ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಷ್ಣುವರ್ಧನ 3

ವಿಕಿಸೋರ್ಸ್ದಿಂದ

ವಿಷ್ಣುವರ್ಧನ 3

1952-. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಾಯಕ ನಟ. ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. 1952ರಲ್ಲಿ ಜನಿಸಿದರು. ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರು ನಿರ್ದೇಶಿಸಿದ `ವಂಶವೃಕ್ಷ ಚಲನಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದರು. ಪುಟ್ಟಣ್ಣ ಕಣಗಾಲ್‍ರ ನಾಗರಹಾವು ಚಿತ್ರದಲ್ಲಿ ಹದಿಹರೆಯದ ಹುಡುಗನ ಪಾತ್ರದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಅನಂತರ ಚಿತ್ರರಂಗದಲ್ಲಿ ಖಾಯಂ ನಾಯಕನಟರಾಗಿ ನಟಿಸತೊಡಗಿದರು. ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದಲೂ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವ್ಯವಸ್ಥೆ ವಿರುದ್ಧ ಸಿಡಿದೇಳುವ ಹಾಗೂ ಸಾಮಾಜಿಕ ಕಳಕಳಿಯುಳ್ಳ ನಾಯಕ ಪಾತ್ರಗಳಲ್ಲಿ ಅಭಿನಯಿಸಿರುವ ಇವರು ಯುವಜನರ ನೆಚ್ಚಿನ ನಟರಾಗಿದ್ದಾರೆ. ತ್ಯಾಗ, ಕರುಣಾಮಯಿ ಪಾತ್ರಗಳಲ್ಲಿ ಹೆಚ್ಚು ಅಭಿನಯಿಸಿದ್ದಾರೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇವರು ಅಭಿನಯಿಸಿರುವ ಪ್ರಮುಖ ಚಿತ್ರಗಳಿವು: ನಾಗರಹಾವು (1972), ಭೂತಯ್ಯನ ಮಗ ಅಯ್ಯು (1974), ಮಕ್ಕಳ ಭಾಗ್ಯ (1976), ನಾಗರಹೊಳೆ (1977), ಹೊಂಬಿಸಿಲು (1978), ಬಂಧನ (1984), ಮಲಯ ಮಾರುತ (1986) ದಾದ (1988), ಮುತ್ತಿನಹಾರ (1990), ಸಂಘರ್ಷ(1993), ಲಾಲಿ (1997), ವೀರಪ್ಪನಾಯಕ (1998), ಸೂರಪ್ಪ (1999), ಸೂರ್ಯವಂಶ, ಯಜಮಾನ. ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್-ದ್ವಾರಕೀಶ್ ಜೋಡಿ ಹೆಚ್ಚು ಜನಪ್ರಿಯವಾಗಿದೆ. ದ್ವಾರಕೀಶ್ ನಿರ್ಮಿಸಿರುವ ಕಳ್ಳ ಕುಳ್ಳ, ಸಿಂಗಾಪುರದಲ್ಲಿ ರಾಜ ಕುಳ್ಳ, ಕಿಲಾಡಿ ಜೋಡಿ, ಕಿಟ್ಟು ಪುಟ್ಟು, ಕಿಲಾಡಿ ಕಿಟ್ಟು, ಮನೆಮನೆ ಕಥೆ ಮುಂತಾದುವು ಬಾಕ್ಸ್ ಆಫೀಸಿನಲ್ಲೂ ಗೆದ್ದಿವೆ.

ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ. ಮುತ್ತಿನಹಾರ ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರಕಿದೆ. ಲಾಲಿ (1997), ವೀರಪ್ಪನಾಯಕ (1999) ಚಿತ್ರಗಳಿಗೆ ಶ್ರೇಷ್ಠನಟ ಪ್ರಶಸ್ತಿ ದೊರಕಿವೆ. ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಭಾರತಿ ಇವರ ಪತ್ನಿ. *

  *