ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಗಮೇಶ್ವರ ಗುರವ

ವಿಕಿಸೋರ್ಸ್ದಿಂದ

ಸಂಗಮೇಶ್ವರ ಗುರವ - ಬಾಲಕನಿಗೊ ಸಂಗೀತ ಕಲಿಯುವಾಸೆ. ಬೇಡ, ಸಂಗೀತದ ಬೆನ್ನು ಹತ್ತಿ ನಾನು ಉಂಡ ಕಷ್ಟವೆ ಸಾಕು. ನೀನು ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ದೊರಕಿಸಿಕೊಂಡು ಸುಖದಿಂದಿರು ಎಂಬುದು ತಂದೆಯ ಉಪದೇಶ. ಬಾಲಕನಿಗೆ ಶಾಲಾಶಿಕ್ಷಣ ಸೇರಲೊಲ್ಲದು. ತಂದೆಯ ಒತ್ತಾಯಕ್ಕೆ ಶಾಲೆಗೇನೊ ಹೋಗುತ್ತಿದ್ದ. ಆದರೆ, ಮನಸ್ಸೆಲ್ಲ ಸಂಗೀತದ ಮೇಲೆ. ಅಂದು ಹೈಸ್ಕೂಲ ಎರಡನೆಯ ಇಯತ್ತೆಯ ಗಣಿತ ಪರೀಕ್ಷೆ. ಶಾಲೆಯ ದಾರಿಯಲ್ಲಿ ರೇಡಿಯೊದಿಂದ ಬಿತ್ತರವಾಗುತ್ತಿದ್ದ ಅಬ್ದುಲ್ ಕರೀಮಖಾನರ ಗಾಯನ ಕೇಳಿಬರುತ್ತಿತ್ತು. ಪರೀಕ್ಷೆ ಹಾಳಾಗಿ ಹೋಗಲಿ ಎಂದು ಬಾಲಕ ರೇಡಿಯೊ ಕೇಳುತ್ತ ಮಂತ್ರಮುಗ್ಧನಾಗಿ ನಿಂತುಬಿಟ್ಟ. ಅಂದಿನಿಂದ ಅಬ್ದುಲ್ ಕರೀಮಖಾನರ ಧ್ವನಿಮುದ್ರಿಕೆಗಳನ್ನು ಅನುಕರಣ ಮಾಡುವುದೇ ಕಾಯಕವಾಯಿತು. ಇಂಥ ಸಂಗೀತ ನಿಷ್ಠೆ ತೋರಿದ ಅಂದಿನ ಬಾಲಕನೇ ಇಂದಿನ ಹಿರಿಯ ಹಿಂದುಸ್ತಾನಿ ಗಾಯಕ ಸಂಗಮೇಶ್ವರ ಗುರವ.

ಸಂಗಮೇಶ್ವರನ ಹೆಣ್ಣಜ್ಜ ರಾಮಚಂದ್ರಪ್ಪ ಸಂಗಮೇಶ್ವರನ ತಾಯಿ ನಂದೆವ್ವರಿಗೆ ಹೇಳುತ್ತಿದ್ದ “ನಿನ್ನ ಮಗ ದೊಡ್ಡ ಗಾಯಕ ಆಗತಾನ, ನೋಡತಿರು”. ಆದರೆ ಅವನಪ್ಪ ಅವನಿಗೆ ಕಲಿಸಾಕ ಒಲ್ಲ. ಮಗ ಸಂಗೀತ ಬಿಡಲೊಲ್ಲ. ಅಪ್ಪ ಸಂಗೀತ ಕಲಿಸಲೊಲ್ಲ. ಬೇರೆಯವರೂ ಹೇಳಿ ನೋಡಿದರು. ಅಪ್ಪ ಜಪ್ಪೆನ್ನಲಿಲ್ಲ. ಮೂಲೆಯಲ್ಲಿ ಬಿದ್ದಿದ್ದ ಸಾರಂಗಿಯನ್ನು ಸಂಗಮೇಶ್ವರ ಹುಡುಕಿ ತೆಗೆದ. ತಂದೆಯ ಸೋದರಮಾವ ಬಾಳಪ್ಪ ಸಾರಂಗಿ ನುಡಿಸುವುದನ್ನು ಕಲಿಸಿದ. ಮರು ದಿನ ಅದರಂತೆಯೇ ನುಡಿಸಬೇಕೆ! “ಮೀನಿಗೆ ಯಾರಾದರೂ ಈಜು ಕಲಿಸುವ ಅಗತ್ಯವಿದೆಯೆ?” ಎಂದು ಸೋದರಮಾವ ಬಾಳಪ್ಪನ ಉದ್ಗಾರ. ಸಂಗಮೇಶ್ವರ ಗುರವರ ಅಜ್ಜ ಸಂಗಪ್ಪ ಜಮಖಂಡಿ ಆಸ್ಥಾನದಲ್ಲಿ ಗಾಯಕ, ತಬಲಾವಾದಕ ಹಾಗೂ ನೃತ್ಯ ಗುರು. ತಂದೆಯ ಕಕ್ಕ ಕೂಡ ಜಮಖಂಡಿಯ ಆಸ್ಥಾನ ಗಾಯಕ.

