ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ
ಕನ್ನಡದಲ್ಲಿ ಶಾಸ್ತ್ರಸಾಹಿತ್ಯ : - ಸಂಸ್ಕೃತ ಆಲಂಕಾರಿಕ ರಾಜಶೇಖರ ಕಾವ್ಯಕವಿ, ಶಾಸ್ತ್ರಕವಿ, ಉಭಯಕವಿ ಎಂಬ ಮೂರು ಬಗೆಯ ಕೃತಿಕಾರರನ್ನು ಗುರುತಿಸುತ್ತಾನೆ: ಕಾವ್ಯಕವಿ ರಮಣೀಯವಾಗಿ ಬರೆಯಬಲ್ಲನೇ ಹೊರತು ಖಚಿತತೆ ಪ್ರಧಾನ ಲಕ್ಷಣವಾದ ಶಾಸ್ತ್ರಭಾಗಗಳನ್ನು ಬರೆಯುವಲ್ಲಿ ಅವನು ಸೋತುಬಿಡಬಹುದು. ಶಾಸ್ತ್ರಕವಿ ಶಾಸ್ತ್ರಭಾಗಗಳನ್ನು ತರ್ಕಬದ್ಧವಾಗಿ ನಿರೂಪಿಸಬಲ್ಲವನಾದರೂ ಕಾವ್ಯಭಾಗಗಳನ್ನು ಬರೆಯುವಾಗ ನೀರಸವಾಗಿ ಬಿಡಬಹುದು. ಉಭಯಕವಿ ಮಾತ್ರ ಕಾವ್ಯ ಶಾಸ್ತ್ರಗಳೆರಡನ್ನೂ ಅವುಗಳಿಗೆ ಅಪಚಾರ ವೆಸಗದಂತೆ ಬರೆಯುವ ಸಮರ್ಥ ಎಂದು ರಾಜಶೇಖರ ಅಂಥವನನ್ನು ಹೊಗಳಿದ್ದಾನೆ.
ಈ ರೀತಿಯ ವಿಶ್ಲೇಷಣೆಯಿಂದ ಧ್ವನಿತವಾಗುವ ಸಂಗತಿಗಳು ಎರಡು - ಒಂದು, ಕಾವ್ಯ ಮತ್ತು ಶಾಸ್ತ್ರಗಳೆರಡೂ ಬೇರೆ ಬೇರೆ. ಎರಡು; ಕಾವ್ಯ ಅನುಭವ ಪ್ರಪಂಚಕ್ಕೆ ಸೇರಿದ್ದು, ಶಾಸ್ತ್ರ ಆಲೋಚನಾ ಪ್ರಪಂಚಕ್ಕೆ ಸೇರಿದ್ದು. ಅನುಭವ ಮತ್ತು ಆಲೋಚನೆ ಇವು ಮನುಷ್ಯನ ಪ್ರವೃತ್ತಿಗಳು. ಆದ್ದರಿಂದಲೇ ಒಂದು ಪ್ರಧಾನವಾಗಿರುವ ಕಡೆಯಲ್ಲಿಯೂ ಇನ್ನೊಂದು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಂಪನ ಆದಿಪುರಾಣದಂಥ ಕಾವ್ಯದಲ್ಲಿ ಶಾಸ್ತ್ರ ಎಂದು ಕರೆಯಿಸಿಕೊಳ್ಳುವ ಎಷ್ಟೋ ಭಾಗಗಳಿವೆ. ಕೇಶಿರಾಜನ ಶಬ್ದಮಣಿದರ್ಪಣದಂಥ ವ್ಯಾಕರಣದಲ್ಲಿ ವ್ಯಾಕರಣ ಪ್ರಕ್ರಿಯೆಗಳನ್ನು ನಿರೂಪಿಸುವಾಗ, ಪ್ರಯೋಗಗಳನ್ನು ಕೊಡುವಾಗ ಕೃತಿಕಾರನ ರಸಪ್ರಜ್ಞೆ ವ್ಯಕ್ತವಾಗುತ್ತದೆ. ಹಾಗೆ ನೋಡಿದರೆ ಯಾವುದೇ ಉತ್ತಮ ಕೃತಿಯಲ್ಲಿ ಕಾವ್ಯಾಂಶವ ಶಾಸ್ತ್ರಾಂಶವ ಇರಬಹುದು. ಒಟ್ಟಿನ ದೃಷ್ಟಿಯಲ್ಲಿ ಒಂದು ಕೃತಿ ಕಾವ್ಯವೇ ಶಾಸ್ತ್ರವೇ ಎಂಬುದನ್ನು ನಿರ್ಣಯಿಸುವುದು ಅದರ ಮೂಲೋದ್ದೇಶವನ್ನು ಅವಲಂಬಿಸಿರುತ್ತದೆ.
ನಮ್ಮ ಹಿಂದಿನವರ ಪ್ರಕಾರ ಶಾಸ್ತ್ರ ಕಾವ್ಯಕ್ಕೆ ಬಿಗಿ, ತೂಕ, ಗಹನತೆಗಳನ್ನು ತಂದುಕೊಟ್ಟರೆ, ಕಾವ್ಯ ಶಾಸ್ತ್ರಕ್ಕೆ ಚೆಲುವನ್ನೂ ಓದಿಸಿಕೊಂಡು ಹೋಗುವ ಗುಣವನ್ನೂ ಮಾನವೀಯ ಸ್ಪರ್ಶವನ್ನೂ ತಂದುಕೊಡುತ್ತದೆ.
ಹಿಂದೆ ಕನ್ನಡದ ಕವಿಯಾಗಲಿ, ಶಾಸ್ತ್ರಕಾರನಾಗಲಿ ಸಾಧ್ಯವಾದಷ್ಟು ಕ್ಷೇತ್ರಗಳಲ್ಲಿ ಪಾಂಡಿತ್ಯವನ್ನು ಪಡೆಯಬೇಕಾಗಿತ್ತು. ಈ ದೃಷ್ಟಿಯಿಂದ ಪಂಪ ವರ್ಣಿಸುವ ಅರ್ಜುನನ (ಅರಿಕೇಸರಿ) ವಿದ್ಯಾಭ್ಯಾಸ ಹೀಗಿದೆ: ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರನಿಷಿವಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪ ಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀ ಪ್ರರೋಚ[ನಾ]ಪ್ರಸ್ತಾವ [ನೇ]ತಿವೃ[ತ್ತ] ಸಂದಿಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಗ ದೊಳಮಯ್ದುತೆದ ಮಂತ್ರಂಗಳೊಳ[ಮಾ] ದರ್ಶನದೊಳಂ ಪ್ರತ್ಯಕ್ಷ ನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವ ವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳಕಾಪ್ಯಪ ಸುಪತಿ ಶ್ರೀ ಹರ್ಷಾದಿ ಪುರಾಣಪುರುಷ ವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಫೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾಪುರ್ವಯಂತ್ರ ಪ್ರಯೋಗ ವಿ[ಷಾ]ಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಳ ಶಕ್ತಿ ತೋಮರ ಮುಸಲ ಮುಸುಂಡಿ ಬಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಮತಿ ಪ್ರವೀಣ[ನು] ಮಾರೂಢ ಸರ್ವಜ್ಞ ಮಹೇಂದ್ರಜಾಣ[ನು]ಮಾಗಿ. ಇದು 10ನೆಯ ಶತಮಾನದ ವಿದ್ಯಾಭ್ಯಾಸದ ಚಿತ್ರವೂ ಆಗಿರಬಹುದು. ಇಲ್ಲಿ ಕಾವ್ಯ, ಶಾಸ್ತ್ರಗಳ ಸಂಗಮವನ್ನು ಗುರುತಿಸಬೇಕು. ಕವಿಗೆ ಪ್ರತಿಭೆ ಎಷ್ಟು ಆವಶ್ಯಕಮೋ ಕಾವ್ಯ ವಿದ್ಯಾಪ್ರಚಯ ಪರಿಚಯವ ಅಷ್ಟೇ ಅಗತ್ಯವಾಗಿದ್ದಿತು. ಶಾಸ್ತ್ರಕಾರರಂತೂ ತಮ್ಮ ತಮ್ಮ ಶಾಸ್ತ್ರ ವಿಷಯಗಳಲ್ಲಿ ನಿಪುಣರಾಗಿದ್ದಂತೆಯೇ ಉಳಿದ ಶಾಸ್ತ್ರಗಳಲ್ಲಿಯೂ ತಕ್ಕ ಪರಿಣತಿಯನ್ನು ಪಡೆದಿರುತ್ತಿದ್ದರು. ಕಾಮಶಾಸ್ತ್ರ ಸಂಬಂದಿ ಗ್ರಂಥ ಬರೆದಿರುವ ಚಂದ್ರರಾಜ ತಾನು ಕಾಮಶಾಸ್ತ್ರದಲ್ಲಲ್ಲದೆ ವ್ಯಾಕರಣ ಅರ್ಥಶಾಸ್ತ್ರ ಗಣಿತ ಅಲಂಕಾರ ಕಾವ್ಯ ನಾಟಕ ಹಯಶಾಸ್ತ್ರ ಅದ್ವೈತ ಸಂಗೀತ ಇತ್ಯಾದಿ ವಿಷಯಗಳಲ್ಲಿ ನೈಪುಣ್ಯವನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ.
