ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಂದರಶಾಸ್ತ್ರೀ, ಪಾನ್ಯಂ

ವಿಕಿಸೋರ್ಸ್ದಿಂದ

ಸುಂದರಶಾಸ್ತ್ರೀ, ಪಾನ್ಯಂ ಭಾಸನ ನಾಟಕಗಳನ್ನು ಮೊದಲಿಗೆ ಕನ್ನಡಕ್ಕೆ ಅನುವಾದಿಸಿದ ವಿದ್ವಾಂಸರು, ಬೆಂಗಳೂರಿನವರು. ಮದರಾಸು ವಿಶ್ವವಿದ್ಯಾನಿಲಯದ ವಿದ್ವಾನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂ ರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಕೆಲವು ವರ್ಷಗಳ ಕಾಲ ಕೆಲಸಮಾಡಿದರು. ಅನಂತರ 1916ರಲ್ಲಿ ಅನಂತಪುರದ ಸರ್ಕಾರಿ ಕಾಲೇಜಿನಲ್ಲೂ ಕನ್ನಡ ಪಂಡಿತರಾಗಿದ್ದರು. 1920ರಲ್ಲಿ ಇವರು ಮದರಾಸಿನ ಸರ್ಕಾರಿ ಪ್ರಾಚ್ಯ ಗ್ರಂಥಭಂಡಾರದಲ್ಲಿ ಉಪಗ್ರಂಥಾಲಯಾಧಿ ಕಾರಿಯಾಗಿಯೂ ಸೇವೆ ಸಲ್ಲಿಸಿದರು.

ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯಗಳಿಸಿ ಕೊಂಡಿದ್ದ ಪಾನ್ಯಂ ಸುಂದರಶಾಸ್ತ್ರೀಗಳು ಸಂಸ್ಕøತದಿಂದ ಭಾಸನ ಕೆಲವು ನಾಟಕಗಳನ್ನು ಮೊಟ್ಟಮೊದಲಿಗೆ ಕನ್ನಡಿಸಿಕೊಟ್ಟರು. ಅವುಗಳಲ್ಲಿ ಅಭಿಷೇಕ ನಾಟಕ, ಊರುಭಂಗ, ಕರ್ಣಭಾರ, ದೂತವಾಕ್ಯ, ದೂತಘಟೋ ತ್ಕಚ, ಪಂಚರಾತ್ರ-ಇವು ಮುಖ್ಯವಾದುವು. ಬೆನಗಲ್ ರಾಮರಾಯ ರೊಂದಿಗೆ (ನೋಡಿ- ರಾಮರಾವ್,-ಬೆನಗಲ್) ಕೂಡಿಕೊಂಡು ಇವರು ಸಂಪಾದಿಸಿರುವ ಪುರಾಣ ನಾಮ ಚೂಡಾಮಣಿ ಒಂದು ಒಳ್ಳೆಯ ಆಕರ ಗ್ರಂಥ. ಮಕ್ಕಳಿಗಾಗಿ ಹಿತೋಪದೇಶವನ್ನೂ ಶಿವತತ್ತ್ವರತ್ನಾಕರದ ಭಾಗಗಳನ್ನೂ ಕನ್ನಡಿಸಿದ್ದಾರೆ. ಇವರಿಗೆ ಶೃಂಗೇರಿಯ ಶಿವಗಂಗಾ ಸಂಸ್ಥಾನದಿಂದ ಸಾಹಿತ್ಯರತ್ನ ಎಂಬ ಪ್ರಶಸ್ತಿ ಲಭಿಸಿತ್ತು. (ಕೆ.ಕೆ.)