ಮಾತಾಮಹ ರಾಮಚಂದ್ರಪ್ಪ ಜಮಖಂಡಿ ಮಹಾರಾಜರ ನಾಟಕ ಕಂಪನಿಯಲ್ಲಿ ಪ್ರಧಾನ ಪುರುಷ ಪಾತ್ರಧಾರಿ. ಅವರ ತಮ್ಮ ಬಾಳಪ್ಪ ಅಲ್ಲಿಯೆ ಸಾರಂಗಿವಾದಕ. ಇನ್ನೊಬ್ಬ ತಮ್ಮ ಲಕ್ಕಪ್ಪ ಪಾರಿಜಾತದಲ್ಲಿ ಪರಿಣತ.

ಸಂಗಮೇಶ್ವರನ ತಂದೆ ಗಣಪತರಾವ ಗುರವ ಜಮಖಂಡಿ ಸಂಸ್ಥಾನದ ಆಸ್ಥಾನ ಗಾಯಕರಾಗಿದ್ದರು. 1948ರಲ್ಲಿ ಸಂಸ್ಥಾನ ವಿಲೀನಗೊಂಡು ರಾಜಾಶ್ರಯ ತಪ್ಪಿ ಬೆಳಗಾವಿಗೆ ಬಂದು ನೆಲೆಸಿದರು. ಗಣಪತರಾವ ಕಿರಾಣಾ ಘರಾಣೆಯ ಅಧ್ವರ್ಯು ಅಬ್ದುಲ್ ಕರೀಮಖಾನರ ಪ್ರಥಮ ಶಿಷ್ಯರಲ್ಲೊಬ್ಬರು. ಒಂದು ದಿನ ಮಗ ಕದ್ದು ಸಾರಂಗಿ ಬಾರಿಸುವುದು ಕಿವಿಗೆ ಬಿತ್ತು. ಅದನ್ಯಾಕ ಜಮಖಂಡಿಯಿಂದ ಬೆಳಗಾವಿಗೆ ತಂದೀಲ್ಲ ಎಂದು ಮಗನನ್ನು ಗದರಿದರು. ಸಂಗೀತದ ಬೆನ್ನು ಹತ್ತಿ ಅನುಭವಿಸಿದ ಕಷ್ಟನಷ್ಟದಿಂದ ಬೇಸತ್ತ ಜೀವ ಅವರು. “ಬಾರಸಾಕ ತಂದೇನಿ”, ಮಗ ಶಾಂತಚಿತ್ತನಾಗಿಯೆ ಉತ್ತರಿಸಿದ.

ಒಂದು ದಿನ ತಂದೆ ಅಂದರು “ಸಾರಂಗಿ ಬಾರಿಸು, ನೋಡೂನು”. ಸಂಗಮೇಶ್ವರ ಬಿಹಾಗ ರಾಗವನ್ನು ನುಡಿಸಿದ. ತಂದೆಗೆ ಮೆಚ್ಚುಗೆಯಾಯಿತು. 10-15 ದಿನ ಸಾರಂಗಿ ನುಡಿಸುವುದನ್ನು ಕಲಿಸಿದರು.

