ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೌಂದರ್ಯ
ಸೌಂದರ್ಯ ದಕ್ಷಿಣ ಭಾರತದ ಪ್ರಮುಖ ಭಾಷೆಗಳೆನಿಸಿದ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಅಪಾರ ಬೇಡಿಕೆಯನ್ನು ಪಡೆದ ಕನ್ನಡ. ತಾರೆ ಸೌಂದರ್ಯ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ಕೆ.ಎಸ್.ಸತ್ಯನಾರಾಯಣ ಚಲನಚಿತ್ರ ಸಾಹಿತಿ-ನಿರ್ಮಾಪಕರಾಗಿ ಹೆಸರಾದವರು. ಸತ್ಯನಾರಾಯಣ ಅವರು ನಿರ್ಮಿಸಿದ ``ನನ್ನ ಕರ್ತವ್ಯ (1985) ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿ, ತಮಿಳು ಚಿತ್ರರಂಗದಲ್ಲಿ ಬಲವಾಗಿ ಬೇರುಬಿಟ್ಟು, ಎ.ಐ.ಡಿ.ಎಂ.ಕೆ. ಪಕ್ಷದ ಪದಾಧಿಕಾರಿಯಾಗಿ, ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಲಲಿತಾ ಚಿತ್ರ ಜಗತ್ತಿಗೆ, ರಾಜಕಾರಣಕ್ಕೆ ಪರಿಚಿತರಾದರು.
ತಾರೆ ಸೌಂದರ್ಯ ``ಗಂಧರ್ವ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಕಲಾವಿದೆ. ದೇವರಾಜ್‍ರ ತಂಗಿಯಾಗಿ `ನನ್ನ ತಂಗಿ' ಚಿತ್ರದಲ್ಲಿ ಅಭಿನಯಿಸಿದರು. `ವಿಜಯಕ್ರಾಂತಿ' ಯಲ್ಲಿ ಉಪನಾಯಕಿಯಾಗಿ ನಟಿಸಿದರು. ``ತೂಗುವೆ ಕೃಷ್ಣನಾ ಚಿತ್ರದಲ್ಲಿ ಅನಂತನಾಗ್‍ರ ಜೊತೆ ನಾಯಕಿಯಾಗಿ ಅಭಿನಯಿಸಿದ ಸೌಂದರ್ಯ, ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯನವರ ``ಬಾ ನನ್ನ ಪ್ರೀತಿಸು ಚಿತ್ರದಲ್ಲಿಯೂ ಶಶಿಕುಮಾರ್‍ಗೆ ನಾಯಕಿಯಾಗಿ ನಟಿಸಿದರು. ಕನ್ನಡ ಚಿತ್ರ ನಿರ್ಮಾಪಕರಿಗೆ, ಚಿತ್ರರಸಿಕರಿಗೆ ಹಿತ್ತಲಗಿಡ ಹಿತವಾಗದೇ ಕನ್ನಡದಲ್ಲಿ ಅವಕಾಶಗಳೇ ಅಪರೂಪವಾದಾಗ ತಮಿಳು-ತೆಲುಗು ಭಾಷೆಗಳತ್ತ ಸೌಂದರ್ಯ ದೃಷ್ಟಿ ಹರಿಸಬೇಕಾಯಿತು. ಆ ಭಾಷೆಯ ಚಿತ್ರಗಳಲ್ಲಿ ನಾಯಕಿಯಾಗಿ ಜನಮನ ಸೂರೆಗೊಂಡಾಗಲೇ ಕನ್ನಡದವರು ಕಣ್ತೆರೆದುದು. ತೆಲುಗು ಚಿತ್ರರಂಗದ ಅನಭಿಷಿಕ್ತ ಸಾಮ್ರಾಜ್ಞಿಯೇ ಆಗಿದ್ದರೂ ಸೌಂದರ್ಯರ ಮೈ-ಮನಗಳಲ್ಲಿ ಕನ್ನಡದ ತುಡಿತವಿದ್ದೇ ಇತ್ತು. ಹಾಗಾಗಿ ಆಗೊಮ್ಮೆ, ಈಗೊಮ್ಮೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. `ಸಿಪಾಯಿ, `ನಾನು ನನ್ನ ಹೆಂಡ್ತೀರು, `ನಾಗದೇವತೆ, ಆರ್ಯಭಟ, ದೋಣಿಸಾಗಲಿ ಇವು ಸೌಂದರ್ಯ ಅಭಿನಯಿಸಿದ ಕೆಲವು ಕನ್ನಡ ಚಿತ್ರಗಳು. . ``ದೋಣಿಸಾಗಲಿ ಚಿತ್ರದಲ್ಲಿನ ಅತ್ಯಂತ ಪ್ರಭಾವಪೂರ್ಣ-ಪರಿಣಾಮಕಾರಿ ಅಭಿನಯ ಸೌಂದರ್ಯ ಅವರಿಗೆ 1998-99ನೇ ಸಾಲಿನ ರಾಜ್ಯಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಸೌಂದರ್ಯ ಅಭಿನಯಿಸಿದ ಕೊನೆಯ ಚಿತ್ರ-ದ್ವಾರಕೀಶ್ ನಿರ್ಮಿಸಿದ `ಆಪ್ತಮಿತ್ರ. ಅಪಾರ ಯಶಸ್ಸನ್ನು ಕಂಡಿತಲ್ಲದೆ, ಆ ಚಿತ್ರದಲ್ಲಿನ ಅಭಿನಯ ಸೌಂದರ್ಯ ಅವರ ಹೆಸರನ್ನು ಅಜರಾಮರಗೊಳಿಸಿದೆ. ರಾಜಕೀಯದಲ್ಲಿ ಒಲವಿದ್ದ ತಾರೆ. ಕ್ರಿ.ಶ. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಪರವಾಗಿ ಪ್ರಚಾರ ಕೈಗೊಂಡರು, ತನ್ನ ಸೋದರ ಅಮರನಾಥ್‍ರೊಡನೆ ಚುನಾವಣಾ ಪ್ರಚಾರಕ್ಕಾಗಿ ಹೈದರಾಬಾದಿಗೆ ಹೊರಟಾಗ, ಅವರು ಪಯಣಿಸುತ್ತಿದ್ದ ಹೆಲಿಕಾಫ್ಟರ್ ದುರಂತಕ್ಕೀಡಾಗಿ ಸೌಂದರ್ಯ ನಿಧನರಾದರು. ಜೊತೆಗೆ ಅವರ ಸೋದರ ಅಮರನಾಥ್ ಕೂಡ ಇನ್ನಿಲ್ಲವಾದರು.
ಸೌಂದರ್ಯ ಅವರಿಗೆ ಕನ್ನಡದ ಬಗೆಗಿನ ಕಾಳಜಿಯೇ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ``ದ್ವೀಪ ಚಿತ್ರವನ್ನು ನಿರ್ಮಿಸುವಂತೆ ಮಾಡಿತು. ದ್ವೀಪ ಚಿತ್ರ 2001ರ ಅತ್ಯುತ್ತಮ ರಾಷ್ಟ್ರೀಯ ಚಿತ್ರವೆಂದು ಪರಿಗಣಿತವಾಗಿ `ಸ್ವರ್ಣಕಮಲ ಪ್ರಶಸ್ತಿ ಪಡೆಯಿತು. ಇದರಲ್ಲಿ ನಾಯಕಿಯಾಗಿ ಸೌಂದರ್ಯ ಸ್ಮರಣೀಯ ಅಭಿನಯ ನೀಡಿದ್ದಾರೆ.
ಇದೀಗ ಅವರ ಪತಿ ಹಾಗೂ ಕುಟುಂಬವರ್ಗ ಸೌಂದರ್ಯರ ಅತ್ಯಂತ ಪ್ರೀತಿಯ ಮನೆಯನ್ನು ಸೌಂದರ್ಯ ಪಾಠಶಾಲೆಯನ್ನಾಗಿಸಿದ್ದಾರೆ.