ಸದಸ್ಯ:ಡಾ.ಯಲ್ಲಮ್ಮ.ಕೆ
ಟಿ.ಎಂ.ಭಾಸ್ಕರ್ ರವರ :
ಧರ್ಮಪುರಿ - ಏಕಾಂಕ ನಾಟಕದ ಒಳಾಂತರ : ವಿಮರ್ಶಾ ಲೇಖನ.
ನಮ್ಮ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿ ಬೃಹದಾಕಾರವಾಗಿ ಅಶ್ವಥಮರ ದಂತೆ ಬೆಳೆದು ನಿಂತಿರುವ ಜಾತಿಪದ್ಧತಿಯು ಸಾಮಾಜಿಕ ಸ್ತರ ವ್ಯವಸ್ಥೆಯಲ್ಲಿ ಸೃಷ್ಟಿಸಿರುವ ಅಸಮಾನತೆಯನ್ನು ತೊಡೆಯಲು ಹಲವಾರು ಶತಮಾನಗಳೇ ಕಳೆದರೂ ಇಂದಿಗೂ ಸುಧಾರಣೆ ಯು ಕನಸಿನ ಮಾತಾಗಿ ಉಳಿದಿದೆ. ಜಾತಿ ಹಾಗೂ ಜೀತಪದ್ಧತಿಯ ಮೇಲೆ ಸಾಮುದಾಯಿಕವಾಗಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕಟ್ಟಿ ಕೊಟ್ಟಿರುವ ಏಕ ಅಂಕ ನಾಟಕ ತಣ್ಣನೆಯ ಪ್ರತಿರೋಧವನ್ನು ಒಡ್ಡುತ್ತದೆ.
ಪಾತ್ರ ಪರಿಚಯ : ಕಾಳಿಂಗ ಅವನ ಹೆಂಡತಿ ಭೂಮಿ ಮುದ್ದಿನ ಮಗ ಕುಮಾರ. ಗೌಡ ಮತ್ತು ಆತನ ಹೆಂಡತಿ ಮಾಲತಿ, ಕುಲಕರ್ಣಿ ಹಾಗೂ ಜನಪದರು.
ಕೃತಿ ಒಳಾಂತರ :
ಧರ್ಮಪರಿ : ಪಾಂಡವರ ಅಜ್ಞಾತವಾಸದಲ್ಲಿ ಒಂದು ದಿನ ತಂಗಿದ್ದ ಪ್ರದೇಶ. ಭೂಮಿಯ ಮೇಲೆ ಧರ್ಮ ರಾಯನ ಹೆಸರು ಚಿರಸ್ಥಾಯಿಯಾಗಿ ಉಳಿಯಲೆಂದು ಆ ಹಳ್ಳಿಗೆ ಧರ್ಮಪುರಿ ಎಂಬ ಹೆಸರು ಬಂದಿದೆ ಎಂಬುದು ಐತಿಹ್ಯ (ಲೆಜೆಂಡಾ -ದಂತಕಥೆ) ವಿದೆ.
ಗೌಡ : ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಊರನಾಳಿದ ಹಿರಿಗೌಡರ ಮನೆತನದ ಘನತೆ-ಗೌರವ ಹಿರಿದಾದದ್ದೇ..! ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟು ಹಾಕಿ ವ್ಯವಸ್ಥೆಯೊಂದಿಗೆ ಸಾಗುವದು ಅವರ ಹುಟ್ಟುಗುಣ. ಹಿರಿಗೌಡರ ಮಗ ಕಿರಿಗೌಡ ಆತನ ಹೆಂಡತಿ ಮಾಲತಿ, ಇವರ ಮುದ್ದಿನ ಮಗಳು ಹದಿನಾರರ ಹುಚ್ಚು ಪ್ರಾಯದ ವಯಸ್ಸಿನ ಭೂಮಿ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ಕೆಳಜಾತಿಯ ಕಾಳಿಂಗವೆಂಬುವವನೊಂದಿಗೆ ಓಡಿ ಹೋಗಿ ಮದುವೆಯಾಗುತ್ತಾರೆ. ಅಂತರ್ ಜಾ ತಿಯ ವಿವಾಹವಾದ ಮಗಳ ಈ ನಡೆಯು ಗೌಡನ ಮನೆತನಕ್ಕೆ 'ಕೊಡಲಿ ಕಾವು ಕುಲಕ್ಕೆ ಮೃತ್ಯು' ಎಂಬ ಗಾದೆಮಾತಿನಂತೆ ಗೌರವಕ್ಕೆ ಧಕ್ಕೆ ತoದುದರಿಂದ ಊರಿಂದ ಇಪ್ಪತ್ತು ವರುಷಗಳ ಬಹಿಷ್ಕಾರ ಹಾಕುವುದೆಂದು ಪಂಚಾಯತಿ ಕಟ್ಟೆಯಲ್ಲಿ ನಿರ್ಣಯಿಸುತ್ತಾರೆ.
