ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀನಿವಾಸ್ ಜಿ ಕಪ್ಪಣ್ಣ

ವಿಕಿಸೋರ್ಸ್ದಿಂದ

ಶ್ರೀನಿವಾಸ್ ಜಿ ಕಪ್ಪಣ್ಣ 1948- ಕನ್ನಡ ಹವ್ಯಾಸಿ ರಂಗಭೂಮಿಯ ಬಹುಮುಖ ಪ್ರತಿಭೆಯ ಸಂಘಟನಾ ಚತುರ. ಹುಟ್ಟಿದ್ದು ತುಮಕೂರು ಜಿಲ್ಲೆಯ ಯಡಿಯೂರು ಕ್ಷೇತ್ರದ ಸಮೀಪದ ಜಲಧಿಗೆರೆಯಲ್ಲಿ, ಫೆಬ್ರುವರಿ 17, 1948ರಲ್ಲಿ ತಂದೆ ಗಿರಿಯಪ್ಪ. ತಾಯಿ ಜಯಮ್ಮ, ಹವ್ಯಾಸಿ ನಾಟಕ ರಂಗದ ವಲಯದಲ್ಲಿ ಆತ್ಮೀಯರು ಪ್ರೀತಿಯಿಂದ ಕರೆಯುತ್ತಿದ್ದು ಕಪ್ಪಣ್ಣ ಎಂದು. ಅದು ಜನ್ಮನಾಮದ ಭಾಗವಾಗಿ ಖಾಯಂ ಆಗಿ ಅಂಟಿಕೊಂಡಿತು. ಶ್ರೀನಿವಾಸ್ ಎನ್ನಿ ಕಪ್ಪಣ್ಣ ಎನ್ನಿ ಹೇಗೆ ಬೇಕಾದರೂ ಕರೆಯಿರಿ ಆತ ಸೇವೆಗೆ ಸದಾಸಿದ್ಧ. ಪ್ರತಿಭೆ ಇದ್ದವರನ್ನು ಗುರುತಿಸಿ ಅವರಿಗಾಗಿ ವೇದಿಕೆ ಸಿದ್ಧಪಡಿಸಿ ನೇಪಥ್ಯದಲ್ಲಿ ಉಳಿಯುವ ಪ್ರವೃತ್ತಿ. ಯಾವ ಬಣಕ್ಕೂ ಸೇರದೆ, ಎಲ್ಲ ಪ್ರತಿಷ್ಠಿತ ಕಲಾವಿದರ ಜೊತೆಗೆ ನಿಷ್ಠೆಯಿಂದ ದುಡಿದಿದ್ದಾರೆ. ಅವರ ಗೆಳೆತನ ಸಂಪಾದಿಸಿದ್ದಾರೆ. ಹವ್ಯಾಸಿ ರಂಗದ ಎಲ್ಲ ಕಲಾವಿದರ ಪಾಲಿಗೆ ಸ್ನೇಹ ಸೇತುವಾಗಿದ್ದಾರೆ.

ಬೆಂಗಳೂರಿನ ವಿಜಯ ಹೈಸ್ಕೂಲಿನ ವಿದ್ಯಾಭ್ಯಾಸ ಮುಗಿದ ಮೇಲೆ ನ್ಯಾಷನಲ್ ಕಾಲೇಜ್ ಸೇರಿದಾಗ (1967) ಅಂಟಿದ ರಂಗಭೂಮಿಯ ನಂಟಿಗೆ ಇಂದೂ ಚ್ಯುತಿ ಬಂದಿಲ್ಲ. ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್‍ನಲ್ಲಿ ನಾಣಿ ಮಾರ್ಗದರ್ಶನದಲ್ಲಿ ರಂಗಭೂಮಿಯ ನೇಪಥ್ಯ ಪ್ರವೇಶ ಆರಂಭದಲ್ಲಿ ಬೆಳಕಿನ ವಿನ್ಯಾಸ. ಬಿ.ಸಿ. ಚಂದ್ರಶೇಖರ್ ನಿರ್ದೇಶನದ ತುಘಲಕ್ ನಾಟಕದ ಮೂಲಕ ಪ್ರಕಾಶನ ವಿನ್ಯಾಸಕಾರರಲ್ಲಿ ಒಬ್ಬರೆಂದು ಪರಿಗಣನೆ (1967) ಬಿ.ವಿ. ಕಾರಂತರ ನಾಟಕಗಳ, ನಾಟ್ಯ ಥಿಯೇಟರ್ ಸೆಂಟರ್, ಬಿ.ಎಲ್.ಟಿ ತಂಡದ ನಾಟಕಗಳಿಗೆ ಪ್ರಕಾಶನದ ವಿನ್ಯಾಸದ ಅವಕಾಶ ಪ್ರಾಪ್ತಿ. 1972ರಲ್ಲಿ ಸಿ.ಆರ್.ಸಿಂಹ್, ಸಿ. ಅಶ್ವತ್ಥ್ ಮತ್ತಿತರ ಕಲಾವಿದರ ಜೊತೆಗೂಡಿ ನಟರಂಗ ಸ್ಥಾಪನೆ. ತಂಡದ ಸಂಘಟನೆ, ನಾಟಕಗಳ ಪ್ರಕಾಶನದ ಹೊಣೆ, ಪೋಲಿಕಿಟ್ಟಿ, ಕಾಕನಕೋಟೆ, ತುಘಲಕ್, ಚೆಗೆವಾರ ಮೊದಲಾದ ನಾಟಕಗಳ ನಿರ್ಮಾಣ. ಮದರಾಸ್, ಮುಂಬೈ, ದೆಹಲಿ, ಕಲ್ಕತ್ತಾಗಳಲ್ಲಿ ನಡೆದ ನಟರಂಗದ ನಾಟಕೋತ್ಸವಕ್ಕೆ ಅದ್ಭುತ ಸ್ವಾಗತ. ಕಪ್ಪಣ್ಣ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿದ ಪ್ರಮುಖ ನಾಟಕ ಮಾಸ್ತಿಯವರ ಚಿಕ್ಕವೀರ ರಾಜೇಂದ್ರ ಮಾಸ್ತಿ ಅವರು ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾಲದಲ್ಲಿ ನಾಟಕದ ಮರು ಪ್ರದರ್ಶನ ಕಂಡಿತು.

ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಲ್ಲಿ ನಾಟಕ ವಿಭಾಗದ ಉದ್ಯೋಗಿಯಾಗಿ ಸರಕಾರದ ಪ್ರಚಾರ ನಾಟಕಗಳ ಸಂಯೋಜನೆ. ಪ್ರದರ್ಶನದ ಹೊಣೆಗಾರಿಕೆ; ಸಮರ್ಥವಾಗಿ ನಿರ್ವಹಣೆ. ಆದರೆ ಸರಕಾರಿ ಉದ್ಯೋಗ ನಿಮಿತ್ತ ದೊರೆತ ಅವಕಾಶಗಳು ಇವರ ಕಲ್ಪನೆ ಮತ್ತು ಸಂಘಟನಾ ಮತ್ತು ನಿರ್ವಹಣಾ ಚಾತುರ್ಯಕ್ಕೆ ಪ್ರಚೋದನೆ ನೀಡಿದವು.

ಕಪ್ಪಣ್ಣ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕರ್ನಾಟಕದ ಜಾನಪದ ತಂಡಗಳ ನಾಯಕರಾಗಿ, ಪಥಚಲನೆಯಲ್ಲಿನ ನೃತ್ಯ ಸಂಯೋಜಕರಾಗಿ ಕರ್ನಾಟಕದ ಜಾನಪದ ಕಲೆಗೆ ಕೀರ್ತಿ ತಂದಿದ್ದಾರೆ. ದೆಹಲಿಯ ಫೂಲ್ ವಾಲೋಂಕಿ ಸೈಂ ನಲ್ಲಿಯ ಕರ್ನಾಟಕದ ಜಾನಪದ ಕಲಾವಿದರ ತಂಡದೊಂದಿಗೆ ಭಾಗವಹಿಸಿದ್ದಾರೆ.

1997ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಮೇಳದ ಉದ್ಘಾಟನಾ ಮತ್ತು ಮುಕ್ತಾಯ ಸಮರಂಭಗಳ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 2650ಮಂದಿ ತಮಟೆ, ಡೊಳ್ಳುಕುಣಿತ ಮತ್ತು ಕೋಲಾಟ ಕಲಾವಿದರು ಭಾಗವಹಿಸಿದ್ದರು. ಈ ಭಾರಿ ಪ್ರಮಾಣದ ಜಾನಪದ ಕಲಾವಿದರ ಸಂಘಟನೆ, ಜಾನಪದನೃತ್ಯಕ್ಕೆ ಸಂಯೋಜನೆ ಕಪ್ಪಣ್ಣನವರ ಸಂಘಟನಾ ಕೌಶಲ ಮತ್ತು ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿತು.

ಮೈಸೂರು ದಸರಾ ಉತ್ಸವದಲ್ಲಿ 500ಮಂದಿ ಡೊಳ್ಳು ಕುಣಿತ ಕಲಾವಿದರಿಂದ ಮನೋಜ್ಞವಾದ ನೃತ್ಯ ಪ್ರದರ್ಶನ ವ್ಯವಸ್ಥೆ ಮಾಡಿದ್ದರು. ನೃತ್ಯ ಸಂಯೋಜನೆ ಕಪ್ಪಣ್ಣನವರದೇ (1990). ಕಪ್ಪಣ್ಣನವರ ಗಣನೀಯ ಸಾಧನೆಯ ಕ್ಷೇತ್ರ ಸರಕಾರದ ಪ್ರತಿಷ್ಠಿತ ಸಾರ್ವಜನಿಕ ಸಮಾರಂಭಗಳ ಆಯೋಜನೆ. ಮುಖ್ಯವಾಗಿ ರಾಜ್ಯದ ಪ್ರಶಸ್ತಿ ಪ್ರದಾನ ಸಮಾರಂಭಗಳು, ಅದರಲ್ಲೂ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಗಳು, ವೇದಿಕೆಯ ರಂಗವಿನ್ಯಾಸ, ಪ್ರಕಾಶನದ ವಿನ್ಯಾಸ, ಬಹುಮಾಧ್ಯಮದ ಬಳಕೆಯಿಂದ ಸಮಾರಂಭಕ್ಕೆ ನಾವೀನ್ಯತೆ, ಶ್ರೀಮಂತಿಕೆ, ಪ್ರೇಕ್ಷಣೀಯತೆಯನ್ನೂ ಹೆಚ್ಚಿಸಿದರು. ಬಹು ಮಾಧ್ಯಮಗಳ ಬಳಕೆ ಮಾಡಿ, ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಿದರು.

ದೂರದರ್ಶನಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಮುಖ್ಯವಾದವು. ಪಂಜರಶಾಲೆ(1978) ನಾಟಕ ಮತ್ತು ಕವಿ ಸಿದ್ಧಲಿಂಗಯ್ಯ ಅವರ ಕವಿತೆ ಆಧಾರಿತ ಕತ್ತೆ ಮತ್ತು ಧರ್ಮ ಮುಖ್ಯವಾದವು. ಶಂಕರ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನಲ್ಲಿ ಅಭಿನಯಿಸಿದ್ದಾರೆ. ಕಾಡು ಚಿತ್ರದಲ್ಲಿ ಒಂದು ಪುಟ್ಟ ಪಾತ್ರ. ವಾದಿರಾಜ್ ಸೊದರರಿಗಾಗಿ ಕಾಕನ ಕೋಟೆ ನಾಟಕದ ಚಲನಚಿತ್ರ ರೂಪಾಂತರದ ಕಾರ್ಯನಿರ್ವಾಹಕರಾಗಿ ದುಡಿದಿದ್ದಾರೆ. ಬಿ.ವಿ. ಕಾರಂತ, ಡಾ. ಕಂಬಾರ, ಮಾಯಾರಾವ್, ಎಚ್.ಎಲ್.ನಾಗೇಗೌಡ, ನಾಗರತ್ನಮ್ಮ, ಡಾ. ಮೋದಿ, ನಿಸ್ಸಾರ್ ಅಹಮದ್, ಎಲ್.ಎಸ್. ಶೇಷಗಿರಿರಾವ್ ಮೊದಲಾದ ವ್ಯಕ್ತಿ ಚಿತ್ರಗಳನ್ನು ದೂರದರ್ಶನಕ್ಕಾಗಿ ನಿರ್ದೇಶಿಸಿದ್ದಾರೆ. ರಂಗಭೂಮಿ, ಜಾನಪದ ಕಲೆ, ಸುಗಮ ಸಂಗೀತ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ನಡೆವ ಬಹುಪಾಲು ಕಾರ್ಯಕ್ರಮಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಪ್ಪಣ್ಣನವರ ಸಂಪರ್ಕ ಇದ್ದೇ ಇರುತ್ತದೆ.

ನಿರ್ಜೀವ ಕಾರ್ಯಕ್ರಮಗಳಿಗೆ ತಮ್ಮ ಕಲ್ಪನೆ ಆಯೋಜನೆಗಳ ಮೂಲಕ ಕಾಯಕಲ್ಪ ನೀಡುವ ಕಪ್ಪಣ್ಣ ಅವರಿಗೆ ಸಂದ ಪ್ರಶಸ್ತಿಗಳು ಪುರಸ್ಕಾರಗಳೂ ಅಸಂಖ್ಯ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1998), ಕೆ.ವಿ. ಶಂಕರೇಗೌಡ ರಂಗಪ್ರತಿಷ್ಠಾನ ಪ್ರಶಸ್ತಿ (1999) ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2004) ಪುರಸ್ಕøತರು. 2006ರಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗುವ ಗೌರವ.