ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಹ್ಯಾದ್ರಿ

ವಿಕಿಸೋರ್ಸ್ದಿಂದ

ಸಹ್ಯಾದ್ರಿ

	ಭಾರತದ ಕರ್ನಾಟಕ ರಾಜ್ಯದ ಪಶ್ಚಿಮದಲ್ಲಿ ಹಬ್ಬಿರುವ ಪಶ್ಚಿಮ ಘಟ್ಟ ಶ್ರೇಣಿ. ಸಪ್ತಕುಲಪರ್ವತಗಳಲ್ಲಿ ಸಹ್ಯಾದ್ರಿ ಒಂದೆಂದು ಪ್ರತೀತಿ. ಅರಬ್ಬಿಸಮುದ್ರ ಪೀಠಕ್ಕೆ ಸಮಾಂತರವಾಗಿ ದಖ್ಖನ್ ಪ್ರಸ್ಥಭೂಮಿಗೆ ಪಶ್ಚಿಮಗೋಡೆ ಯಂತೆ ಇರುವ ಈ ಪರ್ವತಶ್ರೇಣಿ ದಕ್ಷಿಣೋತ್ತರವಾಗಿ ಬೆಳಗಾಂವಿ ಜಿಲ್ಲೆಯಿಂದ ಮೈಸೂರು ಜಿಲ್ಲೆಯವರೆಗೆ ಸು. 966 ಕಿಮೀ ಉದ್ದವಾಗಿಯೂ ಒತ್ತೊತ್ತಾಗಿಯೂ ಹಬ್ಬಿದೆ. ಈ ಪರ್ವತಶ್ರೇಣಿಯ ಎತ್ತರ ಸು. 1,500 ಮೀಗಳು. ಸಹ್ಯಾದ್ರಿ ಶ್ರೇಣಿಗೂ  ಅರಬ್ಬಿಸಮುದ್ರಕ್ಕೂ ಇರುವ ಅಂತರ ಕೆಲವು ಕಡೆ 80 - 161 ಕಿಮೀ ಆದರೆ ಇನ್ನು ಕೆಲವು ಕಡೆ ಕೇವಲ 8 -16 ಕಿಮೀ. ಉತ್ತರ ಗಡಿಯಿಂದ ಗೋವರ್ಧನ ಗಿರಿಯವರೆಗೆ (ಜೋಗ ಜಲಪಾತದ ಸಮೀಪ) ಈ ಘಟ್ಟಶ್ರೇಣಿ ಹೆಚ್ಚು ಎತ್ತರಕ್ಕಿಲ್ಲ. ಈ ತೆರವಿನ ಪಶ್ಚಿಮಘಟ್ಟದ ಪೂರ್ವಭಾಗ ದಲ್ಲಿ ಹುಟ್ಟುವ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ. ಕೆಲವು ಘಟ್ಟಗಳನ್ನು ಸೀಳಿ ದುಮುಕುವುದರಿಂದ ಜಲಪಾತಗಳುಂಟಾಗಿವೆ. ಇವುಗಳಲ್ಲಿ ಜೋಗ, ಉಂಚಳ್ಳಿ, ಮಾಗೋಡು ಮತ್ತು ಲಾಲಗುಳಿ ಜಲಪಾತಗಳು ಮುಖ್ಯವಾದುವು. ಶಿವಗಂಗಾ ಮುಂತಾದ ವನಮಧ್ಯಗತ ಸುಂದರ ಜಲಪಾತಗಳೂ ಉಂಟು. ಅನಂತರ ಈ ಘಟ್ಟಗಳು ದಕ್ಷಿಣಕ್ಕೆ ಉನ್ನತ ಸಾಲುಗಳಾಗಿ ವಿಸ್ತರಿಸಿ ದಕ್ಷಿಣದ ತುದಿಯಲ್ಲಿ ನೀಲಗಿರಿ ಪರ್ವತಗಳಲ್ಲಿ ಲೀನವಾಗುತ್ತವೆ. ಉತ್ತರದಲ್ಲಿ ಧಾರವಾಡ ಶಿಲಾನಿಕ್ಷೇಪಗಳ ರಚನೆಗಳನ್ನೂ ದಕ್ಷಿಣದಲ್ಲಿ ಗ್ರಾನೈಟ್ ಶಿಲಾರಚನೆಗಳನ್ನೂ ತಳಹದಿಯಾಗಿ ಹೊಂದಿವೆ. ಟ್ರಾಪ್ ಮತ್ತು ಜಂಬು ಕಲ್ಲಿನಿಂದ ಕೂಡಿದ ಈ ಪರ್ವತಶ್ರೇಣಿಯಲ್ಲಿ ಹೆಚ್ಚು ಕಠಿಣವಾಗಿರುವ ಶಿಲೆಗಳು ಶಿಖರಗಳಂತೆ ಉಳಿದು ಮೃದು ಶಿಲಾಭಾಗಗಳು