ಕಾಳಿಂಗ : ಅಲೆಮಾರಿಗಳು ನಾವು ಶತಮಾನಗಳೇ ಉರುಳಿ ಹೋದವು ಅನ್ನದ ಶೋಧದಲಿ ಹಿಡಿ ಗoಜಿಗೂ ಗತಿ ಇಲ್ಲದೇ ಜೀತಕ್ಕೆ ಬಿದ್ದಿರುವ ನಮಗೆ ಒಂದು ಅಸ್ತ್ತಿತ್ವವಿದೆಯೇ..? ಅಂಥಹ ಒಂದು ಗುರುಹು, ಕುರುಹು ‘ಐಡೆಂಟಿಟಿ’ ನೀಡುವವರಾರು..? 'ಹುಟ್ಟಿಸಿದ ದೇವರು ಹುಲ್ಲು ಮೇಯಿಸು ವುದಿಲ್ಲ ಎಂಬುದು ಪರಂಪರಾಗತವಾಗಿ ಬೆಳೆದು ಬಂದಿರುವ ಬಲವಾದ ನಂಬಿಕೆ'.ಅಜ್ಜಿ ಹೇಳಿದ ಬೆಂಕಿ ಬೆಟ್ಟದ ಕಥೆ ಕೇಳಿ ಗುಡಿಸಲಿನ ಜನ ಕಣ್ಣೀರಿಟ್ಟರು. ನಾನು ಹಾದಿ ಹೆಣವಾಗುವ ಮುನ್ನ ಓಡಿ ಹೋಗೆಂದು, ಮಾನ ಮುಚ್ಚಿ ಕೊಳ್ಳಲು ಇದೊಂದೆ ದಾರಿ ಭೂಮಿ - ಕಾಳಿಂಗ ಒಂದಾಗಲು ಅನ್ಯರ ತಕರಾರು. ಯಾವುದನ್ನು ಲೆಕ್ಕಿಸದೇ ಮೈ-ಮನ ಮರೆಯದೇ ಎಚ್ಚರದಿ ಹೆಜ್ಜೆ ಇಡುತ ಅವರವರ ದಾರಿ ಅವರೇ ಮಾಡಿಕೊಳ್ಳಬೇಕು ಎನ್ನುವ ಭೂಮಿಯ ಮಾತಿನಲ್ಲಿ ಆತ್ಮಸಮ್ಮಾನದ ನೆಲೆಯನ್ನು ಗುರುತಿಸಬಹುದಾಗಿದೆ. ಮುಳ್ಳಿನ ದಾರಿ ತುಳಿಯು ವುದು ಎಷ್ಟೋ ಮೇಲು ಕಾಡಿನಂತಲ್ಲ ಊರು ಎಂಭ ಮಾತಿನಲ್ಲಿ ಕೆಳಸ್ತರದ ಸಾಮುದಾಯಿಕ ಜನ-ಜೀವನದ ಸ್ಥಿತಿ-ಗತಿಯ ದನಿಯಾಗಿದೆ.ಅಂತೆಯೇ ನಾಡು ಬಿಟ್ಟು ಕಾಡು ಸೇರುವಂತಾಯ್ತು. ಅನ್ಯರೆಂದು ಭಾವಿಸದೇ ಹೊಟ್ಟೆ ಮಕ್ಕಳoತೆ ಭಾವಿಸಿದ ಕಾಡಿನೊಳಗಿಹ ಭೂತಾಯ ಮಕ್ಕಳಾದ ಹಾಡಿ ಜನರ ಸೂರಿನ ಒಲೆಯ ದೀಪದ ಬೆಳಕಿನಲ್ಲಿ ; ಸೂರ್ಯ - ಚಂದ್ರ, ಬಿಸಿಲು-ಬೆಳದಿಂಗಳು ಕೈ ತುಂಬ ಕೆಲಸ ಕಾಡಿನೊಳಗೆ ಇಂತಿ -ರಲು, ಕಾಲ ಚಕ್ರದ ತಿರುಗಣಿಯಲ್ಲಿ ಭಯದ ಒಳ-ಹೊರಗೆ ನಾನು-ನೀನು. ಕಾಲಸರಿದು ದು ತಿಳಿಯಲೇ ಇಲ್ಲ, ಇಪ್ಪತ್ತು ವರುಷಗಳ ಕಾಲ ಬದುಕಿನ ಬಂಡಿ ಸಾಗಿಸಿ, ಪ್ರೇಮ ಮಾಗಿ, ಒಲವ ಜೇನು ಸುರಿದು, ಫಲವತಿಯಾದ ಭೂಮಿಗೆ ಪ್ರತ್ರೋತ್ಸವದ ಸಂಭ್ರಮ..! ಇಂದು ಮಗ ಕುಮಾರ ಜೊತೆಯಾಗಿದ್ದಾನೆ.