ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೆನ್ರಿ ಬರ್ಗ್ಸನ್

ವಿಕಿಸೋರ್ಸ್ದಿಂದ

ಹೆನ್ರಿ ಬರ್ಗ್‍ಸನ್ 1859-1941. ಪ್ರಸಿದ್ಧ ಫ್ರೆಂಚ್ ತತ್ತ್ವಶಾಸ್ತ್ರಜ್ಞ; ಲೇಖಕ. ನೊಬೆಲ್ ಪ್ರಶಸ್ತಿ ಪುರಸ್ಕøತ (1927). 1859ರಲಲಿ ಪ್ಯಾರಿಸ್‍ನಲ್ಲಿ ಜನಿಸಿದ. ಉತ್ತಮ ಬೋಧಕ,. ಪ್ರಾಧ್ಯಾಪಕನಾಗಿ ಫ್ರಾನ್ಸ್‍ನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಸೇವೆಸಲ್ಲಿಸಿದ (1900-1921). ಟೈಮ್ ಆ್ಯಂಡ್ ಫ್ರೀ ವಿಲ್(1889), ಮ್ಯಾಟರ್ ಆ್ಯಂಡ್ ಮೆಮೊರಿ (1896), ಕ್ರಿಯೇಟಿವ್ ಎವಲ್ಯೂಷನ್ (1907) ಮೊದಲಾದ ಕೃತಿಗಳಲ್ಲಿ ಇವನ ತತ್ತ್ವಶಾಸ್ತ್ರದ ಚಿಂತನೆಗಳಿವೆ.

ಇವನ ಚಿಂತನೆಗಳಲ್ಲಿ ಕಾಲದ ಪರಿಕಲ್ಪನೆ ಮಹತ್ತರವಾದದ್ದು. ಕಾಲ(ಟೈಮ್) ಎಂಬುದಕ್ಕೆ ಗತಿ (ಡ್ಯುರೇಷನ್) ಎಂಬ ಅರ್ಥ ನೀಡುತ್ತಾನೆ. ಜಗತ್ತು ನಿರಂತರ ಚಲನಶೀಲತೆಯುಳ್ಳದ್ದು. ಈ ಚಲನೆಯಲ್ಲಿ ಪ್ರತಿ ಕ್ಷಣಗಳು ಒಂದರ ಪಡಿಯಚ್ಚು ಮತ್ತೊಂದಲ್ಲ. ಕ್ಷಣಕ್ಷಣಗಳ ಪರಿಣಾಮ ಹೊಂದುವುದೇ ಜಗತ್ತಿನ ಲಕ್ಷಣ. ಇದೇ ಇದರ ಸತ್ಯ ಸೌಂದರ್ಯಗಳು. ಜಗತ್ತಿನಲ್ಲಿ ಸಂಭವಿಸುವ ಪ್ರತಿ ಘಟನೆಯೂ ನವನವೋನ್ಮೇಷಶಾಲಿನಿಯಾದದ್ದು. ನಿನ್ನೆಯ ಸೂರ್ಯೋದಯ ಸೂರ್ಯಾಸ್ತಗಳಂತೆ ಈ ದಿನದ ಸೂರ್ಯೋದಯ ಸೂರ್ಯಾಸ್ತಗಳಿಲ್ಲ. ಈ ಜಗತ್ತು ವೈವಿಧ್ಯತೆಯೊಂದಿಗೆ ಪ್ರತಿ ನಿಮಿಷದಲ್ಲೂ ಹೊಸರೂಪ ತಾಳುತ್ತಿರುತ್ತದೆ. ಹಾಗೆಯೇ ಬದುಕೂ ಒಂದು ಸತತ ಪ್ರವಾಹ. ಇದು ನಿತ್ಯವಾದದ್ದು. ಇದರಲ್ಲಿ ಸ್ಥಾಯಿ ಎನಿಸಿಕೊಳ್ಳುವಂತಹದ್ದು ಯಾವುದೂ ಇಲ್ಲ; ಇದೇ ಎಂದು ಭಾವಿಸುವುದು ಕೇವಲ ಭ್ರಮೆ. ಜಗತ್ತಿನಲ್ಲಿ ಪರಿಣಾಮವಿದೆ. ಆದರೆ ಈ ಪರಿಣಾಮ ಯಾಂತ್ರಿಕವಲ್ಲ; ಸೃಷ್ಟ್ಯಾತ್ಮಕವಾದದ್ದು. ಇದು ಕೇವಲ ಪುನರಾವರ್ತನೆಯಲ್ಲ, ನಿರಂತರ ಪರಿವರ್ತನೆಯುಳ್ಳದ್ದು. ಇದೇ ಜಗತ್ತಿನ ರಹಸ್ಯ ಎಂಬಿತ್ಯಾದಿ ಗಹನ ತಾತ್ತ್ವಿಕ ಚಿಂತನೆಗಳನ್ನು ತನ್ನ ಕ್ರಿಯೇಟಿವ್ ಎವಲ್ಯೂಷನ್ ಎಂಬ ಕೃತಿಯಲ್ಲಿ ಚರ್ಚಿಸಿದ್ದಾನೆ. ಸೃಷ್ಟಿ-ಸ್ಥಿತಿ-ಲಯಗಳೆಂಬುವು ಜಗ್ತತಿನ ಸತತ ಗತಿಯ ಅವಸ್ಥಾಂತರಗಳೆಂಬುದು ಇವನ ಅಭಿಪ್ರಾಯ. ಆದರೆ ಪ್ರತಿ ಸೃಷ್ಟಿಯೂ ನವಸೃಷ್ಟಿ, ನವೋದಯಗಳಾಗಿರುತ್ತವೆ ಎನ್ನುವುದು ಈತನವಾದದ ತಿರುಳು. ಇವನಿಗೆ ಸೇವೆಗಾಗಿ 1927ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಇವನು 1941ರಲ್ಲಿ ನಿಧನನಾದ.

 *