ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈ

ವಿಕಿಸೋರ್ಸ್ದಿಂದ

ಈ - ಕನ್ನಡ ವರ್ಣಮಾಲೆಯ ನಾಲ್ಕನೆಯ ಅಕ್ಷರ. ಬಳಕೆ ಅಪೂರ್ವವಾದ್ದರಿಂದ ಇದರ ಬ್ರಾಹ್ಮೀರೂಪ ಉಪಲಬ್ಧವಿಲ್ಲ. ಶಾತವಾಹನರ ಕಾಲದಲ್ಲಿ ಎರಡು ಚುಕ್ಕೆಗಳನ್ನೊಳಗೊಂಡಿದ್ದ ಇದರ ರೂಪ ರಾಷ್ಟ್ರಕೂಟರ ಕಾಲದಲ್ಲಿ ಸಾಕಷ್ಟು ಮಾರ್ಪಟ್ಟಿತು. ನಡುವಿದ್ದ ನೀಳಗೆರೆ ವೃತ್ತವಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪಾಶ್ರ್ವದ ಬಿಂದುಗಳು ವೃತ್ತಕ್ಕೆ ಸೇರಿದಂತೆ ಎರಡು ವಕ್ರರೇಖೆಗಳಾದುವು. ಇದೇ ರೂಪ ಸೇವಣ ಮತ್ತು ಕಳಚೂರಿಗಳ ಕಾಲದಲ್ಲಿ ಮುಂದುವರಿಯಿತು. ವೃತ್ತದ ತಲೆಕಟ್ಟು ಸಿದ್ಧವಾಯಿತು. ವಿಜಯನಗರದ ಕಾಲದಲ್ಲಿ ನಡುವಿನ ಅಡ್ಡಗರೆ ವೃತ್ತದ ನಟ್ಟ ನಡುವೆ ಹಾಯುವುದನ್ನು ಕಾಣಬಹುದು. ಹದಿನೆಂಟನೆಯ ಶತಮಾನದ ಮೈಸೂರು ಅರಸರ ಕಾಲದಲ್ಲಿ ಅಕ್ಷರಕ್ಕೆ ಈಗಿನ ರೂಪ ಬಂದಿತಾದರೂ ನಡುವಿನ ಅಡ್ಡಗೆರೆಯ ತುದಿಯಲ್ಲಿರುವ ಕೊಂಡಿ ಸ್ವಲ್ಪ ಭಿನ್ನವಾಗಿತ್ತು. ಕಾಲ ಕ್ರಮೇಣ ಅಕ್ಷರಕ್ಕೆ ಈಗಿನ ರೂಪಬಂತು.

ಈ ಅಕ್ಷರ ಪೂರ್ವ-ಸಂವೃತ ಅಗೋಳ ದೀರ್ಘಸ್ವರವನ್ನು ಸೂಚಿಸುತ್ತದೆ. (ಎ.ವಿ.ಎನ್.)