ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೆರಿಗೆ ವಿಜ್ಞಾನ
ಹೆರಿಗೆ ವಿಜ್ಞಾನ ಗರ್ಭಾವಸ್ಥೆ ಮತ್ತು ಪ್ರಸವಕ್ಕೆ (ಹೆರಿಗೆ) ಸಂಬಂಧಿಸಿದ ಸಮಸ್ಯೆ ಕುರಿತ ವೈದ್ಯಕೀಯ ವಿಭಾಗ (ಆಬ್‍ಸ್ಟ್ರೆಟ್ರಿಕ್ಸ್) ಪ್ರಸವವಿಜ್ಞಾನ ಪರ್ಯಾಯ ಪದ ತಾಯ್ತನ ಎಂಬುದು ಹೆಣ್ಣೆಗೆ ಪ್ರಕೃತಿದತ್ತ ಪದ. ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯಿಂದಲೇ ಜಗತ್ತಿಗೆ ಬರುವುದು ಸೃಷ್ಟಿನಿಯಮ. ತಾಯಿ ಗರ್ಭಧರಿಸುವ ಹಾಗೂ ನವಮಾಸಗಳು ಹೊತ್ತು ಶಿಶುವನ್ನು ಹೆರುವ ಈ ಪ್ರಕ್ರಿಯೆ ಪಾಷ್ಟವಾದದ್ದು.
ಹೆಣ್ಣಿಗೆ ಹೆರಿಗೆಯಾದರೆ ಪುನರ್ಜನ್ಮ ಬಂದಂತೆ ಎನ್ನುವುದುಂಟು. ಇದು ಅನುಭವಜನ್ಯವಾದ ಯಥಾರ್ತ ನುಡಿ. ಪ್ರತಿವರ್ಷ ಭಾರತದಲ್ಲಿ ಸುಮಾರು 27 ದಶಲಕ್ಷ ಮಹಿಳೆಯರು ಗರ್ಭವತಿಯರಾಗುವರೆಂಬ ಅಂದಾಜು ಉಂಟು. ಮುಂದೆ ಹೆರಿಗೆಯಾಗುವ ತನಕದ ಮತ್ತು ಆ ಸಂಬಂಧದ ತೊಡಕುಗಳಿಂದ ಸುಮಾರು ಆರ್ಧದಶಲಕ್ಷದಷ್ಟು ಜನ ತಾಯಿಯರು ಸಾವನ್ನಪ್ಪುತ್ತಾರೆ. ಹೀಗೆ ಆಪಾಯಕಾರಿ ಅಥವಾ ಅತಂಕಕಾರಿ ಗರ್ಭ ಹಾಗೂ ಹೆರಿಗೆಯನ್ನು ಗುರುತಿಸಿ, ಯುಕ್ತಕಾಲದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನೂ ಚಿಕಿತ್ಸೆಯನ್ನೂ ಕ್ರಮಬದ್ಧವಾಗಿ ಒದಗಿಸುವುದು ಪ್ರಸವವಿಜ್ಞಾನದ ಮುಖ್ಯ ಉದ್ದೇಶ. ಇದನ್ನು ಇಲ್ಲಿ ಈ ಮುಂದಿನ ಐದು ಹಂತಗಳಲ್ಲಿ ಪರಿಗಣಿಸಿದೆ:
1. ತಾಯಿಯಾಗುವ ಮುನ್ನಿನ ದಿನಗಳು: ಯೌವನಾವಸ್ಥೆಯಲ್ಲಿ ತಾಯಿಯಾಗುವ ಕ್ರಿಯೆಗೆ ಸಂಜ್ಞೆ ಋತುಚಕ್ರದ ಮೂಲಕ ಹೆಣ್ಣಿಗೆ ದೊರೆಯುತ್ತದೆ. ಹೀಗೆ ಸಂತಾನೋತ್ಪತ್ತಿಯ ಕ್ರಿಯೆ ಆರಂಭವಾಗುತ್ತದೆ. ತಾಯಿಯಾಗುವ ಮುನ್ನಿನ ಈ ದಿನಗಳಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಅನಂತರದ ದಿನಗಳಲ್ಲಿ ಅವಳಿಗೆ ಸುರಕ್ಷಿತ ತಾಯ್ತನ ಮತ್ತು ಸುರಕ್ಷಿತ ಜೀವನ ಒದಗುತ್ತವೆ. ಈ ಅವಧಿಯಲ್ಲಿ ಯುಕ್ತವಯಸ್ಸಿನಲ್ಲಿ ಮುದುವೆ (18 ವಯಸ್ಸಿನ ಅನಂತರ), ಜನನೇಂದ್ರಿಯಗಳ ಶುಚಿತ್ವ, ಪೌಷ್ಟಿಕ ಆಹಾರ, ಉದ್ವೇಗರಹಿತ ದಿನಗಳು ಮತ್ತು ಹೆಣ್ಣಿನ ವಿದ್ಯಾಭ್ಯಾಸ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ.
