ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟ್ರಾನ್ಶಿಯಮ್

ವಿಕಿಸೋರ್ಸ್ದಿಂದ

ಸ್ಟ್ರಾನ್ಶಿಯಮ್ ಆವರ್ತಕೋಷ್ಟಕದ 2ಎ ಗುಂಪಿನ 6ನೆಯ ಆವರ್ತದ ಕ್ಷಾರಲೋಹೀಯ ಭಸ್ಮಧಾತು. ಪ್ರತೀಕ Sr. ಪರಮಾಣು ಸಂಖ್ಯೆ 38. ಪರಮಾಣು ತೂಕ 87.62. ದ್ರವನಬಿಂದು 7690 ಸೆ. ಕುದಿಬಿಂದು 13840 ಸೆ. 200ಸೆ ನಲ್ಲಿ ಸಾಪೇಕ್ಷ ಸಾಂದ್ರತೆ 2.6. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 5s2. ವೇಲೆನ್ಸಿ 2. ಸ್ಟ್ರಾನ್ಶಿಯಮ್-84,86,87 ಮತ್ತು 88 ನೈಸರ್ಗಿಕ ಸಮಸ್ಥಾನಿಗಳು. ಬೈಜಿಕ ಕ್ರಿಯೆ ಮುಖೇನ ಇನ್ನೂ 16 ಸಮಸ್ಥಾನಿಗಳು ಲಭ್ಯ. ಇವುಗಳ ಪೈಕಿ ವಿಕಿರಣಪಟು ಸ್ಟ್ರಾನ್ಶಿಯಮ್-90 ದೀರ್ಘಾಯು (ಅರ್ಧಾಯು 28 ವರ್ಷ).

ಧಾತುಲಭ್ಯತೆಯ ಸಮೃದ್ಧಿಆಧಾರಿತ ಸರಣಿಯಲ್ಲಿ ಭೂಚಿಪ್ಪಿನ 0.04%ರಷ್ಟಿರುವ ಸ್ಟ್ರಾನ್ಶಿಯಮಿನ ಕ್ರಮಾಂಕ 15. ಧಾತು ರೂಪದಲ್ಲಿ ಅಲಭ್ಯ. ಖನಿಜಗಳಲ್ಲಿ ಸಂಯುಕ್ತ ರೂಪದಲ್ಲಿ ಲಭ್ಯ. ಉದಾ: ಸ್ಟ್ರಾನ್ಶಿಯನೈಟ್ (Sಡಿಅಔ3) ಮತ್ತು ಸೆಲೆಸ್ಟೈಟ್ (SಡಿSಔ4). ಸ್ಟ್ರಾನ್ಶಿಯನೈಟ್ ಅದುರಿನಲ್ಲಿ ಇದರ ಅಸ್ತಿತ್ವ ಪತ್ತೆ ಮಾಡಿದ್ದು (1790) ಅಡೈರ್ ಕ್ರಾಫರ್ಡ್ ಮತ್ತು ವಿಲಿಯಮ್ ಕ್ರುಯಿಕ್‍ಶ್ಯಾಂಕ್. ಸಂಯುಕ್ತದಿಂದ ಸ್ಟ್ರಾನ್ಶಿಯಮನ್ನು ಮೊದಲು ಪ್ರತ್ಯೇಕಿಸಿದ್ದು (1808) ಹಂಫ್ರಿ ಡೇವಿ (1778-1829). ಅವನು ಮಾಡಿದ್ದಿಷ್ಟು: ಆದ್ರ್ರ ಹೈಡ್ರಾಕ್ಸೈಡ್ ಮತ್ತು ಪಾದರಸದ ಆಕ್ಸೈಡ್ ಮಿಶ್ರಣವನ್ನು ತಾಪನಿರೋಧಕ ಕ್ಯಾಥೋಡ್ ಬಳಸಿ ವಿದ್ಯುದ್ವಿಭಜಿಸಿದ, ಫಲಿತ ಅಮಾಲ್ಗಮಿನಿಂದ ಪಾದರಸವನ್ನು ಬಾಷ್ಪೀಕರಿಸಿದ. ವಿದ್ಯುದ್ವಿಭಜನೆಯ ಸಂಪರ್ಕ-ಕ್ಯಾಥೋಡ್ ವಿಧಾನದಿಂದ ಕಡ್ಡಿರೂಪದಲ್ಲಿ ಇದು ಲಭ್ಯ. ತಣ್ಣನೆಯ ಕಬ್ಬಿಣದ ಸರಳು ಕ್ಯಾಥೋಡ್, ಪೊಟ್ಯಾಸಿಯಮ್ ಮತ್ತು ಸ್ಟ್ರಾನ್ಶಿಯಮ್ ಕ್ಲೋರೈಡುಗಳ ಸಂಲಯಿತ (ಫ್ಯೂಸ್ಡ್) ಮಿಶ್ರಣ ವಿದ್ಯುದ್ವಿಭಾಜ್ಯ. ವಿದ್ಯುದ್ವಿಭಾಜ್ಯದ ಮೇಲ್ಮೈಯನ್ನು ಕ್ಯಾಥೋಡ್ ಸ್ಪರ್ಶಿಸುತ್ತಿರುತ್ತದೆ. ಕ್ಯಾಥೋಡ್ ಮೇಲೆ ಸ್ಟ್ರಾನ್ಶಿಯಮ್ ಘನೀಭವಿಸುತ್ತದೆ. ಘನೀಭವಿಸುತ್ತಿದ್ದಂತೆ ಕ್ಯಾಥೋಡನ್ನು ನಿಧಾನವಾಗಿ ಮೇಲೆತ್ತಲಾಗುತ್ತದೆ. ಸ್ಟ್ರಾನ್ಶಿಯಮನ್ನು ಹೋಲುವ ಕ್ಯಾಲ್ಸಿಯಮ್ ಮತ್ತು ಬೇರಿಯಮ್ ಭೂಚಿಪ್ಪಿನಲ್ಲಿ ಹೇರಳವಾಗಿ ದೊರೆಯುವುದರಿಂದ ವಾಣಿಜ್ಯಪ್ರಮಾಣದ ಉತ್ಪಾದನೆ ಇಲ್ಲ.

