ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಭಾರ್ ಸರೋವರ

ವಿಕಿಸೋರ್ಸ್ದಿಂದ

ಸಾಂಭಾರ್ ಸರೋವರ

	ರಾಜಸ್ತಾನದ ಮರುಭೂಮಿಯಲ್ಲಿ ಜೋಧ ಪುರದ ಈಶಾನ್ಯಕ್ಕೆ ಸು.210 ಕಿಮೀ ದೂರದಲ್ಲಿ ಇರುವ ಲವಣಯುಕ್ತ ಸರೋವರ. ವಿಸ್ತೀರ್ಣ 240 ಚ.ಕಿಮೀ. ನೈರುತ್ಯ ಮಾರುತಗಳು ಬೀಸುವ ಕಾಲದಲ್ಲಿ ಇದರ ಆಳ 1.2 ಮೀ. ಉಳಿದ  ಕಾಲದಲ್ಲಿ ಶುಷ್ಕವಾಗಿರುವ ಇದರಭಾಗಗಳು ಉಪ್ಪಿನ ಹರಳುಗಳಿಂದ ತುಂಬಿರುತ್ತವೆ. ಬಲು ಹಿಂದಿ ನಿಂದಲೂ ಇಲ್ಲಿಂದ ಉಪ್ಪನ್ನು ಹೊರತೆಗೆಯಲಾಗುತ್ತಿದೆ. ಈ ಪ್ರದೇಶದ ಲವಣತೆಯ ಬಗ್ಗೆ ಅನೇಕ ಊಹೆ ಅಥವಾ ವಾದಗಳನ್ನು ಮಂಡಿಸಲಾ ಗಿದೆ. ಹಿಂದೆ ಒಂದು ಕಾಲದಲ್ಲಿ ರಾಜಸ್ತಾನಕ್ಕೂ ಕ್ಯಾಂಬೆ ಖಾರಿಗೂ ಸಂಬಂಧವಿತ್ತೆಂದೂ ಅದರಿಂದ ಬೇರ್ಪಟ್ಟ ಭಾಗವೇ ಈ ಪ್ರದೇಶವಾಗಿರು ವುದರಿಂದ ಇಲ್ಲಿ ಲವಣತೆಯಿರುವುದು ಸಹಜವೆಂದೂ ತಿಳಿಸುವುದು ಒಂದು ವಾದ. ಈ ಸರೋವರದ ನೆಲದಡಿಯ ಬಿರುಕುಗಳಲ್ಲಿ ಲವಣಯುಕ್ತ ಚಿಲುಮೆಗಳಿರುವುದೇ ಈ ಪ್ರದೇಶದ ಲವಣತೆಗೆ ಕಾರಣ ಎಂಬುದು ಇನ್ನೊಂದು ಮತ. ಇದಲ್ಲದೆ ಬೆಟ್ಟದ ಶಿಲೆಗಳ ಶಿಥಿಲೀಕರಣ ದಿಂದಾದ ಲವಣಗಳ ಸಂಚಯನವೂ ಮರುಭೂಮಿಯ ನಿರರ್ಥಕ ಪರಿಸ್ಥಿತಿಯೂ ಕಾರಣವೆನ್ನಲಾಗಿದೆ. ಕಚ್ಛ್ ರಣ್‍ಪ್ರದೇಶದಿಂದ ಬೀಸುವ ಗಾಳಿ ಒಯ್ದು ತರುವ ಲವಣದ ದೂಳು ಇಲ್ಲಿಯ ಲವಣತೆಯ ಪ್ರಮುಖ ಕಾರಣ ಎಂದೂ ವಾದಿಸಲಾಗಿದೆ. ಈ ವಾಯುವಾಹಕವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆಯಾದರೂ ಪ್ರತಿಪಾದಕರಾದ ಟಿ.ಎಚ್.ಹಾಲೆಂಡ್ ಮತ್ತು ಶ್ರಿಸ್ಟಿ ಎಂಬ ವಿಜ್ಞಾನಿಗಳು ಕೆಲವು ವೈಜ್ಞಾನಿಕ ತತ್ತ್ವಗಳ ಆಧಾರದ ಮೇಲೆ ಈ ವಾದವನ್ನು ಮಂಡಿಸಲಾಗಿದೆ ಎಂದು ಹೇಳಿದ್ದಾರೆ. 

ರಾಜಸ್ತಾನದ ಲವಣತೆ ಕೂಡ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಇದು ಸೋಡಿಯಮ್ ಮತ್ತು ಕ್ಯಾಲ್ಸಿಯಮ್ ಲವಣಗಳಿಂದ ಕೂಡಿದೆ. ಸಮುದ್ರ ನೀರಿನ ರಚನಾ ಘಟಕಗಳ ಪೈಕಿ ಒಂದಾದ ಮೆಗ್ನೀಸಿಯಮ್ ಲವಣಗಳು (ಪಚಭದ್ರ ಸರೋವರವೊಂದರಲ್ಲಿ ಹೊರತು) ಇಲ್ಲಿ ಇಲ್ಲದಿರುವುದು ಗಮನಾರ್ಹ. ರಾಜಸ್ತಾನ ಲವಣದಲ್ಲಿ ಸೋಡಿಯಮ್ ಕ್ಲೋರೈಡಿನ ಪ್ರಮಾಣ, ಸಮುದ್ರ ನೀರಿನಲ್ಲಿಯ ಈ ಲವಣ ಪ್ರಮಾಣ ಕ್ಕಿಂತಲೂ ಬಲು ಹೆಚ್ಚು. ಭಾರತದ ಲವಣ ಅಗತ್ಯತೆಯ 30%ರಷ್ಟು ಲವಣ ಪೂರೈಕೆ ರಾಜಸ್ತಾನದ ಸಾಂಭಾರ್, ದಿದ್ವಾನ್ ಮತ್ತು ಪಚಭದ್ರ ಸರೋವರಗಳಿಂದ ಆಗುತ್ತಿದೆ. ಅವುಗಳಲ್ಲಿ ಸಾಂಭಾರ್ ಸರೋವರದಿಂದ ಆಗುವ ಪಾಲು ಬಲು ದೊಡ್ಡದು. ಕೆಸರು ಮತ್ತು ಹೊಂಡಗಳಿಂದ ತುಂಬಿದ ಈ ಸರೋವರದ ತಳದಲ್ಲಿ ಅಪಾರ ಲವಣ ಸಂಚಯನ ಇದೆ ಎಂದು ಊಹಿಸಲಾಗಿದೆ. ಇಲ್ಲಿ ಸು. 3.8ಮೀ ಆಳದ ಸು. 50 ಮೆಟ್ರಿಕ್ ಟನ್ನುಗಳಷ್ಟು ಲವಣ ಇರಬಹುದೆಂದು ಒಂದು ಅಂದಾಜು. ಈ ಸರೋವರದ ಲವಣನಿಕ್ಷೇಪದಿಂದ ಭಾರತದ ರಾಸಾಯನಿಕ ಮತ್ತು ಇತರ ಉದ್ಯಮಗಳಿಗೂ ನಿತ್ಯಬಳಕೆಯ ಉಪ್ಪಿನ ಉತ್ಪಾದನೆಗೂ ಅನುಕೂಲವಾಗಿದೆ. (ಎಮ್.ವಿ.ಆರ್.)