2. ಗರ್ಭಧಾರಣೆ: ವೈವಾಹಿಕ ಜೀವನಕ್ಕೆ ಅಡಿಯಟ್ಟ ಹಾಗೆ, ಹೆಣ್ಣು ಗರ್ಭಧರಿಸುವುದು ಪ್ರಕೃತಿಸಹಜ ಕ್ರಿಯೆ. ಗರ್ಭಧರಿಸಿದ ಸ್ತ್ರೀಯನ್ನು ಬಸುರಿ ಎಂದೂ ಬಸುರಿನ ಅವಧಿಯನ್ನು ಗರ್ಭಾವಸ್ಥೆಯೆಂದೂ ಹೇಳುತ್ತೇವೆ. ಹೆಣ್ಣು-ಗಂಡಿನ ಲೈಂಗಿಕ ಸಂಪರ್ಕವಾದಾಗ ಗಂಡಿನ ವೀರ್ಯಾಣು ಹೆಣ್ಣಿನ ಅಂಡಾಣುವಿನೊಂದಿಗೆ ಬೆರೆತು ಮೊಟ್ಟೆಯಾಗಿ ಇದು ಗರ್ಭಾಶಯದಲ್ಲಿ ನಾಟಿನಿಂತು ಭ್ರೂಣವಾಗಿ ಬೆಳೆಯುತ್ತದೆ. ಇದಕ್ಕೆ ಬೇಕಾದ ಪರಿಸರ ಗರ್ಭಕೋಶದಲ್ಲಿ ಸೃಷ್ಟಿಯಾಗಿ, ಇದರಿಂದ ಭ್ರೂಣದ ಬೆಳೆವಣಿಗೆ ಹಂತಹಂತವಾಗಿ ಮುನ್ಸಾಗುತ್ತದೆ. ಇದನ್ನು ಗರ್ಭಧಾರಣೆ ಎನ್ನುತ್ತೇವೆ.
3. ಗರ್ಭಾವಸ್ಥೆ: ಸಾಮಾನ್ಯವಾಗಿ ಗರ್ಭಾವಸ್ಥೆಯನ್ನು 280 ದಿನಗಳು ಅಥವಾ 40 ವಾರಗಳೆಂದು ಪರಿಗಣಿಸಬಹುದು. ಈ ಅವಧಿಯನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ಪ್ರತಿ ಭಾಗವನ್ನೂ ತ್ರೈಮಾಸಿಕವೆಂದು ಕರೆಯುತ್ತೇವೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ತ್ರೈಮಾಸಿಕಗಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಬೆಳೆವಣೆಗೆಗಳನ್ನೂ ಬದಲಾವಣೆಗಳನ್ನೂ ಕಾಣಬಹುದು. ಬೆಳೆಯುತ್ತಿರುವ ಭ್ರೂಣ ಮತ್ತು ತಾಯಿಯ ಆರೋಗ್ಯಗಳನ್ನು ಸೂಕ್ಷ್ಮವಾಗಿ ಗುರುತಿಸಿ, ತಕ್ಕಂತೆ ಯುಕ್ತರೀತಿಯಲ್ಲಿ ಆರೈಕೆ ಮತ್ತು ಚಿಕಿತ್ಸೆ ಒದಗಿಸಬೇಕು. ನಿರೀಕ್ಷಿತ ಹೆರಿಗೆಯ ದಿನಾಂಕವನ್ನು ಮುಟ್ಟಿನ ಮೊದಲದಿನದಿಂದ ತೊಡಗಿ 9 ತಿಂಗಳು ಮತ್ತು 7 ದಿನಗಳನ್ನು ಎಣಿಸಿದರೆ ಹೆರಿಗೆ ದಿನ ಲಭಿಸುತ್ತದೆ.
ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಲಕ್ಷ್ಯ ಹರಿಸಬೇಕು. ಗರ್ಭಾವಸ್ಥೆಯ ಕೊನೆಯತನಕವೂ ತಪಾಸಣೆ, ಉಪಯುಕ್ತ ಸಲಹೆ ಮತ್ತು ಚಿಕಿತ್ಸೆ ಇವು ಹೆಣ್ಣಿನ ಆರೋಗ್ಯದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಈ ರೀತಿಯ ಆರೋಗ್ಯ ರಕ್ಷಣೆ ಸುರಕ್ಷಿತ ತಾಯ್ತನಕ್ಕೆ ಬೆನ್ನಲುಬು. ಇಂಥ ಸುರಕ್ಷಿತವಾದ ಮಾತೃತ್ವ ಆರೋಗ್ಯವಂತ ಶಿಶು ಜನನದಲ್ಲಿ ಮುಕ್ತಾಯಗೊಳ್ಳುತ್ತದೆ.
ತಾಯಿ ಮತ್ತು ಮಗುವಿನ ಬೆಳೆವಣಿಗೆ, ಪೋಷಣೆ, ರಕ್ಷಣೆ, ಶುಚಿತ್ವ ಹಾಗೂ ಮುನ್ನೆಚ್ಚರಿಕೆಯ ಎಲ್ಲ ಕ್ರಮಗಳನ್ನೂ ಗರ್ಭಾವಸ್ಥೆ ಒಳಗೊಂಡಿದೆ. ಗರ್ಭಿಣಿಯ ರಕ್ತ, ರಕ್ತದೊತ್ತಡ ಮತ್ತು ಮೂತ್ರಪರೀಕ್ಷೆ ಮಾಡುವುದು, ಭ್ರೂಣದ ಬೆಳೆವಣಿಗೆಯನ್ನು ಕಾಲಕಾಲಕ್ಕೆ ಗಮನಿಸಿ, ಗರ್ಭಾವಸ್ಥೆಯಲ್ಲಿಯ ಯಾವುದೇ ತೊಡಕುಗಳನ್ನು ಗಮನಿಸಿ ಪೂರ್ವಭಾವಿಯಾಗಿ ಚಿಕಿತ್ಸೆ ನೀಡುವುದು ಹಾಗೂ ಧನುರ್ವಾಯು ವಿರುದ್ಧ ರೋಗನಿರೋಧಕ ಚುಚ್ಚುಮದ್ದು ನೀಡುವುದು ಅತ್ಯಗತ್ಯ. ಗರ್ಭಿಣೆಯ ಪೌಷ್ಟಿಕ ಆಹಾರ ಮತ್ತು ವಿಶ್ರಾಂತಿ ಬಗ್ಗೆ ಸಲಹೆ ನೀಡಿ, ಇದರ ಜೊತೆಯಲ್ಲಿಯೇ ಮನಸ್ಸಿನ ಆತಂಕ ನಿವಾರಿಸಿ, ಸ್ತನ್ಯಪಾನದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ.
