(ಮಧುರಾಪುರಸಮೀಪದ ಅರಣ್ಯಮಾರ್ಗದಲ್ಲಿ, ಕಂಸನು ಬಹು
ಸಂಭ್ರಮದಿಂದ ದೇವಕಿ ವಸುದೇವರು ಕುಳಿತಿರುವ ರಥವನ್ನು ನಡಿ
ಸುತ್ತ ಸೈನ್ಯ ಸಮೇತನಾಗಿ ತೆರಳುತ್ತಿರುವನು.)
ವಸುದೇವ-ಪ್ರಿಯೇ ! ಈ ಅರಣ್ಯಪ್ರಾಂತ್ಯವೆಷ್ಟು ಮನೋ
ಹರವಾಗಿದೆ- ನೋಡಿದೆಯಾ?
ದೇವಕಿ:-ಪ್ರಾಣಕಾ೦ತಾ ! ವನ ಭೂಮಿಗಳನ್ನು ನೋಡಿ
ಆನಂದಿಸಬೇಕೆಂದಿದ್ದ ನನ್ನ ಸಂಕಲ್ಪವು ಇಂದಿಗೆ ಕೈಗೂಡಿತು ! ಈ
ಅರಣ್ಯದ ಸೊಬಗು ನನ್ನ, ಮನಸ್ಸಿಗೆ ಬಹಳ ಸಂತೋಷಕರವಾಗಿದೆ |
ಕಂಸ:- ವಿಶಾಲವಾದ ವೃಕ್ಷಗಳಿಂದಲೂ, ಬಗೆಬಗೆಯಾದ ಬಳ್ಳಿ
ಗಳಿಂದಲೂ, ಅನೇಕವಾದ ಮೃಗಪಕ್ಷಿಗಳಿಂದಲೂ ಕಂಗೊಳಿಸುತ್ತಿರುವ
ಈ ಕಾಂತಾರವು ದುರಂತ ಚಿಂತಾಕ್ರಾಂತರಿಗೆ ಕೂಡಾ ಸಂತೋಷವ
ನ್ನುಂಟುಮಾಡತಕ್ಕುದಾಗಿರುವಲ್ಲಿ ಸಹಜ ಸಂತೋಷಿಗಳಾದ ನಮಗೆ
ಸಂತೋಷವುಂಟಾಗುವುದರಲ್ಲಿ ಆಶ್ಚರ್ಯವೇನಿದೆ ? ಅಷ್ಟದಿಕ್ಪಾಲಕರನ್ನು
ಸಹಾ ನನ್ನಾಜ್ಞೆಯಂತೆ ನಡಿಸಬಲ್ಲ ಲೋಕೈಕವೀರನಾದ ನಾನು, ಸೈನ್ಯ
ಸಮೇತನಾಗಿ ನಿಮ್ಮೊಂದಿಗಿರುವಲ್ಲಿ ನಿಮಗೆ ಕ್ಷಣಕ್ಷಣಕ್ಕೂ ಸಂತೋಷ
ಲಹರಿಯಲ್ಲದೆ ದುಃಖವೆಲ್ಲಿಂದ ಬಂದೀತು ?
(ಎಂದು ಕಂಸನು ತನ್ನ ಪ್ರತಾಪವನ್ನು ಹೇಳುತ್ತಿರುವಲ್ಲಿ ಅಶರೀರ
ವಾಣಿಯು ಕೇಳಿಸುವುದು)
ಅಶರೀರವಾಣಿ:-
ಕo|| ಭ್ರಷ್ಟನೆ ಹಿಗ್ಗವೆಯೇತಕೆ? ತುಷ್ಟನು ನೀನಾಗಿ ಮೆರೆವೆ ಕಡು ಸಂತಸದಿಂ||
ಶಿಷ್ಟಳಹ ನಿನ್ನತಂಗಿಯ | ಅಷ್ಟಮ ಗರ್ಭಜನು ಸಂಹರಿಪನೈ ನಿನ್ನ೦ ||
ಎಲೈ ಕಂಸನೇ ! ನಿನ್ನ ತಂಗಿಯನ್ನೂ ಭಾವನನ್ನೂ ಮೆಚ್ಚಿಸು
ವುದಕ್ಕಾಗಿ ಭೂಮ್ಯಾಕಾಶಗಳನ್ನರಿಯದೆ ಮೈಮರೆತು ಮಾತನಾಡುತ್ತ
ರಥವನ್ನು ನಡೆಸುತ್ತಿರುವೆ ! ಮುಂದೆ ಬರುವ ಕೇಡನ್ನು ತಿಳಿಯದಿರುವೆ