ಆದರೆ, ಮಗ ಗಾಯಕನಾಗಬಯಸಿದ್ದ. ತಂದೆ ಹಾಡುವಾಗ ಬಾಗಿಲ ಮರೆಯಲ್ಲಿ ನಿಂತು ರಾಗಗಳನ್ನು ಕದ್ದು ಆಲಿಸುತ್ತಿದ್ದ. ಅಷ್ಟೊತ್ತಿಗಾಗಲೆ ಶಾಲೆಗೆ ಶರಣು ಹೊಡೆದಾಗಿತ್ತು. ಬೆಳಗಾವಿಯ ಶಹಾಪುರದಲ್ಲಿದ್ದ ಗಂಜೀಫ್ರಾಕ್ ಫ್ಯಾಕ್ಟರಿಯೊಂದರಲ್ಲಿ ವಾರಕ್ಕೆ ಮೂರು ರೂಪಾಯಿ ಸಂಬಳಕ್ಕೆ ದುಡಿಯಲಾರಂಭಿಸಿದ್ದ. ತಂದೆಯ ಗಾಯನ ಕದ್ದು ಕೇಳುತ್ತಿರುವಾಗ ಒಂದು ದಿನ ಸಿಕ್ಕುಬಿದ್ದ. “ಹಾಡು ನಿನ್ನ ದನಿ ಹ್ಯಾಂಗೈತಿ, ನೋಡೂನು”, ಎಂದರು ಗಣಪತರಾವ. ಸಂಗಮೇಶ್ವರ ಐದು ನಿಮಿಷ ಹಾಡಿದ್ದನೊ ಇಲ್ಲವೊ ಗಣಪತರಾವ ತಮ್ಮ ತಂಬೂರಿ ಪಕ್ಕಕ್ಕಿಟ್ಟು ಎರಡೂ ಕೈಗಳಿಂದ ಗಟ್ಟಿಯಾಗಿ ತಲೆಯನ್ನು ಹಿಡಿದುಕೊಂಡರು. “ಏನಾರ ತಪ್ಪಾತೇನಪ್ಪಾ” ಎಂದು ಸಂಗಮೇಶ್ವರ ಕೇಳಿದ. “ಇಲ್ಲಪ್ಪಾ, ತಪ್ಪು ನಂದೇ ಆಗೇತಿ. ನಿನಗ ಮೊದ್ಲು ಗಾಯನ ಕಲಿಸಾಕ ಸುರು ಮಾಡಬೇಕಿತ್ತು. ಇವತ್ತಿನಿಂದ ಸಾರಂಗಿ ಬಿಟ್‍ಬಿಡು. ನಿನ್ನ ದನಿ ಇಷ್ಟು bsÀಂದ ಐತಿ. ನೀ ಸಾರಂಗಿ ಯಾಕ ಬಾರಿಸ್ಬೇಕು”, ಅಂದರು ತಂದೆ. ಸಂಗಮೇಶ್ವರನಿಗೆ ಆಗ 12 ವರ್ಷ. ಗಾಯನ ಪಾಠ ರಭಸದಿಂದ ಆರಂಭಗೊಂಡವು. ಕಳೆದುಹೋಗಿದ್ದ ಸಮಯ ಸರಿದೂಗಿಸಬೇಕಿತ್ತಲ್ಲ. ಹರಕುಮುರುಕು