ಕನ್ನಡದಲ್ಲಿ ಹುಟ್ಟಿರುವ ಶಾಸ್ತ್ರ ಗ್ರಂಥಗಳಲ್ಲಿ ಆಯಾ ಶಾಸ್ತ್ರಕ್ಕೆ ಸಂಬಂದಿಸಿದ ಪ್ರಮುಖ ಗ್ರಂಥಗಳನ್ನು ಮಾತ್ರ ಕೆಳಗೆ ಲಕ್ಷಿಸಲಾಗಿದೆ. ಅಲಂಕಾರಶಾಸ್ತ್ರ: -ಶ್ರೀ ವಿಜಯನ (ಸು.850) ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ಧವಾದ ಅತ್ಯಂತ ಪ್ರಾಚೀನ ಅಲಂಕಾರ ಗ್ರಂಥ. ಇದು ದಂಡಿಯ "ಕಾವ್ಯಾದರ್ಶದ "ಮಾದರಿಯಲ್ಲಿ ರಚಿತವಾಗಿದೆ. ಇದರಲ್ಲಿ ಮೂರು ಅಧ್ಯಾಯವಿದೆ. ಕಾವ್ಯಕ್ಕೆ ಸೌಂದರ್ಯವನ್ನು ತಂದುಕೊಡುವ ಎಲ್ಲವ ಅಲಂಕಾರವೆಂದು ಇವನ ಅಬಿಪ್ರಾಯ. ರಸಗಳಲ್ಲಿ ಇವನು ಶಾಂತವನ್ನು ಹೇಳಿರುವುದು ಗಮನಾರ್ಹವಾಗಿದೆ. ಈ ಗ್ರಂಥದಲ್ಲಿ ಕನ್ನಡ ನಾಡು, ನುಡಿಗಳ ಬಗ್ಗೆ, 850ಕ್ಕಿಂತ ಹಿಂದಿನ ಕನ್ನಡ ಸಾಹಿತ್ಯದ ಬಗ್ಗೆ, ಅನೇಕ ಕಾವ್ಯ ಪ್ರಕಾರಗಳ ಬಗ್ಗೆ ಹಲವು ಸ್ವಾರಸ್ಯಕರವಾದ ಹೇಳಿಕೆಗಳಿವೆ. ಎರಡನೆಯ ನಾಗವರ್ಮನ ಕಾವ್ಯಾವಲೋಕನದಲ್ಲಿ (ಸು.1042) ಐದು ಪರಿಚ್ಫೇದಗಳಿದ್ದು ಕೊನೆಯ ನಾಲ್ಕು ಅಲಂಕಾರ ಶಾಸ್ತ್ರಕ್ಕೆ ಮೀಸಲಾಗಿವೆ. ಇವನು ವಾಮನ, ರುದ್ರಟ, ಭಾಮಹ, ದಂಡಿ ಮುಂತಾದ ಸಂಸ್ಕೃತ ಅಲಂಕಾರಿಕರಿಂದ ವಿಷಯ ಸಂಗ್ರಹಿಸಿದ್ದಾನೆ. ಕವಿಸಮಯದ ಭಾಗಕ್ಕೆ ರಾಜಶೇಖರನಿಗೆ ಋಣಿಯಾಗಿರುವಂತೆ ತೋರುತ್ತದೆ. ಈತ ಧ್ವನಿಯ ಮಾತೆತ್ತಿದ್ದರೂ ಅದೂ ಒಂದು ಅಲಂಕಾರ ಎಂದಿದ್ದಾನೆ. ಕವಿಕಾಮನ- "ಶೃಂಗಾರರತ್ನಾಕರ "(ಸು.1200) ರಸದ ವಿಷಯವನ್ನು ವಿಸ್ತಾರವಾಗಿ ಪ್ರತಿ ಪಾದಿಸುವ ಮೊದಲ ಕನ್ನಡ ಗ್ರಂಥ. ರಸಮೇ ಮೊದಲ್ ಕವಿತೆಗೆ ಎಂದೀತ ಹೇಳಿದ್ದಾನೆ. ಮಾಧವನ ಮಾಧವಾಲಂಕಾರ ಸಂಸ್ಕೃತ ಕಾವ್ಯಾದರ್ಶದ ಸರಳಾನುವಾದ. ಸಾಳ್ವನ ರಸರತ್ನಾಕರದಲ್ಲಿ (ಸು.1550) ವಿಸ್ತಾರವಾದ ರಸದ ಪ್ರತಿಪಾದನೆ ಇದೆ. ಇವನ ಇನ್ನೊಂದು ಗ್ರಂಥ ಶಾರದಾವಿಲಾಸದಲ್ಲಿ ಧ್ವನಿಯ ಬಗ್ಗೆ ಮೊತ್ತಮೊದಲು ವಿಸ್ತೃತ ಚರ್ಚೆ ದೊರೆಯುತ್ತದೆ. ಚಿಕ್ಕದೇವರಾಜ ಒಡೆಯರ ಕಾಲದಲ್ಲಿದ್ದ ತಿರುಮಲಾರ್ಯ ತನ್ನ ಅಪ್ರತಿಮವೀರಚರಿತದಲ್ಲಿ ಶಬ್ದಾಲಂಕಾರ, ಅರ್ಥಾಲಂಕಾರಗಳ ವಿವರಣೆಗಳನ್ನಿತ್ತಿದ್ದಾನೆ. ಜಾಯೇಂದ್ರ (1734) ಅಪ್ಪಯ್ಯ ದೀಕ್ಷಿತನ ಸಂಸ್ಕೃತ ಕುವಲಯಾನಂದವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಇವನ ಇನ್ನೊಂದು ಸ್ವಕೃತಿ ರಸಮಂಜರಿಯಲ್ಲಿ ನಾಯಕ, ನಾಯಿಕೆಯರ ಪ್ರಭೇದಗಳನ್ನು ವಿವರಿಸಲಾಗಿದೆ. ತಿಮ್ಮ ತನ್ನ ನವರಸಾಲಂಕಾರದಲ್ಲಿ (ಸು.1600 ಗ್ರಂಥ ಪ್ರಕಟವಾಗಿಲ್ಲ) ಮುಖ್ಯವಾಗಿ ಪೂರ್ವಗ್ರಂಥಗಳಿಂದ, ಅದರಲ್ಲೂ ವಿಶೇಷವಾಗಿ ಸಾಳ್ವನ ರಸರತ್ನಾಕರ ಮತ್ತು ಕವಿಕಾಮನ ಶೃಂಗಾರ ರತ್ನಾಕರಗಳಿಂದ ರಸಲಕ್ಷಣಗಳನ್ನು ಇದ್ದಕ್ಕಿದ್ದಂತೆ ಎತ್ತಿಕೊಂಡು ಸಂಕಲನ ಗ್ರಂಥವೆನ್ನುವ ರೀತಿಯಲ್ಲಿ ಬರೆದಿದ್ದಾನೆ. ಇದರ ಒಂದು ಗಮನಾರ್ಹ ವೈಶಿಷ್ಟ್ಯವೆಂದರೆ ಕೇವಲ ಚಂಪುಕಾವ್ಯದ ಉದಾಹರಣೆಗಳನ್ನು ಕೊಡದೆ ಎರಡು ಷಟ್ಪದಿ ಹಾಗೂ ಒಂದು ತ್ರಿಪದಿಯನ್ನು ಉದಾಹರಿಸಿರುವುದು. ಅಳಿಯ ಲಿಂಗರಾಜನ ನರಪತಿಚರಿತ (ಸು.1867) ಶಬ್ದಾಲಂಕಾರ, ಅರ್ಥಾಲಂಕಾರಗಳನ್ನು ಹೇಳುವಲ್ಲಿ ಸಂಸ್ಕೃತ ಕುವಲಯಾನಂದವನ್ನು ಅನುಸರಿಸಿದೆ. ಅದೇ ಶತಮಾನದ ಉತ್ತರಾರ್ಧದಲ್ಲಿದ್ದ ಚಾವಲಿರಾಮಸ್ವಾಮಿಶಾಸ್ತ್ರಿಗಳ ‘ಕರ್ನಾಟಕ ಛಂದೋಲಂಕಾರ ಸಾಹಿತ್ಯ ಲಕ್ಷಣ ಸಂಗ್ರಹ’ ಛಂದಸ್ಸು ಹಾಗೂ ಅಲಂಕಾರ ಶಾಸ್ತ್ರಗಳ ಕೈಪಿಡಿಯಾಗಿದೆ. ಕನ್ನಡ ಕೈಪಿಡಿ(ಮೈ.ವಿ.ವಿ), ತೀ.ನಂ.ಶ್ರೀಕಂಠಯ್ಯ ನವರ ಭಾರತೀಯ ಕಾವ್ಯಮೀಮಾಂಸೆ, ಕೆ.ಕೃಷ್ಣಮೂರ್ತಿಯವರ ಕನ್ನಡದಲ್ಲಿ ಕಾವ್ಯತತ್ತ್ವ, ದ.ರಾ.ಬೇಂದ್ರೆಯವರ ಸಾಹಿತ್ಯ ಮತ್ತು ವಿಮರ್ಶೆ, ಕುವೆಂಪು ಅವರ ರಸೋ ವೈ ಸಃ, ಡಿ.ವಿ.ಜಿ. ಅವರ ಸಾಹಿತ್ಯಶಕ್ತಿ, ವಿ.ಸೀ. ಅವರ ಸಾಹಿತ್ಯ ಸಂಪ್ರದಾಯ ಮತ್ತು ಹೊಸ ಮಾರ್ಗ, ಬಿ.ಎಚ್.ಶ್ರೀಧರ ಅವರ ಕಾವ್ಯಸೂತ್ರ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯಾರ್ಥಚಿಂತನೆ ಎಚ್.ತಿಪ್ಪೇರುದ್ರಸ್ವಾಮಿ ಯವರ ತೌಲನಿಕಕಾವ್ಯಮೀಮಾಂಸೆ ಮುಂತಾದ ಗ್ರಂಥಗಳಲ್ಲಿ ಕನ್ನಡ ಕಾವ್ಯಮೀಮಾಂಸೆಗೆ ಸಂಬಂದಿಸಿದಂತೆ ಸಾಕಷ್ಟು ಸಾಮಗ್ರಿ ಚರ್ಚಿತವಾಗಿದೆ.
