ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಕುನಿ

ವಿಕಿಸೋರ್ಸ್ದಿಂದ

ಶಕುನಿ ಮಹಾಭಾರತದ ಒಂದು ಮುಖ್ಯ ಪಾತ್ರ. ದುರ್ಯೋಧನನ ಸೋದರಮಾವ. ಗಾಂಧಾರಿಯ ಅಣ್ಣ. ಮಹಾಭಾರತದ ಹಲವಾರು ಘಟನೆಗಳಿಗೆ ಕಾರಣನಾದ ಈತ ಗಾಂಧಾರ ದೇಶದ ಅರಸ ಸುಬಲರಾಜನ ಗಂಡುಮಕ್ಕಳಲ್ಲಿ ಹಿರಿಯ. ಈತ ಸದಾಕಾಲ ದುರ್ಯೋಧನನ ಬಳಿಯಲ್ಲೇ ಇರುತ್ತ, ಅವನು ಕೆಟ್ಟಹಾದಿಯಲ್ಲಿ ನಡೆಯುವಂತೆ ಪ್ರೋತ್ಸಾಹಿಸುತ್ತ, ನಾನಾ ಕುತಂತ್ರಗಳನ್ನು ಯೋಜಿಸಿ ಮಹಾಭಾರತದ ಯುದ್ಧಕ್ಕೆ ನಾಂದಿ ಹಾಡಿದ. ಇವನಿಗೆ ಹಲವಾರು ಮಂದಿ ಸಹೋದರರು ಮತ್ತು ಸಹೋದರಿಯರಿದ್ದರು.

ನಾನಾ ಸಂದರ್ಭದಲ್ಲಿ ಪಾಂಡವರಿಂದ ದುರ್ಯೋಧನ ಅವಮಾನಿತ ನಾದಾಗ ಪಾಂಡವರನ್ನು ಪರಾಕ್ರಮದಿಂದ ಗೆಲ್ಲುವುದು ಅಸಾಧ್ಯವೆಂದು ತಿಳಿದು ದ್ಯೂತವಾಡಿ ಮೋಸದಿಂದ ಸೋಲಿಸಿ ರಾಜ್ಯಭ್ರಷ್ಟರನ್ನಾಗಿ ಮಾಡುವುದೇ ಉಚಿತವೆಂದು ಈತ ದುರ್ಯೋಧನನನ್ನು ಪ್ರೋತ್ಸಾಹಿಸಿದ. ಮುಂದೆ ಧರ್ಮರಾಜ ಒಡ್ಡಿದ ಪಣವನ್ನೆಲ್ಲ ಒಂದೊಂದಾಗಿ ಗೆಲ್ಲುವಂತೆ ಸಂಚು ನಡೆಸಿ ಪಾಂಡವರನ್ನು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸಕ್ಕೆ ಕಳುಹಿಸುವುದರಲ್ಲಿ ಯಶಸ್ವಿಯಾದ. ಮಹಾಭಾರತ ಯುದ್ಧ ಪ್ರಾರಂಭವಾದಾಗ ಹದಿನಾಲ್ಕನೆಯ ದಿನದ ಹಗಲಿನ ಯುದ್ಧದಲ್ಲಿ ನಕುಲ ಸಹದೇವರೊಂದಿಗೆ ದ್ವಂದ್ವಯುದ್ಧ ಮಾಡಿ ಸೋತ ಶಕುನಿ, ಹದಿನಾರನೆಯ ದಿನದ ಯುದ್ಧದಲ್ಲಿ ಭೀಮಸೇನನ ಮಗನಾದ ಶ್ರುತಸೋಮನೊಂದಿಗೆ ನಡೆದ ಯುದ್ಧದಲ್ಲೂ ಪರಾಜಯವನ್ನು ಅನುಭವಿಸಿದ. ಈತ ಹದಿನೆಂಟನೆಯ ದಿನದ ಯುದ್ಧದಲ್ಲಿ ಸಹದೇವನಿಂದ ಹತನಾದ. (ಆರ್.ಎಸ್.ಜೆ.)