4. ಹೆರಿಗೆ: ಸುರಕ್ಷಿತ ಮಾತೃತ್ವಕ್ಕೆ ಆಡಿಪಾಯ ಸುರಕ್ಷಿತ ಪ್ರಸವ. ಹೆರಿಗೆ ಸಮಯ ಹತ್ತಿರವಾಗುತ್ತಿದ್ದ ಹಾಗೆ ಅದರ ಬಗ್ಗೆ ಸ್ಪಷ್ಟ ಹಾಗೂ ನಿರ್ದಿಷ್ಟ ಮಾಹಿತಿಯನ್ನು ಗರ್ಭಿಣಿಗೆ ಕೊಡಬೇಕು. ಹೆರಿಗೆಯನ್ನು ಆಸ್ಪತ್ರೆಯಲ್ಲಿ ಮಾಡಿಸಿದರೆ ಉತ್ತಮ. ಇಲ್ಲದಿದ್ದಲ್ಲಿ ಅದರ ಬಗ್ಗೆ ತರಬೇತಿ ಪಡೆಯುವ ದಾದಿಯರಿಂದ ಮಾಡಿಸಬಹುದು. ಇಲ್ಲದಿದ್ದಲ್ಲಿ ತಾಯಿ ಮತ್ತು ನವಜಾತಶಿಶುವಿನ ಆರೋಗ್ಯಕ್ಕೆ ಆಪಾಯ ಅಥವಾ ತೊಡಕುಂಟಾಗುವ ಸಂಭವವಿದೆ.
ಗರ್ಭಿಣಿಗೆ ಪ್ರಸವ ಒಂದು ಮುಖ್ಯ ಘಟ್ಟ. ತೊಡಕಿಲ್ಲದ ಸಂದರ್ಭದಲ್ಲಿ ಹೆರಿಗೆ ಪ್ರಕ್ರಿಯೆ ನೋವಿನಿಂದ ಪ್ರಾರಂಭವಾಗಿ ಶಿಶು ಜನನದ ಬಳಿಕ ಸೆತ್ತೆ ಹೊರಬರುವುದರೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ಮೂರು ಹಂತಗಳಲ್ಲಿ ವಿಭಾಗಿಸಿದೆ: (i) ಹೆರಿಗೆ ನೋವು ಆರಂಭವಾಗಿ ಗರ್ಭದ್ವಾರ ಹಿಗ್ಗುವುದು; (ii) ಗರ್ಭದ್ವಾರ ಪೂರ್ತಿಹಿಗ್ಗಿ ಬಾಯಿ ಬಿಟ್ಟ ನಂತರ ಮಗು ಹೊರಬರುವುದು; (iii) ಶಿಶು ಜನನಾನಂತರದಲ್ಲಿ ಸೆತ್ತೆ ಹೊರಬರುವುದರೊಂದಿಗೆ ಪ್ರಸನ ಪ್ರಕ್ರಿಯ ಮುಕ್ತಾಯಗೊಳ್ಳುವುದು.
ಮೊದಲ ಹೆರಿಗೆಯಲ್ಲಿ ಈ ಮೂರು ಹಂತಗಳ ಅವಧಿ 12 ರಿಂದ - 14 ಗಂಟೆಗಳಾದರೆ ಕೊನೆಗೊಳ್ಳುತ್ತದೆ. ಇದಾದನಂತರ ಗರ್ಭಕೋಶ ಕುಗ್ಗಿ ಯಥಾಪೂರ್ವ ಸ್ಥಿತಿಗೆ ಬರುತ್ತದೆ.