ದೈವ ಹಾಕಿದ 'ಬಹಿಷ್ಕಾರ' ಗೆರೆಯ ದಾಟಿ ಬರಲು ಶಬರಿ ಕಾದoತೆ ಕಾನನದ ಕುಟೀರ ದಲ್ಲಿ ಇಪ್ಪತ್ತು ವರುಷಗಳ ಸೆರೆವಾಸ. ಮಗ ಭರತನ ಭವಿತವ್ಯಕ್ಕಾಗಿ ತನ್ನ ಆತ್ಮಸಮ್ಮಾನವನ್ನು ಬಲಿಕೊಟ್ಟು ವಚನ ಭ್ರಷ್ಠ ದುಶ್ಯಂತ ಮಹಾರಾಜನ ಹಿoದೆ ಅರಮನೆಡೆಗೆ ಹೆಜ್ಜೆ ಹಾಕಿದ ಶಾಕುoತಲೆಯoತೆ ; ಬಹಿಷ್ಕಾರದ ಅವಧಿ ಮುಗಿದು ಕುಮಾರನ ಬದುಕಿಗಾಗಿ ಕಾಡು ಬಿಟ್ಟು ನಾಡಿಗೆ ಮರಳಿದ ಭೂಮಿ-ಕಾಳಿoಗನಿಗೆ, ಊರು-ಕೇರಿಯ ಹತ್ತಿರ ಬಾಯಾರಿಕೆಗೆ ನೀರು ಕೇಳಿದಾಗ ‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎನ್ನುವಂತೆ ಬಹಿಷ್ಕಾರದ ಅವಧಿ ಮುಗಿದರೂ ಅನ್ನ - ನೀರು ಕೊಡಬಾರದೆಂಬ ಹಿರಿಯ ಗೌಡರ ಆಜ್ಞಾ ಪರಿಪಾಲಿತ ಜನ. ನಾಡ ಹಾದಿಯಲಿ ಬಾಯಾರಿ ನೀರು ಬೇಡಿದರೆ ರೀತಿ-ನೀತಿಯ ಮರೆತವರು ಯಾವ ಜಾತಿ ಎಂದು ಕೇಳುವರು..? ‘ಹರಿಯುವ ನೀರಿಗೆ ದೋಣಿ ನಾಯಕನ ಅಪ್ಪಣೆಯಂತೆ’ ಧರ್ಮಪುರಿ ಯಲ್ಲಿ ಹಸಿದ ಹೊಟ್ಟೆಗೆ ಅನ್ನವಿಲ್ಲ, ಬಾಯಾರಿ ಬಂದವರಿಗೆ ನೀರಿಲ್ಲ ಅರಳಿ ಕಟ್ಟೆಯ ಮೇಲೆ ಇರುಳಿನಲ್ಲಿ ಧರ್ಮ - ಕರ್ಮಗಳ ಚರ್ಚೆ, ಧರ್ಮದ ತಕ್ಕಡಿಯಲ್ಲಿ ನ್ಯಾಯಾನ್ಯಾಗಳ ತೂಗಿ ನೋಡುವರು ‘ಅಮವಾಸ್ಯೆಯ ಕಾರ್ಗತ್ತಲಲ್ಲಿ ಕಾಡಬೆಕ್ಕನ್ನು ಹುಡುಕುವ’ ತೆರದಿ. ನಾವು ಮರಳಿ ಊರಿಗೆ ಬಂದುದ ಸುದ್ದಿಯ ತಿಳಿದು ಗೌಡ ಪoಚಾಯತಿ ಕರೆದಿದ್ದಾನಂತೆ. ಇತ್ತ ಭೂಮಿ ಹಸಿವು-ನೀರಡಿಕೆಯಿಂದ ಬಳಲಿದ ಮಗ ಕುಮಾರನಿಗೆ ಭೂಮಿಯು ಸಮಾಧಾನಿಸಿದ ಪರಿ ನೋಡಿ : ಹಸಿವು, ನಿದ್ದೆ-ನೀರಡಿಕೆಗಳೇ ಉಪಾಸನೆ ಎನಿಸಿದ ಕುಲದಲ್ಲಿ ಹುಟ್ಟಿದವನು ತಡೆದುಕೊಳ್ಳಬೇಕು ಕಂದಾ..! ಎಂದು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾಳೆ.
ಗೌಡ : ಗೌಡ (ಗಾವುಂಡ) ಸಾಮಾಜಿಕ ಜೀವನದಲ್ಲಿ ಪ್ರಭುತ್ವದ ಮಾದರಿ. ಈ ಹಿರಿಗೌಡರು ಪೂರ್ವಜರ ಪರಂಪರೆಯ ಮುಂದುವರಿಕೆಯ ರೂಪವೇ ಆಗಿದ್ದಾರೆ. ಉಪ್ಪು ತಿಂದು ನೀರು ಕುಡಿಯುವದು ಬಹು ಸುಲಭ ಹಾಗಾಗಿ ಅವರು ಆಗಾಗ್ಗೆ ಉಪ್ಪು ತಿನ್ನುತ್ತಾರೆ, ತಿನ್ನುವ ಸಂದರ್ಭಗಳನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಮಡಿ-ಮೈಲಿಗೆ ಎಂದು ಶತಮಾನಗಳ ಇತಿಹಾಸ ಕಾಯ್ದುಕೊಳ್ಳುವ ಹಪಾಹಪಿತನದಲ್ಲಿ ಮಾನವೀಯತೆಯನ್ನು ಮರೆತ ಜನಕ್ಕೆ ಕುಲ-ಗೋತ್ರಗಳೇ ಮುಖ್ಯ. ನ್ಯಾಯ ಕಟ್ಟೆ ಹೇಳುವದು ನಮ್ಮ ಆದೇಶ ಪರಿ ಪಾಲಿಸುವದು ಜನರ ಆದ್ಯ ಕರ್ತವ್ಯ.
ಮಾಲತಿ : ಮಗಳು ಓಡಿ ಹೋಗಿರುವದು : ಮನೆಯ ಮಾತು ಮನೆಯಲ್ಲಿರದೇ ದೈವದ ಮಾತಾಗಿದೆ. ಎದೆಯ ಮೇಲಿನ ಗಾಯಕ್ಕೆ ವೇದಾಂತದ ಒಂದೊಂದು ಮಾತುಗಳು ಸೂಜಿಯಂತೆ ಚುಚ್ಚುವವು ಮನಕೆ. ‘ಗಡಿಯ ಬಾಯಿ ಮುಚ್ಚಬಹುದಲ್ಲದೇ ಜನರ ಬಾಯಿ ಮುಚ್ಚಿಸಲು ಸಾಧ್ಯವೇ..? ಯಾರು ಏನೆಂದರೇನು..? ಅವರವರ ಹಣೆಬರಹವ ಅವರೇ ಬರೆದು ಕೊಂಡಿರಲು ‘ಹಳಸಿದನ್ನದ ಮೇಲೆ ನೊಣಗಳು ಹಾರಾಡುವದು ಪ್ರಕೃತಿ ನಿಯಮ’. ಸತ್ತವರಿಂದ ಯಾರೂ ಸಾಯಲಾರರು.., ಇಪ್ಪತ್ತು ವರುಷಗಳ ಬಹಿಷ್ಕಾರವೇ ಸಾಕು, ಇನ್ನಾದರೂ ಬದುಕಲಿ ಬಿಡಿ ಬಡಜೀವಗಳನು.
