿ 29ರಂದು ಕೇಂದ್ರ ವಾಣಿಜ್ಯ ಸಚಿವರಾದರು. ಅದೇ ವರ್ಷದ ಜುಲೈನಲ್ಲಿ ರಾಜ್ಯಸಭಾ ಸದಸ್ಯರಾದರು. 1984ರ ಸಪ್ಟೆಂಬರ್ 1 ರಂದು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. 1984ರ ಡಿಸೆಂಬರ್ 31ಕ್ಕೆ ಕೇಂದ್ರ ಹಣಕಾಸು ಖಾತೆ ಸಚಿವರಾದರು. ಆಗ ಅವರು ಕೈಗೊಂಡ ಕ್ರಮಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಜತೆ ಭಿನ್ನಾಭಿಪ್ರಾಯ; ಬೋಫೋರ್ಸ್ ಹಗರಣಗಳಿಂದಾಗಿ ಕಾಂಗ್ರೆಸ್ ತ್ಯಜಿಸಿದರು. ಅಲಹಾಬಾದ್ ಲೋಕಸಭಾ ಕ್ಷೇತ್ರದಿಂದ ಚಿತ್ರ ನಟ ಅಮಿತಾಬ್ ಬಚ್ಚನ್‍ರವರನ್ನು ಸೋಲಿಸಿದರು. ಆ ಮೇಲೆ 1989ರ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. 1989ರಲ್ಲಿ ಜನತಾದಳದ ನಾಯಕರಾಗಿ ಬಿ.ಜೆ.ಪಿ ಹಾಗೂ ಎಡಪಕ್ಷಗಳ ಬೆಂಬಲದೊಡನೆ ಕಾಂಗ್ರೆಸೇತರ ಸರ್ಕಾರದ ಪ್ರಧಾನಿಯಾದರು. 1990ರ ಬಿ.ಜೆ.ಪಿ ನಾಯಕ ಅಡ್ವಾಣಿ ರಥಯಾತ್ರೆ, ಮಂಡಲ್ ಆಯೋಗದ ಮೀಸಲಾತಿ ಶಿಫಾರಸ್ಸುಗಳ ಜಾರಿ, ವಿ.ಪಿ.ಸಿಂಗ್ ಪದತ್ಯಾಗಕ್ಕೆ ಕಾರಣವಾಯಿತು.

ವಿ.ಪಿ.ಸಿಂಗ್ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಅಷ್ಟೇನೂ ಸಕ್ರಿಯ ರಾಜಕಾರಣ ನಡೆಸುತ್ತಿಲ್ಲ. ಆದರೂ ದೆಹಲಿಯ ಕೊಳಚೆ ಪ್ರದೇಶ ನಿವಾಸಿಗಳ ಬೇಡಿಕೆಗಳಿಗೆ ಇವರು ಧ್ವನಿಯಾಗಿದ್ದಾರೆ. ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ವಿರುದ್ಧ ಜಾತ್ಯತೀತ ಶಕ್ತಿಗಳ ಪರ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಜನತಾದಳ ನಾಯಕ ಲಾಲೂಪ್ರಸಾದ್ ಯಾದವ್ ಕಡೆ ವಿ.ಪಿ.ಸಿಂಗ್‍ರವರ ಒಲವು ಈಗಲೂ ಉಂಟು. (ಕೆ.ಎಸ್.ಅಚ್ಯುತನ್)