ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಹನ್ ಲಾಲ್

ವಿಕಿಸೋರ್ಸ್ದಿಂದ

ಸೋಹನ್ ಲಾಲ್

ಬೆಂಗಳೂರಿಗೆ, ಏಕೆ ದಕ್ಷಿಣ ಭಾರತಕ್ಕೇ, ಕಥಕ್ ನೃತ್ಯಶೈಲಿಯನ್ನು ಪರಿಚಯಿಸಿದ ಕೀರ್ತಿ ಜಯಪುರದ ಬಿ. ಸೋಹನ್ ಲಾಲ್‍ರಿಗೆ ಸಲ್ಲಬೇಕು. ಹಾಗೆ ನೋಡಿದರೆ, ಹಿಂದಿನಿಂದಲೂ ಪ್ರಚಾರದಲ್ಲಿದ್ದ ಭರತನಾಟ್ಯ (ಆಗ ಇದನ್ನು “ತ್ಯಾಪೆ” ಎಂದು ಕರೆಯಲಾಗುತ್ತಿತ್ತು) ಮೈಸೂರು ಮತ್ತು ಅಂದಿನ ಮದರಾಸಿನಲ್ಲಿ ಈ ನೃತ್ಯ ಪ್ರಕಾರ ಬಿಟ್ಟು ಬೇರೆ ಯಾವುದೇ ನೃತ್ಯಶೈಲಿ ಬಳಕೆಯಲ್ಲಿರಲಿಲ್ಲ.

ಸೋಹನ್‍ಲಾಲ್‍ರ ಮೂಲಕ ಕಥಕ್ ಬೆಂಗಳೂರನ್ನು ಪ್ರವೇಶಿಸಿದ್ದು 1939ರ ಸುಮಾರಿನಲ್ಲಿ ಆಗತಾನೆ. ಎರಡನೆಯ ವಿಶ್ವ ಯುದ್ಧದ ಕಾರಣದಿಂದ ತಮ್ಮ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾದ ರಾಂಗೋಪಾಲ್ ನೃತ್ಯ ತಂಡದಲ್ಲಿ ಸೋಹನ್ ಸಹ ಒಬ್ಬ ನರ್ತಕರು. ಆ ಸುಮಾರಿನಲ್ಲಿ ನಗರದ ಕಲಾಸಕ್ತರು ಕೆಲವರು ಸೇರಿ ಆ ತಂಡದ ನೃತ್ಯ ಕಾರ್ಯಕ್ರಮ ಒಂದನ್ನು ಏರ್ಪಡಿಸಿದರು. ಅದರಲ್ಲಿ ವಿಶ್ವವಿಖ್ಯಾತ ಸ್ವಯಂ ರಾಂಗೋಪಾಲ್‍ರಲ್ಲದೇ ಸೋಹನ್ ಲಾಲ್, ನೀನಾ ತಿಮ್ಮಯ್ಯ, ಆಕೆಯ ಸೋದರಿ ಭೋಲಿ ಹಾಗೂ ಶ್ರೀಲಂಕಾದ ಗುನ್ನಯ್ಯ ಇವರೆಲ್ಲಾ ನರ್ತಿಸಿದರು. ಎಲ್ಲರೂ ಆಕರ್ಷಕ ಕಲಾವಿದರೇ. ಆದರೆ ಈ ಲೇಖಕನನಂತೆ ಅನೇಕರ ಮನವನ್ನು ಸೂರೆಗೊಂಡವರು ಸೋಹನ್. ಅಂತೆಯೇ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಈತ ಇನ್ನೂ ಮೇಕಪ್‍ನಲ್ಲಿದ್ದ ಸೋಹನ್‍ರನ್ನು ಕಂಡು ಕಥಕ್ ಕಲಿಯುವ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದ. ಅವರು ತಕ್ಷಣವೇ ತಮ್ಮ ಒಪ್ಪಿಗೆಯನ್ನು ನೀಡಿ, ನಮ್ಮ ಬಡಾವಣೆಯಲ್ಲಿಯೇ ಒಂದು ಮನೆಯನ್ನು ಬಾಡಿಗೆಗೆ ಹಿಡಿಯಲು ಸಲಹೆ ಮಾಡಿದರು. ಹೀಗೆ ಸೋಹನ್ ಬೆಂಗಳೂರಿನಲ್ಲಿ ನೆಲೆಸುವಂತಾಗಿ, “ಸೋಹಾನ್‍ಲಾಲ್ ನೃತ್ಯಶಾಲಾ” ನಗರದ ಪ್ರಪ್ರಥಮ ನೃತ್ಯ ಶಾಲೆ ಎಂಬ ಕೀರ್ತಿಗೆ ಭಾಜನವಾದದ್ದು ಇಂದು ಚರಿತ್ರೆಯಾಗಿದೆ.