ವ್ಯಸ್ಥೆಯ ಕಪಿಮುಷ್ಠಿ : ಅನಾದಿಕಾಲದಿಂದಲೂ ಈ ಹೆಣ್ಣು ಜೀವ ಮೂಕವೇದನೆಯನ್ನು ಅನುಭವಿಸುತ್ತಿದೆ. ಹೆಣ್ಣು ಆಡಿದ ಮಾತು ಗಂಡಿಗೆ ಅರ್ಥವಾದರೆ ತಾನೇ..? ಭೂಮಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಹೆಣ್ಣು ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ ಎಂಬ ಅoಕುಶದಿ ತಿವಿಯುವವರೇ ಎಲ್ಲ, ಅವಳ ಗೋಳು ಕೇಳುವವರಾರೂ ಇಲ್ಲ. ದನಿ ಎತ್ತದೆ ಮೌನವಾಗಿರಬೇಕು. ತಾಳುವದು, ಬಾಳುವದು ಹೆಣ್ಣಿ ಗoಟಿದ ನಂಟು..! ಎಂಬ ಸಂಕೋಲೆ ಯಲ್ಲಿ ಕಟ್ಟಿಹಾಕಲಾಗಿದೆ. ಬದಲಾದ ಕಾಲಗತಿಗೆ ಹೊಂದಿ ಕೊಳ್ಳಲೇ ಬೇಕು ರೆಕ್ಕೆ ಬಲಿತ ಹಕ್ಕಿಗ ಳೆಲ್ಲ ಸ್ವಚ್ಛಂದವಾಗಿ ಹಾರಲು ಬಯಸುವದರಲ್ಲಿ ತಪ್ಪೇನಿಲ್ಲ, ಆದರೂ ನನ್ನೆಲ್ಲ ಅಧಿಕಾರದ ಅಸ್ತಿತ್ವ ಭಯದ ಮೇಲೆ ನಿಂತಿದೆ. ಜೀತಗಾರರೆಲ್ಲಿ ಸಲುಗೆ ಬೆಳೆಸಿದರೆ ಊರನಾಳುವದ್ಹೇಗೆ..? ಹಗ್ಗ ಹಳೆಯದಾಗಿರಲು ಕಟ್ಟಿ ಹಾಕುವದ್ಹೇಗೆ..? ಓಡಿ ಹೋಗುವ ಇಚ್ಛಾಶಕ್ತಿಯುಳ್ಳವರನ್ನು.., ಧರ್ಮ ಪುರಿಯ ಸುತ್ತ ಗೋಡೆ ಕಟ್ಟಿದವರು ನಾವು. ಓಡಬಾರದಿಲ್ಲಿ ನಮ್ಮಯ ಸುತ್ತ ಎಲ್ಲರೂ ಗಿರಕಿ ಹೊಡೆಯಲೇಬೇಕು. ಈ ಬಿರುಕು ಬಿಟ್ಟರು ಗೋಡೆ ಬೀಳದಂತೆ ಹುಡಿಮಣ್ಣು ಮೆತ್ತಬೇಕು. ಊರಾಳುವವ ನಾನು ‘ಗೌಡ ಬಿದ್ದರೂ ಮೀಸೆ ಮಣ್ಣಾಗದoತೆ ಕಾಯ್ದುಕೊಳ್ಳಬೇಕಿದೆ ಒಣ ಪ್ರತಿಷ್ಟೆ. ಊರೆಂದರೇನು..? ಊರ ಬಾವಿ ಎಂದರೇನು..? ನೀರೆಂದರೇನು..? ಆ ನೀರನ್ನು ಮುಟ್ಟು ವುದೆಂದರೇನು..? ಶತಮಾನಗಳ ಇತಿಹಾಸ ಮಡಿ-ಮೈಲಿಗೆ ಕಾಯ್ದುಕೊಂಡು ಬಂದಿರುವ ಈ ವ್ಯವಸ್ಥೆಯನ್ನು ಮುರಿಯುವದು ಅಂದರೆ ಹೇಗಾದೀತು..? ಕಾಲನ ಹೊಡೆತಕ್ಕೆ ಸಿಲುಕಿ ಮಹಾ ಗೋಡೆಗಳೇ ಉರುಳಿರುವಾಗ..! ಇಂದಿಲ್ಲ ನಾಳೆ ಬೀಳುವ ಗೋಡೆಗೆ ನಾವು ನಿಮಿತ್ತವಾಗಬೇಕೆ..? ಕೋಪಾಗ್ನಿಯ ಕಿಡಿ ಒಂದು ಕಡೆ, ದುಃಖದ ಕಣ್ಣೀರು ಇನ್ನೊಂದೆಡೆ ಎರಡನ್ನೂ ಏಕಕಾಲದಲ್ಲಿ ಹದುಮಿಡಲಾಗದು. ‘ಬೆಂಕಿ ಮಳೆ ಜೋರಾಗಿ ಸುರಿಯುತ್ತಿರಲು ಸೂರಿನ ಮೇಲಿರಿಸಿದ ಹುಲ್ಲು ಬಚ್ಚಿಡಲು ಆಗದು ಸೂರಿನೊಳಗೆ’, ಮನ-ಮನೆಯ ಮಾತೀಗ ಹಾದರದ ಮಾತಾಗಿ ಹಾದಿಬೀದಿಯೆಲ್ಲ ಹರಿದಾಡಿದೆ. ಬರುವ ಮಾರಿ ಹಬ್ಬಕ್ಕೆ ಬಲಿಕೊಡಲು ಅಪ್ಪಣೆಯ ನೀಡಿದರು.
ಭೂಮಿ : ನಾನೂ-ನೀನು ಈ ಭೂಮಿಯ ಬೆಳೆ ತಾನೇ..? ಸಾವಿನಂಚಿನಲ್ಲಿರಲು ನಾವು ಈ ಕಂದನ ದು ತಪ್ಪೇನು..? ನುಚ್ಚುನೃರಾಗುವ ಕನಸಿನ ಗೋಪುರಕ್ಕೆಲ್ಲ ಈ ಮಾರಿ ಹಬ್ಬವೇ ಮೂಕಸಾಕ್ಷಿ. ಮಾರಿ ಹಬ್ಬದ ಕಥೆಗೆ ಜನವೇ ಸಾಕ್ಷಿ ಸತ್ತವರ ಸೂರಿನ ಲೆಕ್ಕ ಬರೆಯಲಾಗದು ಇಲ್ಲಿ, ಹಾದಿ ಹೆಣ ವಾದವರ ಬೂದಿಯ ಹಿಡಿಯಲಾಗದು. ಏನು ಮಾಡೀತು ಈ ಕಂದ..? ಬದುಕಿನ ಹಕ್ಕು ಕಸಿದು ಕೊಳ್ಳಲು..! ನರ ಬಲಿ ಕೊಟ್ವರ ನರಕಯಾತನೆ ಹಸಿಹಸಿಯಾಗಿರಲು ಚರಿತ್ರೆಯಲ್ಲಿ, ಮಾರಿಹಬ್ಬ ದಲ್ಲಿ ಬಲಿಯಾದ ಕುರಿ-ಮೇಕೆ ಸಾವುಗಳ ಲೆಕ್ಕಬರೆದುಕೊಳ್ಳುವವರಾರು..? ಎಂಬ ಮಾತಿ ನಲ್ಲಿ, ಹಾದಿ ಹೆಣವಾಗುವ ಸ್ಥಿತಿಯು ನಮ್ಮದು ಈ ಹುಚ್ಚರ ಸಂತೆಯಲ್ಲಿ ಎಂಬ ಮಾತಿನ ಹಿಂದಿನ ಅಸಹಾಯಕತೆಯನ್ನು ಕಾಣಬಹುದಾಗಿದೆ.