ವ್ಯಾಕರಣ ಗ್ರಂಥಗಳು: -ಕವಿರಾಜಮಾರ್ಗ ಮುಖ್ಯವಾಗಿ ಅಲಂಕಾರ ಗ್ರಂಥ ವಾದರೂ ಕನ್ನಡ ಭಾಷೆ, ಉಪಭಾಷೆ, ವ್ಯಾಕರಣಕ್ಕೆ ಸಂಬಂದಿsಸಿದ ಅನೇಕ ಸ್ವಾರಸ್ಯವಾದ ಸಂಗತಿಗಳನ್ನು ಇದರಲ್ಲಿ ಹೇಳಿದೆ. ರನ್ನ (ಸು.993), ನಯಸೇನರು (ಸು.1112) ವ್ಯಾಕರಣಗಳನ್ನು ಬರೆದಿರುವರೆಂಬ ಊಹೆ ಇದ್ದರೂ ಅವರ ಕೃತಿಗಳು ನಮಗೆ ಉಪಲಬ್ಧವಿಲ್ಲ. ಎರಡನೆಯ ನಾಗವರ್ಮ (ಸು.1042) ಈಗ ತಿಳಿದಮಟ್ಟಿಗೆ ಮೊಟ್ಟ ಮೊದಲ ವ್ಯಾಕರಣಕಾರ. ಇವನ ಕಾವ್ಯಾವಲೋಕನ ಪ್ರಧಾನವಾಗಿ ಅಲಂಕಾರಶಾಸ್ತ್ರ ಗ್ರಂಥವಾಗಿದ್ದರೂ ಮೊದಲನೆಯ ಅಧ್ಯಾಯ ಶಬ್ದಸ್ಮೃತಿಯನ್ನು ವ್ಯಾಕರಣಕ್ಕೆ ಮೀಸಲಾಗಿಟ್ಟಿದ್ದಾನೆ. ಇವನ ಭಾಷಾಭೂಷಣ ಸಂಸ್ಕೃತ ಭಾಷೆಯಲ್ಲಿರುವ ಕನ್ನಡ ವ್ಯಾಕರಣ. ಸೂತ್ರ ವೃತ್ತಿಗಳು ಸಂಸ್ಕೃತದಲ್ಲಿವೆ. ಉದಾಹರಣೆಗಳನ್ನು ಪೂರ್ವಕವಿಗಳ ಕನ್ನಡ ಗ್ರಂಥಗಳಿಂದ ಕೊಟ್ಟಿದ್ದಾನೆ. ಕೇಶಿರಾಜನ (ಸು.1260) ಶಬ್ದಮಣಿದರ್ಪಣ ಹಳಗನ್ನಡದ ಶ್ರೇಷ್ಠ ಗ್ರಂಥಗಳಲ್ಲೊಂದು. ಇದರಲ್ಲಿ ಶಬ್ದಸ್ಮೃತಿಯಲ್ಲಿರುವಂತೆಯೇ ಸೂತ್ರಗಳು ಕಂದಪದ್ಯದಲ್ಲಿವೆ. ಆದರೆ ತನ್ನ ಸೂತ್ರಗಳಿಗೆ ತಾನೇ ಗದ್ಯದಲ್ಲಿ ವೃತ್ತಿಯನ್ನು ಬರೆದು, ಬೇರೆ ಕಡೆಗಳಿಂದ ಲಕ್ಷ್ಯಗಳನ್ನು ಉದಾಹರಿಸಿದ್ದಾನೆ. ಶಬ್ದಮಣಿದರ್ಪಣಕ್ಕೆ ಲಿಂಗಣಾರಾಧ್ಯ, ನಿಟ್ಟೂರು ನಂಜಯ್ಯ (ಸು.1725) ಇವರು ಟೀಕೆ ಬರೆದಿದ್ದಾರೆ. ಭಟ್ಟಾಕಳಂಕನ (ಸು.1604) ಶಬ್ದಾನುಶಾಸನ ಭಾಷಾಭೂಷಣದಂತೆಯೇ ಸಂಸ್ಕೃತದಲ್ಲಿರುವ ಕನ್ನಡ ಪ್ರೌಢವ್ಯಾಕರಣ. ಈತ ತನ್ನ ಕೃತಿಗೆ ಸಂಸ್ಕೃತದಲ್ಲಿ ಭಾಷಾಮಂಜರಿ ಎಂಬ ವೃತ್ತಿಯನ್ನೂ ಮಂಜರೀ ಮಕರಂದವೆಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. 19ನೆಯ ಶತಮಾನದ ಅನೇಕ ಪಾದ್ರಿಗಳು, ಐರೋಪ್ಯ ಮತ್ತು ದೇಶೀಯ ವಿದ್ವಾಂಸರು ಕನ್ನಡ ಭಾಷೆಗೆ ವ್ಯಾಕರಣಗಳನ್ನು ಬರೆದರು. ವಿಲಿಯಂ.ಕೇರಿಯವರ ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ (1817), ಜಿ.ಎಂ.ಮೆಕೆರಲ್ ಅವರ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ (1820), ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ "ಹೊಸಗನ್ನಡ ನುಡಿಗನ್ನಡಿ "(1838), ಥಾಮಸ್ ಹಡ್ಸನ್ ಅವರ ಕನ್ನಡ ವ್ಯಾಕರಣ (1859), ಸಿ.ಕ್ಯಾಂಪ್ಬೆಲ್ ಅವರ ಕನ್ನಡ ವ್ಯಾಕರಣಸಾರ, ಧೋಂಡೊ ಮುಳಬಾಗಿಲ ಅವರ ನುಡಿಗಟ್ಟು (1892), ವೆಂಕಟರಂಗೋಕಟ್ಟಿ ಯವರ ಕನ್ನಡ ಲಘುವ್ಯಾಕರಣ (1880), ಆರ್.ರಘುನಾಥರಾಯರ "ಕರ್ನಾಟಕ ಭಾಷಾ ವ್ಯಾಕರಣೋಪನ್ಯಾಸ ಮಂಜರಿ" (1894), ಬಿ.ಮಲ್ಲಪ್ಪನವರ "ಶಬ್ದಾದರ್ಶ" (1890), ತೀ.ನಂ.ಶ್ರೀ. ಅವರ "ಕನ್ನಡ ಮಾಧ್ಯಮ ವ್ಯಾಕರಣ" "ಮುಂತಾದ ವ್ಯಾಕರಣ ಗ್ರಂಥಗಳು ಪ್ರಕಟವಾಗಿವೆ.