ತಬಲಾ ಡಗ್ಗಾ ಸಹಾಯದಿಂದ ಮುಂಜಾನೆ ತೋಡಿ, ಮಧ್ಯಾಹ್ನ ಭೀಮಪಲಾಸ, ಸಂಜೆ ಬಿಹಾಗ ರಾಗಗಳ ಪಾಠ. ತಂದೆ ಮಗ ಇಬ್ಬರಿಗೂ ಹುಚ್ಚು ಹಿಡಿದಂತಾಗಿತ್ತು. ಸಂಗಮೇಶ್ವರ ಸಂಜೆಗೆ ಫ್ಯಾಕ್ಟರಿಯಿಂದ ಬರುವುದೇ ತಡ, ಸಂಗೀತಪಾಠ ಆರಂಭ. ತರಕಾರಿ ತರಲು ಪೇಟೆಗೆ ಹೋಗಿಬರುವಾಗಲೂ ದಾರಿಯುದ್ದಕ್ಕೂ ಪಾಠ. ಸುತ್ತ ಮುತ್ತ ಜನರಿದ್ದಾರೆಂಬ ಪರಿವೆಯಿಲ್ಲ. ಗಣಪತರಾವ ರಾಗಗಳ ಸೂಕ್ಷ್ಮಗಳನ್ನು ದಾರಿಯುದ್ದಕ್ಕೂ ಹಾಡುತ್ತ ತಿಳಿಸಿಕೊಡುತ್ತಿದ್ದರು. ನೋಡು, ನೋಡು, ಆಆಆಆ ಜೋಡಿ ಹೊರಟೈತಿ ಎಂದು ಜನ ತಮಾಷೆ ಮಾಡುತ್ತಿದ್ದರು. ಸಂಗೀತ ಕಲಿಸುವ, ಸಂಗೀತ ಕಲಿಯುವ ಹುಚ್ಚು ಎಷ್ಟು ತಾರಕಕ್ಕೇರಿತೆಂದರೆ ನಿದ್ದೆಗೆಟ್ಟ ನೆರೆಹೊರೆಯವರು ಪೆÇೀಲಿಸರಿಗೆ ದೂರು ಕೊಟ್ಟರು. “ನಾಳೆಯಿಂದ ನಿಮ್ಮ ಗಾಯನ ಗದ್ದಲ ನಿಲ್ಲಿಸಿರಿ. ಇಲ್ಲದಿದ್ದರೆ ನೆಟ್ಟಗಾಗಲಿಕ್ಕಿಲ್ಲ”, ಎಂದು ಪೆÇೀಲಿಸರು ಮನೆಗೆ ಬಂದು ಎಚ್ಚರಿಕೆ ನೀಡಿದರು. ಅಂದಿನಿಂದ ರಾತ್ರಿ ಪಾಠ ನಿಂತಿತು. ಆ ಮೇಲೆ ಪ್ರ್ಯಾಕ್ಟಿಸಿಗೆ ಒಂದು ಪ್ರತ್ಯೇಕ ಕೋಣೆ ಗೊತ್ತುಮಾಡಿಕೊಂಡರು. ತಾಲದ ಸರಿಯಾದ ಗ್ರಹಿಕೆಯಾದ ದಿನ ಸಂಗಮೇಶ್ವರರಿಗೆ ಸ್ವರ್ಗ ಸಿಕ್ಕಂತಾಯಿತು.