ಪ್ರತಿಷ್ಠಿತ ಕಥಕ್ ಮನೆತನಕ್ಕೆ ಸೇರಿದ ಸೋಹನ್ ಲಾಲ್ ರಾಜಾಸ್ಥಾನದವರು. ತಂದೆ ಭವರಿಲಾಲ್ ನುರಿತ ತಬಲಾ ವಾದಕರು, ಹೆಚ್ಚಾಗಿ ಇವರ ನುಡಿಸಾಣಿಕೆಯೆಲ್ಲಾ ಕಥಕ್‍ಗೇ ಸೀಮಿತ. ಶ್ರೀಯುತರು ಕೆಲ ಕಾಲ ರಾಂಗೋಪಾಲ್‍ರ ಕಥಕ್ ಅಭ್ಯಾಸಕ್ಕೂ ತಬಲಾದ ಸಹಕಾರ ಒದಗಿಸಿದ್ದುಂಟು. ರಾಂರ ಕಥಕ್ ಕಲಿಕೆಗೆ ನೆರವು ನೀಡಿದವರು ಸೋಹನ್.

ಸೋಹನ್‍ರ ಕಥಕ್ ಗುರು ಅವರ ಸೋದರ ಮಾವ, ಜಯಪುರದ ಶೈಲಿಯ ಪ್ರವರ್ತಕರಾದ ಜಯಲಾಲ್-ಸುಂದರ ಪ್ರಸಾದ್ ಸಹೋದರರು. ಜಯಲಾಲರಿಗಂತೂ ಹುಟ್ಟು ಕಲಾವಿದರಾದ ಸೋಹನ್ ಅಚ್ಚುಮೆಚ್ಚು. ಅವರೇ ಹೇಳುತ್ತಿದ್ದಂತೆ, ಸತತ ಸಾಧನೆಯಿಂದ, ಸೃಜನಶೀಲತೆಯಿಂದ ಆ ವಿಶಿಷ್ಟ ಕಲೆಯಲ್ಲಿ ಪ್ರಯೋಗಗಳನ್ನು ನಡೆಸಿ, ತಮ್ಮ ಶೈಲಿಗೆ ಹೊಸ ಚೇತನವನ್ನು ರೂಢಿಸುವಲ್ಲಿ ಯಶಸ್ವಿಯಾದರು. ಇವರಿಗಿಂತ ಅನುಭವೀಕಲಾವಿದರುಳ್ಳ ಆ ನೃತ್ಯ ತಂಡದ ಪ್ರವಾಸದಲ್ಲಿ ಎಲ್ಲ ವಿದೇಶಿ ವಿಮರ್ಶಕರ, ಕಲಾರಸಿಕರ, ಪತ್ರಿಕೆಗಳ ಹೆಚ್ಚಿನ ಪ್ರಶಂಸೆಗೆ ಪಾತ್ರವಾದ ಕಲಾವಿದ ಎಂದರೆ ಅದು ಸೋಹನ್! ಅವರ ಪ್ರಭಾತ್, ವಾಯು, “ಕಾಲಿಯ ಮರ್ದನ್” ಅಲ್ಲದೇ ಅವರಿಂದಲೇ ಸಂಯೋಜಿಸಲ್ಪಟ್ಟು, ರಾಂಗೋಪಾಲ್ ನರ್ತಿಸಿದ “ಸೆರೆನೇಡ್ ಆಫ್ ಲವ್”ಗಳೆಲ್ಲಾ. ತಮ್ಮ ಕಲಾವಂತಿಕೆಯಿಂದ, ನರ್ತಿಸಿದ ಕಲಾವಿದರ ಕೌಶಲದಿಂದ ಕೀರ್ತಿಗಳಿಸಿದುವು. ಅವುಗಳಲ್ಲಡಗಿದ್ದ ಸೃಜನಶೀಲತೆ ಇಂದು ಹೊಸತಿಗಾಗಿ ಹಾತೊರೆಯುತ್ತಿರುವ ಅನೇಕರ ಕಣ್ತೆರೆಯುವಲ್ಲೂ ಸಹಾಯಕವಾಗಬಹುದು.