ಮೃದು, ಪತ್ರಶೀಲ, ತನ್ಯ ಮತ್ತು ರಾಸಾಯನಿಕ ಕ್ರಿಯಾಶೀಲ ಲೋಹವಿದು. ಕತ್ತರಿಸಿದಾಗ ಬೆಳ್ಳಿಹೊಳಪು, ವಾಯುವಿನಲ್ಲಿ ಕ್ಷಿಪ್ರ ವರ್ತನೆಯಿಂದ ಹಳದಿಯಾಗುತ್ತದೆ. ಎಂದೇ, ಸೀಮೆಎಣ್ಣೆಯಲ್ಲಿ ಸಂಗ್ರಹ. ಕ್ರಿಯಾಶೀಲ ಅಪಕರ್ಷಣಕಾರಕ. ಹ್ಯಾಲೊಜನುಗಳು, ಆಕ್ಸಿಜನ್ ಮತ್ತು ಗಂಧಕದೊಂದಿಗೆ ಸುಲಭ ವರ್ತನೆ, ಹ್ಯಾಲೈಡುಗಳು, ಆಕ್ಸೈಡ್ ಮತ್ತು ಸಲ್ಫೈಡ್ ಉತ್ಪನ್ನಗಳು. ಸಂಯುಕ್ತಗಳಲ್ಲಿ ಸ್ಟ್ರಾನ್ಶಿಯಮಿನದು Sಡಿ2 ಅಯಾನ್ ರೂಪದ +2 ವಿಶಿಷ್ಟ ಉತ್ಕರ್ಷಣ ಸ್ಥಿತಿ.

ಬೈಜಿಕ ಆಸ್ಫೋಟದ ಅತಿ ಹಾನಿಕಾರಿ ಪತನಭಸ್ಮ ಸ್ಟ್ರಾನ್ಶಿಯಮ್-90. ಇದು ಆಹಾರದಲ್ಲಿಯ ಸ್ವಲ್ಪ ಕ್ಯಾಲ್ಸಿಯಮನ್ನು ಪ್ರತಿಸ್ಥಾಪಿಸುತ್ತದೆ. ಅಂತಿಮವಾಗಿ ಪ್ರಾಣಿಗಳ ಎಲುಬು ಮತ್ತು ಹಲ್ಲುಗಳಲ್ಲಿ ಸಂಚಯ, ಎಲೆಕ್ಟ್ರಾನುಗಳ ಉಚ್ಚಾಟನೆಯ ಮುಂದುವರಿಕೆ. ಫಲಿತಾಂಶ: ವಿಕಿರಣಬಾಧೆ. ಎಲುಬಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿಯಂತ್ರಿತ ಪರಿಮಾಣದಲ್ಲಿ ಬಳಕೆ ಇದೆ. ವಿಕಿರಣಪಟು ಕ್ಷಯದ ಉಷ್ಣವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಬಹುದು. ಎಂದೇ, ಜಲಸಂಚಾರ ಮಾರ್ಗದರ್ಶೀ ತೇಲುಬುರುಡೆ, ಸುಲಭಸಂಪರ್ಕ ಸಾಧ್ಯವಾಗದ ಹವಾಠಾಣೆ, ಆಕಾಶನೌಕೆ ಮುಂತಾದವುಗಳಲ್ಲಿ ಹಗುರವಾದ ದೀರ್ಘಾಯು ಶಕ್ತಿ ಆಕರಗಳಲ್ಲಿ ಬಳಕೆ.

ಸ್ಟ್ರಾನ್ಶಿಯಮಿನ ನೈಟ್ರೇಟ್ ಮತ್ತು ಕ್ಲೋರೇಟುಗಳು ಜ್ವಾಲೆಗೆ ಉಜ್ಜ್ವಲ ಕೆಂಪು ಬಣ್ಣ ನೀಡುವ ಬಲು ಆವಿಶೀಲ ಸಂಯುಕ್ತಗಳು. ಬಾಣಬಿರುಸು ಪಟಾಕಿಗಳ, ಪಥಸೂಚಿ (ಟ್ರೇಸರ್) ಗುಂಡುಗಳ ಮತ್ತು ಸಂಕೇತಜ್ವಾಲೆಗಳ (ಫ್ಲೇರ್ಸ್) ತಯಾರಿಯಲ್ಲಿ ಬಳಕೆ. ಕಾಕಂಬಿಯಿಂದ ಸಕ್ಕರೆ ತೆಗೆಯಲು ಕೆಲವೊಮ್ಮೆ ಸ್ಟ್ರಾನ್ಶಿಯಮ್ ಹೈಡ್ರಾಕ್ಸೈಡಿನ ಮತ್ತು ಕೇಶನಿವಾರಕ ಹಾಗೂ ಕಾಂತಿಯುಕ್ತ ಬಣ್ಣಗಳ ತಯಾರಿಯಲ್ಲಿ ಸ್ಟ್ರಾನ್ಶಿಯಮ್ ಮಾನೊಸಲ್ಫೈಡಿನ ಬಳಕೆ ಇದೆ. (ಎಸ್.ಎನ್.ಆರ್.)