ಗಣೇಶೋತ್ಸವ ಮತ್ತು ದಸರಾ ಹಬ್ಬದ ಸಂದಂರ್ಭದಲ್ಲಿ ಸಣ್ಣಪುಟ್ಟ ಸ್ಥಳೀಯ ಕಚೇರಿಗಳು ಆರಂಭಗೊಂಡವು. ಆಮೇಲೆ 3-4 ತಾಸಿನ ಕಚೇರಿಗಳು. ಸಂಭಾವನೆ 5 ರೂಪಾಯಿ. ಹೆಚ್ಚೆಂದರೆ 10 ರೂಪಾಯಿ.

1950ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಉದ್ಘಾಟನೆಯಾಯಿತು. ಕೇಂದ್ರದ ನಿರ್ದೇಶಕರಾದ ಗುಲ್ವಾಡಿ ಪ್ರತಿಭೆಗಳನ್ನರಸಿ ಬೆಳಗಾವಿಗೆ ಬಂದರು. ಲಿಂಗರಾಜ ಕಾಲೇಜಿನಲ್ಲಿ ಧ್ವನಿಪರೀಕ್ಷೆ.

ಸಂಗಮೇಶ್ವರ ಅಂದು ನಂದ ರಾಗವನ್ನು ಹಾಡಿದರು. ಒಂದೂವರೆ ವರ್ಷ ತಾಲೀಮು ಮಾಡಿದ್ದಾನೆ ಎಂದು ಗಣಪತರಾವ ವಿವರಿಸಿದರು. “ಇದು ಕೇವಲ ಒಂದೂವರೆ ವರ್ಷದ ತಾಲೀಮಲ್ವೆ” ಎಂದು ಗುಲ್ವಾಡಿ ಅಚ್ಚರಿಪಟ್ಟರು. ಗುಲ್ವಾಡಿ ಎಷ್ಟೊಂದು ಮೆಚ್ಚಿಕೊಂಡರೆಂದರೆ ಮಧ್ಯರಾತ್ರಿಯವರೆಗೂ ಸಂಗಮೇಶ್ವರರನ್ನು ಹಾಡಿಸಿದರು. ಸಂಗಮೇಶ್ವರರನ್ನು ಆಕಾಶವಾಣಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿರುವುದಾಗಿ ಗುಲ್ವಾಡಿ ಸ್ಥಳದಲ್ಲಿಯೇ ಘೋಷಿಸಿದರು. ಸಂಗಮೇಶ್ವರ ಗುರವ ಸುಮಾರಾಗಿ ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳಿಂದಲೂ ಹಾಡಿರುವರು.

1950. ಸಾಂಗ್ಲಿ ಮ್ಯೂಜಿಕ್ ಸರ್ಕಲ್ ಆಶ್ರಯದಲ್ಲಿ ಸಂಗಮೇಶ್ವರರ ಗಾಯನ. ಶ್ರೀಮಂತ ರಸಿಕ ನನ್ನೂಭಾಯಿ ಮಾಥ ಸರ್ಕಲ್ಲಿನ ಅಧ್ಯಕ್ಷರು. ಅವರು ಅಬ್ದುಲ್ ಕರೀಮಖಾನರ ಒಡನಾಡಿ. ಕಾರ್ಯಕ್ರಮ ಸ್ಥಳದ ಬಳಿಯೆ ಅವರ ಮನೆ. ಅಂದು ಅವರಿಗೆ ಅನಾರೋಗ್ಯ. ಜ್ವರ ಬಂದು ಮನೆಯಲ್ಲಿ ಮಲಗಿದ್ದರು. “ರೇಡಿಯೊ ಹಚ್ಚು, ಪಕ್ಕದ ಮನೆಯ ರೇಡಿಯೋದಿಂದ ಕರೀಮಖಾನರ ಗಾಯನ ಕೇಳಿಬರುತ್ತಿದೆú”, ಎಂದು ಪತ್ನಿಗೆ ಹೇಳಿದರು. “ಈಗ ರಾತ್ರಿ 11.30. ಎಲ್ಲ ಆಕಾಶವಾಣಿ ಕೇಂದ್ರಗಳು ಮುಚ್ಚಿರುತ್ತವೆ“, ಎಂದು ಪತ್ನಿ ಸಮಜಾಯಿಷಿ ಹೇಳಿದರು. ನನ್ನೂಭಾಯಿ ಮಾಥ ಗಾಯನ ಕೇಳಿಬರುತ್ತಿದ್ದ ಜಾಡು ಹಿಡಿದು ಬಂದರು. ಅರೆ, ತಮ್ಮದೇ ಸರ್ಕಲ್ಲಿನ ಕಾರ್ಯಕ್ರಮ. ಕಾರ್ಯಕ್ರಮದ ಭವನಕ್ಕೆ ಬರುತ್ತಿದ್ದಂತೆಯೆ ನನ್ನೂಭಾಯಿ ಮಾಥ ಜೋರಾಗಿ ಹೇಳಿದರು: “ಯಾರು ಹೇಳುತ್ತಾರೆ, ಅಬ್ದುಲ್ ಕರೀಮಖಾನರು ಸ್ವರ್ಗಸ್ಥರಾಗಿರುವರೆಂದು ಅವರು ಈ ಯುವಗಾಯಕನ ಗಂಟಲಲ್ಲಿ ವಾಸವಾಗಿದ್ದಾರೆ”.