ಸೋಹನ್‍ರ ಬೆಂಗಳೂರಿನ ಶಾಲೆಯವತಿಯಿಂದ ಅನೇಕ ಕಾರ್ಯಕ್ರಮಗಳು ನೆರವೇರಿದವು. ಅವುಗಳಲ್ಲಿ ಅವರೊಡನೆ ಗುನ್ನಯ್ಯ ಅವರ ಕಾಂಡಿಯನ್ ಶಿಷ್ಯ ಶಾಂಕುಮಾರ್, ಅವರ ಶಿಷ್ಯೆ ಸ್ನೇಹಲತಾರೆಡ್ಡಿ ಕಥಕ್ಕಳಿ ಪಟು ಆನಂದಶಿವರಾಂರಲ್ಲದೇ ಸೋಹನ್‍ರ ಶಿಷ್ಯರನೇಕರು ನರ್ತಿಸುತ್ತಿದ್ದರು. ಎಂದಿನ ಪರಿಚಿತ ಸೋಲೋಗಳಲ್ಲದೇ, ಒಂದೊಂದು ಕಾರ್ಯಕ್ರಮದಲ್ಲೂ ಹೊಸ ಸಮೂಹ ಸಂಯೋಜನೆಗಳನ್ನು ಪರಿಚಯಿಸಿ ಜನಪ್ರಿಯತೆಯನ್ನು ಗಳಿಸಿಕೊಂಡರು.

ಇಷ್ಟಾದರೂ, ಅವರು ನಿರೀಕ್ಷಿಸಿದ ಪ್ರೋತ್ಸಾಹ ದೊರಕದೇ ಸಿನಿಮಾ ಕ್ಷೇತ್ರವನ್ನೂ ಪ್ರವೇಶಿಸುವಂತಾದರು. ಹಾಗೆ ಸೋಹನ್ ನರ್ತಿಸಿದ ಪ್ರಥಮ ಚಿತ್ರ ಖ್ಯಾತ ಗುಬ್ಬಿ ಕಂಪನಿಯ, ಅ.ನ.ಕೃ. ಕತೆಯೊಂದನ್ನು ಆಧರಿಸಿದ “ಜೀವನನಾಟಕ”. ಬಿ. ಜಯಮ್ಮ-ಕೆಂಪರಾಜ್ ಅಭಿನಯಿಸಿ, ಖ್ಯಾತ ಗಾಯಕ ಪಿ. ಕಾಳಿಂಗರಾವ್‍ರ ಸಂಗೀತದ ಸವಿಯಿದ್ದರೂ ಚಿತ್ರ ಹೆಸರು ಮಾಡಲಿಲ್ಲ. ಸೋಹನ್-ಇಂದ್ರಾಣಿಯರ ಶಿವ-ಪಾರ್ವತಿ ನೃತ್ಯ ಮಾತ್ರ ನೆನಪಿನಲ್ಲಿ ಉಳಿಯುವಂತಾಯಿತು. ಸ್ವತಃ ತಾವೇ ಮುಂದೆ ನಿಂತು “ಕಲಾವಿದ” ಎಂಬ ಚಿತ್ರವೂ ನಿರ್ಮಾಪಕರ ಕೈ ಸುಟ್ಟು, ಸೋಹನ್‍ರಿಗೆ ನಿರಾಸೆಯುಂಟಾಯಿತು. ಆಗ ಇವರು ಮೈಸೂರಿನಲ್ಲಿ ನೆಲೆಸಿದ್ದರು.

ಅದೇ ಕಾರಣದಿಂದ ಸೋಹನ್ ಮೈಸೂರನ್ನೇ ತ್ಯಜಿಸಿ ಮದರಾಸು, ಮುಂಬಯಿ ಚಿತ್ರರಂಗದತ್ತ ಗಮನ ಹರಿಸಿದರು. ಇದರಿಂದ ಪದ್ಮಿನಿ-ಲಲಿತಾ-ರಾಗಿಣಿ, ವೈಜಯಂತಿಮಾಲರಂತಹ ಖ್ಯಾತ ಕಲಾವಿದರು ಸೋಹನ್‍ರ ಶಿಷ್ಯ ಬಳಗವನ್ನು ಸೇರಿದರು. “ಖಟಪುತಲಿ” (ಹಿಂದಿ)ಯಂತಹ ಚಿತ್ರಗಳಲ್ಲಿ ಇವರ ನೃತ್ಯದಿಗ್ದರ್ಶನಕ್ಕೆ ರಾಷ್ಟ್ರೀಯ ಪುರಸ್ಕಾರವೂ ದೊರೆಯಿತು. ಇವರಿಗೆ ಪತ್ನಿ ಕಾಂತಾರಿಗೆ ನೆಮ್ಮದಿಯ ಉಸಿರಾಡುವಂತಾಯಿತು ಅಂತೆಯೇ ಮದರಾಸಿನಲ್ಲಿಯೇ ನೆಲಸಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು.

ಸೋಹನ್‍ರ ಶಿಷ್ಯರು ಅನೇಕ ಅವರಲ್ಲಿ ಅವರಷ್ಟೇ ತಮಿಳು-ಹಿಂದಿ ಸಿನಿಮಾರಂಗದಲ್ಲಿ ಹೆಸರು ಗಳಿಸಿದ ತಮ್ಮ ಹೀರಾಲಾಲ್‍ರಲ್ಲಿ, ಮೊದಲೇ ತಿಳಿಸಿದ ತಮಿಳು ಕಲಾವಿದರೂ ಸೇರಿದ್ದಾರೆ. ಆದರೆ, ಮುಂದೆ ಶಂಭುಮಹಾರಾಜ್‍ರಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರೂ, ಓನಾಮನನ್ನು ಸೋಹನ್‍ರಲ್ಲಿ ಕಲಿತ ಮಾಯಾರಾವ್ ಮತ್ತು ಆಕೆಯ ಸೋದರಿ ಚಿತ್ರ ಇಂದಿಗೂ ಅವರ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಅಂತೆಯೇ ಈ ಲೇಖಕನೂ ಅವರಿಂದ ನೃತ್ಯದಲ್ಲಿ ತೊಡಗುವಂತಾಗಿ, ಕಾರಣಾಂತರದಿಂದ ನರ್ತಿಸುವುದನ್ನು ಮುಂದುವರಿಸದಿದ್ದರೂ ನೃತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡು ಅವರ ಸಂಬಂಧವನ್ನು ಉಳಿಸಿಕೊಂಡಿದ್ದಾನೆ. ಹಾಗೆಯೇ ಅವರ ಹೆಸರಿನಲ್ಲಿ ಒಂದು ದತ್ತಿಯನ್ನು ನಿರ್ಮಿಸಿ, ಅವರಿಗೆ ತನ್ನ ಗೌರವವನ್ನು ಅರ್ಪಿಸಿದ್ದಾನೆ.

 (ಎಸ್.ಎನ್.ಚಂದ್ರಶೇಖರ್)