ನಿಘಂಟುಗಳು: -ರನ್ನನ ರನ್ನಕಂದ ಈಗ ದೊರೆತಿರುವ ಮೊದಲ ನಿಘಂಟು. ಹಳಗನ್ನಡದ ಶಬ್ದಗಳಿಗೆ ಅರ್ಥ ಹೇಳುವ ಈ ಕೃತಿಯ 11 ಕಂದ ಪದ್ಯಗಳು ಮಾತ್ರ ದೊರಕಿವೆ. ಕೇಶಿರಾಜನ" ಶಬ್ದಮಣಿದರ್ಪಣ" ವ್ಯಾಕರಣ ಗ್ರಂಥವಾದರೂ ಅದರಲ್ಲಿ ಅನೇಕ ಅಪುರ್ವ ಪದಗಳಿಗೆ ಅರ್ಥವನ್ನು ಕೊಡಲಾಗಿದೆ. ಸು.1400ರಲ್ಲಿ ರಚಿತವಾದ ಗದ್ಯರೂಪದ ಕರ್ನಾಟಕ ಶಬ್ದಸಾರ, ಸುಮಾರು ಅದೇ ಕಾಲದ ಕರ್ನಾಟಕ ನಿಘಂಟುವಿನಲ್ಲಿ ಕಂದ, ವೃತ್ತಗಳಲ್ಲಿ ಅನೇಕ ಕನ್ನಡ ಪದಗಳಿಗೆ ಅರ್ಥ ಹೇಳಿದೆ. ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿ (ಸು.1530) ವಾರ್ಧಕ ಷಟ್ಪದಿ ರೂಪವಾದ ಪ್ರಸಿದ್ಧ ನಿಘಂಟು. ಶೃಂಗಾರ ಕವಿಯ (ಸು.1600) "ಕರ್ನಾಟಕ ಸಂಜೀವನ"ದಲ್ಲಿ ಕುಳಕ್ಷಳ ಶಬ್ದಗಳಿಗೆ, ಸೂರ್ಯಕವಿಯ (ಸು.1640) "ಕವಿ ಕಂಠಹಾರ"ದಲ್ಲಿ ಹಳಗನ್ನಡ ಪದಗಳಿಗೆ ಅರ್ಥವಿವರಣೆ ಬಂದಿದೆ. 2ನೆಯ ನಾಗವರ್ಮನ ಅಬಿಧಾನ ವಸ್ತುಕೋಶ, 2ನೆಯ ಮಂಗರಾಜನ ಅಬಿನವ ನಿಘಂಟು (ಸು.1398), ಕರ್ತೃ ಗೊತ್ತಿಲ್ಲದ ಶಬ್ದರತ್ನಾಕರ (ಸು.1600), ಚೆನ್ನಕವಿಯ ನಾನಾರ್ಥ ಕಂದ (ಸು.1600), ದೇಮೋತ್ತಮನ ನಾನಾರ್ಥರತ್ನಾಕರ (ಸು.1600), ಏಕಾಕ್ಷರ ನಿಘಂಟು ಇತ್ಯಾದಿಗಳಲ್ಲಿ ಸಂಸ್ಕೃತ ಪದಗಳಿಗೆ ಅರ್ಥ ಹೇಳಿದೆ. ಹಲಾಯುಧನ ಸಂಸ್ಕೃತ ಅಬಿಧಾನ ರತ್ನಮಾಲಾ, ಅಮರಕೋಶ ಇವುಗಳಿಗೆ ಕನ್ನಡ ಟೀಕೆಗಳು ದೊರೆಯುತ್ತವೆ. ಅಮೃತನಂದಿಯ "ಅಕಾರಾದಿ ವೈದ್ಯ ನಿಘಂಟು" (ಸು.1300), ಕರ್ತೃ ಗೊತ್ತಿಲ್ಲದ ಧನ್ವಂತರೀಯ ನಿಘಂಟು (ಸು.1500), ಇಂದ್ರ ದೀಪಿಕಾ ನಿಘಂಟು, ಮದನಾರಿ ವೈದ್ಯ ನಿಘಂಟು - ಇವುಗಳಲ್ಲಿ ವೈದ್ಯಕ್ಕೆ ಸಂಬಂದಿಸಿದ ಸಂಸ್ಕತ ಪದಗಳಿಗೆ ಅರ್ಥ ಹೇಳಿದೆ. ಚತುರಾಸ್ಯ ಬೊಮ್ಮರಸನ ಚತುರಾಸ್ಯ ನಿಘಂಟು (ಸು.1450), ವಿರಕ್ತ ತೋಂಟದಾರ್ಯನ "ಕರ್ನಾಟಕ ಶಬ್ದಮಂಜರಿ" (ಸು.1560) ಇವುಗಳಲ್ಲಿ ದೇಶ್ಯ, ತತ್ಸಮ, ತದ್ಭವ ಶಬ್ದಗಳಿಗೆ ಅರ್ಥ ಹೇಳಿದೆ. ಕರ್ನಾಟಕ ಶಬ್ದಮಂಜರಿಗೆ ನಾಲ್ಕು ಬೇರೆ ಬೇರೆ ಟೀಕೆಗಳು ದೊರೆಯುತ್ತವೆ. ಕರ್ತೃ ತಿಳಿಯದ ಭಾರತ ನಿಘಂಟು (ಸು.1600) ಎಂಬ ಕೃತಿಯಲ್ಲಿ ಕುಮಾರವ್ಯಾಸ ಭಾರತದಲ್ಲಿನ ದೇಶ್ಯ ಶಬ್ದಗಳಿಗೆ 67 ಕಂದಪದ್ಯಗಳಲ್ಲಿ ಅರ್ಥ ಹೇಳಿದೆ. ಮುಮ್ಮಡಿ ಕೃಷ್ಣರಾಜನ ಚಾಮುಂಡಿಕಾ ಲಘು ನಿಘಂಟು (ಸು.1848) ಎಂಬ ಕೃತಿಯಲ್ಲಿ ದೇವತೆಗಳು ಮೊದಲಾದವರು ಹಸ್ತದಲ್ಲಿ ಧರಿಸುವ ಆಯುಧಗಳು, ಹಸ್ತ ವಿಶೇಷಗಳು, ಮೃಗನಾಮಾವಳಿ ಇವುಗಳಿಗೆ ಸಂಬಂದಿಸಿದ ಸಂಸ್ಕೃತ ಶಬ್ದಗಳಿಗೆ ಪ್ರತಿಪದ ಕನ್ನಡ ಟೀಕನ್ನು ಕೊಟ್ಟಿದೆ. 19ನೆಯ ಶತಮಾನದಿಂದೀಚೆಗೆ ಅನೇಕ ಪಾದ್ರಿಗಳು, ದೇಶೀಯ ವಿದ್ವಾಂಸರು ನಿಘಂಟುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ರೆವರೆಂಡ್ ಎಫ್. ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೧೮೯೪) ಅತ್ಯಂತ ಶ್ರೇಷ್ಠವಾದುದು. ಕನ್ನಡದ ಪ್ರೌಢ ವಿದ್ಯಾರ್ಥಿಗಳಿಗೆ ಪಂಡಿತರಿಗೆ ವಿದ್ವಾಂಸರಿಗೆ ಇದು ಇಂದಿಗೂ ಮಾರ್ಗದರ್ಶಿಯಾಗಿದೆ. ಇದರಲ್ಲಿ ಕನ್ನಡ ಪದಗಳಿಗೆ ಸಂವಾದಿಯಾದ ಇತರ ದ್ರಾವಿಡ ಭಾಷೆಯ ಪದಗಳನ್ನು ಕೊಟ್ಟಿರುವುದಲ್ಲದೆ, ಸಂಸ್ಕೃತ ಮತ್ತು ತದ್ಭವ ಪದಗಳಿಗೆ ಅರ್ಥವನ್ನು ಕೊಟ್ಟಿದೆ. ಸಾಧ್ಯವಾದಷ್ಟು ಕಡೆ ಪ್ರಯೋಗಗಳನ್ನು ಸೂಚಿಸಿದೆ. 20ನೆಯ ಶತಮಾನದಲ್ಲಿಯೂ ಅನೇಕ ನಿಘಂಟುಗಳು ರಚಿತವಾಗಿವೆ. ಶಿವರಾಮ ಕಾರಂತರ ಸಿರಿಗನ್ನಡ ಅರ್ಥಕೋಶ (ಸು.1940) ಚೆ.ಎ.ಕವಲಿ ಯವರ ಸಚಿತ್ರ ಕನ್ನಡ-ಕನ್ನಡ ಕಸ್ತೂರೀ ಕೋಶ (1957)- ಆರ್.ಎಸ್.ರಾಮರಾವ್ ಅವರ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು ಮುಂತಾದುವನ್ನು ಇಲ್ಲಿ ಹೆಸರಿಸಬಹುದು.