ಇನ್ನೊಂದು ಪ್ರಸಂಗ. 1972ರಲ್ಲಿ ಬಿsೀಮಸೇನ ಜೋಶಿ ಅವರಿಗೆ ಪದ್ಮಶ್ರೀ ಬಂದಿತ್ತು. ಅವರ ಅಭಿನಂದನಾರ್ಥ ಪುಣೆಯಲ್ಲಿ ಸಂಗಮೇಶ್ವರ ಗುರವರ ಗಾಯನ. ಹಿರಿಯ ಗಾಯಕಿ ಹೀರಾಬಾಯಿ ಬಡೋದೆಕರ ಅಲ್ಲದೆ ಅನೇಕ ಗಾಯಕರು, ರಸಿಕರು ನೆರೆದಿದ್ದರು. ಸಂಗಮೇಶ್ವರ ತಮ್ಮ ಗಾಯನದಿಂದ ಶ್ರೋತೃಗಳ ಹೃದಯ ಗೆದ್ದರು. ಪುಳಕಿತಗೊಂಡ ಭೀಮಸೇನ ಜೋಶಿ ಹೀಗೆಂದರು: “ಇನ್ನು ಮುಂದೆ ನನ್ನ ಗಾಯನ, ಹೀರಾಬಾಯಿ ಬಡೋದೆಕರ ಗಾಯನ, ಗಂಗೂಬಾಯಿ ಹಾನಗಲ್ಲರ ಗಾಯನ, ಎಲ್ಲ ಸಂಗಮೇಶ್ವರ ಗುರವ ಅವರ ಕಂಠದಲ್ಲಿ ಕೇಳಿರಿ. ಕಿರಾಣಾ ಘರಾಣೆಯ ನಿಶಾನೆಯನ್ನು ನಾವು ಸಂಗಮೇಶ್ವರರ ಕೈಯಲ್ಲಿ ಕೊಟ್ಟಿದ್ದೇವೆ”. 1979. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದ ನಿರ್ದೇಶಕರಾಗಿ ಡಾ. ಮಲ್ಲಿಕಾರ್ಜುನ ಮನಸೂರ ಇದ್ದರು. ತಕ್ಷಣ ಹೊರಟು ಬರುವಂತೆ ಸಂಗಮೇಶ್ವರರಿಗೆ ಮನಸೂರರಿಂದ ತಾರು ಸಂದೇಶ. ಏನು, ಎಂತು ಎಂದು ಸಂಗಮೇಶ್ವರರಿಗೆ ತಿಳಿಯದು. ಬೆಳಗಾವಿಯಿಂದ ಬಂದು ಮನಸೂರ ಅವರನ್ನು ಕಂಡರು. “ಹಾಂಗ ಬಂದೀಯೇನು? ಲಗೇಜ ವಗೈರೆ ಏಕೆ ತರಲಿಲ್ಲ? ಹೋಗು ಸಾಮಾನು ತೆಗೆದುಕೊಂಡು ಬಾ. ನಿನ್ನನ್ನು ಅಧ್ಯಾಪಕನನ್ನಾಗಿ ನೇಮಿಸಿರುವೆ”, ಎಂದರು ಮನಸೂರ. ಸಂಗಮೇಶ್ವರ ಅವಾಕ್ ಆದರು. ಅರ್ಜಿ ಇಲ್ಲ. ಸಂದರ್ಶನವಿಲ್ಲ. ವಾಪಸು ಹೋಗಿ ಸಾಮಾನು ತಂದು ಧಾರವಾಡದಲ್ಲಿ ನೆಲೆಸಿದರು. ಆ ಕಾಲ ಹಾಗಿತ್ತು. ಯಾವ ಡಿಗ್ರಿ ಎಂದು ನೋಡಲಿಲ್ಲ. ಡಿಗ್ರಿಗಳಿಗೂ ಹಾಡುಗಾರಿಕೆಗೂ ಸಂಬಂಧವಿಲ್ಲ. ಹಾಗೆ ನೋಡಿದರೆ, ಮನಸೂರರಿಗೆ ಯಾವ ಡಿಗ್ರಿ ಇತ್ತು. ಬಸವರಾಜ ರಾಜಗುರು ಅವರಿಗೆ ಯಾವ ಡಿಗ್ರಿ ಇತ್ತು. ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ ಅವರಿಗೆ ಯಾವ ಡಿಗ್ರಿ ಇದೆ. ಆದರೆ, ಯಾವ ಡಿಗ್ರಿ ಅವರ ಕಲಾಯೋಗ್ಯತೆಗೆ ಸಮನಾದೀತು. ಸಂಗಮೇಶ್ವರ ಗುರವ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ ಸಂಗೀತವಿದ್ಯೆ ಕಲಿಸಿ ಡಿಸೆಂಬರ 7, 1991ರಂದು ತಮ್ಮ 60ನೆಯ ವಯಸ್ಸಿಗೆ ನಿವೃತ್ತರಾದರು.

