ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ದಲಿಂಗಯ್ಯ, ಟಿ

ವಿಕಿಸೋರ್ಸ್ದಿಂದ

ಸಿದ್ದಲಿಂಗಯ್ಯ, ಟಿ 1898_. ಸ್ವಾತಂತ್ರ್ಯ ಹೋರಾಟಗಾರರು. ಹಿಂದಿನ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಮುಖರು. 1898ರಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸ ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯಿತು. ಮದರಾಸಿನಲ್ಲಿ ಕಾನೂನು ವಿಷಯ ವ್ಯಾಸಂಗ ಮಾಡಿದರು. ಚಿಕ್ಕ ವಯಸ್ಸಿನಲ್ಲೇ ಆನಿಬೆಸೆಂಟರ ಮಾತುಗಳಿಂದ ಪ್ರಭಾವಿತರಾದ ಇವರಲ್ಲಿ ರಾಷ್ಟ್ರಸೇವೆಯ ಆಸೆ ಮೂಡಿತು. 1932ರಲ್ಲಿ ಅಮೆರಿಕಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಇವರು ವಲಸೆ ಕಾನೂನು ಮುರಿದರೆಂಬ ಕಾರಣದಿಂದ ಒಂದೂವರೆ ತಿಂಗಳು ಜೈಲುವಾಸ ಅನುಭವಿಸಿದರು. ಭಾರತಕ್ಕೆ ವಾಪಸು ಬಂದ ಮೇಲೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು.

1935ರಲ್ಲಿ ಮಹಾತ್ಮಗಾಂಧೀಜಿಯವರು ಕರ್ನಾಟಕಕ್ಕೆ ಬಂದು ಸರ್ದಾರ್ ಪಟೇಲರೊಂದಿಗೆ ನಂದಿಬೆಟ್ಟದಲ್ಲಿ ತಂಗಿದ್ದರು. ಆಗ ಸರ್ದಾರ್ ಪಟೇಲರು ದೊಡ್ಡಬಳ್ಳಾಪುರದಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತರಾಗಿ ಇವರು ಮೈಸೂರು ಸಂಸ್ಥಾನದಲ್ಲಿ ಕಾಂಗ್ರೆಸ್ ಸಂಸ್ಥೆಯನ್ನು ಸಂಘಟಿಸುವ ಸಂಕಲ್ಪ ಮಾಡಿದರು. ತಗಡೂರು ರಾಮಚಂದ್ರರಾವ್, ವೀರಕೇಸರಿ ಸೀತಾರಾಮಶಾಸ್ತ್ರೀ ಅವರೊಂದಿಗೆ ಕಾಂಗ್ರೆಸ್ ಸಂಘಟನೆಯ ಕಾರ್ಯದಲ್ಲಿ ತೊಡಗಿ ಸಂಸ್ಥಾನದಾದ್ಯಂತ ಪ್ರವಾಸ ಮಾಡಿ ಜನರನ್ನು ಸಂಘಟಿಸಿದರು. 1938ರಲ್ಲಿ ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು. ಮೈಸೂರು ಮಹಾರಾಜರ ಆಶ್ರಯದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವುದು ಅಂದಿನ ಮೈಸೂರು ಕಾಂಗ್ರೆಸ್ಸಿನ ಧ್ಯೇಯವಾಗಿತ್ತು. ಸಂಸ್ಥಾನದಲ್ಲಿ ಹೋರಾಟವನ್ನು ಆರಂಭಿಸುವುದಕ್ಕೆ ಮುನ್ನ ಇವರು ಮಹಾತ್ಮ ಗಾಂಧೀಜಿಯವರನ್ನು ಭೇಟಿಮಾಡಿ ಅವರ ಅಭಿಪ್ರಾಯ ಕೇಳಿದರು. ಗಾಂಧೀಜಿಯವರು ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಇವರ ಮೂಲಕ ಪತ್ರ ಕಳುಹಿಸಿದರು. ಆದರೆ ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಮಹಾರಾಜರನ್ನು ಭೇಟಿಮಾಡಲು ಇವರಿಗೆ ಅವಕಾಶಕೊಡಲಿಲ್ಲ. ಗಾಂಧೀಜಿಯವರ ಪತ್ರಕ್ಕೆ ಮಹಾರಾಜರಿಂದ ಉತ್ತರವನ್ನೂ ಬರೆಸಲಿಲ್ಲ. ದಿವಾನರ ಈ ಗಡಸು ಧೋರಣೆಯನ್ನು ವಿರೋಧಿಸಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಹೋರಾಟವನ್ನು ಮೈಸೂರು ಕಾಂಗ್ರೆಸ್ ಘೋಷಿಸಿತು. 1938ರ ಏಪ್ರಿಲ್‍ನಲ್ಲಿ ಮದ್ದೂರಿನ ಬಳಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದಲ್ಲಿ ಇವರು ಕಾಂಗ್ರೆಸ್ಸಿನ ತ್ರಿವರ್ಣಧ್ವಜ ಹಾರಿಸುವುದರ ಮೂಲಕ ಸತ್ಯಾಗ್ರಹವನ್ನು ಆರಂಭಿಸಿದರು. ಅನಂತರ ಮುಂದಿನ ಹತ್ತು ವರ್ಷಗಳಲ್ಲಿ ನಾಲ್ಕಾರು ಬಾರಿ ಇವರು ಸತ್ಯಾಗ್ರಹದ ಮುಂಚೂಣಿಯಲ್ಲಿದ್ದು ಜೈಲುವಾಸ ಅನುಭವಿಸಿದರು. ಕರ್ನಾಟಕದ ಇತರ ಪ್ರದೇಶಗಳಲ್ಲೂ ದೇಶೀಯ ಸಂಸ್ಥಾನಗಳಲ್ಲೂ ಓಡಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಿದರು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಅಂತಿಮ ಹೋರಾಟ ನಡೆದು ಕಾಂಗ್ರೆಸ್ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬಂತು. ಅನಂತರ ಇವರು ಎರಡು ಬಾರಿ ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಕೆ.ಸಿ. ರೆಡ್ಡಿ ಮತ್ತು ಕೆ. ಹನುಮಂತಯ್ಯನವರ ಮಂತ್ರಿಮಂಡಲಗಳಲ್ಲಿ ಕೆಲವು ಕಾಲ ಸಚಿವರೂ ಆಗಿದ್ದರು. ಭಾರತದ ರಾಜ್ಯಾಂಗ ರಚನಾಸಭೆಯ ಸದಸ್ಯರಾಗಿಯೂ ರಾಜ್ಯಸಭಾ ಸದಸ್ಯರಾಗಿಯೂ ಚುನಾಯಿತರಾಗಿದ್ದರು. ಇವರು ಭಾರತ ಸೇವಾದಳ, ಭೂದಾನ ಚಳವಳಿ ಮತ್ತಿತರ ವಿಧಾಯಕ ಕಾರ್ಯಗಳಲ್ಲೂ ಆಸ್ಥೆಯುಳ್ಳವರಾಗಿದ್ದರು. (ಬಿ.ಆರ್.ಪಿ.)