ಈ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ತೊಡಕುಂಟಾಗಬಹುದು: ಹೆರಿಗೆಯಲ್ಲಿ ತೊಂದರೆ, ಅತಿನಿಧಾನ ಹೆರಿಗೆ, ಕ್ಷಿಷ್ಟಕರ ಹೆರಿಗೆ, ತಾಯಿಯ ಬಳಲಿಕೆ, ಹೆಚ್ಚಿನ ರಕ್ತದೊತ್ತಡ, ಅಥವಾ ಗರ್ಭಾವಸ್ಥೆಯಲ್ಲಿ ಬಂದ ಹಲವು ಕಾಯಿಲೆಗಳಿಂದ ಅಪಾಯಕಾರೀ ಬೆಳೆವಣಿಗೆಗಳು ಇತ್ಯಾದಿ. ಇವೆಲ್ಲ ಮೊದಲನೆಯ ಹಂತದಲ್ಲಿ ಕಂಡುಬರುವ ತೊಡಕುಗಳು ಅತ್ಯಧಿಕ ರಕ್ತಸ್ರಾವ, ಗರ್ಭಕೋಶ ಕುಗ್ಗದಿರುವುದು, ಸೆತ್ತೆ ಹೊರಬರದಿರುವುದು, ವಾತ ಅಥವಾ ಸೆಳೆತ ಬರುವುದು ಇವೇ ಮೊದಲಾದವು ಹೆರಿಗೆಯಾದ ಒಡನೆ ಅಗಬಹುದಾದ ಅನಾಹುತಗಳು. ಇಂಥ ಅಪಾಯಕಾರೀ ಬೆಳೆವಣಿಗೆಗೆ ಆ ಕ್ಷಣವೇ ತುರ್ತುಚಿಕಿತ್ಸೆ ನಡೆಸಿ ತಾಯಿಯ ಜೀವವನ್ನು ರಕ್ಷಿಸುವುದು ಗುರುತರ ಜವಾಬ್ದಾರಿ ಎಂದೇ ಗರ್ಭಾವಸ್ಥೆಯಲ್ಲಿ ಸಾಕ್ಷಟ ಮುನ್ನೆಚ್ಚರಿಕೆ ವಹಿಸಿ, ಹೆಚ್ಚಿನ ಅನುಕೂಲತೆಗಳಿರುವ ಆಸ್ಪತ್ರೆಗಳಿಗೆ ಗರ್ಭಿಣಿಯರನ್ನು ತಲಪಿಸುವುದು ಅಗತ್ಯ.
5. ಪ್ರಸವಾನಂತರದ ಅವಧಿಯಲ್ಲಿಯ ಆಗುಹೋಗುಗಳು: ಹೆರಿಗೆಯಾದನಂತರ 6 ವಾರ ಪರ್ಯಂತ ಎಚ್ಚರಿಕೆಯ ಅವಧಿ ಮುಂದುವರಿಯುತ್ತದೆ. ಈ ವೇಳೆ ಎಲ್ಲ ಸಂತಾನೋತ್ಪತ್ತಿಯ ಅಂಗಾಂಗಗಳೂ ತಮ್ಮ ಮೊದಲಿನ ಗಾತ್ರಕ್ಕೆ, ಆಕಾರಕ್ಕೆ ಮರಳುತ್ತವೆ. ಮುಖ್ಯವಾಗಿ ಗಮನಿಸಬೇಕಾದ ಅಂಶಗಳಿವು:
(i) ಹೆರಿಗೆಯ ತರುವಾಯ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕು. (ii) ಸ್ತನ್ಯಪಾನವನ್ನು ಪ್ರೋತ್ಸಾಹಿಸಬೇಕು. (iii) ತಾಯಿಗೆ ಪೌಷ್ಟಿಕ ಆಹಾರ ಮತ್ತು ಕುಟುಂಬ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. (iv) ಮಗುವಿನ ಆರೋಗ್ಯದ ಬಗ್ಗೆ ಮತ್ತು ರೋಗನಿರೋಧಕಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. (v) ಜನನೇಂದ್ರಿಯಗಳ ಶುಚಿತ್ವದ ಬಗ್ಗೆ ಅರಿವು ನೀಡಬೇಕು. (vi) ಯಾವುದೇ ರೀತಿಯ ವ್ಯತ್ಯಯ ಕಂಡುಬಂದಲ್ಲಿ ಒಡನೆ ಯುಕ್ತ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬೇಕು.
ಒಟ್ಟಿನಲ್ಲಿ - ಸ್ವಚ್ಛ ಕೈಗಳು, ಸ್ವಚ್ಛ ಪ್ರಸವ, ಸ್ವಚ್ಛ ದಾರ, ಸ್ವಚ್ಛ ಬ್ಲೇಡು, ಸ್ವಚ್ಛ ಹೊಕ್ಕಳು - ಈ ಎಲ್ಲಾ ಸ್ವಚ್ಛಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಸುರಕ್ಷಿತ ಹೆರಿಗೆಯಾಗಿ ಆರೋಗ್ಯವಂತ ಮಗು ಜನಿಸುತ್ತದೆ. (ಎಲ್.ಕೆ.ವಿ.)