ಸಂಗಮೇಶ್ವರರ ಗಾಯನದಲ್ಲಿ ಚಕಮಕಿ ಇಲ್ಲ. ಅವರ ಗಾಯನದಲ್ಲಿರುವುದು ಸ್ವರಶುದ್ಧತೆ, ಶಾಸ್ತ್ರಶುದ್ಧತೆ, ಶ್ರೀಮದ್ಗಾಂಭೀರ್ಯ, ಬಹು ಕಲ್ಪಕತೆ. ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು ಮನೆ ಕಟ್ಟಿದಂತೆ ಒಂದೊಂದಾಗಿ ಸ್ವರಗಳನ್ನು ಬೆಳೆಸುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಸಂಗಮೇಶ್ವರರ ಗಾಯನದಲ್ಲಿ ಭಾವನಾತ್ಮಕತೆ ಇದೆ. ರಾಗದ ಭಾವದೊಂದಿಗೆ ತಾದಾತ್ಮ್ಯ ಬೆಸೆಯುವ ತುಡಿತವಿದೆ. ಹಾಗಾಗಿ, ಅವರ ಗಾಯನ ಶ್ರೋತೃಗಳನ್ನು ಭಾವಸಾಗರದಲ್ಲಿ ಮುಳುಗಿಸುತ್ತದೆ. ಭಾವವು ರಾಗದೊಂದಿಗೆ ಬೆಸೆಯಬೇಕು. ತಾನಗಳು ತಾವೇತಾವಾಗಿ ಹೊರಹೊಮ್ಮಬೇಕು ಮತ್ತು ರಾಗ ಪ್ರತಿಸಲ ಹೊಸತು ಎನಿಸಬೇಕು ಎಂಬುದು ಸಂಗಮೇಶ್ವರರ ವ್ಯಕ್ತಿತ್ವದ ಪ್ರಧಾನ ಗುಣ. ವಚನಗಳನ್ನು ಹಾಡಲಿ, ಅಭಂಗಗಳನ್ನೆ ಹಾಡಲಿ, ಕಬೀರ ಭಜನೆಗಳನ್ನೇ ಹಾಡಲಿ, ಪುರಂದರದಾಸರ ಪದಗಳನ್ನೇ ಹಾಡಲಿ ಭಕ್ತಿ ರಸ ಹೊರಸೂಸುತ್ತದೆ. ಅವರು ಸೃಷ್ಟಿಸಿದ ರಾಗಗಳಾದ ಸಂಗಮ, ರುದ್ರ, ಗೌರಿಧರ, ಗರಗಜಗಳೂ ಭಕ್ತಿಪ್ರಧಾನವಾಗಿವೆ.

ಅವರನ್ನರಸಿ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ಪುಣೆಯ ಪಂಥನಾಥ ಸ್ವಾಮಿಗಳು ಸೂರಸೇನ ಬಿರುದು ನೀಡಿ ಗೌರವಿಸಿರುವರು. 1982ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. 1997ರಲ್ಲಿ ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್ ಪದವಿ ಬಂದಿದೆ. ಇದು ರಾಜರ ಕಾಲದ ಆಸ್ಥಾನ ವಿದ್ವಾನ್ ಪದವಿಯಿದ್ದಂತೆ. ಈಗ ರಾಜರಿಲ್ಲ, ಆಸ್ಥಾನಗಳಿಲ್ಲ, ಸರಕಾರವೇ ಎಲ್ಲ. 2001ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಅದು ರಾಷ್ಟ್ರಮಟ್ಟದ ಗೌರವ.