ಕುಮಾರ : ಮಾಡುವುದು ಮಡಿಯುವುದು ದೇವರು ಕೊಡಮಾಡಿದ ಕಾಣಿಕೆ ಕಸಿದುಕೊಳ್ಳಲು ಯಾರಿಗೂ ಆಗದು ತಾಯೆ, ನಾವು ಕುರಿಯ ಮರಿಯಗಳಲ್ಲ ತಾಯೆ ಪ್ರಜ್ಞಾವಂತರು ಎಂದ ಹೇಳುವ ಮಾತಿನಲ್ಲಿ ಪ್ರತಿರೋಧವನ್ನು, ನಾಳೆ ಬರುವ ಬಾಳ ಬೆಳಗುವ ಸೂರ್ಯನಿಗಾಗಿ ಕಾಯಬೇಕು ಎನ್ನುವಲ್ಲಿ ಬದುಕಿನ ಕುರಿತಾದ ಅದಮ್ಯ ವಿಶ್ವಾಸ-ಭರವಸೆಯ ನೆಲೆಯನ್ನು ಕಾಣಬಹುದಾಗಿದೆ.
ಆತ್ಮಶುದ್ಧಿಪ್ರತೀಕ ಮಾರಿ ಹಬ್ಬ : ಮಾರಿ ಅಮ್ಮನ ಹಬ್ಬವು ಆತ್ಮಶುದ್ಧಿಗೆ ನಾಂದಿ. ಅವರವರ ಆಯ್ಕೆಗೆ ಅವರೇ ಸಾಕ್ಷಿ..! ಸೋತವರ ನಡುವೆ ಸೋತು, ಗೆದ್ದವರ ಜೊತೆ ಮೌನವ ತಾಳಿ, ತಿಳಿದವರ ನಡುವೆ ತಿಳಿಯಾಗಿ ರುವುದು ಮುಂಬರಲಿರುವ ಸೂರ್ಯನಿಗಾಗಿ.., ಸುರಿಯುವ ಮಳೆಯಲ್ಲಿ ಚಂದಿರನ ನೋಡುವ ಆಸೆ, ಮಳೆಬಿಲ್ಲಿನ ಬಣ್ಣಗಳನು ಮನದ ಬೊಗಸೆಯಲ್ಲಿ ಹಿಡಿಯುವ ಆಸೆ, ಮನದ ಅಂಗಣದಲ್ಲಿ ರಂಗವಲ್ಲಿಯ ಬಿಡಿಸುವ ಆಸೆ, ಭೂಮಿ ನಾನು ಅವನು ನನ್ನೊಳಗಿಹನು ಅದಕ್ಕೆ ಈ ಕಂದನು ಸಾಕ್ಷಿಯು, ತಿರುಗಿ ಬರಲು ಇಳೆಗೆ ಏನಿದೆ..? ಇಲ್ಲಿ ಈ ಅನಾಥರಿಗೆ ಭೂಮಿ ಮೇಲೆ ಪಯಣಿ ಸುವುದು ಪ್ರೀತಿಗಾಗಿ..! ಎನ್ನುವುದರೊಂದಿಗೆ ಸಾಮಾಜದಲ್ಲಿನ ಜಾತಿವ್ಯವಸ್ಥೆಯ ಮೂಲ ಬೇರುಗಳನ್ನು ಕೀಳುವುದರ ಮೂಲಕ ಸ್ವಾಸ್ಥ ಸಮಾಜದ ನಿರ್ಮಾಣದ ಕಲ್ಪನೆಯು ಮನೋಜ್ಞವಾಗಿ ಇಲ್ಲಿ ಮೂಡಿಬಂದಿದೆ.
-ಡಾ.ಯಲ್ಲಮ್ಮ.ಕೆ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ತಾವರಗೇರಾ ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲಾ.
Date : 12-04-2020 ಡಾ.ಯಲ್ಲಮ್ಮ.ಕೆ (ಚರ್ಚೆ) ೦೭:೧೬, ೧೨ ಏಪ್ರಿಲ್ ೨೦೨೦ (UTC)