ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೃಷಭರಾಶಿ

ವಿಕಿಸೋರ್ಸ್ದಿಂದ

ವೃಷಭರಾಶಿ ಬಾನಿಗೆ ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರು ವಂತೆ ಭಾಸವಾಗುವ ಅಸಂಖ್ಯ ನಕ್ಷತ್ರ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ (ನೋಡಿ- ನಕ್ಷತ್ರ-ಪುಂಜ) ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್). ದ್ವಾದಶ ಅಥವಾ 12 ರಾಶಿಗಳ ಪೈಕಿ ಎರಡನೆಯದು-ಮೊದಲನೆಯದು ಮೇಷ, ಮೂರನೆಯದು ಮಿಥುನ. ಈ 12 ರಾಶಿಗಳೂ ರಾಶಿಚಕ್ರದ (ಝೋಡಿಯಕ್) ಮೇಲಿವೆ. ಸೂರ್ಯಚಂದ್ರ ಮತ್ತು ಗ್ರಹಗಳ ಸಂಚಾರ ಪಥಗಳು ಅಥವಾ ಕಕ್ಷೆಗಳು ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ.

ವೃಷಭರಾಶಿಯ ಆಕಾರವನ್ನು ಚಿತ್ರದಲ್ಲಿ ಕಾಣಿಸಿದೆ. ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ ಗಿ-ಆಕಾರದಿಂದ ಇದನ್ನು ಗುರುತಿಸುತ್ತೇವೆ. ಗಿ-ಯ ಕೋನಶೃಂಗ ಪಶ್ಚಿಮದತ್ತ ತಿರುಗಿದೆ. ದಕ್ಷಿಣ ಬಾಹುವಿನ ತುದಿ ನಕ್ಷತ್ರದ ಬಣ್ಣ ಮಾಣಿಕ್ಯ ಕೆಂಪು. ಇದು ರೋಹಿಣಿ (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್ ಸ್ಟಾರ್).

ಚಿತ್ರ-1

ಭೂಮಿಯಿಂದ ದೂರ 69 ಜ್ಯೋತಿರ್ವರ್ಷಗಳು. ಇದರ ಅರ್ಥ ಇಂದಿನಿರುಳು ನಮಗೆ ಕಾಣುವ ರೋಹಿಣಿ ವಾಸ್ತವವಾಗಿ 69 ವರ್ಷಹಿಂದಿನದು! ಇದರ ಉಜ್ಜ್ವಲ ತಾಂಕ (ಮ್ಯಾಗ್ನಿಟ್ಯೂಡ್) 0.9 ವೃಷಭ ರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು : ಅಗ್ನಿ (ಎಲ್‍ನಾಥ್), ಉಜ್ಜ್ವಲತಾಂಕ 1.7, ನೀಲದೈತ್ಯ (ಬ್ಲೂ ಜಯಂಟ್), ದೂರ 140 ಜ್ಯೋತಿರ್ವರ್ಷ. ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ (ಪ್ಲಿಯಡಿಸ್) ವೃಷಭ ರಾಶಿಯಲ್ಲಿದೆ. ಪುಟ್ಟ ಸೌಟಿನಂತೆ ಇದರ ಆಕಾರ. ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ ಹಯಡಿಸ್ ಎಂದು ಹೆಸರು. (ಸಿ.ಎನ್.ಎಸ್.)

  *