ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಮೂರಬಿ

ವಿಕಿಸೋರ್ಸ್ದಿಂದ

ಹಮೂರಬಿ ಕ್ರಿ.ಪೂ.ಸು. 1792-50. ಬ್ಯಾಬಿಲಾನಿನ ಪ್ರಸಿದ್ಧ ದೊರೆ. ಪ್ರಪಂಚದ ಮೊದಲ ಕಾನೂನು ತಜ್ಞ. ಅಮೋರಿಟಿ ವಂಶದವನು. ಇವನು ತನ್ನ ಆಳಿಕೆಯಲ್ಲಿ ಮೆಸಪೊಟೇಮಿಯ ಸಾಮ್ರಾಜ್ಯಕ್ಕೆ ಏಕ ಚಕ್ರಾಧಿಪತ್ಯ ಒದಗಿಸಿದ. ದಕ್ಷ ಆಡಳಿತಗಾರ, ರಾಜನೀತಿಜ್ಞನಾದ ಈತ ತನ್ನ ಸಾಮ್ರಾಜ್ಯವನ್ನು ಪರ್ಷಿಯದ ಕೊಲ್ಲಿವರೆಗೂ ವಿಸ್ತರಿಸಿದ. ಸುಮೇರಿಯನ್ ಮತ್ತು ಅಕ್ಕಾಡಿಯನ್ ರಾಜ್ಯಗಳನ್ನು ವಶಪಡಿಸಿಕೊಂಡ. ದಕ್ಷ ಸೇನೆ ಮತ್ತು ಅಧಿಕಾರ ಬಲದಿಂದ ಕೇಂದ್ರೀಕೃತ ಪ್ರಭುತ್ವ ಸ್ಥಾಪಿಸಿದ. ಸಂಯುಕ್ತ ಬ್ಯಾಬಿಲೋನಿಯ ರಾಜ್ಯಗಳನ್ನು ನಿರ್ಮಿಸಿ, ಹಲವು ಪ್ರಾಂತಗಳಾಗಿ ವಿಂಗಡಿಸಿ ಅವುಗಳನ್ನು ರಾಜ್ಯಪಾಲರಿಗೆ ವಹಿಸಿದ. ಇವನು ಕೃಷಿ, ನೇಯ್ಗೆ ಮತ್ತು ಪಶುಪಾಲನೆಗಳನ್ನು ಪ್ರೋತ್ಸಾಹಿಸಿದ. ಬ್ಯಾಬಿಲಾನ್ ನಗರವನ್ನು ಸುಂದರಗೊಳಿಸಿದ. ಇವೆಲ್ಲಕ್ಕಿಂತ ಮಿಗಿಲಾಗಿ ಇವನು ಜಾರಿಗೆ ತಂದ ಕಾನೂನುಗಳಿಂದ ಈತ ಇತಿಹಾಸದಲ್ಲಿ ಹೆಸರಾಗಿದ್ದಾನೆ. ಇವನು ಜಾರಿಗೆ ತಂದ ಕಾನೂನುಗಳನ್ನು ಹಮೂರಬಿ ಕೋಡ್ ಎಂದು ಕರೆಯಲಾಗಿದೆ. ಇವುಗಳನ್ನು ಹಿಂದಿನ ಸುಮೇರಿಯನ್, ಅಕ್ಕಾಡಿಯನ್ನರ ಕಾನೂನುಗಳಿಂದ ಪಡೆದು, ಅವನ್ನು ಮತ್ತಷ್ಟು ಸುಧಾರಿಸಿ ತನ್ನದೇ ಆದ ಕಾನೂನನ್ನು ಜಾರಿಗೊಳಿಸಿದ. ಇವನ್ನು ಸೂರ್ಯದೇವ ಷಮಾಷ್‍ನಿಂದ ಪಡೆದವುಗಳೆಂದೂ ಇವುಗಳ ಸಂಖ್ಯೆ 285ರಷ್ಟು ಇತ್ತೆಂದೂ ಪ್ರತೀತಿ. ಈ ಕಾನೂನುಗಳನ್ನು 8 ಅಡಿ ಶಿಲೆಯ ಮೇಲೆ ಕೆತ್ತಿಸಿ ಬ್ಯಾಬಿಲೋನಿಯದ ಮಾರ್ದುಕೆ ದೇವಾಲಯದ ಮುಂದೆ ನಿಲ್ಲಿಸಿದ. ಈ ಕಾನೂನುಗಳು