ಹಳ್ಳಗಳ ಕೊರೆತದಿಂದ ಸವೆದುಹೋಗಿವೆ. ಶಿಲೆಗಳ ಸೀಳುಗಳು ಮತ್ತು ಬಿರುಕುಗಳಿಂದ ಏರುತಗ್ಗುಗಳ ವ್ಯತ್ಯಾಸ ಹೆಚ್ಚಾಗಿದೆ. ಪೂರ್ವಭಾಗದಲ್ಲಿ ಸಾಧಾರಣ ಏರುತಗ್ಗುಗಳಿಂದ ಕೂಡಿದ್ದರೆ ಪಶ್ಚಿಮಭಾಗದಲ್ಲಿ ಅತಿ ಕಡಿದಾದ ಶಿಲಾಮುಖಗಳಿದ್ದು ಕಿರಿದಾದ ಅನೇಕ ಕೊಳ್ಳಗಳುಂಟಾಗಿವೆ. ಸಹ್ಯಾದ್ರಿ ಶ್ರೇಣಿಯ ಎರಡು ಬದಿಗಳ ಇಳಿಜಾರುಗಳಲ್ಲೂ ಸ್ವಲ್ಪ ದೂರದವರೆಗೆ ಸಣ್ಣ ಗುಡ್ಡಗಳಿಂದ ಮತ್ತು ಕಾಡುಗಳಿಂದ ಕೂಡಿದ ಪ್ರದೇಶವಿದೆ. ಈ ಪ್ರದೇಶವನ್ನು ಮಲೆನಾಡು ಎಂದು ಕರೆಯಲಾಗುತ್ತದೆ. ಈ ಮಲೆನಾಡಿನ ಭಾಗಗಳು ಮುಖ್ಯವಾಗಿ ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿವೆ. 

ಸಹ್ಯಾದ್ರಿ ಶ್ರೇಣಿ ಕೆಲವು ಪ್ರಮುಖ ಶಿಖರಗಳಿಂದ ಕೂಡಿದೆ. ಆ ಶಿಖರಗಳಲ್ಲಿ ಕೊಡಚಾದ್ರಿ, ಕುದುರೆಮುಖ, ಬಾಬಾಬುಡನ್‍ಗಿರಿ ಮತ್ತು ಬ್ರಹ್ಮಗಿರಿ ಮುಖ್ಯವಾದುವು. ಕುದುರೆಮುಖ ಸಹ್ಯಾದ್ರಿ ಶ್ರೇಣಿಯಲ್ಲೇ ಅತ್ಯಂತ ಎತ್ತರವಾದ ಪರ್ವತಶಿಖರಗಳಲ್ಲೊಂದು. ಸಹ್ಯಾದ್ರಿ ಶ್ರೇಣಿ ಖನಿಜಪ್ರದೇಶವೂ ಆಗಿದ್ದು ಉತ್ಕøಷ್ಟವಾದ ಕಬ್ಬಿಣದ ಅದುರು ಅಧಿಕಪ್ರಮಾಣದಲ್ಲಿ ದೊರೆಯುತ್ತದೆ. ಚಿಕ್ಕಮಗಳೂರು ನಗರದ ಉತ್ತರದಲ್ಲಿರುವ ಬಾಬಾಬುಡನ್‍ಗಿರಿಯ ಇಳಿಜಾರು ಪ್ರದೇಶದಲ್ಲೆಲ್ಲ ಕಾಫಿ ತೋಟಗಳಿದ್ದು ಈ ಬೆಟ್ಟ ದಕ್ಷಿಣ ಭಾರತದ ಕಾಫಿ ವ್ಯವಸಾಯಕ್ಕೆ ಮೂಲಸ್ಥಾನವಾಗಿದೆ. ಈ ಪರ್ವತಶ್ರೇಣಿಗೆ ಸೇರಿದ ಕೆಮ್ಮಣ್ಣುಗುಂಡಿಯಲ್ಲಿ ಹೇರಳವಾಗಿ ಕಬ್ಬಿಣದ ಅದುರು ಸಿಕ್ಕುತ್ತದೆ. ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಎತ್ತರದ (1,925ಮೀ) ಶಿಖರವಾದ ಮುಳ್ಳಯ್ಯನಗಿರಿ (ನೋಡಿ- ಮುಳ್ಳಯ್ಯನಗಿರಿ) ಬಾಬಾಬುಡನ್‍ಗಿರಿ ಬೆಟ್ಟದ ಸಾಲಿನಲ್ಲಿದೆ. ಕಲ್ಹತ್ತಗಿರಿ ಎಂಬ ಇಲ್ಲಿಯ ಇನ್ನೊಂದು ಶಿಖರದ ಹತ್ತಿರದಲ್ಲಿ ವೇದ ಮತ್ತು ಆವತಿ ನದಿಗಳು ಹುಟ್ಟುತ್ತವೆ. ಕೊಡಗು ಜಿಲ್ಲೆಯಲ್ಲಿ ಇರುವ ಬ್ರಹ್ಮಗಿರಿ ಸಹ್ಯಾದ್ರಿಯ ಇನ್ನೊಂದು ಎತ್ತರವಾದ ಶಿಖರ. ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಮಳೆ ಅಧಿಕ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾಂವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಪ್ರದೇಶ ಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುತ್ತದೆ. ಸಹ್ಯಾದ್ರಿ ಜಲ ಹಾಗೂ ಅರಣ್ಯಸಂಪತ್ತಿನ ತವರು. ದಟ್ಟವಾದ ಕಾಡುಗಳಲ್ಲಿ ಬಿದಿರು, ತೇಗ, ಹೊನ್ನೆ, ಬೀಟೆ, ಮತ್ತಿ, ಶ್ರೀಗಂಧ, ಹಲಸು, ನಂದಿ, ಜಂಬೆ, ಬಗನಿ ಮೊದಲಾದ ಮರಗಳು ಹೇರಳವಾಗಿ ಬೆಳೆಯುತ್ತವೆ. ಸಹ್ಯಾದ್ರಿಯ ಉತ್ತರದಿಂದ ದಕ್ಷಿಣದ ಕಡೆ ಹೋದಂತೆ ಅರಣ್ಯಸಂಪತ್ತು ಬಹು ಸಮೃದ್ಧವಾಗಿರುವುದು ಕಂಡುಬರುತ್ತವೆ. ಪಶ್ಚಿಮದ ಕಡೆ ಇರುವ ಅತಿ ಕಡಿದಾದ ಇಳಿಜಾರುಗಳು ಬೋಳಾಗಿರುವುವು. ಕಡಿಮೆ ಮಳೆ ಬೀಳುವ ಪೂರ್ವದ ಕಡೆಗೆ ಹೋದಂತೆ ಈ ಅರಣ್ಯದಟ್ಟಣೆ ಕಡಿಮೆಯಾಗಿ ಕುರುಚಲು ಕಾಡು ಕಾಣಬರುತ್ತದೆ. ಸಹ್ಯಾದ್ರಿ ಶ್ರೇಣಿಯ ಅನೇಕ ಕಣಿವೆ ಪ್ರದೇಶಗಳಲ್ಲಿ ಏಲಕ್ಕಿ ಬೆಳೆಯುತ್ತಾರೆ. ಇತ್ತೀಚೆಗೆ ಈ ಶ್ರೇಣಿಯಲ್ಲಿ ಬೆಳೆಯುವ ಬಿದಿರು ಆರ್ಥಿಕವಾಗಿ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಈ ಶ್ರೇಣಿಯಲ್ಲಿ ಸಿಕ್ಕುವ ಮ್ಯಾಂಗನೀಸ್ ಅದುರು ಮುಖ್ಯ ಖನಿಜವಾಗಿದ್ದು ಕಬ್ಬಿಣದ ಅದುರು ಎರಡನೆಯ ಸ್ಥಾನ ಪಡೆದಿದೆ. ಜೋಗ ಜಲಪಾತ ವಿದ್ಯುತ್‍ಉತ್ಪಾದನಾ ಕೇಂದ್ರ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದದ ಕಾರ್ಖಾನೆ-ಇವೆಲ್ಲ ಕರ್ನಾಟಕಕ್ಕೆ ಸಹ್ಯಾದ್ರಿಯ ಕೊಡುಗೆಯಾಗಿವೆ. ಈ ಪರ್ವತಶ್ರೇಣಿಗಳಲ್ಲಿ ಹುಟ್ಟುವ ಅನೇಕ ನದಿಗಳಲ್ಲಿ ಕೆಲವು ಪೂರ್ವಕ್ಕೂ ಕೆಲವು ಪಶ್ಚಿಮಕ್ಕೂ ಹರಿಯುತ್ತವೆ. ಇವುಗಳಲ್ಲಿ ಪಶ್ಚಿಮಕ್ಕೆ ಹರಿಯುವ ಉತ್ತರ ಕನ್ನಡ ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಂಗೊಳ್ಳಿ, ಸ್ವರ್ಣಾ, ಸೀತಾ ಮತ್ತು ನೇತ್ರಾವತಿ ನದಿಗಳು ಮುಖ್ಯವಾದುವು. ಪೂರ್ವಕ್ಕೆ ಹರಿಯುವ ನದಿಗಳೆಂದರೆ ಕಾವೇರಿ, ಕೃಷ್ಣಾ ಮತ್ತು ಅವುಗಳ ಉಪನದಿಗಳು. ಕೃಷ್ಣಾನದಿ ಸಹ್ಯಾದ್ರಿ ಪರ್ವತಶ್ರೇಣಿಯ ಮಹಾಬಲೇಶ್ವರದ ಸಮೀಪದಲ್ಲಿ ಹುಟ್ಟುತ್ತದೆ. ಇದೇ ಪರ್ವತಶ್ರೇಣಿಯ ವರಾಹಪರ್ವತದ ಗಂಗಾಮೂಲ ಶಿಖರದಿಂದ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಹುಟ್ಟುತ್ತವೆ.

ಸಹ್ಯಾದ್ರಿಯ ದಟ್ಟ ಅರಣ್ಯಪ್ರದೇಶಗಳಲ್ಲಿ ಕಾಡುಹಂದಿ, ಕಾಡುಕೋಣ, ಹುಲಿ, ಚಿರತೆ, ಆನೆ, ಜಿಂಕೆ, ನಾನಾರೀತಿಯ ಪಕ್ಷಿಗಳು ಮೊದಲಾದವು ಗಳನ್ನು ಕಾಣಬಹುದು.

ಶಿವಮೊಗ್ಗ ಜಿಲ್ಲೆಯಿಂದ ಪಶ್ಚಿಮ ಘಟ್ಟಗಳನ್ನು ಇಳಿದು ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಮೂರು ಮಾರ್ಗಗಳಿವೆ. ಇವುಗಳಿಗೆ ಘಾಟಿಗಳು ಎಂದು ಹೆಸರು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆಗುಂಬೆಘಾಟಿ, ಹೊಸನಗರ ತಾಲ್ಲೂಕಿನಲ್ಲಿ ಹುಲಿಕಲ್ಲು ಘಾಟಿ ಮತ್ತು ಕೊಲ್ಲೂರು ಘಾಟಿ ಇವೆ. ಮಹಾಬಲೇಶ್ವರ, ಕೊಲ್ಲಾಪುರ, ಶೃಂಗೇರಿ, ತಲಕಾವೇರಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪುಣ್ಯಕ್ಷೇತ್ರಗಳು ಸಹ್ಯಾದ್ರಿ ಪರ್ವತಶ್ರೇಣಿಯ ನೆರಳಿನಲ್ಲಿವೆ. ಪಶ್ಚಿಮಘಟ್ಟಗಳ ಸೌಂದರ್ಯಕ್ಕೆ ಮಾರುಹೋದ ಪೆಟ್ರೋ ಡೆಲ್ಲಾವೆಲ್ಲೆ ಎಂಬ ವಿದೇಶಿ ಪ್ರವಾಸಿ ಈ ಘಟ್ಟಗಳನ್ನು ನೋಡಿದಾಗ ತಾನು ಇಟಲಿಯ ಅಪೆನೈನ್ ಪರ್ವತಶ್ರೇಣಿ ಯನ್ನು ಕಂಡಂತಾಯಿತೆಂದು ಹೇಳಿದ್ದಾನೆ. ಕುವೆಂಪು ಅವರ ಸಾಹಿತ್ಯಕೃತಿ ಗಳಲ್ಲಿ ಸಹ್ಯಾದ್ರಿಯ ಸುಂದರ ಗಿರಿಶಿಖರಗಳ ವರ್ಣನೆ ಕಂಡುಬರುತ್ತದೆ. ದಕ್ಷಿಣ ಕನ್ನಡದ ಪ್ರಾಚೀನ ಹೆಸರು ಸಹ್ಯಾದ್ರಿಯೆಂದೂ ಪ್ರತೀತಿ. (ಕೆ.ಎಮ್.ಎಸ್.)