ಒಬ್ಬ ಕವಿಯನ್ನು ಕುರಿತಂತೆ ಅವನು ಉಪಯೋಗಿಸುವ ಪದಗಳಿಗೆ ಅರ್ಥ ವಿವರಣೆ ಕೊಡುವ ನಿಘಂಟುಗಳೂ ಕನ್ನಡದಲ್ಲಿ ರಚಿತವಾಗಿವೆ. ಅವುಗಳಲ್ಲಿ ಕುಮಾರವ್ಯಾಸ ನಿಘಂಟು ಹೆಸರಿಸಬಹುದಾದ್ದು.
ಈಗ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು, ನಿಘಂಟು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಕನ್ನಡ ಭಾಷೆಯಲ್ಲಿನ ಎಲ್ಲ ತೆರನ ಸಾಹಿತ್ಯವನ್ನು ಈ ನಿಘಂಟುವಿನಲ್ಲಿ ಬಳಸಿಕೊಳ್ಳಲಾಗಿದೆ. ಹಲ್ಮಿಡಿ ಶಾಸನದಿಂದ (ಸು೪೫೦) ಹಿಡಿದು 18ನೆಯ ಶತಮಾನದ ವರೆಗಿನ ಪ್ರಕಟಿತ, ಅಪ್ರಕಟಿತ ಶಾಸನಗಳ ಸಾಮಗ್ರಿಯನ್ನೂ ಕವಿರಾಜಮಾರ್ಗದಿಂದ ಶ್ರೀ ರಾಮಾಯಣ ದರ್ಶನಂ ವರೆಗಿನ, ಇನ್ನೂ ಇತ್ತೀಚಿನ ಸಾಹಿತ್ಯ ಸಾಮಗ್ರಿಯನ್ನೂ ಕನ್ನಡದಲ್ಲಿ ಬಳಕೆಯಾಗಿರುವ, ಬಳಕೆಯಾಗುತ್ತಿರುವ ಎಲ್ಲ ಪದಗಳಿಗೂ ಭಾಷಾ ವಿಜ್ಞಾನದ ನಿಯಮಗಳಿಗನುಸಾರವಾಗಿ ಚಾರಿತ್ರಿಕ ವಿವರಣೆಯೊಂದಿಗೆ ಅರ್ಥವನ್ನು ಕೊಡಲಾಗಿದೆ. ಇದು ಪ್ರಧಾನವಾಗಿ ಕನ್ನಡ ನಿಘಂಟಾದರೂ ಕನ್ನಡ ಭಾಷೆಯಲ್ಲಿ ಸೇರಿ ಹೋಗಿರುವ ದೇಶ್ಯ, ತದ್ಭವ, ತತ್ಸಮ, ಅನ್ಯದೇಶ್ಯ ಮುಂತಾದ ಶಬ್ದಗಳೂ ಧಾರ್ಮಿಕ, ಲೌಕಿಕ, ವ್ಯಾವಹಾರಿಕ, ಪಾರಿಭಾಷಿಕ ಮುಂತಾದ ಶಬ್ದಗಳೂ ಇಲ್ಲಿ ಸೇರಿವೆ. ಯಾವುದಾದರೂ ಒಂದು ಶಬ್ದ ಅಪೂರ್ವವಾಗಿದ್ದರೆ, ವಿಶೇಷಾರ್ಥವುಳ್ಳದ್ದಾಗಿದ್ದರೆ ಅಥವಾ ಶಾಸ್ತ್ರ ಪರಿಭಾಷೆಯಾಗಿದ್ದರೆ ಅದರ ಅರ್ಥವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಉಚಿತವರಿತು ಪ್ರಯೋಗಗಳನ್ನು ಕೊಡಲಾಗುವುದು. ಪ್ರತಿಯೊಂದು ಶಬ್ದದ ಅರ್ಥ ನಿರ್ಣಯಕ್ಕೂ ಪ್ರಯೋಗಗಳನ್ನೇ ಮುಖ್ಯ ಆಧಾರವಾಗಿಟ್ಟು ಕೊಳ್ಳಲಾಗಿದೆ. ಪ್ರತಿಯೊಂದು ಮುಖ್ಯ ಶಬ್ದಕ್ಕೂ ನಿಷ್ಪತ್ತಿಯನ್ನು ಸೂಚಿಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಜೀವಂತ ಪ್ರತೀಕದಂತಿರುವ ಚಾರಿತ್ರಿಕ ಕ್ರಮದ ಎಂಟು ಸಂಪುಟಗಳ ಈ ನಿಘಂಟು ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ವಿಧದಲ್ಲಿ ರಚಿತವಾಗಿ ಪ್ರಕಟವಾಗುತ್ತಿರುವುದು (1995) ಇದೇ ಮೊದಲು.
ಛಂದೋಗ್ರಂಥಗಳು: -ಒಂದನೆಯ ನಾಗವರ್ಮನ (ಸು.990) ಛಂದೋಬುಧಿ ದೊರೆತ ಛಂದೋಗ್ರಂಥಗಳಲ್ಲಿ ಪ್ರಾಚೀನವಾದುದು. ಆದರೆ ಇದಕ್ಕಿಂತ ಹಿಂದೆ 9ನೆಯ ಶತಮಾನದಲ್ಲಿ ಗುಣಗಾಂಕೀಯ ಎಂಬ ಛಂದೋಗ್ರಂಥವಿದ್ದಿತೆಂದು ಊಹಿಸಲು ಅವಕಾಶವಿದೆ. ಕವಿರಾಜಮಾರ್ಗದಲ್ಲಿ ಛಂದಸ್ಸಿಗೆ ಸಂಬಂದಿಸಿದ ಅನೇಕ ಮುಖ್ಯ ಸಂಗತಿಗಳಿವೆ. ಆದರೂ ಛಂದೋಂಬುದಿ ಕನ್ನಡದ ಏಕೈಕ, ಅಧಿಕೃತ ಪ್ರಾಚೀನ ಲಕ್ಷಣಗ್ರಂಥ (ನೋಡಿ: ನಾಗವರ್ಮ I). ಜಯಕೀರ್ತಿಯ ಛಂದೋನುಶಾಸನ (ಏಳನೆಯ ಅಧ್ಯಾಯ), 3ನೆಯ ಸೋಮೇಶ್ವರನ ಮಾನಸೋಲ್ಲಾಸ, ಶಾರ್ಙ್ಞ್ಗದೇವನ ಸಂಗೀತರತ್ನಾಕರ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ಕನ್ನಡ ಛಂದಸ್ಸಿಗೆ ಸಂಬಂದಿಸಿದ ಅನೇಕ ಸಂಗತಿಗಳು ಪ್ರತಿಪಾದಿತವಾಗಿವೆ. ೨ನೆಯ ನಾಗವರ್ಮನ ಛಂದೋವಿಚಿತಿ ಎಂಬ ಗ್ರಂಥ ಉಪಲಬ್ಧವಿಲ್ಲ. ಈಶ್ವರಕವಿಯ (ಸು.1500) ಕವಿಜಿಹ್ವಾಬಂಧನ, ಗುಣಚಂದ್ರನ ಛಂದಸ್ಸಾರ (ಸು.1650), ಶಾಲ್ಯದ ಕೃಷ್ಣರಾಜನ ಷಟ್ಪ್ರತ್ಯಯ (1748), ವೀರಭದ್ರ ಕವಿಯ ನಂದಿ ಛಂದಸ್ಸು ಮುಂತಾದ ಛಂದೋಗ್ರಂಥಗಳಲ್ಲಿಯೂ ಕನ್ನಡ ಛಂದಸ್ಸಿನ ವಿಷಯಗಳು ಸ್ವಲ್ಪಮಟ್ಟಿಗೆ ನಿರೂಪಿತವಾಗಿವೆ.
ವೈದ್ಯಶಾಸ್ತ್ರ: - ಜಗದ್ದಳ ಸೋಮನಾಥನ ಕರ್ನಾಟಕ ಕಲ್ಯಾಣಕಾರಕ (ಸು.1175) ಈಗ ದೊರೆತಿರುವ ಮೊದಲನೆಯ ಕನ್ನಡ ಆಯುರ್ವೇದ ಗ್ರಂಥ. ಇದು ಪೂಜ್ಯಪಾದನ ಸಂಸ್ಕೃತ ಕಲ್ಯಾಣಕಾರಕದ ಅನುವಾದ. ದೇವೇಂದ್ರಮುನಿ ಬಾಲಗ್ರಹ ಚಿಕಿತ್ಸೆ (ಸು.1200) ಎಂಬ ಗ್ರಂಥವನ್ನು ಬರೆದಿದ್ದಾನೆ. ೧ನೆಯ ಮಂಗರಾಜನ "ಖಗೇಂದ್ರಮಣಿದರ್ಪಣ" (ಸು.1360) ಮುಖ್ಯವಾಗಿ ಒಂದು ವಿಷವೈದ್ಯಗ್ರಂಥ. ಇವನ ಗ್ರಂಥಕ್ಕೆ ಮೂಲ ಪೂಜ್ಯಪಾದನ ವೈದ್ಯಗ್ರಂಥದ ಸ್ಥಾವರವಿಷಪ್ರಕ್ರಿಯೆ. ಕನ್ನಡದ ಇತರ ವೈದ್ಯಗ್ರಂಥಗಳು ಹೀಗಿವೆ: ಶ್ರೀಧರದೇವನ ವೈದ್ಯಾಮೃತ (ಸು.1500), ಸಾಳ್ವನ ವೈದ್ಯಸಾಂಗತ್ಯ (ಸು.1550), ಚೆನ್ನರಾಜನ ವೈದ್ಯಸಾರ ಸಂಗ್ರಹ (ಸು.1570), ನಂಜನಾಥ ಭೂಪಾಲನ ವೈದ್ಯಸಾರ ಸಂಗ್ರಹ (ಸು.1700), ವೀರರಾಜನ ಸಕಲವೈದ್ಯಸಂಹಿತಾ ಸಾರಾರ್ಣವ (ಸು.1700), ಬ್ರಹ್ಮನ -ವೈದ್ಯಕಂದ (ಸು.1750), ತಿಮ್ಮರಾಜಗೌಡನ- ಸ್ತ್ರೀವೈದ್ಯ (ಸು.1750). ಪಶುವೈದ್ಯ: ಕೀರ್ತಿವರ್ಮನ (ಸು.1100) ಗೋವೈದ್ಯ ಕನ್ನಡ ವೈದ್ಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಇದರಲ್ಲಿ ಗೋವುಗಳ ವ್ಯಾದಿಗಳಿಗೆ ಔಷಧ, ಯಂತ್ರ ಕಟ್ಟುವುದು, ಬರೆಹಾಕುವುದು ಇತ್ಯಾದಿ ವಿಷಯಗಳನ್ನು ಹೇಳಿದೆ. ಅಭಿನವಚಂದ್ರ (ಸು.1400) "ಅಶ್ವಶಾಸ್ತ್ರ"ವನ್ನು ಬರೆದ ಮೊದಲ ಕನ್ನಡ ಕೃತಿಕಾರ. ಈ ಕೃತಿಯಲ್ಲಿ ಕುದುರೆಗಳ ಸರ್ವಾಂಗ ಪರೀಕ್ಷೆ, ವರ್ಣ, ಸುಳಿ, ಹಲ್ಲಿನಿಂದ ವಯಸ್ಸನ್ನು ನಿರ್ಣಯಿಸುವುದು, ಚಿಕಿತ್ಸೆ ಇತ್ಯಾದಿ ವಿಷಯಗಳಿವೆ. ಬಾಚರಸನ ಅಶ್ವವೈದ್ಯ (ಸು.1500) ಕುದುರೆಗಳ ಕಾಯಿಲೆಗಳಿಗೆ ಸಂಬಂದಿಸಿದ್ದು. ರಾಮಚಂದ್ರ (ಸು.1625) ಶಾಲಿಹೋತ್ರನ ಅಶ್ವಶಾಸ್ತ್ರವನ್ನು ಗದ್ಯದಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಪದ್ಮಣಪಂಡಿತನ ಹಯಸಾರ ಸಮುಚ್ಚಯ (ಸು.1627) ಎಂಬ ಗ್ರಂಥವನ್ನು ಬರೆದಿದ್ದಾನೆ. ಗಂಗರ ದೊರೆ ಶಿವಮಾರನ ಗಜಾಷ್ಟಕ (8ನೆಯ ಶತಮಾನ) ಕನ್ನಡದ ಪ್ರಾಚೀನ ಗಜಶಾಸ್ತ್ರ ಗ್ರಂಥ. ಈ ಪುಟ್ಟಕೃತಿ (8 ಪದ್ಯ) ಉಪಲಬ್ಧವಾಗಿಲ್ಲದಿದ್ದರೂ ಒನಕೆವಾಡಾಗುವಷ್ಟು ಜನ ಪ್ರಿಯತೆಯನ್ನು ಪಡೆದಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ವೀರಭದ್ರರಾಜ (ಸು.1600) ಪಾಲಕಾಪ್ಯನ ಹಸ್ತ್ಯಾಯುರ್ವೇದಕ್ಕೆ ಕನ್ನಡ ಟೀಕೆಯನ್ನು ಬರೆದಿದ್ದಾನೆ.
ಜ್ಯೋತಿಷ್ಯ, ಗಣಿತ, ಸೂಪ, ನೀತಿ, ವೃಷ್ಟಿ ಮತ್ತು ರತ್ನಶಾಸ್ತ್ರ: ಶ್ರೀಧರಾ ಚಾರ್ಯನ ಜಾತಕತಿಲಕ (ಸು.1049) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ. ಇದರಲ್ಲಿ ಗ್ರಹಣಗಳು, ಮುಹೂರ್ತಗಳು, ಉತ್ಪಾತಗಳು ಮತ್ತು ಅವುಗಳ ಫಲಾಫಲಗಳು ಇತ್ಯಾದಿ ಸಂಗತಿಗಳು ನಿರೂಪಿತವಾಗಿವೆ. ಈತ ವರಾಹಮಿಹಿರನ ಬೃಹಜ್ಜಾತಕ ಮತ್ತು ಲಘುಜಾತಕಗಳು, ಕಲ್ಯಾಣವರ್ಮನ ಸಾರಾವಳಿ ಇತ್ಯಾದಿಗಳಿಂದ ವಿಷಯ ಸಂಗ್ರಹಸಿದ್ದಾನೆ. ಗಣಿತಶಾಸ್ತ್ರಕ್ಕೆ ಸಂಬಂದಿಸಿದಂತೆ ರಾಜಾದಿತ್ಯ (ಸು.1190) ಕನ್ನಡದಲ್ಲಿ ವ್ಯವಹಾರಗಣಿತ, ಕ್ಷೇತ್ರಗಣಿತ, ವ್ಯವಹಾರರತ್ನ ಲೀಲಾವತಿ, ಚಿತ್ರಹಸುಗೆ, ಜೈನಗಣಿತ ಸೂತ್ರ ಟೀಕೋದಾಹರಣ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಆ ಕಾಲದ ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ತನ್ನ ಗ್ರಂಥದಲ್ಲಿ ಈತ ತಿಳಿಸಿದ್ದಾನೆ. ಭಾಸ್ಕರ (ಸು.1650) ಬೇಹಾರಗಣಿತವೆಂಬ ಕೃತಿಯನ್ನು ರಚಿಸಿರುವನು. ತಿಮ್ಮರಸನ ಕ್ಷೇತ್ರಗಣಿತ (ಸು.1700) ಹೊಲಗಳನ್ನು ಅಳೆಯುವ ಬೇರೆ ಬೇರೆ ಮಾನಗಳ ವಿವರಗಳನ್ನು ಕೊಡುವುದರಿಂದ ಒಂದು ಸ್ವಾರಸ್ಯ ಗ್ರಂಥವಾಗಿದೆ. ದೈವಜ್ಞವಲ್ಲಭ (ಸು.1700) ಮಹಾವೀರಾಚಾರ್ಯನ ಗಣಿತಕ್ಕೆ ಕನ್ನಡ ವ್ಯಾಖ್ಯಾನವನ್ನು ರಚಿಸಿದ್ದಾನೆ. ಬಾಲವೈದ್ಯದ ಚೆಲುವನ (ಸು.1785) ಕನ್ನಡ ಲೀಲಾವತಿಯಲ್ಲಿ ಸಾಧಾರಣ ಮತ್ತು ಕ್ಷೇತ್ರಗಣಿತ ಎರಡನ್ನೂ ನಿರೂಪಿಸಲಾಗಿದೆ. ಕನ್ನಡದಲ್ಲಿ ಅನೇಕ ಶಕುನ ಗ್ರಂಥಗಳು ರಚಿತವಾಗಿವೆ. ಶುಭಚಂದ್ರನ ನರಪಿಂಗಳಿ (ಸು.1500), ಲಕ್ಷಣಾಂಕನ ಶಕುನಸಾರ, ಚಾಕರಾಜನ ಶಕುನಪ್ರಪಂಚ, ಮಾಧವದೇವನ ನರಪಿಂಗಲಿ (ಸು.1650), ದೇವನ ಶಕುನಪ್ರಪಂಚ (ಸು.1725 ಉಪಲಬ್ದವಿಲ್ಲ) - ಇವು ಶಕುನ ಗ್ರಂಥಗಳಲ್ಲಿ ಮುಖ್ಯವಾದವು. ಸೂಪಶಾಸ್ತ್ರ ಗ್ರಂಥಗಳಲ್ಲಿ 3ನೆಯ ಮಂಗರಸನ "ಸೂಪಶಾಸ್ತ್ರ" (ಸು.1508) ಅತ್ಯಂತ ಪ್ರಸಿದ್ಧವಾದುದು. ಇದರಲ್ಲಿ ಹಲವಾರು ರೀತಿಯ ಅಡುಗೆಗಳ ಸ್ವಾರಸ್ಯಕರವಾದ ನಿರೂಪಣೆಯಿದೆ. ಇವನ ಸಮ್ಯಕ್ತ್ವ ಕೌಮುದಿ ಎಂಬ ಕಾವ್ಯದಲ್ಲಿ ಒಂದು ಭೋಜನಸಮಾರಂಭದ ವಿನೋದ ವರ್ಣನೆ ಇದೆ. ೨ನೆಯ ಚಾವುಂಡರಾಯನ (ಸು.1025) "ಲೋಕೋಪಕಾರ" ಎಂಬ ಗ್ರಂಥದಲ್ಲಿ ಸೂಪಶಾಸ್ತ್ರ ಎಂಬ ಒಂದು ಪ್ರತ್ಯೇಕ ಅಧ್ಯಾಯವಿದ್ದು ಈ ಅಧ್ಯಾಯಕ್ಕೆ ಕನ್ನಡದಲ್ಲಿ ಒಂದು ಟೀಕೂ ದೊರೆಯುತ್ತದೆ. ದುರ್ಗಸಿಂಹನ ಪಂಚತಂತ್ರ (ಸು೧೦೩೦) ಕಾವ್ಯ, ನೀತಿ ಇವೆರಡರ ಸಾರಭೂತ ಕೃತಿ. ವಸುಭಾಗಭಟ್ಟನ ಸಂಸ್ಕೃತ ಮೂಲ ಕನ್ನಡ ಪಂಚತಂತ್ರಕ್ಕೆ ಆಕರವೆಂದು ತಿಳಿದುಬರುತ್ತದೆ. ಇದರಲ್ಲಿ ಪ್ರಾಣಿಗಳ ಕಥೆಯ ಮೂಲಕ ರಾಜನೀತಿ ನಿರೂಪಣೆಗೊಂಡಿದೆ. ಚಿಕುಪಾಧ್ಯಾಯ (ಸು.1672) ಸಂಸ್ಕೃತ ಕಾಮಂದಕ ನೀತಿಗೆ ಗದ್ಯರೂಪವಾದ ಟೀಕೆಯೊಂದನ್ನು ಬರೆದಿದ್ದಾನೆ. ರಟ್ಟಕವಿಯ ರಟ್ಟಮತ (ಸು.1300) ವೃಷ್ಟಿಶಾಸ್ತ್ರಕ್ಕೆ ಸಂಬಂದಿಸಿದ ಗ್ರಂಥ. ಇದರಲ್ಲಿ ಮಳೆಯ ಕುರುಹು, ಶಕುನಗಳು, ಬಿತ್ತುವುದು, ಭೂಜಲವನ್ನು ತೆಗೆಯುವುದು,ಕ್ಷಾಮ ಇತ್ಯಾದಿ ವಿಷಯಗಳಿವೆ. ಬಾಲವೈದ್ಯದ ಚೆಲುವನ ರತ್ನಶಾಸ್ತ್ರದಲ್ಲಿ ಬೇರೆ ಬೇರೆ ಜಾತಿಯ ರತ್ನಗಳು ಅವುಗಳ ಗುಣದೋಷಗಳು, ಕೃತ್ರಿಮರತ್ನದ ಲಕ್ಷಣ ಇತ್ಯಾದಿ ಸಂಗತಿಗಳಿವೆ.
ಸಂಗೀತಶಾಸ್ತ್ರ : --ಸಂಗೀತಶಾಸ್ತ್ರಕ್ಕೆ ಸಂಬಂದಿಸಿದ ವಿಸ್ತಾರವಾದ ನಿರೂಪಣೆ ನಿಜಗುಣಶಿವಯೋಗಿಗಳ ವಿವೇಕಚಿಂತಾಮಣಿಯ ನಾಲ್ಕನೆಯ ಅಧ್ಯಾಯದಲ್ಲಿ ದೊರಕುತ್ತದೆ. ಸಂಗೀತಶಾಸ್ತ್ರಕ್ಕೆ ಸಂಬಂದಿಸಿದಂತೆ ಸಂಗೀತ ರತ್ನಾಕರ ಎಂಬ ಒಂದು ಗ್ರಂಥವ ಪ್ರಕಟವಾಗಿದೆ (ಸಂಸ್ಕೃತ ಕೃತಿಯ ಅನುವಾದವಲ್ಲ). ಇದಲ್ಲದೆ ಕನ್ನಡದ ಅನೇಕ ಕಾವ್ಯಗಳಲ್ಲಿ ಸಂಗೀತ ಹಾಗೂ ನಾಟ್ಯಶಾಸ್ತ್ರಕ್ಕೆ ಸಂಬಂದಿಸಿದ ವರ್ಣನೆಗಳು ವಿಪುಲವಾಗಿ ದೊರೆಯುತ್ತವೆ. ಸಿಂಹಭೂಪಾಲನ (16ನೆಯ ಶತಮಾನ) "ಲಾಸ್ಯರಂಜನಂ" ನಾಟ್ಯಶಾಸ್ತ್ರಕ್ಕೆ ಸಂಬಂದಿಸಿದ ಒಂದು ದೊಡ್ಡ ಗ್ರಂಥ. (ನೋಡಿ: ಕರ್ಣಾಟಕ ಸಂಗೀತ)
ಕಾಮಶಾಸ್ತ್ರ:- ‘ಮದನತಿಲಕ’ ಚಂದ್ರರಾಜನಿಂದ (ಸು.1040) ರಚಿತವಾದ ಕನ್ನಡದ ಮೊತ್ತಮೊದಲ ಕಾಮಶಾಸ್ತ್ರಗ್ರಂಥ. ಪುರುಷಾರ್ಥಗಳಲ್ಲಿ ಕಾಮವ ಒಂದಾದ್ದರಿಂದ ಅದು ನಿಂದನೀಯವಾದುದಲ್ಲ ಎಂಬುದು ಕೃತಿಕಾರನ ಮತ. ಮದನತಿಲಕ ಕಾಮಶಾಸ್ತ್ರ ಗ್ರಂಥವಾದರೂ ಇದಕ್ಕೆ ಪ್ರಸಿದ್ಧಿ ದೊರೆತಿರುವುದು ಛಂದಸ್ಸಿನ ದೃಷ್ಟಿಯಿಂದ. ಇದರಲ್ಲಿ ಕನ್ನಡದ ಅನೇಕ ಅಪೂರ್ವ ವೃತ್ತಗಳು ಬಳಕೆಯಾಗಿವೆ. ಇವನು ವಾತ್ಸ್ಯಾಯನ, ವೈಶಿಕ, ಚಾರಾಯಣ, ಸ್ವರ್ಣನಾಭ ಮುಂತಾದ ಹಿಂದಿನ ಲೇಖಕರಿಂದ ವಿಷಯ ಸಂಗ್ರಹಿಸಿ ಕೃತಿರಚನೆ ಮಾಡಿದ್ದಾನೆ. ಜನ್ನನ ‘ಅನುಭವಮುಕುರ’ ಸುಂದರಿಯರು, ಅವರ ಸೌಂದರ್ಯ, ಪ್ರೇಮಗಳನ್ನು ಕುರಿತಾದ ಗ್ರಂಥ. ಕಲ್ಲರಸನ (ಸು.1450) ಜನವಶ್ಯದಲ್ಲಿ ವಾತ್ಸ್ಯಾಯನ ಮುಂತಾದವರ ಮತಗಳನ್ನು ಸಂಗ್ರಹಿಸಲಾಗಿದೆ. ಪಂಪ, ನೇಮಿಚಂದ್ರ, ಷಡಕ್ಷರಿ, ರತ್ನಾಕರವರ್ಣಿ, ಕವಿಲಿಂಗ ಮುಂತಾದ ಕವಿಗಳ ಕಾವ್ಯಗಳಲ್ಲಿ ಕಾಮಶಾಸ್ತ್ರಕ್ಕೆ ಸಂಬಂಧಪಟ್ಟ ಹಲವಾರು ಸಂಗತಿಗಳು ನಿರೂಪಿತವಾಗಿರುವುದು ಕಂಡುಬರುತ್ತದೆ.