ವಿವಾಹ, ಆಸ್ತಿ, ಹಣಕಾಸು, ದರೋಡೆ, ಶ್ರಮ, ಬ್ಯಾಂಕ್ ವ್ಯವಹಾರ, ಅಪರಾಧ, ಕೊಲೆ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದ್ದುವು. ಇವು ಸರಳವೂ ನ್ಯಾಯಯುತವೂ ಆಗಿದ್ದುವು. ಸ್ತ್ರೀಯರಿಗೆ, ಕಾರ್ಮಿಕರಿಗೆ, ಅನಾಥರಿಗೆ ಮತ್ತು ಬಡವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದುವು. “ಮುಯ್ಯಿಗೆ ಮುಯ್ಯಿ ಅಥವಾ ಸೇಡಿಗೆ ಪ್ರತಿಸೇಡು” ಇಂಥ ತತ್ತ್ವದ ಆಧಾರದ ಮೇಲೆ ರೂಪಿತವಾಗಿದ್ದುವು. ಉದಾಹರಣೆಗೆ ವೈದ್ಯನೊಬ್ಬ ಶಸ್ತ್ರ ಚಿಕಿತ್ಸೆಯಲ್ಲಿ ವಿಫಲನಾದರೆ ಅವನ ಕೈಗಳನ್ನು ಕತ್ತರಿಸುವುದು, ದಾದಿಯ ಅಲಕ್ಷ್ಯದಿಂದ ಮಗು ಸತ್ತರೆ ಅವಳ ಮಗುವನ್ನು ಸಾಯಿಸುವುದು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ಇತ್ಯಾದಿ. ಈ ಕಾಯಿದೆಗಳು ಕೊಲೆ ಪಾತಕಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ, ದುರ್ನಡತೆಯ ಪೂಜಾರಿಗಳಿಗೆ, ಅಳತೆಮೀರಿ ಖರ್ಚು ಮಾಡುವ ಹೆಂಡತಿಯರಿಗೆ, ಬೇಜವಾಬ್ದಾರಿ ವೈದ್ಯರಿಗೆ ಮರಣ ದಂಡನೆ ಕೊಡಬೇಕೆಂದು ಹೇಳುತ್ತವೆ. ಶಿಕ್ಷೆಗಳನ್ನು ದಂಡದ ರೂಪದಲ್ಲೂ ವಿಧಿಸಲಾಗುತ್ತಿತ್ತು. ಗಂಡ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದಿ ದ್ದಲ್ಲಿ ಹೆಂಡತಿ ವಿವಾಹ ವಿಚ್ಛೇದನ ಪಡೆದು ಲಗ್ನದ ವೇಳೆ ಕೊಟ್ಟ ವರದಕ್ಷಿಣೆಯನ್ನು ಮರಳಿ ಪಡೆಯಬಹುದಿತ್ತು. ಇದೇ ರೀತಿ ಗಂಡನ ಸೇವೆ ಮಾಡದ ಹೆಂಡತಿಯನ್ನು ಬಾವಿಗೆ ತಳ್ಳುವ ಹಕ್ಕು ಗಂಡನಿಗಿತ್ತು. ಹಮೂರಬಿಯ ಕಾನೂನುಗಳನ್ನು ಆಧುನಿಕ ಕಾನೂನು ವ್ಯವಸ್ಥೆಯ ಹಿನ್ನೆಲೆಯಲ್ಲಿ ಬರ್ಬರ ಕಾನೂನುಗಳೆಂದು ಕರೆಯುವುದಿದೆ.

   *