ಧಾರ್ಮಿಕಶಾಸ್ತ್ರಗ್ರಂಥಗಳು:- ಇಂತಹ ಗ್ರಂಥಗಳಲ್ಲಿ ಕಾವ್ಯಾಂಶವೂ ಶಾಸ್ತ್ರಾಂಶವೂ ಕೂಡಿರಬಹುದು. ಪಂಪನ ಆದಿಪುರಾಣದಂಥ ಜೈನಪುರಾಣಗಳಲ್ಲಿ ಕಾವ್ಯವೂ ಶಾಸ್ತ್ರವೂ (ಧರ್ಮ ಪ್ರಕ್ರಿಯೆಗಳೂ) ಕೂಡಿಯೇ ನಿರೂಪಿತವಾಗಿದೆ. ವೀರಶೈವ ಪುರಾಣಗಳಲ್ಲೂ ವಚನ ಸಾಹಿತ್ಯದಲ್ಲೂ ಹರಿದಾಸ ಸಾಹಿತ್ಯದ ಅನೇಕ ಭಾಗದಲ್ಲೂ ಕಾವ್ಯಾಂಶ ಶಾಸ್ತ್ರಾಂಶ ಬೆಸುಗೆಯಾಗಿರುವುದನ್ನು ಕಾಣಬಹುದು. ಆದರೂ ಇಂಥ ಕೃತಿಗಳನ್ನುಳಿದು ಕೇವಲ ವಿಷಯ ನಿರೂಪಣೆಯೇ ಮುಖ್ಯವಾಗಿರುವ ಗ್ರಂಥಗಳನ್ನು ಮಾತ್ರ ಇಲ್ಲಿ ವಿಚಾರ ಮಾಡಲಾಗಿದೆ.
ಅನೇಕ ಜೈನ ವಿದ್ವಾಂಸರು ಕನ್ನಡದಲ್ಲಿ ಹಲವಾರು ಸಂಸ್ಕೃತ, ಪ್ರಾಕೃತ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ದಿವಾಕರನಂದಿ (ಸು.1062) ಗೃಧ್ರಪಿಂಚಾರ್ಯನ ತತ್ತ್ವಾರ್ಥಸೂತ್ರಕ್ಕೆ ಕನ್ನಡ ವೃತ್ತಿ ಬರೆದಿದ್ದಾನೆ. ವೀರನಂದಿ (ಸು.1153) ತನ್ನದೇ ಆಚಾರಸಾರಕ್ಕೆ ಕನ್ನಡ ವ್ಯಾಖ್ಯಾನ ಬರೆದಿದ್ದಾನೆ. ಅಬಿನವಶ್ರುತಮುನಿ (ಸು.1365) ಮಲ್ಲಿಷೇಣನ ಸಜ್ಜನಚಿತ್ತವಲ್ಲಭಕ್ಕೂ ಕಮಲಪಂಡಿತ ಸಮಂತಭದ್ರನ ರತ್ನಕರಂಡಕಕ್ಕೂ ಟೀಕೆ ಬರೆದಿದ್ದಾರೆ. ಚಂದ್ರಕೀರ್ತಿಯ (ಸು.1400) ಪರಮಾಗಮಸಾರ ಜೈನಧರ್ಮದ ತಿರುಳನ್ನು ಹೇಳುತ್ತದೆ. ಇದಲ್ಲದೆ ಇನ್ನೂ ಅನೇಕ ಗ್ರಂಥಗಳು ಜೈನಧರ್ಮವನ್ನು ಕುರಿತು ರಚಿತವಾಗಿವೆ.
ವೀರಶೈವ ವಿದ್ವಾಂಸರೂ ತಮ್ಮ ಧರ್ಮಸಂಬಂದಿಯಾದ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅಂಥ ವ್ಯಾಖ್ಯಾನಗಳಲ್ಲಿ ಮಹಾಲಿಂಗದೇವನ ಏಕೋತ್ತರಶತಸ್ಥಲ (ಸು.1425) ಮತ್ತು ಪ್ರಭುದೇವರ ಷಟ್ಸ್ಥಲಜ್ಞಾನ ಚಾರಿತ್ರ ವಚನದ ಟೀಕೆಗಳು, ಕಲ್ಲಮಠದ ಪ್ರಭುದೇವರ ಲಿಂಗಲೀಲಾವಿಲಾಸ ಚಾರಿತ್ರ (ಸು.1430), ಜಕ್ಕಣಾರ್ಯನ ಏಕೋತ್ತರಶತಸ್ಥಲ (ಸು.1430) ಇವನ್ನು ಹೆಸರಿಸಬಹುದು. ಗುಬ್ಬಿಯ ಮಲ್ಲಣ್ಣ (ಸು.1475) ತನ್ನ ಗಣಭಾಷಿತ ರತ್ನಮಾಲೆಯಲ್ಲಿ ನೂರೊಂದು ಸ್ಥಲಗಳ ವಿವರಣೆಯನ್ನು ಕೊಟ್ಟಿದ್ದಾನೆ. ಅನೇಕ ಶೈವಾಗಮಗಳಿಗೆ ಮತ್ತು ಇತರ ಗ್ರಂಥಗಳಿಗೆ ವೀರಶೈವ ವಿದ್ವಾಂಸರು ಬರೆದ ಟೀಕೆಗಳು ದೊರೆಯುತ್ತವೆ. ವೀರಶೈವ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವ ಕನ್ನಡ ಗ್ರಂಥಗಳಲ್ಲಿ ಮಗ್ಗೆಯ ಮಾಯಿದೇವನ ಅನುಭವಸೂತ್ರ, ಗುರುಬಸವನ ಸಪ್ತಕಾವ್ಯಗಳು, ನಿಜಗುಣಶಿವಯೋಗಿಯ ಕೃತಿಗಳು - ಇವುಗಳನ್ನು ಹೆಸರಿಸಬಹುದು.
ಪರಂಜ್ಯೋತಿಯ (ಸು.1450) ಅನುಭವಮುಕುರ, ರಂಗನಾಥನ (ಸು.1675) ಅನುಭವಾಮೃತ, ಚಿದಾನಂದನ (ಸು.1725) ಚಿದಖಂಡಾನುಭವಸಾರ, ಚಿದಾನಂದಾವಧೂತನ (ಸು.1750) ಜ್ಞಾನಸಿಂಧು ಇವು ಅದ್ವೈತವೇದಾಂತ ಪರವಾದ ಗ್ರಂಥಗಳು. ಜಗನ್ನಾಥದಾಸರ ಹರಿಕಥಾಮೃತಸಾರ ದ್ವೈತವೇದಾಂತಬೋಧಕವಾಗಿದೆ. ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯನಿರ್ಣಯಕ್ಕೆ ವಾದಿರಾಜರು (ಸು.1570) ಕನ್ನಡದಲ್ಲಿ ಟೀಕೆ ಬರೆದಿದ್ದಾರೆ. ರಂಗರಾಜನ (ಸು.1660) ಸಾತ್ವಿಕಬ್ರಹ್ಮವಿದ್ಯಾವಿಲಾಸ ವಿಶಿಷ್ಟಾದ್ವೈತ ಸಿದ್ಧಾಂತವನ್ನು ನಿರೂಪಿಸುತ್ತದೆ. ಚಿಕ್ಕದೇವರಾಜ ಒಡೆಯರ (1673-1704) ಚಿಕದೇವರಾಜ ಬಿನ್ನಪದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ಸಾರವನ್ನು ಕೊಟ್ಟಿದೆ. ಚಿಕುಪಾಧ್ಯಾಯನ ತಿರುವಾಯ್ಮೊಳಿ ಟೀಕೆ ನಮ್ಮಾಳ್ವಾರರ ತಮಿಳು ಪ್ರಬಂಧಕ್ಕೆ ಬರೆದ ವ್ಯಾಖ್ಯಾನವಾಗಿದೆ. ಜ್ಞಾನಕೋಶಗಳು:- ಕನ್ನಡದಲ್ಲಿ ವಿಶ್ವಕೋಶಗಳಂಥ ಕೆಲವು ಗ್ರಂಥಗಳು ಹುಟ್ಟಿವೆ. ಅವು ಬೇರೆ ಬೇರೆ ವಿಷಯಗಳ ಸಂಗ್ರಹರೂಪಗಳಾಗಿವೆ. (ನೋಡಿ: ಕನ್ನಡದಲ್ಲಿ ವಿಶ್ವಕೋಶಗಳು). (ಎಂ.ಸಿ.,ಕೆ.ಕೆ.,ಎನ್.ಬಿ.)